ಪಂಚಮಿ ಹಬ್ಬ ನಾಡಿಗೆ ದೊಡ್ಡದು

Upayuktha
0


ಪ್ರತಿ ದಿವಸವು ಕೂಡ ನಾಗನನ್ನು ಆರಾಧಿಸಬೇಕು. ಕಾರಣ ಆತ ಸಂಕರ್ಷಣ ರೂಪದಲ್ಲಿ ಭೂಮಿಯನ್ನು ಧಾರಣೆ ಮಾಡಿಕೊಂಡಿದ್ದಾನೆ. ಇದನ್ನೇ ವಿಜ್ಞಾನಿಗಳು ಗುರುತ್ವಾಕರ್ಷಣೆ ಎನ್ನುತ್ತಾರೆ ರೆ. ವಿಶಾಲವಾದ ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಈ ಬಲವಿರುವುದು ಕೇವಲ ಭೂಮಿಯಲ್ಲಿ ಮಾತ್ರ. ಅದಕ್ಕೆ ಕಾರಣ ನಾಗನೇ ಆಗಿದ್ದಾನೆ. ನಾವು ಕೂಡ ಈ ಭೂಮಿಯಲ್ಲಿ ಸ್ಥಿರವಾಗಿ ನಿಲ್ಲಲು, ಹಾಗೆಯೇ ಇಲ್ಲಿ ಕೃಷಿಯೇ ಮೊದಲಾದ ಜೀವನೋಪಾಯಕ್ಕೆ ಬೇಕಾದ ವ್ಯವಸ್ಥೆಗಳನ್ನು ಈ ಭೂಮಿ ತಾಯಿಯ ಮೂಲಕ ಪಡೆಯಲು ನಾಗನ ಅನಿವಾರ್ಯತೆ ಪ್ರತಿಯೊಬ್ಬರಿಗೂ ಇದೆ. 


ಪ್ರಪಂಚದ ಯಾವ ಮೂಲೆಗೆ ಹೋದರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನಾಗನ ಆರಾಧನೆಯನ್ನು ನಾವು ಕಾಣುತ್ತೇವೆ. ಜೇಮ್ಸ್ ಪರ್ಗ್ಯೂಸನ್ ಎಂಬ ಇತಿಹಾಸಜ್ಞನ ಅಭಿಪ್ರಾಯದಂತೆ ಮೊತ್ತ ಮೊದಲಾಗಿ ನಾಗಾರಾಧನೆಯು ಮಧ್ಯ ಪ್ರಾಚ್ಯದ ತುರೇನಿಯನ್ ಎನ್ನುವ ಜನಾಂಗದಿಂದ ಪ್ರಾರಂಭವಾಯಿತು ಎಂದೆನ್ನುತ್ತಾನೆ. ಆದರೆ ನಮ್ಮ ಸನಾತನ ಧರ್ಮದ ಋಷಿ ಪರಂಪರೆಯ ವೇದಕಾಲದ ಕಾಲಘಟ್ಟವನ್ನು ಯಾವುದೇ ಇತಿಹಾಸಕಾರದಿಂದ ಸ್ಪಷ್ಟವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಕಾಲದಲ್ಲಿಯೇ ವಿಫುಲವಾಗಿ ನಾಗನ ಆರಾಧನೆಗಳು ನಡೆಯುತ್ತಿದ್ದದ್ದನ್ನು ಹಲವಾರು ಮಂತ್ರಗಳು ನಮಗೆ ತಿಳಿಸಿಕೊಟ್ಟಿವೆ. ಎಷ್ಟರಮಟ್ಟಿಗೆ ನಮ್ಮ ಋಷಿ ಪರಂಪರೆಯವರು ಸರ್ಪ ಸಂತತಿಯನ್ನು ಕುರಿತು ಪ್ರಾರ್ಥಿಸಿದ್ದಾರೆಂದರೆ, ಕೇವಲ ಭೂಮಿಯಲ್ಲಿ ತೆವಳಿಕೊಂಡು ಸಾಗುವ ಸರೀಸೃಪಗಳನ್ನು ಮಾತ್ರವಲ್ಲದೆ ಭೂಮಿಯಿಂದ ಸೂರ್ಯಮಂಡಲದ ತನಕ ವ್ಯಾಪಿಸಿರುವ ಸಕಲ ಚರಾಚರ ಅಣುರೇಣುಗಳನ್ನು ಕೂಡ ಸರ್ಪನ ಆರಾಧನೆಯ ಒಳಗೆ ಕಂಡುಕೊಂಡು ಸ್ತುತಿಸಿದ್ದನ್ನು ನಾವು ಕಾಣುತ್ತೇವೆ. 


ನಮೋ ಅಸ್ತು ಸರ್ಪೇಭ್ಯೋ ಯೇಕೇ ಚ ಪೃಥಿವೀ 

ಯೇ ಅಂತರಿಕ್ಷೇ ದಿವಿ ತೇಭ್ಯೋ ಸರ್ಪೇಭ್ಯೋ ನಮಃ 


ಇಷ್ಟು ವ್ಯಾಪ್ತವಾದ ಚಿಂತನೆ ಅವರಲ್ಲಿತ್ತು. ಅಷ್ಟೇ ಅಲ್ಲದೆ ಪ್ರತಿಯೊಬ್ಬನೂ ಕೂಡ ವಿವಾಹದ ಆನಂತರದಲ್ಲಿ ಸಂತಾನ ಪ್ರಾಪ್ತಿಗಾಗಿ ನಾಗದೇವತೆಗಳ ಪ್ರೀತ್ಯರ್ಥವಾಗಿ ಅನ್ನದ ಬಲಿ ಕೊಡುವ ಕುರಿತಾದ ಮಂತ್ರಗಳು ಹಲವಾರಿವೆ. ವೇದದಿಂದ ನಂತರ ಪುರಾಣಗಳಲ್ಲಿಯೂ ಕೂಡ ನಾವು ನಾಗಸಂತತಿ ಕುರಿತಾದ ಅನೇಕ ಕಥೆಗಳನ್ನು ಕಾಣುತ್ತೇವೆ. ಪ್ರತಿಯೊಂದು ನಾಗದೇವತೆಗಳಿಗೆ ಸಂಬಂಧಪಟ್ಟ ಚರಿತ್ರೆಗಳು ದಾಖಲಾಗಿವೆ. ಹೀಗೆ ಯಾವ ಕಾಲಘಟ್ಟದ್ದು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯಲ್ಪಡದ ಪ್ರಾಚೀನತಮವಾದ ವೇದಗಳಿಂದ ಹಿಡಿದು ಇವತ್ತಿನ ತನಕದ ನಾಗನ ಆರಾಧನೆಯ ಬೆಳವಣಿಗೆಯನ್ನು ನಾವು ಕಾಣುತ್ತೇವೆ. ಆದರಿಂದ ಇಡೀ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನವಾದ ನಾಗಾರಾಧನೆಯನ್ನು ನಾವು ಈ ನೆಲದಲ್ಲಿಯೇ ಕಂಡುಕೊಂಡದ್ದನ್ನು ಒಪ್ಪಿಕೊಳ್ಳಲೇಬೇಕು. ಮರದ ಬುಡದಿಂದ ಹಿಡಿದು ದೊಡ್ಡ ದೊಡ್ಡ ಶಿಲಾಮಯ ದೇವಸ್ಥಾನಗಳ ತನಕ ನಾಗಾರಾಧನೆಯ ವೈಶಿಷ್ಟ್ಯಗಳು ಹರಡಿ ನಿಂತಿವೆ. 


ಸನಾತನ ಧರ್ಮದ ದೇವತಾರಾಧನೆಗಳಲ್ಲಿ ಆಯಾ ತಿಥಿಗೆ ಪ್ರಧಾನತೆಯಿರುವುದನ್ನು ನಾವು ಕಾಣುತ್ತೇವೆ. ಆದ್ದರಿಂದ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ನಾಗನಿಗೆ ಅತ್ಯಂತ ಪ್ರೀತಿದಾಯಕವಾದ ದಿನವಾಗಿದೆ. 


ಪಂಚಮ್ಯಾಂ ಕಿಲ ನಾಗಾನಾಂ ಭವತೀತ್ಯುತ್ಸವೋ ಮಹಾನ್ 


ಪಂಚಮಿಯು ನಾಗಗಳಿಗೆ ಉತ್ಸವವಾಗಿದೆ. ಈ ಬಗ್ಗೆ ಪುರಾಣಗಳ ಹಲವಾರು ಕಥೆಗಳಿವೆ. ಅವುಗಳಲ್ಲಿ ಪ್ರಧಾನವಾಗಿ, ಜನಮೇಜಯನ ಸರ್ಪಯಾಗದಲ್ಲಿ ನಶಿಸುತ್ತಿರುವ ಸರ್ಪಗಳು ಆಸ್ತಿಕನಿಂದ ಈ ದಿವಸ ರಕ್ಷಿಸಲ್ಪಟ್ಟವು. ಕದ್ರುವಿನಲ್ಲಿ ನಾಗಸಂತತಿ ಹುಟ್ಟಿದ ದಿವಸವೂ ಹೌದು. ಸರ್ಪಗಳು ವಿಷವೇರಿಸಿಕೊಂಡು ಪ್ರಪಂಚ ಕಂಟಕರಾಗಿ ಮೆರೆದಾಗ, ಭಗವಾನ್ ಬ್ರಹ್ಮ, ಅವರ ಅಹಂಕಾರವನ್ನು ಇಳಿಸಿ ಪಾತಾಳ ಲೋಕಕ್ಕೆ ಕಳುಹಿಸಿದ ಮೇಲೆ ಭೂಲೋಕದಲ್ಲಿ ಅವರ ನೆನಪಿನಲ್ಲಿ ಅವರನ್ನು ಆರಾಧಿಸುವ ದಿವಸ. ಕೃಷ್ಣನು ಕಾಳಿಂಗನನ್ನು ಮರ್ದಿಸಿ, ಅವನ ಅಹಂಕಾರವನ್ನು ಇಳಿಸಿದ ದಿವಸ.


ಹೀಗೆ ಪುರಾಣಗಳು ಹಲವಾರು ಕಥೆಗಳನ್ನು ಹೇಳುವ ಮೂಲಕ ನಾಗಾರಾಧನೆಯ ಮಹತ್ವವನ್ನು ತಿಳಿಸಿಕೊಟ್ಟಿವೆ. ಆ ಆಧಾರದಲ್ಲಿ ನಾವು ಆ ದಿವಸವನ್ನು ಆಚರಿಸುವುದು. ಇಷ್ಟಲ್ಲದೆ ನಮ್ಮ ಪುರಾಣಗಳಲ್ಲಿ ಶ್ರಾವಣ ಮಾಸದ ಶುದ್ಧ ಪಂಚಮಿ, ಮಾರ್ಗಶೀರ್ಷ ಮಾಸದಲ್ಲಿ ನಾಗ ತೃತೀಯ ಹಾಗೂ ನಾಗ ದ್ವಾದಶಿ ಮತ್ತು ಕಾರ್ತಿಕ ಮಾಸದಲ್ಲಿ ನಾಗ ಪಂಚಮಿ ಹೀಗೆ ಪ್ರತ್ಯೇಕ ದಿನಗಳ ಬಗ್ಗೆ ಉಲ್ಲೇಖವಿದೆ. ನಾಗನಿಗೂ ಸುಬ್ರಹ್ಮಣ್ಯನಿಗೂ ಪೌರಾಣಿಕವಾದ ಹಿನ್ನೆಲೆಯಲ್ಲಿ ಒಂದು ತಾದಾತ್ಮ್ಯ ಇರುವುದರಿಂದ ಸುಬ್ರಹ್ಮಣ್ಯ ಷಷ್ಠಿಯಂದು, ಸ್ಕಂದ ಪಂಚಮಿಯಂದು ಕೂಡ ವಿಶೇಷವಾಗಿ ನಾಗನನ್ನು ಆರಾಧಿಸುತ್ತಾರೆ. ಆ ಮೂಲಕ ನಾಗನ ಮಹತ್ವವನ್ನು ಬಹಳಷ್ಟು ಸಾರಿದೆ.


ತುಳುನಾಡಿನ ನಾಗಾರಾಧನೆಯಲ್ಲಿ ತನು ತಂಬಿಲ ಪಂಚಾಮೃತದ ಹೆಸರನ್ನು ನಾವು ಕೇಳಿಯೇ ಇರುತ್ತೇವೆ. ತನು ಎಂದರೆ ಪ್ರಕೃತಿಯ ಮತ್ತೊಂದು ಹೆಸರು. ಪ್ರಕೃತಿಗೆ ಹಾಗೂ ಪ್ರಕೃತಿಯ ಬೆಳವಣಿಗೆಗೆ ಪೂರಕವಾದ ಹಲವಾರು ಅಂಶಗಳಿಗೆ ನಾಗ ಸಂತತಿಗಳು ಪ್ರಧಾನವಾಗಿ ಕಾರಣವಾಗಿವೆ. ಆದ್ದರಿಂದ ನಾಗನನ್ನು ಆರಾಧಿಸುವುದೆಂದರೆ ಅದು ಪ್ರಕೃತಿ ಆರಾಧನೆ ಆಗಿದೆ. ಆದ್ದರಿಂದಲೇ ಆ ಆರಾಧನೆಯ ಮೊದಲ ಹೆಜ್ಜೆ ಅದು ಪ್ರತಿಮೆಯ ಮೂಲಕವಾಗಿ ತನುವನ್ನು ಪೂಜಿಸುವ ಮೂಲಕವಾಗಿದೆ.


ಹೆಚ್ಚಾಗಿ ನಾಗಸಂತತಿಗಳು ಹುತ್ತದ ಒಳಗೆ ಅವಿತಿರುತ್ತವೆ. ಅದಕ್ಕೆ ಬಿಲ ಎಂದು ಹೆಸರು. ಅದು ಪ್ರಕೃತಿಯ ಮತ್ತೊಂದು ರೂಪ. ಈ ಮಣ್ಣಿಗೂ ಆ ಹುತ್ತಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಹಾಲು, ಮೊಸರು ಇತ್ಯಾದಿ ದ್ರವ್ಯಗಳು ಈ ಮಣ್ಣಿನ ಮೃದುತ್ವಕ್ಕೆ ಹಾಗೂ ಮಣ್ಣಿನ ಗುಣದ ಹೆಚ್ಚಳಕ್ಕೆ ಕಾರಣವಾಗುತ್ತವೆ ಎನ್ನುವುದರಿಂದ ಅದನ್ನು ತಂಪುಗೊಳಿಸುವ ಪ್ರಕ್ರಿಯೆ, ಈ ಹಾಲು ಇತ್ಯಾದಿ ಪಂಚಾಮೃತ ದ್ರವ್ಯಗಳ ಮೂಲಕ ನಡೆಯುತ್ತದೆ ಎನ್ನುವುದು ನಮ್ಮ ಹಿರಿಯರ ಕಲ್ಪನೆ. ಅದಕ್ಕೆ ಬಿಲವನ್ನು ತಂಪುಗೊಳಿಸುವುದು ಎನ್ನುವುದಕ್ಕಾಗಿ ತಂಬಿಲ ಎಂದು ಕರೆದರು. ಆದ್ದರಿಂದ ಅಭಿಷೇಕಿಸುವ ದ್ರವ್ಯಗಳು ನೆಲದ ಗರ್ಭದೊಳಗೆ ಸೇರಬೇಕು ಅಥವಾ ಹರಿಯುವ ನೀರಿನೊಂದಿಗೆ ಸಾಗಬೇಕು. ಆ ಉದ್ದೇಶದಲ್ಲಿಯೇ ಬಿರುಮಳೆಯ ನಡುವೆ ಈ ಹಬ್ಬ ಬಂದಿರುವುದು. ಹಾಲು ಕಾಂತಿಯನ್ನು, ಮೊಸರು ತಂಪು ಹಾಗೂ ಶಾಂತಿಯನ್ನು, ಮಧು ಮಾಧುರ್ಯವನ್ನು, ತುಪ್ಪ ಬುದ್ಧಿವರ್ಧನೆಯನ್ನು, ಬೆಲ್ಲ ಅಥವಾ ಸಕ್ಕರೆ ಸೌಖ್ಯವನ್ನು, ಎಳನೀರು ಮನೋರಥವನ್ನು ಸಂಕೇತವಾಗಿಸಿ ಅನುಗ್ರಹದಾಯಕವಾಗಿದೆ. ಹಳದಿಯಂತೂ ವಿಷ ಹಾಗೂ ನಂಜನ್ನು ದೂರಗೊಳಿಸುತ್ತದೆ.


- ಡಾ. ಪ್ರಸನ್ನ ಕುಮಾರ್ ಐತಾಳ್, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top