ರೋಗಿಯ ಸಂತೃಪ್ತಿಯೇ ವೈದ್ಯನ ಆಸ್ತಿ: ಡಾ. ಶಿವಪ್ರಕಾಶ್

Chandrashekhara Kulamarva
0


ಮಂಗಳೂರು: ಪ್ರತಿಯೊಬ್ಬ ರೋಗಿಯಲ್ಲಿಯೂ ಸಂತೃಪ್ತಿ ಮೂಡಿಸಿ ಆತನ ಬಾಳನ್ನು ನೆಮ್ಮದಿಗೊಳಿಸುವುದು ವೈದ್ಯರ ದೊಡ್ಡ ಆಸ್ತಿಯಾಗಿದೆ ಎಂದು ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಹೇಳಿದರು.


ಅವರು ಸೋಮವಾರ ಜಿಲ್ಲಾ ಆಯುಷ್ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರಿಗೆ ವಿಶೇಷ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.


ರೋಗಿಯ ಬೇಡಿಕೆ ಮತ್ತು ವರ್ತನೆಗಳು ಯಾವ ರೀತಿ ಇದ್ದರೂ ಅದನ್ನು ನಿಭಾಯಿಸಿ ಉತ್ತಮ ಚಿಕಿತ್ಸೆ ನೀಡುವುದು ಕರ್ತವ್ಯವಾಗಿದೆ. ಆರೋಗ್ಯ ಎಂಬ ಸಂಪತ್ತನ್ನು ಕಾಪಾಡುವಲ್ಲಿ ವೈದ್ಯ ಲೋಕವು ಜಗತ್ತಿನಲ್ಲಿ ಅವಿರತ ಪರಿಶ್ರಮ ಪಡುತ್ತಿದೆ ಎಂದು ಅವರು ತಿಳಿಸಿದರು.


ಲೇಡಿಗೋಶನ್ ಅಧೀಕ್ಷಕ  ಡಾ.ದುರ್ಗಾ ಪ್ರಸಾದ್ ಮಾತನಾಡಿ, ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರು ಪ್ರಮುಖ ಆಧಾರ ಸ್ತಂಭವಾಗಿದ್ದು  ಅವರ ನಿಸ್ವಾರ್ಥ, ಅನುಭವಿ ಹಾಗೂ ಮಾನವೀಯ ಸೇವೆಗಳು ಸಮಾಜಕ್ಕೆ ಸದಾ ಮಾದರಿಯಾಗಿದೆ ಎಂದು ತಿಳಿಸಿದರು.


ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಜಿಲ್ಲಾ ಆಯುಷ್ ಆಸ್ಪತ್ರೆಯು ರಾಜ್ಯದಲ್ಲಿ ಮಾದರಿ ಸೇವೆಯನ್ನು ನೀಡುತ್ತಿದ್ದು, ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ ಎಂದು  ಅವರು ಹೇಳಿದರು.


ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮಾತನಾಡಿ, ಆಯುಷ್ ಆಸ್ಪತ್ರೆಯಲ್ಲಿ ಹಲವಾರು ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.


ನಿವೃತ್ತ ಆಯುಷ್ ಅಧಿಕಾರಿ ಡಾ. ದೇವದಾಸ್ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಡಾ. ಪ್ರದೀಪ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿ. ಎ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ  ಹರೀಶ್ ರೈ, ಆಯುಷ್ ಇಲಾಖೆಯ ಅಧಿಕಾರಿಗಳಾದ ಡಾ. ಮುರಳೀಧರ್, ಡಾ. ಝಾಹಿದ್ ಮತ್ತಿತರರು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
To Top