ಜೀವನ ತ್ಯಾಗದಿಂದ ಅಮೃತತ್ವ ಲಭಿಸಲಿ: ರಾಜೇಶ್ ಪದ್ಮಾರ್

Upayuktha
0

ಕಾರ್ಗಿಲ್ ವೀರ ಯೋಧರ ಸಂಸ್ಮರಣೆ ಹಾಗೂ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ.

 


  

ಪುತ್ತೂರು: “ಕಾರ್ಗಿಲ್ ವಿಜಯ್- ಜುಲೈ 26 ನಮ್ಮ ದೇಶದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಜಾತಿ, ಪ್ರಾಂತ, ಭಾಷೆ ಇವುಗಳ ಭೇದವಿಲ್ಲದೆ ಈ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಸೇನಾನಿಗಳಿಂದ ಈ ದೇಶ ಇಂದು ಗೌರವದಿಂದ ತಲೆ ಎತ್ತಿ ನಿಲ್ಲುವುದಕ್ಕೆ ಸಾಧ್ಯವಾಗಿದೆ. ಯುದ್ಧದ ಕಥೆಗಳು, ಸನ್ನಿವೇಶಗಳು ರೋಚಕತೆಯನ್ನು ಸೃಷ್ಟಿಸುತ್ತದೆಯಾದರೂ, ಅದರ ಹಿನ್ನೆಲೆಯಲಿ ಸೃಷ್ಟಿಯಾಗುವ ಸಂದರ್ಭಗಳು ಪರಿಸ್ಥಿತಿಯ ದಾರುಣತೆಯನ್ನು ಹಾಗೂ ಗಂಭೀರತೆಯ ಅರಿವನ್ನು ಮೂಡಿಸುತ್ತದೆ” ಎಂದು ರಾಜೇಶ್ ಪದ್ಮಾರ್, ಪ್ರಾಂತ ಪ್ರಚಾರ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಹೇಳಿದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ  ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಡೆದ  ʼಕಾರ್ಗಿಲ್ ವಿಜಯ - ಯೋಧ ನಮನʼ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಿಕ್ಸೂಚಿ ಮಾತುಗಳನ್ನಾಡಿದರು.  “ಕಾರ್ಗಿಲ್ ಯುದ್ಧದಲ್ಲಿ ಮಡಿದ ಒಬ್ಬೊಬ್ಬ  ಸೈನಿಕನ ವೀರಗಾಥೆಯನ್ನು ಆಲಿಸುವ ಪ್ರತಿಯೊಬ್ಬನ ಕಣ್ಣಿನಲ್ಲಿ ಸುರಿಯುವುದು ರಕ್ತವೇ ಹೊರತು ಕಣ್ಣೀರಲ್ಲ. ಗಡಿಯಲ್ಲಿ ನಿರ್ಮಾಣವಾಗುವ ಪ್ರತಿ ಸಂದರ್ಭಗಳು, ಸನ್ನಿವೇಶಗಳು ಪ್ರತೀ ಭಾರತೀಯನಲ್ಲೂ ದೇಶಭಕ್ತಿಯ ಸಿಂಚನವನ್ನು ಗೈಯಬೇಕು. ತ್ಯಾಗವು ಅಮೃತತ್ವವನ್ನು ನೀಡಬಲ್ಲದು. ಸ್ವಂತ ಜೀವನವನ್ನು ತಾಯಿ ಭಾರತೀಯ ಪಾದ ಪದ್ಮಗಳಿಗೆ ಅರ್ಪಿಸುವುದು ಪರಮ ಪುಣ್ಯದ ಕೆಲಸ” ಎಂದು ನುಡಿದ ಅವರು, ಕಾರ್ಗಿಲ್ ನಲ್ಲಿ ಮಡಿದ ವೀರ ಯೋಧರ ಯಶೋಗಾಥೆಯನ್ನು ತೆರೆದಿಟ್ಟರು. 


ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸಶಸ್ತ್ರ ಪಡೆಗಳ ವೀರಗಾಥೆಯನ್ನು ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ ಸಾಕ್ಷ್ಯಚಿತ್ರದ ಮೂಲಕ ಪ್ರದರ್ಶಿಸಿ ಸ್ಮರಿಸಲಾಯಿತು. ಬಳಿಕ ದೇಶಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಗೌರವ ನಮನ ಸಲ್ಲಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ 40 ಮೀಡಿಯಂ ರೆಜಿಮೆಂಟ್ ನಿವೃತ್ತ ಯೋಧ ಸುಬ್ಬಪ್ಪ ಪಾಟಾಳಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಈ ದೇಶದ ಸಂಪತ್ತು.  ವಿದ್ಯಾರ್ಥಿ ಶಕ್ತಿ ಮನಸ್ಸು ಮಾಡಿದಲ್ಲಿ ಸಮಾಜದಲ್ಲಿ  ಅಭೂತಪೂರ್ವ ಬದಲಾವಣೆಗಳನ್ನು ತರಲು ಸಾಧ್ಯ.  ದೇಶಸೇವೆಗೆಯ್ಯುವ ಅಪೂರ್ವವಾದ ಅವಕಾಶ ಪ್ರತೀ ವಿದ್ಯಾರ್ಥಿಗಳಿಗಿದೆ.  ದೇಶ ಸೇವೆಯನ್ನು ಮಾಡುವ, ದೇಶಪ್ರೇಮವನ್ನು ವ್ಯಕ್ತಪಡಿಸುವ ಸುವರ್ಣಾವಕಾಶದಿಂದ ವಿದ್ಯಾರ್ಥಿಗಳು ವಂಚಿತವಾಗಬಾರದು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ. ಕೆ. ಕೃಷ್ಣಪ್ರಸನ್ನ ವಹಿಸಿಕೊಂಡು “ಒಬ್ಬ ಯೋಧನ ಜೀವನ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯನ್ನು ನೀಡುವಂತದ್ದು. ತನ್ನ ಜೀವನ, ಸಂಸಾರದ ಬಗ್ಗೆ ಮಾತ್ರ ಯೋಚಿಸದೆ,  ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಕುಟುಂಬ,  ಅವರ ಸಂರಕ್ಷಣೆ ತನ್ನ ಕರ್ತವ್ಯವೆಂಬುದನ್ನೇ ಧ್ಯೇಯವನ್ನಾಗಿಸಿ,  ಕ್ಷಾತ್ರತೇಜದಿಂದ ಹೋರಾಡಿ ಪ್ರಾಣತ್ಯಾಗ ಮಾಡುವ ಅವಕಾಶ ಕೇವಲ ಯೋಧರಿಗೆ ಲಭ್ಯವಾಗುವುದು.  


ತಾಯಿ ಭಾರತಾಂಬೆಯ ರಕ್ಷಣೆಗೆ ಯಾವತ್ತು ಹಿಂದೇಟು ಹಾಕದೆ ವೀರಮರಣವನ್ನಪ್ಪಿದ ಯೋಧರನ್ನು ಸದಾ ಸ್ಮರಿಸುವುದು ಒಂದು ರೀತಿಯಲ್ಲಿ ದೇಶಸೇವೆ ಎನಿಸುತ್ತದೆ.  ಭಾರತವು ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಸಂಸ್ಕೃತಿ,  ವೈವಿಧ್ಯತೆಯನ್ನು ಮರೆಯದೆ ಸದಾ ಕಾಪಾಡಿಕೊಂಡು ಬಂದಿರುತ್ತದೆ. ಭಾರತದ ಅಸ್ಮಿತೆಗೆ ಪೂರಕವಾದ ವಾತಾವರಣವನ್ನು  ಒದಗಿಸುವ ಪ್ರಯತ್ನ ಸೇನೆಯಲ್ಲೂ ನಡೆಯುತ್ತದೆ” ಎಂದು ಹೇಳಿದರು.


ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ  ಸೇವೆ ಸಲ್ಲಿಸಿ ನಿವೃತ್ತರಾದ ಸುಬ್ಬಪ್ಪ ಪಾಟಾಳಿ ಇವರನ್ನು ಗೌರವಿಸಿ , ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗಿಯಾದರು. ಕಾಲೇಜಿನ ವಿದ್ಯಾರ್ಥಿನಿಯರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುತ್ತಾ ಪ್ರೇರಣಾ ಗೀತೆಯನ್ನು ಹಾಡಿದರು. ಪ್ರಾಂಶುಪಾಲರಾದ ದೇವಿಚರಣ್ ರೈ . ಎಂ  ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಚೈತ್ರಾ ಡಿ ವಂದಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ| ಶ್ರುತಿ ಎಂ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top