ತಾಸೆಂದರೆ ಬರೊಬ್ಬರಿ ಅರವತ್ತೇ ನಿಮಿಷ
ಒಳಿತನೆ ಗುನುಗುತ್ತಲೂ ಕಳೆಯಬಹುದು
ಕೆಡುಕ ಗೊಣಗುತ್ತಲು ಮುಗಿಸಬಹುದು.!
ದಿನವೆಂದರೆ ಕೇವಲ ಇಪ್ಪತ್ತನಾಲ್ಕೇ ತಾಸು
ಮುಖವೂದಿಸಿಕೊಂಡು ಕಳೆಯಬಹುದು
ಮೊಗವರಳಿಸಿಕೊಂಡು ಮುಗಿಸಬಹುದು.!
ವಾರದಲ್ಲಿ ಬರುವುದೊಂದೇ ಭಾನುವಾರ
ಮುದ್ದಾಗಿ ಯುಗಳದಲ್ಲು ಕಳೆಯಬಹುದು
ಗುದ್ದಾಡಿ ಜಗಳದಲ್ಲೂ ಮುಗಿಸಬಹುದು.!
ಬದುಕಿರುವುದು ಹಣೆಯಲಿ ಬರೆದಷ್ಟೆ ದಿನ
ನಕ್ಕು ನಗಿಸಿ ನಡೆದರೂ ಕಳೆದೀತು ವಯಸ್ಸು
ಬಿಕ್ಕಿ ಗೋಳಿಟ್ಟರೂ ಮುಗಿದೀತು ಆಯಸ್ಸು,!
ವಿಧಾತ ಕೊಟ್ಟು ಕಳುಹಿದ ವೇಳೆ ನಿರ್ದಿಷ್ಟ
ಸ್ವಾದಿಷ್ಟವಾಗಿಸುತ ಆಗಲೂಬಹುದು ಶ್ರೇಷ್ಟ
ಕನಿಷ್ಟವಾಗಿಸುತಲಿ ಆಗಲುಬಹುದು ನಿಕೃಷ್ಟ.!
ವಿಧಿಯ ಸೂತ್ರದ ಸಮಯದ ಗೊಂಬೆ ನಾವು
ಕಾಲವೃಕ್ಷದ ರೆಂಬೆಗಳಲೊಂದು ಎಲೆ ನಾವು
ಇದ್ದಷ್ಟು ಹೊತ್ತು ನಳಿಸಬೇಕು ನಮ್ಮ ತಾವು.!
ಬಾಳಬುತ್ತಿಯಲ್ಲಿ ತುಂಬಿದ ಸಮಯ ನಿಶ್ಚಿತ
ಹೇಗಾದರು ಸರಿದು ಹೋಗುವುದು ಖಚಿತ
ಕೈಜಾರಿದ ಸಮಯ ಮರಳಿ ಸಿಗದು ಖಂಡಿತ.!
ಮತ್ತೇಕೆ ಸುಖಾಸುಮ್ಮನೆ ತಂಟೆ ತಕರಾರು?
ಇಲ್ಲದ ಸಲ್ಲದ ಒಲ್ಲದ ನೂರೆಂಟು ಕರಾರು
ಉಸಿರುಸಿರನು ಸಂಭ್ರಮಿಸುವುದೇ ಜರೂರು.!
ಗೆಳೆಯ ಇದು ಹೊತ್ತಿನ ಹೊತ್ತಿಗೆಯ ಮರ್ಮ
ಕಾಲನ ತಾಳಕ್ಕೆ ಕುಣಿವುದೇ ಜೀವಗಳ ಕರ್ಮ
ಕ್ಷಣಕ್ಷಣವ ಸಾರ್ಥವಾಗಿಸುವುದೇ ಬಾಳಧರ್ಮ.!
- ಎ.ಎನ್.ರಮೇಶ್.ಗುಬ್ಬಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ