ವಿಸಿ ಪುತ್ತೂರು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಕಾರಂತ್ ನಾಳೆ ನಿವೃತ್ತಿ

Upayuktha
0


ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಕಾರಂತ ಇವರು ಅಧ್ಯಾಪನ ವೃತ್ತಿಯಿಂದ ಇಂದು ನಿವೃತ್ತಿಗೊಳ್ಳಲಿದ್ದಾರೆ. ಇವರು ಮೂಲತಃ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನ ಉರಾಬೆಯ ದಿ.ವಿಷ್ಣು ಕಾರಂತ್ ಹಾಗೂ ದಿ.ಗೌರಿ ಕಾರಂತ್ ಇವರ ಸುಪುತ್ರ.


ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾಂಚನ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಶ್ರೀರಾಮಕುಂಜೇಶ್ವರ ಹೈಸ್ಕೂಲ್, ಪಿಯುಸಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜು ಹಾಗೂ ಪದವಿ ವಿದ್ಯಾಭ್ಯಾಸವನ್ನು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಪೂರೈಸಿ ಮಂಗಳೂರು ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ನಂತರ 2008 ರಲ್ಲಿ ಅಲಗಪ್ಪ ವಿವಿಯಿಂದ ಎಂಫಿಲ್ ಹಾಗೂ ಕುಪ್ಪಂ ನ ದ್ರಾವೀಡಿಯನ್ ವಿವಿಯಿಂದ ಪಿಎಚ್ ಡಿ ಪದವಿಯನ್ನು ಪಡೆದರು.


ವಿದ್ಯಾರ್ಥಿ ದೆಸೆಯಲ್ಲಿ ಎನ್ ಸಿಸಿ ಘಟಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಹಿಮಾಲಯದ ಗಂಗೋತ್ರಿ ಗೋಮುಖ ತಪೋವನದಂತಹ ಜಾಗದಲ್ಲಿ ಯಶಸ್ವಿಯಾಗಿ ಚಾರಣ ಮಾಡಿದ ಜೊತೆಗೆ ತ್ರಿಶೂರ್, ತಿರುವನಂತಪುರ, ಕನ್ಯಾಕುಮಾರಿ, ರಾಮೇಶ್ವರ, ಮಧುರೈ ಪಳನಿ ಮಾರ್ಗವಾಗಿ ಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮುಖೇನ ಕ್ರಮಿಸಿದ್ದರು. ಅಂತೆಯೇ ಗಣರಾಜ್ಯೋತ್ಸವ ಪರೇಡ್ ನಲ್ಲೂ ಭಾಗವಹಿಸಿದ ಕೀರ್ತಿ ಇವರದು.


1990 ರಲ್ಲಿ ವಿವೇಕಾನಂದ ಕಾಲೇಜಿನ ರಸಾಯನಶಾಸ್ತ್ರ ವಿಭಾಗಕ್ಕೆ ಅಧ್ಯಾಪಕರಾಗಿ ಸೇರ್ಪಡೆಗೊಂಡು ಅನಂತರ ವಿಭಾಗ ಮುಖ್ಯಸ್ಥರಾಗಿ ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಕಾಲೇಜಿನ ಎನ್ ಎಸ್ ಎಸ್ ಆಫೀಸರ್ ಆಗಿ, ಸೈನ್ಸ್ ಅಸೋಸಿಯೇಷನ್ ನ ಸಂಯೋಜಕರಾಗಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿ ಹಾಗೂ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಂಯೋಜಕರಾಗಿ ವಿವಿಧ ಜವಾಬ್ದಾರಿಗಳನ್ನು ಕಾಲೇಜಿನಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.


ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ರಸಾಯನಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಸುಮಾರು 15 ವರ್ಷ ಸೇವೆ ಸಲ್ಲಿಸಿದ್ದು ಪಠ್ಯ ರಚನಾ ಸಮಿತಿಯ ಅಧ್ಯಕ್ಷರಾಗಿ ಲೇಖಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಪುತ್ತೂರು ತಾಲೂಕಿನ ಕಾರ್ಜಾಲು ಬಯಂಬೆಯಲ್ಲಿ ಪತ್ನಿ ಶ್ರೀಮತಿ ಸಂಧ್ಯಾ ಕಾರಂತ್, ಮಗ ಸ್ವಸ್ತಿಕ್ ಕಾರಂತ್, ಮಗಳು ವಿಂಧ್ಯಾ ಕಾರಂತ್ ಅವರೊಂದಿಗೆ ನೆಲೆಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top