ದೇಶನಿಷ್ಠರಲ್ಲದ ಬಾಲಿವುಡ್ ಮಂದಿಯ ಸಿನೆಮಾ ಬಹಿಷ್ಕರಿಸಬೇಕು: ಶ್ರೀದೇವಿ

Upayuktha
0



ಪುತ್ತೂರು : ಭಾರತದ ಮೇಲೆ ಪಾಕಿಸ್ಥಾನದ ದಾಳಿಯಾದಾಗ ಮೌನವಹಿಸಿ, ನಮ್ಮ ದೇಶ ತಿರುಗಿ ಹೊಡೆಯಲಾರಂಭಿಸುವಾಗ ಶಾಂತಿ ಶಾಂತಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುವ ಬಾಲಿವುಡ್ ಮಂದಿಯ ಸಿನೆಮಾಗಳನ್ನು ವೀಕ್ಷಿಸದೆ ಧಿಕ್ಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಮ್ಮ ದೇಶಕ್ಕೆ ನಿಷ್ಠರಾಗಿರದವರನ್ನು ಬಹಿಷ್ಕರಿಸುವ ಕಾರ್ಯ ಪ್ರಜ್ಞಾವಂತಿಕೆ ಯಿಂದ ನಡೆಯಬೇಕು ಎಂದು ಯುವ ವಾಗ್ಮಿ ಶ್ರೀದೇವಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಸಿಕ್ಷಣ ಸಂಸ್ಥೆಗಳು, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಪುತ್ತೂರಿನ ಮಾಜಿ ಸೈನಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಶನಿವಾರ ಆಯೋಜಿಸಲಾದ 26ನೆಯ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಭಾರತೀಯರಿಗೆ ಮರೆವು ಜಾಸ್ತಿ ಎಂಬ ಮಾತಿದೆ. ಆದರೆ ಕೆಲವೊಂದನ್ನು ಎಂದೂ ಮರೆಯಬಾರದು. ಅಂತಹ ಘಟನೆಗಳಲ್ಲಿ ಕಾರ್ಗಿಲ್ ಯುದ್ಧವೂ ಒಂದು. ಈ ದೇಶದ ಸಾರ್ವಭೌಮತ್ವ, ಅಸ್ಮಿತೆಯನ್ನು ಉಳಿಸಿಕೊಟ್ಟ ಮಹಾಸಮರ ಕಾರ್ಗಿಲ್ ಯುದ್ಧ. ಅವೆಷ್ಟೋ ವೀರ ಸೈನಿಕರ ಬಲಿದಾನದ ಪರಿಣಾಮವಾಗಿ, ತ್ಯಾಗದ ಕಾರಣದಿಂದಲಾಗಿ ನಾವಿಂದು ಸುಖವಾಗಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.


ಸೈನ್ಯಕ್ಕೆ ಸೇರುವುದು ಬೇರೆ ಉದ್ಯೋಗ ದೊರಕದ್ದರಿಂದ ಅಲ್ಲ, ಬದಲಾಗಿ ದೇಶಸೇವೆ ಮಾಡಬೇಕೆಂಬ ಉತ್ಕಟ ಹಂಬಲದಿಂದ. ಸೈನಿಕರಿಗೂ ನಮ್ಮಂತೆಯೇ ಹತ್ತು ಹಲವು ಆಶೋತ್ತರಗಳಿವೆ, ಕನಸುಗಳಿವೆ. ಆದಾಗ್ಯೂ ದೇಶದ ಬಗೆಗಿನ ಅಪರಿಮಿತ ಭಕ್ತಿಯ ಕಾರಣದಿಂದ ಸೇನೆಗೆ ಸೇರಿಕೊಳ್ಳುತ್ತಾರೆ. ಅಂತಹ ಸೈನಿಕರ ಜತೆ ನಾವು ನಿಲ್ಲಬೇಕಾದದ್ದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿ.ಎಲ್.ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ ರಾಷ್ಟ್ರ ಪ್ರೇಮ ಭಾವನೆಯಾಗಿ ಮಿಳಿತವಾಗಬೇಕು. ಆಗ ಮಾತ್ರ ಜಾಗೃತಿ ಮೂಡುವುದಕ್ಕೆ ಸಾಧ್ಯ. ಆಧುನಿಕ ಯುದ್ಧ ವಿಧಾನಗಳು ಬದಲಾಗಿವೆ. ತಂತ್ರಜ್ಞಾನ ಆಧಾರಿತ ಯುದ್ಧ ನಡೆಯಲಾರಂಭಿಸಿವೆ. ಆದ್ದರಿಂದಲೇ ಒಬ್ಬ ಸೈನಿಕನೂ ಪ್ರಾಣಕಳೆದುಕೊಳ್ಳದೆ ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದರು.


ಅಧ್ಯಕ್ಷತೆ ವಹಿದ್ದ ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಮಾತನಾಡಿ ಯುದ್ಧ ಯಾವಾಗಲೂ ನಡೆಯುವುದಿಲ್ಲ. ಆದರೆ ಸೈನಿಕ ಮಾತ್ರ ಯಾವಾಗಲೂ ಪ್ರಾಣಾರ್ಪಣೆಗೆ ಸಿದ್ಧನಾಗಿಯೇ ಇರುತ್ತಾನೆ. ಇಂತಹ ಯೋಧರಿಗಾಗಿ ಪುತ್ತೂರಿನಲ್ಲಿ ನಿರ್ಮಿಸಿದ ಅಮರ್ ಜವಾನ್ ಜ್ಯೋತಿ ಸ್ಮಾರಕ ಸಮಾಜಕ್ಕೊಂದು ದಿಕ್ಸೂಚಿ. ದೇಶಭಕ್ತಿ ಅಂತರಂಗದಿಂದ ಮೂಡಿಬರಬೇಕು ಎಂದು ನುಡಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಭಟ್ ಉಪಸ್ಥಿತರಿದ್ದರು. ಅಮರ್ ಜವಾನ್ ಸ್ಮಾರಕಕ್ಕೆ ರೀತ್ ಸಮರ್ಪಿಸಲಾಯಿತು. ಆಗಮಿಸಿದ ಎಲ್ಲರೂ ಪುಷ್ಪಾರ್ಚನೆಗೈದರು.


ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. 


ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಹೆತ್ತವರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಸುದಾನ ಶಿಕ್ಷಣ ಸಂಸ್ಥೆಯ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗಿಯಾದರು.




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top