* ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ʼವಿವೇಕ ಪ್ರದೀಪ್ತಿʼ -2025.
* ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸನ್ಮಾನ.
ಪುತ್ತೂರು: ನಮ್ಮ ಬದುಕನ್ನು ನಿರ್ಧರಿಸುವುದು ಕೇವಲ ಅಂಕಗಳು ಮಾತ್ರವಲ್ಲ. ವ್ಯಕ್ತಿತ್ವದ ಪರಿಪೂರ್ಣತೆಯು ನಮ್ಮ ಸರ್ವಾಂಗೀಣ ಬೆಳವಣಿಗೆಯನ್ನೇ ಆಧರಿಸಿದೆ. ಜೀವನದಲ್ಲಿ ನಾವು ಸಾಗುವ ಹಾದಿಯು ಅಷ್ಟು ಸರಳವಾಗಿಲ್ಲ. ಸುಖದೊಂದಿಗೆ ಕಷ್ಟವು ಜೊತೆಗೂಡಿದಾಗ ಬದುಕಿಗೊಂದು ಮೆರುಗು ಸಿಗುತ್ತದೆ ಎಂದು ಡಾ. ಗ್ರೀಷ್ಮ ವಿವೇಕ್ ಆಳ್ವ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಳ್ವಾಸ್ ಫಾರ್ಮಸಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರು ಹೇಳಿದರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ “ವಿವೇಕ ಪ್ರದೀಪ್ತಿ 2025” - ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಯು ತನ್ನಲ್ಲಿರುವ ಅನನ್ಯ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳೆಸುವುದರ ಕಡೆಗೆ ಗಮನಹರಿಸಿದಾಗ ಸಮಾಜ ಅವರನ್ನು ಗುರುತಿಸಿ, ಗೌರವಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಅವನ ತಂದೆ,ತಾಯಿಗಳ ಪ್ರೀತಿ, ವಾತ್ಸಲ್ಯ, ಗುರುಗಳ ಪ್ರಯತ್ನವಿರುತ್ತದೆ. ಯಾವಾಗ ವಿದ್ಯಾರ್ಥಿಗಳು ಅದನ್ನು ಅರ್ಥೈಸಿಕೊಂಡು ಇತರರನ್ನು ಗೌರವಿಸುತ್ತಾರೋ ಆಗ ಅವರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ .ಪಿ ಇವರು ಮಾತನಾಡುತ್ತಾ, ವಿದ್ಯಾರ್ಥಿಗಳು ಎಂದಿಗೂ ವಿವೇಕದಿಂದ ವಿಚಲಿತರಾಗಬಾರದು. ಜೀವನದಲ್ಲಿ ಎರಡು ಸವಾಲುಗಳಿವೆ. ಒಂದು ವಯಸ್ಸು, ಇನ್ನೊಂದು ಚೈತನ್ಯ. ಎರಡನ್ನು ಸಮಾನವಾಗಿ ಸರಿದೂಗಿಸಿದಾಗ ಬದುಕು ಹಸನುಗೊಳ್ಳುತ್ತದೆ. ನಮ್ಮ ದೇಶ ವಿಕಸಿತ ಭಾರತವಾಗಬೇಕಾದರೆ ಇಂದಿನ ಪೀಳಿಗೆ ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿಯಲು ಸಿದ್ಧರಾಗಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಯಲ್ಲಿ ಪಡೆದುಕೊಂಡ ಸಂಸ್ಕಾರಭರಿತ ಶಿಕ್ಷಣವನ್ನು ದೇಶ ಕಟ್ಟುವಲ್ಲಿ ಬಳಸಿಕೊಂಡರೆ ದೇಶ ಔನ್ನತ್ಯದ ಶಿಖರವನ್ನು ತಲುಪಬಲ್ಲದು ಎಂದು ಹೇಳಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 362 ವಿದ್ಯಾರ್ಥಿಗಳು ಹಾಗೂ ಸಿ.ಇ.ಟಿ, ಜೆ.ಇ.ಇ, ನೀಟ್, ಸಿ.ಎ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸದರಿಗೆ ಸನ್ಮಾನ
ನೂತನ ಲೋಕಸಭಾ ಸಂಸದರಾಗಿ ಆಯ್ಕೆಯಾಗಿ ಮೊತ್ತ ಮೊದಲ ಬಾರಿಗೆ ವಿವೇಕಾನಂದ ವಿದ್ಯಾಸಂಸ್ಥೆಗೆ ಆಗಮಿಸಿದ ಕ್ಯಾಪ್ಟನ್ ಬ್ರಿಜೇಶ್‌ಚೌಟ ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ| ಕೆ.ಎಂ ಕೃಷ್ಣ ಭಟ್ ಇವರು ಅಯೋಧ್ಯಾ ರಾಮಮಂದಿರದ ಮಾದರಿಯ ಸ್ಮರಣಿಕೆಯನ್ನು ನೀಡುವುದರ ಮೂಲಕ ಸಂಸ್ಥೆಯ ವತಿಯಿಂದ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸಚಿನ್ ಶೆಣೈ .ಕೆ, ಪ್ರಾಂಶುಪಾಲರಾದ ದೇವಿಚರಣ್ ರೈ ಎಂ, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಸನ್ಮಾನಿತ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಂಗ್ಲಭಾಷಾ ಉಪನ್ಯಾಸಕರಾದ ಪರಮೇಶ್ವರ ಶರ್ಮ ಪಿ .ಕೆ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಿತಾ ಬಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ಶೆಟ್ಟಿ .ಕೆ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ