ಸವಿರುಚಿ: ಕಾಯಿಸೊಳೆ ರವೆಯಿಂದ ಇಡ್ಲಿ, ಉಪ್ಮಾ

Upayuktha
0



ಲಸಿನ ಕಾಯಿಸೊಳೆ ರವೆಯಿಂದ ಮಾಡಿದ ಉಪ್ಪಿಟ್ಟು ಶಿರಸಿ ಹಲಸಿನ ಮೇಳದ ಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದುಕೊಂಡಿದೆ. “ರುಚಿಯೂ ಛಲೋ ಇದೆ. ಸ್ಪರ್ಧೆ ಮುಗಿದ ನಂತರ ಹಲವರು ತಿಂದು ನೋಡಿ ಮೆಚ್ಚಿಕೊಂಡರು” ಎನ್ನುತ್ತಾರೆ ಇದರ ಹಿಂದಿನ ಯೋಜಕ ಮಹೇಶ್ ಹೆಗಡೆ ಮುಕ್ರಮನೆ.


ಪತ್ನಿ ಶ್ಯಾಮಲಾ ಅವರ ಪ್ರಕಾರ, “ರವೆ, ಕಾಯಿಸೊಳೆ ಹುಡಿ ಇತ್ಯಾದಿ ತಯಾರಿಸಿ ಕೊಡುವುದು ಮಹೇಶ್ ಕೆಲಸ. ಅದರ ಮುಂದಿನ ಪ್ರಯೋಗ ನನ್ನದು.” ಹಲಸಿನ ಕಾಯಿಸೊಳೆ ಹುಡಿಯಿಂದ ಬರ್ಫಿ, ಪೂರಿ, ಶಂಕರಪೋಳಿ ಇತ್ಯಾದಿ ಮಾಡಿದ್ದಾರೆ. ಪ್ರಯೋಗಗಳು ಮುಗಿದಿಲ್ಲ.

ಮುಕ್ರಮನೆ ಮಹೇಶ್ – ಶ್ಯಾಮಲಾ ದಂಪತಿಗಳಿಗೆ ತಿಂಡಿಯಲ್ಲಿ ಹೊಸ ಹೊಸ ಪ್ರಯೋಗ ನಡೆಸುವುದರಲ್ಲಿ ಇನ್ನಿಲ್ಲದ ಉಮೇದು. ಹಿಂದೆ ಬಾಕಾಹು (ಬಾಳೆ ಕಾಯಿ ಹುಡಿ) ವಿನಿಂದಲೂ ಇವರು ತುಂಬ ಯಶಸ್ವಿ ಪ್ರಯೋಗ ನಡೆಸಿದ್ದರು.


ದುರದೃಷ್ಟ ಎಂದರೆ ಮುಕ್ರಮನೆಯವರಲ್ಲಿ ಹಲಸಿನ ಮರ ಇಲ್ಲ. ಕೊಂಡುಕೊಂಡೇ ಪ್ರಯೋಗ ನಡೆಸಬೇಕು. ಅದೇನಿದ್ದರೂ, ಈ ಸೀಸನ್ ಮುಗಿಯುವುದರೊಳಹೆ ಹಲಸಿನ ಕಾಯಿಸೊಳೆ ರವೆ ತಯಾರಿಸಿ ’ಕದಂಬ’ದ ಮೂಲಕ ಮಾರುವ ಪ್ಲಾನ್ ಮಹೇಶರಿಗಿದೆ. 


ಕೆಳದಿಯ 2006ರ ಪುಟ್ಟ ಹಲಸಿನ ಹಬ್ಬದೊಂದಿಗೆ ಆರಂಭವಾದ ಹನ್ನಾಡಿನ ಹಲಸಿನ ಆಂದೋಳನಕ್ಕೆ ಈಗ ಎರಡು ದಶಕ ಸಂದಿದೆ. ಈಗಲೂ ಮುಕ್ರಮನೆಯವರಂಥ ನೂರಾರು ಜನಸಾಮಾನ್ಯರೇ ಈ ಆಂದೋಳನದ ಶಿಲ್ಪಿಗಳು.


ಈ ಬಾರಿ ಕದಂಬ ನಡೆಸಿದ ಹಲಸಿನ ಹಬ್ಬ 12ನೆಯದು. ಶಿರಸಿಯಲ್ಲಿ ಈ ಹಬ್ಬ ಘೋಷಣೆಯಾಯಿತೆಂದರೆ, ಮನೆಮನೆಗಳಲ್ಲಿ ಪುಳಕ. ಈ ಬಾರಿಯೂ ಅದೆಷ್ಟು ಹೊಸ ಪಾಕಗಳು ಬಂದಿದ್ದುವೆಂದರೆ, ಅದು ಶಿರಸಿ ಗೃಹಿಣಿಯರ ಪಾಕಪ್ರತಿಭೆ ಮತ್ತು ಏರುತ್ಸಾಹಕ್ಕೆ ಕನ್ನಡಿಯಾಗಿತ್ತು.


ತಮಿಳುನಾಡಿನ ಕೇಂದ್ರ ಬಾಳೆ ಸಂಶೋಧನಾ ಕೇಂದ್ರ ನೇಂದ್ರ ಬಾಳೆಕಾಯಿಯ ಉಪ್ಮಾ ತಯಾರಿಸಿದೆ. ನನ್ನ ದೃಷ್ಟಿಯಿಂದ ಮುಕ್ರಮನೆಯ ಈ ಸಂಶೋಧನೆಯೂ ಅಷ್ಟೇ ಮಾರ್ಕಿಗೆ ಅರ್ಹ. ಮಹೇಶ್– ಶ್ಯಾಮಲಾ ದಂಪತಿಗಳಿಗೆ ಹ್ಯಾಟ್ಸ್ ಆಫ್.


ವೃತ್ತಿಪರರು ಇನ್ನಷ್ಟು ಆರ್ ಆಂಡ್ ಡಿ ಮಾಡಿ ದೊಡ್ಡ ರೀತಿಯಲ್ಲಿ ಬ್ರಾಂಡ್ ಮಾಡಿ ಹೊರತಂದರೆ ’ಗ್ರೀನ್ ಜ್ಯಾಕ್ ಫ್ರುಟ್ ರವಾ’ಕ್ಕೆ ಒಳ್ಳೆ ಅವಕಾಶವಿದೆ. ಇದು ಗ್ಲುಟೇನ್ ಮುಕ್ತ ಆಹಾರ. ಮುಂಜಾನೆ ಉಪಹಾರಕ್ಕೆ ಹಲಸು ಬಳಕೆಯಾಗತೊಡಗಿದರೆ, ದೊಡ್ಡ ಪ್ರಮಾಣದ ಹಲಸು ಇದಕ್ಕೆ ಬಳಕೆಯಾಗಬಹುದು. ಮುಕ್ರಮನೆಯವರು ಬಳಸಿದ್ದು ಸಾಫ್ಟ್ ಫ್ಲೆಶ್ಡ್ ಹಲಸು (ತುಳುವ, ಬಿಳುವ) ಎನ್ನುವುದೂ ಗಮನಾರ್ಹ ವಿಷಯ.


ಮಹೇಶ್ ಮುಕ್ರಮನೆ- 94491 93602  (ರಾತ್ರಿ 9- 10 ಮಾತ್ರ) 

(ಮುಕ್ರಮನೆಯವರು ಇನ್ನೂ ಮಾರಾಟಕ್ಕಾಗಿ ಕಾಯಿಸೊಳೆ ರವಾ ತಯಾರಿ ಆರಂಭಿಸಿಲ್ಲ.)


- ಶ್ರೀ ಪಡ್ರೆ,

ಪ್ರಧಾನ ಸಂಪಾದಕರು, ಅಡಿಕೆ ಪತ್ರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top