ಭಾರತೀಯ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ನಾಗರ ಪಂಚಮಿಗೆ ವಿಶೇಷ ಸ್ಥಾನವಿದೆ. ಶಿವನ ಕಂಠ ಹಾರವಾಗಿರುವ ಆದಿಶೇಷನಿಗೆ ಹಾಲು ಎರೆಯುವ ವಿಶೇಷ ಜೊತೆಗೆ ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಖ್ಯಾತವಾಗಿದೆ.
ಮದುವೆಯಾಗಿ ಗಂಡನ ಮನೆ ಸೇರಿರುವ ಹೆಣ್ಣುಮಕ್ಕಳಳಿಗೆ ಈ ಹಬ್ಬ ಇನ್ನಷ್ಟು ವಿಶೇಷ. 'ಪಂಚಮಿ ಹಬ್ಬ ಉಳಿದಾದ ದಿನ ನಾಕಾ ಅಣ್ಣ ಬರಲಿಲ್ಲ ಯಾಕ ಕರಿಲಾಕ' ಎಂಬ ಹಾಡಿನ ಸಾಲಿನಂತೆ ಹಬ್ಬ ನಾಲ್ಕು ದಿನ ಮುಂಚೆ ಇರುವಾಗಲೇ, ಗಂಡನ ಮನೆಯಲ್ಲಿರುವ ಹೆಣ್ಣು ತವರು ಮನೆಯಿಂದ ನನ್ನನ್ನು ಕರಿಯೋದಕ್ಕೆ ಅಣ್ಣ, ಅಪ್ಪ ಯಾವಾಗ ಬರಬಹುದು ಎಂದು ದಾರಿ ಕಾಯುತ್ತಾ ನಿಂತಿರುವ ಹೆಣ್ಣಿನ ಮನಸ್ಸಿನ ಭಾವನೆ ಕಣ್ಣು ಒದ್ದೆಯಾಗುವಂತೆ ಮಾಡುತ್ತದೆ.ತವರು ಮನೆಯಿಂದ ದೂರವಿರುವ ಹೆಣ್ಣಿಗೆ ಇದೊಂದು ಅಚ್ಚು ಮೆಚ್ಚಿನ ಹಬ್ಬ. ಅಮ್ಮ ಅಪ್ಪ, ಅಣ್ಣ ತಮ್ಮಂದಿರನ್ನು ನೋಡುವ ಹಂಬಲದಿಂದ ಹಾತೊರೆಯುವ ಹೆಣ್ಣಿನ ಮನಕ್ಕೆ ತವರು ಮನೆಗೆ ಹೋಗಿ ಬರುವ ಭಾಗ್ಯ ದೊರಕಿಸುವುದು ಈ ನಾಗರ ಪಂಚಮಿ ಹಬ್ಬ.
ಇದರ ವಿಶೇಷತೆಯೇ ಇದು. ತವರು ಮನೆಯಿಂದ ನಾಲ್ಕು ದಿನ ಮುಂಚೆಯೇ ಅಣ್ಣನೋ, ಅಪ್ಪನೋ ಯಾರೊ ಹೋಗಿ ಗಂಡನ ಮನೆಯಲ್ಲಿರುವ ತಮ್ಮ ಮನೆಯ ದೀಪವನ್ನು (ಮಗಳನ್ನು )ಕರೆದುಕೊಂಡು ಬಂದು, ಅವಳಿಗೆ ಹೊಸ ಸೀರೆ ಮತ್ತು ಇತರೆ ಉಡುಗೊರೆಗಳನ್ನುತಂದು, ಹಬ್ಬದ ದಿನದಂದು ತಲೆಗೆ ನೀರು ಎರಕೊಂಡು, ನೀಳ ಕೂದಲು ಬಿಟ್ಟು ಆ ಹೊಸ ಸೀರೆಯನ್ನು ಉಟ್ಟು ತಲೆಗೆ ಘಮ ಘಮಿಸುವ ಹೂಗಳು ಮುಡಿದಿರುವ ಅವಳನ್ನು ನೋಡುವುದೇ ತವರು ಮನೆಯವರ ಖುಷಿ. ಹಬ್ಬದ ನಾಲ್ಕು ದಿನಗಳ ಮೊದಲಿನಿಂದಲೇ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡುವ ಕಾರ್ಯ ಸಿದ್ದಿಯಾಗಿರುತ್ತದೆ.
ಅದರ ಜೊತೆಗೆ ಹಬ್ಬದ ದಿನದಂದು ವಿವಿಧ ಬಗೆಯ ಲಘು ಬಗೆಯ ಸಿಹಿ ತಿಂಡಿ ತಿನಿಸುಗಳನ್ನು ಮಾಡಿ ಊರಲ್ಲಿರುವ ನಾಗರ ಕಟ್ಟೆಗೆ, ಅಥವಾ ಹುತ್ತವಿರುವ ಜಾಗಕ್ಕೆ ಹೋಗಿ, ಒಣ ಕೊಬ್ಬರಿ ಬಟ್ಟಲಿನಿಂದ ಹಾಲನ್ನು ಮೊಗೆದು ಕೊಂಡು "ನನ್ನ ಪಾಲು, ಅಮ್ಮನ ಪಾಲು, ಅಪ್ಪನ ಪಾಲು, ಹೀಗೆ ಮನೆಯ ಸದಸ್ಯರ ಹೆಸರಿನ ಮೇಲೆ ಹುತ್ತಕ್ಕೆ ಹಾಲೆರೆದು ನಮ್ಮ ಕುಟುಂಬದ ಎಲ್ಲರನ್ನು ರಕ್ಷಿಸು ಎಂದು ಬೇಡಿಕೊಂಡು ಮನೆಗೆ ಬಂದು, ಆ ಕೊಬ್ಬರಿ ಬಟ್ಟಲಿಗೆ ದಾರ ಕಟ್ಟಿ ಗಿರಗಿಟ್ಲೆ ಎಂಬ ಆಟಿಕೆಎಂಬ ಆಟಿಕೆ ತಯಾರಿಸಿ ಆಡಿಸುವುದು. ಮನೆ ಮಂದಿಯ ಜೊತೆಗೆ ಕುಳಿತು ತೃಪ್ತಿಯಿಂದ ಸಿಹಿ ತಿಂಡಿಗಳನ್ನು ಸವಿಯುವುದು. ಹೀಗೆ ಕುಟುಂಬದೊಂದಿಗೆ ವಿವಿಧ ದೇವಸ್ಥಾನಕ್ಕೆ ಭೇಟಿ ಕೊಡುವುದು. ಕೊನೆಗೆ ಹಬ್ಬ ಮುಗಿಸಿ ಗಂಡನ ಮನೆಗೆ ಮರಳುವಾಗ ಬಗೆ ಬಗೆಯ ತಿಂಡಿಗಳನ್ನು ಡಬ್ಬಿಗೆ ತುಂಬಿಸಿ ತವರು ಮನೆ ಕಡೆಯಿಂದ'ನಾಗರ ಪಂಚಮಿ ಬುತ್ತಿ' ಎಂದು ಕಳಿಸಿ ಕೊಡುವವುದು ವಾಡಿಕೆ.
ಗಂಡನ ಮನೆಗೆ ಮರಳುವಾಗ ಕಣ್ಣಲ್ಲಿ ನೀರು. ಒಟ್ಟಿನಲ್ಲಿ ನಾಗರ ಪಂಚಮಿ ಎಂದರೆ ಗಂಡನ ಮನೆಯಲ್ಲಿರುವ ಹೆಣ್ಣಿಗೆ ವಿಶೇಷ. ವರ್ಷಪೂರ್ತಿ ಯಾವುದೇ ಹಬ್ಬ ಬಂದರೂ ನಾಗರ ಪಂಚಮಿಯಷ್ಟು, ಹೆಣ್ಣಿಗೆ ಅಷ್ಟೊಂದು ವಿಶೇಷವಲ್ಲ.
- ಹನುಮಂತ ಎಸ್ ಕೆ
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ.
ವಿವೇಕಾನಂದ ಕಾಲೇಜ್ ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ