ಆನ್‌ಲೈನ್ ಜೂಜಾಟ ನಿಯಂತ್ರಿಸಲು ರಾಷ್ಟ್ರವ್ಯಾಪಿ ಕಾನೂನು: ಸುರಾಜ್ಯ ಅಭಿಯಾನದ ಬೇಡಿಕೆ

Upayuktha
0

 Online Gambling : ಆನ್‌ಲೈನ್ ಜೂಜಾಟದ ನಿಷೇಧಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ

ಗೋವಾ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳ ಭರವಸೆ



ದೇ
ಶಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಆನ್‌ಲೈನ್ ಜೂಜಾಟದಿಂದ ('ರಿಯಲ್ ಮನಿ ಗೇಮಿಂಗ್') ಲಕ್ಷಾಂತರ ಕುಟುಂಬಗಳು ನಾಶವಾಗುತ್ತಿವೆ. ಸಾವಿರಾರು ಕೋಟಿ ರೂಪಾಯಿಗಳ ಲೂಟಿ ನಡೆಯುತ್ತಿದೆ. ಇದನ್ನು ರಾಜ್ಯದಲ್ಲಿ ಮಾತ್ರ ಕಾನೂನುಬದ್ಧಗೊಳಿಸುವುದು ಸಾಕಾಗುವುದಿಲ್ಲ, ರಾಷ್ಟ್ರಮಟ್ಟದಲ್ಲಿ ಕಠಿಣ ಮತ್ತು ಪರಿಣಾಮಕಾರಿ ಕಾನೂನನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. 


ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ವತಿಯಿಂದ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿ  ವಿಷ್ಣುದೇವ್ ಸಾಯ ಅವರನ್ನು ಭೇಟಿ ಮಾಡಿ, ಭಾರತೀಯ ಸಂವಿಧಾನದ 252 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಮಟ್ಟದ ಕಾನೂನು ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಇಬ್ಬರೂ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರದಲ್ಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಭರವಸೆ ನೀಡಿದ್ದಾರೆ.


ಛತ್ತೀಸ್‌ಗಢದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ರಾಜ್ಯ ಸಂಘಟಕ ಸುನಿಲ್ ಘನವಟ್, ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಧ್ಯಕ್ಷರು ಮತ್ತು ಸ್ವಾ. ಸಾವರ್ಕರ್ ಅವರ ಮೊಮ್ಮಗ ರಣಜಿತ್ ಸಾವರ್ಕರ್,  ಗೋವಿಂದ್ ಸಾಹು, ರೋಹಿತ್ ತಿರಂಗ, ಹೇಮಂತ್ ಕಾನಸ್ಕರ್, ಪ್ರಸಾದ್ ವಡಕೆ, ಪರ್ವೇಶ್ ತಿವಾರಿ, ಅಂಕಿತ್ ದ್ವಿವೇದಿ, ಅಜಯ್‌ಸಿಂಗ್ ಠಾಕೂರ್ ಮತ್ತು ಆಶಿಶ್ ಪರಿದಾ ಉಪಸ್ಥಿತರಿದ್ದರು. ಮುಖ್ಯಮಂತ್ರಿ ವಿಷ್ಣುದೇವ್ ಸಾಯ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಸ್ತಾವನೆಯನ್ನು ಮುಂದೆ ಕಳುಹಿಸುವ ಭರವಸೆ ನೀಡಿದರು.


ಇನ್ನು ಗೋವಾ ರಾಜ್ಯದಲ್ಲಿ ‘ಸುರಾಜ್ಯ ಅಭಿಯಾನ’ದ ನಿಯೋಗದಲ್ಲಿ ಸರ್ವಶ್ರೀ ರಾಜೇಂದ್ರ ದೇಸಾಯಿ, ನಾರಾಯಣ ನಾಡ್ಕರ್ಣಿ, ಮನೋಜ್ ಗಾಂವಕರ್, ಸುಚೇಂದ್ರ ಅಗ್ನಿ, ಸ್ವಪ್ನಿಲ್ ನಾಯಕ್, ಸತ್ಯವಿಜಯ್ ನಾಯಕ್ ಮತ್ತು ಸದಾಶಿವ ಧೋಂಡ್ ಸೇರಿದ್ದರು. ಇದರ ಬಗ್ಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ತಿಳಿಸಿದರು ಮತ್ತು ಸಂಬಂಧಪಟ್ಟ ಅಧಿಕಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಿದರು.


ಆನ್‌ಲೈನ್ ಜೂಜಾಟದಿಂದಾದ ಹಾನಿ:

ಗೋವಾ ವೈದ್ಯಕೀಯ ಕಾಲೇಜಿನ 2013 ರ ಅಧ್ಯಯನದ ಪ್ರಕಾರ, 8% ವೈದ್ಯಕೀಯ ವಿದ್ಯಾರ್ಥಿಗಳು ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಬಲಿಯಾಗಿದ್ದಾರೆ; ಗೋವಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಕಾರ, 20% ಗೋವಾದ ಹದಿಹರೆಯದ ಮಕ್ಕಳು ಜೂಜಾಟದ ವ್ಯಸನಕ್ಕೆ ಸಿಲುಕಿದ್ದಾರೆ; ಗೋವಾದಲ್ಲಿ 45% ಕ್ಕಿಂತ ಹೆಚ್ಚು ವಯಸ್ಕ ಪುರುಷರು ಒಂದು ವರ್ಷದಲ್ಲಿ ಜೂಜಾಟ ಆಡಿದ್ದು, ಅವರು ಕೌಟುಂಬಿಕ ಮತ್ತು ವೃತ್ತಿಪರ ದೃಷ್ಟಿಯಿಂದ ತೊಂದರೆಗೆ ಸಿಲುಕಿದ್ದಾರೆ; ಜೂನ್ 2025 ರಲ್ಲಿ ಫೋಂಡಾದಲ್ಲಿ 19 ವರ್ಷದ ಯುವಕ ಆನ್‌ಲೈನ್ ಜೂಜಾಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ; ಸೈಬರ್ ಕ್ರೈಂ ಸೆಲ್ 10 ತಿಂಗಳಲ್ಲಿ 672 ಅಕ್ರಮ ವೆಬ್‌ಸೈಟ್‌ಗಳು ಮತ್ತು 936 ಮೊಬೈಲ್ ಫೋನ್‌ಗಳನ್ನು ನಿಲ್ಲಿಸಿದ್ದರೂ, ಹೊಸ ಪ್ಲಾಟ್‌ಫಾರ್ಮ್‌ಗಳ ಹೆಚ್ಚಳ ಮುಂದುವರಿದಿದೆ.


2019 ರಿಂದ 44 ಅಪರಾಧಗಳು ದಾಖಲಾಗಿವೆ; ಅಲ್ಲದೆ, ಛತ್ತೀಸ್‌ಗಢ ರಾಜ್ಯದಲ್ಲಿ 2025 ರಲ್ಲಿ ವೈಭವ್ ಸಾಹು ಎಂಬ 21 ವರ್ಷದ ಯುವಕ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ; ಖೈರಾಗಢ ಪೊಲೀಸರು ಜುಲೈ 2025 ರಲ್ಲಿ ನಾಗ್ಪುರದಿಂದ ನಡೆಯುತ್ತಿದ್ದ 20 ಕೋಟಿ ರೂಪಾಯಿಗಳ ಆನ್‌ಲೈನ್ ಬೆಟ್ಟಿಂಗ್ ಗ್ಯಾಂಗ್ ಅನ್ನು ಭೇದಿಸಿದರು; ಛತ್ತೀಸ್‌ಗಢ ರಾಜ್ಯದಲ್ಲಿ 444 ಅಪರಾಧಗಳು ದಾಖಲಾಗಿವೆ, 1000 ಕ್ಕೂ ಹೆಚ್ಚು ಬಂಧನಗಳು ಮತ್ತು 2.20 ಕೋಟಿ ರೂಪಾಯಿಗಳ ವಶಪಡಿಸಿಕೊಳ್ಳಲಾಗಿದೆ; ‘ಮಹಾದೇವ್ ಆ್ಯಪ್’ಗೆ ಸಂಬಂಧಿಸಿದ 77 ಪ್ರಕರಣಗಳು; ಐಪಿಎಲ್ ಕ್ರಿಕೆಟ್ ಹಂಗಾಮದಲ್ಲಿ ಪ್ರತಿದಿನ 8 ರಿಂದ 10 ಲಕ್ಷ ರೂಪಾಯಿಗಳ ಬೆಟ್ಟಿಂಗ್ ವಹಿವಾಟುಗಳು ಬೆಳಕಿಗೆ ಬಂದಿವೆ. ಇದೇ ಪರಿಸ್ಥಿತಿ ದೇಶಾದ್ಯಂತದ ಪ್ರತಿ ರಾಜ್ಯದಲ್ಲಿ ಗಂಭೀರವಾಗಿದ್ದು, ರಾಷ್ಟ್ರೀಯ ಕಾನೂನನ್ನು ತಕ್ಷಣವೇ ಜಾರಿಗೊಳಿಸುವುದು ಅವಶ್ಯಕ.


 ಜೂಜಾಟದ ಆ್ಯಪ್‌ಗಳ ಸಂಸ್ಥೆಗಳಿಗೆ 25 ಸಾವಿರ ಕೋಟಿ ರೂಪಾಯಿ ಬಾಕಿ:

ದೇಶಾದ್ಯಂತ ಅನೇಕ ಚಲನಚಿತ್ರ ನಟರು ಈ ಆನ್‌ಲೈನ್ ಜೂಜಾಟದ ಜಾಹೀರಾತು ಮಾಡುತ್ತಿರುವುದರಿಂದ ಯುವಜನರಲ್ಲಿ ಇದರ ಆಕರ್ಷಣೆ ಹೆಚ್ಚಾಗಿದೆ. 2025 ರಲ್ಲಿ 50 ಕೋಟಿಗಿಂತ ಹೆಚ್ಚು ಆನ್‌ಲೈನ್ ಜೂಜಾಟ ಆಡುವ (ಬಳಕೆದಾರರು) ಭಾರತೀಯರಿದ್ದಾರೆ. 2024 ರ ಅಂಕಿಅಂಶಗಳ ಪ್ರಕಾರ, 30 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವಹಿವಾಟು ಹೊಂದಿರುವ ಕ್ಷೇತ್ರವಾಗಿದೆ. ಆನ್‌ಲೈನ್ ಜೂಜಾಟ ನಡೆಸುವ ಅನೇಕ ಸಂಸ್ಥೆಗಳು ವಿದೇಶಿ ಮೂಲದವರಾಗಿದ್ದು, ಈ ಎಲ್ಲಾ ಹಣವು ವಿದೇಶಕ್ಕೆ ಹೋಗುತ್ತಿದೆ ಎಂದು ಆರೋಪಿಸಲಾಗಿದೆ.


ಅಲ್ಲದೆ, ‘ಡ್ರೀಮ್ ಇಲೆವೆನ್’ ನಂತಹ ಆ್ಯಪ್‌ಗಳಲ್ಲಿ ಗೆಲ್ಲುವ ಸಾಧ್ಯತೆ ೦.೦೦೦೦1% ರಷ್ಟು ಅತ್ಯಂತ ಕಡಿಮೆ ಅಂದರೆ ಇಲ್ಲವೇ ಇಲ್ಲ. ಇದರಿಂದ ಲಕ್ಷಾಂತರ ಯುವಕರಿಗೆ ಮೋಸವಾಗುತ್ತಿದೆ. ಅಲ್ಲದೆ, ಕೇಂದ್ರ ಸರಕಾರಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ವಂಚಿಸಿದ ಪ್ರಕರಣದಲ್ಲಿ, ಸರಕಾರವು ಆನ್‌ಲೈನ್ ಜೂಜಾಟ ನಡೆಸುವ ಸಂಸ್ಥೆಗಳಿಗೆ 55 ಸಾವಿರ ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ. ಅದರಲ್ಲಿ ಕೇವಲ ‘ಡ್ರೀಮ್ ಇಲೆವೆನ್’ ಗೆ 25 ಸಾವಿರ ಕೋಟಿ ರೂಪಾಯಿ ಬಾಕಿ ಇದೆ.


 ರಾಷ್ಟ್ರವ್ಯಾಪಿ ಕಠಿಣ ಕಾನೂನು; ಇದೊಂದೇ ಪರಿಣಾಮಕಾರಿ ಉಪಾಯ :

ಈ ಆನ್‌ಲೈನ್ ಜೂಜಾಟದ ವಿರುದ್ಧ ದೇಶದಲ್ಲಿ ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಮಾತ್ರ ಕಾನೂನುಗಳನ್ನು ಮಾಡಿವೆ; ಆದರೆ ರಾಜ್ಯಗಳು ಮಾಡಿದ ಕಾನೂನುಗಳು ಅಸಮರ್ಪಕವಾಗಿದ್ದು, ತಮಿಳುನಾಡಿನ ಕಾನೂನಿಗೆ ಸುಪ್ರೀಂ ಕೋರ್ಟ್‌ನಲ್ಲಿ ಸವಾಲು ಹಾಕಲಾಗಿದೆ. 


ಒಟ್ಟಾರೆ, ರಾಜ್ಯವಾರು ಕಾನೂನುಗಳು ಅಸಮರ್ಪಕವೆಂದು ಸಾಬೀತಾಗುತ್ತಿರುವುದರಿಂದ, ರಾಷ್ಟ್ರವ್ಯಾಪಿ ಕಠಿಣ ಕಾನೂನು ಒಂದೇ ಪರಿಣಾಮಕಾರಿ ಪರಿಹಾರ ಎಂದು ಸುರಾಜ್ಯ ಅಭಿಯಾನ ಹೇಳಿದೆ. ಎರಡು ರಾಜ್ಯಗಳು ಭಾರತೀಯ ಸಂವಿಧಾನದ 252 ನೇ ವಿಧಿಯ ಅಡಿಯಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಕೇಂದ್ರ ಸರಕಾರಕ್ಕೆ ಅಂತಹ ಕಾನೂನನ್ನು ಜಾರಿಗೊಳಿಸಲು ಮಾರ್ಗ ತೆರೆಯಲಿದೆ. ಆದ್ದರಿಂದ, ರಾಜ್ಯಗಳು ತಕ್ಷಣವೇ ಸದರಿ ಪ್ರಸ್ತಾವನೆಯನ್ನು ಕಳುಹಿಸಲು ಸುರಾಜ್ಯ ಅಭಿಯಾನ ಪ್ರಯತ್ನಿಸುತ್ತಿದೆ.



- ಅಭಿಷೇಕ್ ಮುರುಕಟೆ,

ಸಂಯೋಜಕರು, ಸುರಾಜ್ಯ ಅಭಿಯಾನ,

ಹಿಂದೂ ಜನಜಾಗೃತಿ ಸಮಿತಿ (ಸಂಪರ್ಕ: 9867558384)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top