ನಾಗರ ಪಂಚಮಿ ವಿಶೇಷ: ಮಹಾವಿಷ್ಣುವಿನ ಶಯನ ಆದಿಶೇಷ

Upayuktha
0

 

ದ್ರುವಿಗೆ ಜನಿಸಿದ ಆ 1000 ನಾಗ ಸರ್ಪಗಳಲ್ಲಿ 8 ಪ್ರಮುಖ ಕುಲಗಳು ಇರುವುದನ್ನು ಗುರುತಿಸಲಾಗಿದೆ. ಅವು ಅಷ್ಟಕುಲ ನಾಗಗಳು ಎಂದೇ ಪ್ರಸಿದ್ಧಿಯಾಗಿವೆ. ಅನಂತ, ವಾಸುಕಿ, ತಕ್ಷಕ ಅಥವಾ ಕಂಬಳ, ಕಾರ್ಕೋಟಕ, ಪದ್ಮ, ಮಹಾಪದ್ಮ, ಕುಲಿಕ ಮತ್ತು ಶಂಖ ಅಥವಾ ಶಂಖಪಾಲ ಇವರೇ ಆ ಅಷ್ಟಕುಲದ ನಾಗಗಳು. ಪುರಾಣಗಳ ಪ್ರಕಾರ ಇವರಲ್ಲಿ ಅನಂತ ಮತ್ತು ವಾಸುಕಿಯರಿಗೆ 1000 ಹೆಡೆಗಳು, ತಕ್ಷಕ ಮತ್ತು ಕರ್ಕೋಟಕರಿಗೆ 800 ಹೆಡೆಗಳು, ಪದ್ಮ ಮತ್ತು ಮಹಾಪದ್ಮರಿಗೆ 500 ಹೆಡೆಗಳು ಹಾಗೂ ಕುಲಿಕ ಮತ್ತು ಶಂಖಪಾಲರಿಗೆ 300 ಹೆಡೆಗಳು ಇವೆಯಂತೆ.


ನಾಗಗಳಲ್ಲಿ ಅನಂತನೇ ಎಲ್ಲರಿಗಿಂತ ಹಿರಿಯವನು. ಅವನನ್ನು ಆದಿಶೇಷ, ಶೇಷ, ಶೇಷನಾಗ, ಅನಂತಶೇಷ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಎಲ್ಲರಿಗಿಂತ ಹಿರಿಯನಾಗಿದ್ದರಿಂದ ಅವನನ್ನು ನಾಗರಾಜ ಅಥವಾ ಫಣಿರಾಜ ಎಂತಲೂ ಕರೆಯುತ್ತಾರೆ. ಪುರಾಣಗಳ ಪ್ರಕಾರ ಈ ಆದಿಶೇಷನೇ ತನ್ನ ಹೆಡೆಗಳ ಮೇಲೆ ಭೂಮಿಯನ್ನು ಮಾತ್ರವಲ್ಲದೇ ಬ್ರಹ್ಮಾಂಡದ ಎಲ್ಲಾ ಗ್ರಹಗಳನ್ನು ಹೊತ್ತುಕೊಂಡಿದ್ದಾನೆ. ಪುರಾಣಗಳಲ್ಲಿ ಕೊಟ್ಟಿರುವ ಆದಿಶೇಷನ ಬಗೆಗಿನ ವರ್ಣನೆಗಳನ್ನು ಅಭ್ಯಾಸ ಮಾಡಿದ ಮೇಧಾವಿಗಳು ಇಂದಿನ ವಿಜ್ಞಾನದಲ್ಲಿ ಹೇಳುವ ಸುರುಳಿ ಗ್ಯಾಲಕ್ಸಿಯೇ ಆದಿಶೇಷ ಎಂದು ಅಭಿಪ್ರಾಯಪಡುತ್ತಾರೆ. ಹೀಗೆ ವೈಜ್ಞಾನಿಕ ದೃಷ್ಟಿಯಲ್ಲಿಯೂ ಆಕರ್ಷಣ ಶಕ್ತಿಯಾಗಿ ಸಮಸ್ತ ವಿಶ್ವವನ್ನೇ ತನ್ನ ಗುರುತ್ವದಿಂದ ಬಂಧಿಸಿ ಹಿಡಿದ ಸಂಕರ್ಷಣನೇ ಈ ಆದಿಶೇಷ.


ಪುರಾಣಗಳ ಪ್ರಕಾರ ಆದಿಶೇಷನು ಪಾತಾಳ ಲೋಕದ ಅಧಿಪತಿಯಾಗಿದ್ದಾನೆ. ಗರುಡನಿಗೆ ಹೆದರಿದ ಈತನು ರಕ್ಷಣೆಗಾಗಿ ವಿಷ್ಣುವಿನ ಮೊರೆ ಹೋಗಿ ಆತನ ಸೇವಕನಾಗುತ್ತಾನೆ. ಆದಿಶೇಷನು ತ್ರೇತಾ ಯುಗದಲ್ಲಿ ಲಕ್ಷ್ಮಣನಾಗಿ ಹಾಗೂ ದ್ವಾಪರಾ ಯುಗದಲ್ಲಿ ಬಲರಾಮನಾಗಿ ಭೂಮಿಯಲ್ಲಿ ಅವತರಿಸಿದ ದೇವತಾ ಶಕ್ತಿಯಾಗಿದ್ದಾನೆ. ಈ ಆದಿಶೇಷನು ಭಗವಾನ್ ವಿಷ್ಣುವಿನ ಹಾಸಿಗೆಯಾಗಿದ್ದಾನೆ. ಅಂದರೆ ಈ ಆದಿಶೇಷನ ಮೇಲೆಯೇ ಮಹಾವಿಷ್ಣುವು ಮಲಗುತ್ತಾನೆ. ಹೀಗಾಗಿ ವಿಷ್ಣುವನ್ನು ಅನಂತಶಯನ, ಭುಜಗಶಯನ, ಶೇಷಶಾಯಿ, ಶೇಷಶಯನ, ನಾಗಶಯನ ಎಂದೆಲ್ಲಾ ಹೊಗಳುತ್ತಾರೆ.  


ಪ್ರತಿ ಕಲ್ಪದ ಅಂತ್ಯದಲ್ಲಿ ಪ್ರಳಯ ಸಂಭವಿಸಿದಾಗ ಇಡೀ ಬ್ರಹ್ಮಾಂಡವೇ ನಾಶವಾದರೂ ಈ ಅನಂತನಾಗನು ಅಳಿಯದೇ ಉಳಿಯುವನು. ಹೀಗಾಗಿ ಅವನಿಗೆ “ಶೇಷ” ಎಂಬ ಹೆಸರಾಯಿತು. ಹಿಂದಿನ ಕಲ್ಪದ “ಶೇಷ”ವೇ ಮುಂದಿನ ಕಲ್ಪದ “ಆದಿ” ತಾನೇ? ಹೀಗಾಗಿ ಆತ “ಆದಿಶೇಷ” ಎಂದು ಕರೆಯಲ್ಪಡುತ್ತಾನೆ.  


- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top