ರಾಘವೇಶ್ವರ ಶ್ರೀಗಳ 50ನೇ ವರ್ಧಂತಿ ನಾಳೆ: ಅರ್ಥಪೂರ್ಣ ಆಚರಣೆ

Upayuktha
0

 ಸ್ವರ್ಣವೃಕ್ಷ ಯೋಜನೆಯಡಿ 50 ಸಾವಿರ ಸಸಿ ನೆಡುವ ಕಾರ್ಯಕ್ರಮ




ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯದ ನಾಲ್ಕನೇ ದಿನವಾದ ಭಾನುವಾರ (ಜುಲೈ 13) ಪರಮಪೂಜ್ಯರ 50ನೇ ವರ್ಧಂತ್ಯುತ್ಸವವನ್ನು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಶಿಷ್ಯ ಸಮುದಾಯ ವೈವಿಧ್ಯಮಯವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ.


ಶ್ರೀಮಠದ ಮಾತೆಯರು 10 ಸಾವಿರ ಕುಂಕುಮಾರ್ಚನೆ ನಡೆಸಿ ಸೇವಾ ಕಾಣಿಕೆಯಾಗಿ 50 ಲಕ್ಷ ರೂಪಾಯಿಗಳ ನಿಧಿಯನ್ನು ಶ್ರೀಸಂಸ್ಥಾನದವರಿಗೆ ಸಮರ್ಪಿಸಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಾತೆಯರು ಶ್ರೀಸಾನ್ನಿಧ್ಯದಲ್ಲಿ ಕುಂಕುಮಾರ್ಚನೆ ನೆರವೇರಿಸಲಿದ್ದು, ಉಳಿದಂತೆ ಶ್ರೀಮಠದ ಅಂಗಸಂಸ್ಥೆಗಳಲ್ಲಿ, ಶಾಖಾ ಮಠಗಳಲ್ಲಿ, ರಾಜ್ಯಾದ್ಯಂತ ಮಂದಿರ- ದೇಗುಲಗಳಲ್ಲಿ ಕುಂಕುಮಾರ್ಚನೆ ನಡೆಸಲಿದ್ದಾರೆ ಎಂದು ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಹೇಳಿದ್ದಾರೆ.


ಇದೇ ಸಂದರ್ಭದಲ್ಲಿ ಮಾತೃತ್ವಮ್ ವತಿಯಿಂದ ಶ್ರೀಮಠದ ವ್ಯಾಪ್ತಿಯ ಎಲ್ಲ ಗೋಶಾಲೆಗಳಿಗೆ, ಅಂಗಸಂಸ್ಥೆಗಳಲ್ಲಿ ಮತ್ತು ಶಾಖಾ ಮಠಗಳಲ್ಲಿರುವ ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮಾಡಲಾಗುತ್ತದೆ ಎಂದು ವಿವರಿಸಿದರು.


ಪ್ರತಿಕೂಲ ಹವಾಮಾನದ ನಡುವೆಯೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕಾಸರಗೋಡು, ಶಿವಮೊಗ್ಗ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಮಾತೆಯರು ಹಾಗೂ ದೊಡ್ಡಸಂಖ್ಯೆಯಲ್ಲಿ ಶಿಷ್ಯಭಕ್ತರು ಈ ವಿಶೇಷ ಕಾರ್ಯಕ್ರಮಕ್ಕಾಗಿ ಅಶೋಕೆಗೆ ಆಗಮಿಸುತ್ತಿದ್ದಾರೆ.

ಶ್ರೀಮಠದ ಯುವ ಮತ್ತು ವಿದ್ಯಾರ್ಥಿ ವಿಭಾಗ ಸ್ವರ್ಣ ವೃಕ್ಷ ಯೋಜನೆಯೆಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಮಂಡಲ, ವಲಯ, ಘಟಕಗಳ ವ್ಯಾಪ್ತಿಯಲ್ಲಿ 50 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದೆ. ಶ್ರೀಗಳು ಶಿಷ್ಯಭಕ್ತರ ಜನ್ಮದಿನ ಸಂದರ್ಭದಲ್ಲಿ ಗಿಡಗಳನ್ನು ನೀಡಿ ನೆಟ್ಟು ಪೋಷಿಸುವಂತೆ ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ಅವರ ವೃಕ್ಷಪ್ರೀತಿಯ ದ್ಯೋತಕವಾಗಿ ಅವರ 50ನೇ ವರ್ಧಂತಿ ಸಂದರ್ಭದಲ್ಲಿ 50 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ ಎಂದು ವಿಭಾಗ ಪ್ರಮುಖರಾದ ಅರ್ಚನಾ ಕುರುವೇರಿ ಮತ್ತು ಚಂದನ್ ಶಾಸ್ತ್ರಿ ವಿವರಿಸಿದ್ದಾರೆ.


ಹವ್ಯಕ ಮಹಾಮಂಡಲ ವ್ಯಾಪ್ತಿಯ ಎಲ್ಲ ಶಿಷ್ಯರು ಇದೇ ಸಂದರ್ಭದಲ್ಲಿ ಮಹಾರುದ್ರ ಪಠಣ ಹಮ್ಮಿಕೊಂಡಿದ್ದು, 500ಕ್ಕೂ ಹೆಚ್ಚು ಮಂದಿ ರುದ್ರ ಪಠಣ ಕೈಗೊಳ್ಳಲಿದ್ದಾರೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು ಹೇಳಿದ್ದಾರೆ.


ಶ್ರೀಮಠದ ವೈದಿಕ ವಿಭಾಗದಿಂದ ಶ್ರೀಗಳ ವರ್ಧಂತಿ ಅಂಗವಾಗಿ ಅರುಣ ಹವನ, ಅರುಣ ನಮಸ್ಕಾರ, ವೇದ ನಿಧಿ ಸಮರ್ಪಣೆಯಂಥ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವೈದಿಕ ಪ್ರಧಾನ ವಿನಾಯಕ ಭಟ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top