ಸ್ವಭಾಷಾಪ್ರೇಮ ಆಂದೋಲನವಾಗಲಿ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಸ್ವಭಾಷಾ ಪ್ರೇಮದ ಆಂದೋಲನ ರಾಜಧಾನಿಯಿಂದಲೇ ಆರಂಭವಾಗಲಿ; ರಾಮಚಂದ್ರಾಪುರ ಮಠದ ಪ್ರತಿಯೊಬ್ಬ ಶಿಷ್ಯರೂ ಶುದ್ಧ ಕನ್ನಡ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ದಕ್ಷಿಣ ಬೆಂಗಳೂರು ಮಂಡಲದ ಶ್ರೀಅನ್ನಪೂರ್ಣೇಶ್ವರಿ, ವಿಜಯನಗರ, ಶ್ರೀರಾಜರಾಜೇಶ್ವರಿ, ಬನಶಂಕರಿ ಮತ್ತು ಶ್ರೀಗಿರಿನಗರ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.


ನಮ್ಮ ದೇಶ, ಭಾಷೆಯ ಬಗೆಗಿನ ಅಭಿಮಾನ ಸದಾ ಇದ್ದರೆ ಮಾತ್ರ ಈ ನೆಲದ ಸಂಸ್ಕøತಿ- ಸಂಸ್ಕಾರ ಉಳಿಯುತ್ತದೆ. ಯುವಜನತೆ ವಿಶೇಷವಾಗಿ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಈ ಆಂದೋಲನ ಬೆಂಗಳೂರಿನಲ್ಲಿ ಆರಂಭವಾಗಿ ಎಲ್ಲೆಡೆ ಪಸರಿಸಬೇಕು. ಶುದ್ಧವಾದ ಮನೆ ಭಾಷೆಯಲ್ಲಿ ಮಾತನಾಡುವುದನ್ನು ಪ್ರತಿಯೊಬ್ಬರೂ ರೂಢಿ ಮಾಡಿಕೊಳ್ಳಬೇಕು ಎಂಬ ಸ್ಫೂರ್ತಿಯನ್ನು ನಿಮ್ಮಲ್ಲಿ ತುಂಬುವ ಉದ್ದೇಶದಿಂದಲೇ ಸ್ವಭಾಷ್ಯ ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಪರಕೀಯ ಭಾಷೆಯ ಗುಲಾಮರಾಗದೇ, ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಬದಲಾವಣೆ ಆರಂಭವಾಗಬೇಕು ಎಂದು ಆಶಿಸಿದರು.


ಧರ್ಮ, ದೇವರು, ಪೀಠದ ಬಗ್ಗೆ, ಪರಂಪರೆಯ ಬಗೆಗಿನ ಕಳಕಳಿ ನಿಮ್ಮನ್ನು ಇಲ್ಲಿಗೆ ಕರೆ ತಂದಿದೆ. ಆಶೀರ್ವಾದ ಪಡೆಯುವ ಸಲುವಾಗಿ ಬಹು ನಿರೀಕ್ಷೆಯಿಂದ ಬಂದಿದ್ದೀರಿ. ಬದುಕಿನ ಎಲ್ಲ ವಿಘ್ನಗಳು ದೂರವಾಗಿ ಬಾಳು ಸುಗಮವಾಗಲಿ ಎಂದು ಹಾರೈಸಿದರು. ಪ್ರತಿಯೊಬ್ಬರೂ ಮಠಕ್ಕೆ, ಪೀಠಕ್ಕೆ ಒಂದಲ್ಲ ಒಂದು ರೀತಿಯ ಸೇವೆ ಮಾಡುತ್ತಿರಬೇಕು. ಸೇವೆಯಲ್ಲಿ ಧನ್ಯತೆ ಪಡೆಯಬೇಕು ಎಂದು ಸೂಚಿಸಿದರು.


ನಮ್ಮ ಜೀವನದಲ್ಲಿ ಮನಸ್ಸು ಬೇರೆಡೆಗೆ ವಿಮುಖವಾಗದಂತೆ ಸುಸ್ಥಿತಿಯಲ್ಲಿರಬೇಕಾದರೆ ದೇವರು ಹೊರಿಸಿದ ಭಾರ ತಲೆಯ ಮೇಲಿರಬೇಕು. ಶ್ರೀಮಠದ ಒಂದಲ್ಲ ಒಂದು ಹೊಣೆಗಾರಿಕೆ ನಿಮಗೆ ಇರಬೇಕು ಎಂದು ಹೇಳಿದರು.


ದಿನಚರ್ಯದ ಬಗೆಗಿನ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ಅರಿವಿನ ವಿಚಾರದಲ್ಲಿ ಮನನ ಮಾಡಿಕೊಳ್ಳುವುದು ಪ್ರಮುಖವಾದ ಅಂಶ. ಗ್ರಹಣ, ಧಾರಣ, ಸ್ಮರಣ ಮತ್ತು ಅಭಿವ್ಯಕ್ತಿ ಹೀಗೆ ನಾಲ್ಕು ಹಂತಗಳಲ್ಲಿ ಇದು ನಮ್ಮ ಬಳಕೆಗೆ ಬರಬೇಕು ಎಂದು ಸೂಚಿಸಿದರು.


ಆಯುರ್ವೇದವೆಂಬ ಕಲ್ಪವೃಕ್ಷದಲ್ಲಿ ಸ್ವಸ್ಥವೃತ್ತ ಮತ್ತು ಆತುರವೃತ್ತವೆಂಬ ಎರಡು ಶಾಖೆಗಳಿವೆ. ಒಂದು ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ತಿಳಿಸಿದರೆ, ಇನ್ನೊಂದು ಅನಾರೋಗ್ಯಕ್ಕೆ ಪರಿಹಾರಗಳನ್ನು ಸೂಚಿಸುತ್ತದೆ. ಇತರ ವೈದ್ಯಪದ್ಧತಿಗಳಿಗಿಂತ ಭಿನ್ನವಾಗಿ ಆರೋಗ್ಯ ಕೆಡದಂತೆ ಹೇಗೆ ಇರಬೇಕು ಎನ್ನುವುದನ್ನು ನಿರೂಪಿಸುತ್ತದೆ ಎಂದು ವಿವರಿಸಿದರು.


ಹಸಿವು ಅಥವಾ ಅನ್ನಾಭಿಲಾಷೆ ಆರೋಗ್ಯದ ಪ್ರಮುಖ ಲಕ್ಷಣ. ಹಸಿವಾಗುತ್ತಿದೆ ಎಂದರೆ ಅಗ್ನಿ ಸಮರ್ಪಕವಾಗಿದೆ ಎಂಬ ಅರ್ಥ. ಅದು ದೋಷಗಳನ್ನು ಸುಟ್ಟುಹಾಕುತ್ತದೆ. ಆದ್ದರಿಂದ ಅದು ಆರೋಗ್ಯದ ಮೂಲಾಧಾರ. ದೇಹದ ತ್ಯಾಜ್ಯಗಳು ಹೋಗಬೇಕಾದ್ದು ಆರೋಗ್ಯದ ಎರಡನೇ ಲಕ್ಷಣ. ದಿನಕ್ಕೆ ಆರು ಬಾರಿ ಮೂತ್ರ, ಎರಡು ಬಾರಿ ಮಲ ವಿಸರ್ಜನೆಯಾದರೆ ಆರೋಗ್ಯ ಸುಸ್ಥಿತಿಯಲ್ಲಿದೆ ಎಂಬ ಅರ್ಥ ಎಂದು ವಿಶ್ಲೇಷಿಸಿದರು.


ಶರೀರ ಹಗುರವಿದ್ದು, ಇಂದ್ರಿಯಗಳು ಸುಪ್ರಸನ್ನವಾಗಿರುವುದು ಆರೋಗ್ಯದ ಮತ್ತೆರಡು ಲಕ್ಷಣಗಳು. ಜ್ಞಾನದ ಇಂದ್ರಿಯಗಳು ಐದು, ಕರ್ಮದ ಇಂದ್ರಿಯಗಳು ಐದು ಹಾಗೂ ಮನಸ್ಸು ಇನ್ನೊಂದು ಇಂದ್ರಿಯ. ಹೀಗೆ ಹನ್ನೊಂದು ಇಂದ್ರಿಯಗಳು ಪ್ರಸನ್ನವಾಗಿರಬೇಕು. ಪ್ರಕೃತಿ ಸಹಜ ಸಮಯಕ್ಕೆ ನಿದ್ದೆ, ಎಚ್ಚರ ಆಗಬೇಕು. ಅದು ಆರೋಗ್ಯವಂತನ ಲಕ್ಷಣ. ಬಲ, ವರ್ಣ, ಬಾಳ್ವಿಕೆ, ಸುಮನಸ್ಸು, ಸಮಾಗ್ನಿ ಕೂಡಾ ಆರೋಗ್ಯದ ಲಕ್ಷಣಗಳು ಎಂದು ಬಣ್ಣಿಸಿದರು.


ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಯುವ ಪ್ರಧಾನ ಚಂದನ ಶಾಸ್ತ್ರಿ, ಸೇವಾಖಂಡದ ಶ್ರೀಸಂಯೋಜಕ ಕೇಶವಪ್ರಕಾಶ್ ಮುಣ್ಚಿಕಾನ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎನ್. ಮಹೇಶ ಭಟ್, ಶ್ರೀಕಾಂತ್ ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top