ನಮ್ಮ ಸರ್ವಸೇವೆಯೂ ಈ ದೇಶಕ್ಕಾಗಿ ಸಮರ್ಪಿತವಾಗಬೇಕು : ಸುಬ್ರಮಣ್ಯ ನಟ್ಟೋಜ

Upayuktha
0



ಪುತ್ತೂರು: ವೈದ್ಯರಾಗಬೇಕೆನ್ನುವ ಕನಸು ಹಲವು ವಿದ್ಯಾರ್ಥಿಗಳಲ್ಲಿದೆ. ಆದರೆ ಅಂತಹ ಗುರಿ ಈಡೇರಿದ ನಂತರ ನಮ್ಮ ಸೇವೆ ಈ ದೇಶಕ್ಕಾಗಿಯೇ ಇರಬೇಕು. ನಮ್ಮ ರಾಷ್ಟ್ರ ನಮ್ಮ ಮೊದಲ ಹಾಗೂ ಏಕೈಕ ಆದ್ಯತೆಯಾಗಬೇಕು. ವೈದ್ಯಕೀಯ ಸೇವೆಯನ್ನು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲಪುವಂತೆ ಮಾಡುವುದರಲ್ಲಿ ನಿಜವಾದ ಸಾರ್ಥಕ್ಯ ಅಡಗಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ನೀಟ್ ರಿಪೀಟರ್ಸ್‌ ಬ್ಯಾಚ್ ತರಗತಿಗಳನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.


ಐಎಎಸ್, ಸಿ.ಎ ಮೊದಲಾದ ಪರೀಕ್ಷೆಗಳಂತೆ ನೀಟ್ ಪರೀಕ್ಷೆಯೂ ಕಠಿಣವಾದ ಪರಿಶ್ರಮವನ್ನು ಬೇಡುತ್ತದೆ. ಹಾಗಾಗಿಯೇ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮೊದಲ ಬಾರಿಗೇ ಗೆಲ್ಲುತ್ತೇನೆ ಎನ್ನುವುದು ಹಲವರಿಗೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಒಂದು ವರ್ಷ ಆ ಪರೀಕ್ಷೆಗಾಗಿಯೇ ಸಮಯವನ್ನು ನೀಡಿ ಅಧ್ಯಯನ ಕಾರ್ಯ ಕೈಗೊಂಡರೆ ಯಶಸ್ಸು ನಮ್ಮದಾಗುವುದಕ್ಕೆ ಸಾಧ್ಯ ಎಂದು ತಿಳಿಸಿದರು.


ನೀಟ್ ರಿಪೀಟರ್ಸ್‌ ಬ್ಯಾಚ್‌ಗೆ ಸೇರಿದ ಪ್ರತಿಯೊಬ್ಬರಿಗೂ ಮೆಡಿಕಲ್ ಕಾಲೇಜು ದಾಖಲಾತಿ ಲಭ್ಯವಾಗಬೇಕೆಂಬ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಭೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಕಲ್ಪಿಸಿಕೊಡಲಾಗುತ್ತದೆ. ಆದರೆ ಪರಿಪೂರ್ಣ ಪರಿಶ್ರಮದೊಂದಿಗೆ ಕರ್ತವ್ಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಯತ್ನವೊಂದೇ ಸಾಧನೆಯ ದಾರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.


ಪ್ರಸ್ತಾವನೆಗೈದ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷಾ ತರಗತಿಗಳ ಸಂಯೋಜಕ ಕಿಶೋರ್ ಭಟ್ ಮಾತನಾಡಿ ನೀಟ್ ರಿಪೀಟರ್ಸ್‌ ತರಗತಿಗಳಲ್ಲಿ ಪಿಯು ತರಗತಿಗಳಲ್ಲಿ ದೊರಕಿದ್ದಕ್ಕಿಂತ ಎಷ್ಟೋ ಹೆಚ್ಚಿನ ಅವಧಿಯ ತರಬೇತಿ ತರಗತಿಗಳು ಲಭ್ಯವಾಗುತ್ತವೆ. ಮೆಡಿಕಲ್ ಕಾಲೇಜು ದಾಖಲಾತಿಯ ಗುರಿಯನ್ನೇ ಇರಿಸಿ ತರಗತಿಗಳು ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ, ಪರಿಣಾಮಗಳಾಗಲಿವೆ. ಹಿಂದಿನ ವರ್ಷಗಳಲ್ಲಿ ಇಂತಹ ರಿಪೀಟರ್ಸ್‌ ತರಗತಿಗಳಿಗೆ ಹಾಜರಾದ ಪ್ರತೀ ಮೂವರಲ್ಲಿ ಇಬ್ಬರಿಗೆ ಮೆಡಿಕಲ್ ಕಾಲೇಜು ದಾಖಲಾತಿ ಲಭ್ಯವಾಗಿದೆ ಎಂದು ಮಾಹಿತಿ ನೀಡಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಂ.ಎಸ್.ಶೆಣೈ ಹಾಗೂ ಪ್ರಭಾವತಿ ದಂಪತಿ ನೀಟ್ ರಿಪೀಟರ್ಸ್‌ ಬ್ಯಾಚ್ ತರಗತಿಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶೀ ರಾಜಶ್ರೀ ಎಸ್. ನಟ್ಟೋಜ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಲ್ಲೊಬ್ಬರಾದ, ಉಪನ್ಯಾಸಕ ನಾಗೇಶ್ ಉಪಸ್ಥಿತರಿದ್ದರು.


ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top