ಅಖಿಲ ಭಾರತ ಆಕಾಶವಾಣಿಗೆ 90 ವರ್ಷ ಎಂದ ತಕ್ಷಣ, ನನ್ನ ಮನಸ್ಸಿಗೆ ಹೊಳೆವ ವಿಚಾರವೆಂದರೆ, ಬಹುಶಃ ಇಡೀ ದೇಶ ಅಥವಾ ವಿಶ್ವದಲ್ಲೇ ದಾಖಲೆ ನಮ್ಮ ಮನೆಯಲ್ಲಿ. ನನ್ನ ತಂದೆ ಹಾಗೂ ನನ್ನ ಒಟ್ಟೂ ಬಾನುಲಿ ಅನುಭವ ಹಾಗೂ ಬಾನುಲಿ ಸೇವೆ. 96 ವರ್ಷ. ಮೈಸೂರು ವಿಶ್ವವಿದ್ಯಾಲಯದ ಮನಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಎಂ.ವಿ. ಗೋಪಾಲಸ್ವಾಮಿ ಅವರು ತಮ್ಮ ಮನೆ ವಿಠ್ಠಲ ವಿಹಾರದಲ್ಲಿ, 10.09.1935 ರಂದು, ಖಾಸಗಿ, ಹವ್ಯಾಸಿ, ಪ್ರಾಯೋಗಿಕ ಕೇಂದ್ರವಾಗಿ ಆರಂಭಿಸಿದ ಬಾನುಲಿ ಕೇಂದ್ರ ಈಗ ತನ್ನ 90ನೇ ವರ್ಷದಲ್ಲಿ ದಾಖಲೆಯ ದಾಪುಗಾಲು ಹಾಕುತ್ತಿದೆ. ನನ್ನ ತಂದೆ ಎನ್.ಎಸ್. ವಾಮನ್, 1936 ರಿಂದ ವಿಷ್ಣುವರ್ಧನ್ ಅವರ ತಂದೆ ಹೆಚ್.ಎಲ್. ನಾರಾಯಣರಾವ್ ಜೊತೆಗೆ ಹವ್ಯಾಸಿ ನಾಟಕ ಕಲಾವಿದರಾಗಿ ಹೋಗಿ, ಎಂ.ವಿ. ಗೋಪಾಲಸ್ವಾಮಿ ಅವರ ಗೃಹ-ಬಾನುಲಿ ಕೇಂದ್ರದಲ್ಲಿ ಸತತ ನಾಟಕಗಳನ್ನು ಆಡುತ್ತಿದ್ದರಂತೆ. ಕೆಲವು ಕಾಲ ಎಲೆ ಅಡಿಕೆ-ತೆಂಗಿನಕಾಯಿ ಪಡೆದು ನಾಟಕ ಆಡುತ್ತಿದ್ದರು. ಮುಂದೆ ಮಹಾರಾಜರು ಹಾಗೂ ಅಂದಿನ ರಾಜ್ಯ ಸರ್ಕಾರ ಪೋಷಿಸಿದ ಕೇಂದ್ರದಲ್ಲಿ 1944 ರಿಂದ ಸರ್ಕಾರದ ಭಾಗವಾದ ಆಕಾಶವಾಣಿಯಲ್ಲಿ ಬಾನುಲಿಯ ನಿಲಯದ ಕಲಾವಿದರಾಗಿ ಮೈಸೂರು ಆಕಾಶವಾಣಿಯ ಬಾನುಲಿ ನಾಟಕಗಳ ನಿರ್ದೇಶಕರು ಹಾಗೂ ಕಲಾವಿದರಾಗಿದ್ದರು. ಆಗ ನಿಲಯವು ಹಳೆಯ ಎಕ್ಸಿಬಿಷನ್ ಕಟ್ಟಡದಲ್ಲಿತ್ತು. 1951ರಲ್ಲಿ ನನ್ನ ತಂದೆ ವಾಮನ್ ರಾವ್ ದಿಲ್ಲಿ ಆಕಾಶವಾಣಿಯಿಂದ ಪ್ರಸಾರವಾಗುತ್ತಿರುವ ಕನ್ನಡ ವಾರ್ತಾ ಪ್ರಸಾರದ ಓದುಗರಾಗಿ ಅಪಾರ ಜನಮೆಚ್ಚುಗೆ ಪಡೆದಿದ್ದರು. ಮುಂದೆ 1955ರಲ್ಲಿ ಬೆಂಗಳೂರು ಆಕಾಶವಾಣಿಗೆ ಬಂದು ಶ್ರೀರಂಗರಿಗೆ ನಾಟಕದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ನಂತರ ಧಾರವಾಡ ಆಕಾಶವಾಣಿಗೆ 1958ರಲ್ಲಿ ಹೋಗಿ 30-11-1979ರಂದು, 43 ವರ್ಷಗಳ ಅನುಭವ ಹಾಗೂ ಸೇವೆಯ ನಂತರ ಬಾನುಲಿಯಿಂದ ನಿವೃತ್ತರಾದರು.
ನನ್ನ 7ನೇ ವರ್ಷದಿಂದ ಧಾರವಾಡ ಆಕಾಶವಾಣಿಯ ಪ್ರಸಾರ, ಮನೆಯಲ್ಲಿ ನನ್ನ ತಂದೆಯ ರೇಡಿಯೋ ಕೇಂದ್ರದ ಸೇವೆ ಹಾಗೂ ಕಾರ್ಯಕ್ರಮಗಳ ಮಧ್ಯೆ ಬೆಳೆದೆ. ಹೀಗಾಗಿ ರೇಡಿಯೋ, ರೇಡಿಯೋ ಕೇಂದ್ರ, ಸಮುದಾಯ ಬಾನುಲಿ ಕೇಂದ್ರ ಎಂದರೆ ನನ್ನ ಕಿವಿ ನೆಟ್ಟಾಗಾಗುತ್ತದೆ. ನಾನು 36 ವರ್ಷ ಕರ್ನಾಟಕದ 6 ಬಾನುಲಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಕಲಬುರ್ಗಿಯಲ್ಲಿ 16-7-1976ರಿಂದ 9 ವರ್ಷ ಸೇವೆ ಸಲ್ಲಿಸಿ, ಮುಂದೆ ಮೈಸೂರು ಕೇಂದ್ರದಲ್ಲಿ 10-12-1984 ರಿಂದ 23-6-1991ರವರೆಗೆ ಸೇವೆ ಸಲ್ಲಿಸಿದ್ದೇನೆ. ಮುಂದೆ ಭದ್ರಾವತಿ, ರಾಯಚೂರು, ವಿಜಯಪುರ, ಮಡಿಕೇರಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, ಅಂತಿಮ ಸೇವಾ ಕಾಲದಲ್ಲಿ ಮತ್ತೆ ಮೈಸೂರು ಆಕಾಶವಾಣಿಯಲ್ಲಿ 5-4-2011ರಿಂದ 30-11-2011ರವರೆಗೆ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ನನ್ನ ಅನುಭವ ಹಾಗೂ ಸೇವೆ ಸೇರಿಸಿದರೆ 53 ವರ್ಷ. ನನ್ನ ತಂದೆಯ 43 ಹಾಗೂ ನನ್ನ 53 ವರ್ಷ ಒಟ್ಟಾಗಿಸಿದರೆ ಅದು 96 ವರ್ಷವಾಗುತ್ತದೆ.
ಈ ಅಪರೂಪದ ಫೋಟೋ 1958 ನೇ ಇಸವಿಯ ಬಾನುಲಿ ನಾಟಕದ ನೇರ ಪ್ರಸಾರದ ಚಿತ್ರ. ಇದರಲ್ಲಿ ನಿರ್ದೇಶಕರ ಕುರ್ಚಿಯಲ್ಲಿ ಕುಳಿತು, ಶಬ್ದ ಸಂಕೇತಗಳನ್ನು ಟಿ.ಎಸ್. ರೆಕಾರ್ಡ್ ಮೂಲಕ ನಾಟಕದ ಮಧ್ಯೆ ಮಿಶ್ರಣ ಮಾಡುತ್ತಿರುವವರು ನನ್ನ ತಂದೆ ಎನ್.ಎಸ್ ವಾಮನ್ ಇದರಲ್ಲಿ 7 ವರ್ಷದ ಬಾಲಕನಾಗಿರುವವನೇ ನಾನು ಎನ್.ವ್ಹಿ ರಮೇಶ್. ಇದು ಧಾರವಾಡ ಆಕಾಶವಾಣಿಯ ಚಿತ್ರವಾಗಿದ್ದರೂ ನಾವಿಬ್ಬರೂ ಇರುವ ಅಪರೂಪದ ನೇರ ಪ್ರಸಾರದ ಛಾಯಾಚಿತ್ರವಾಗಿರುವುದರಿಂದ ಇಲ್ಲಿ ಓದುಗರ ಗಮನಕ್ಕೆ ತರಬಯಸಿದೆ. ನನ್ನ ಜೀವನದ ಅತ್ಯಂತ ಮಹತ್ವದ ದಿನಗಳಲ್ಲಿ ಒಂದೆಂದರೆ, ಬೇಂದ್ರೆ ಅವರ ನಿರ್ದೇಶನದಲ್ಲಿ, ರೇಡಿಯೋ ನಾಟಕದಲ್ಲಿ ನಾನು ನಾಯಕನಾಗಿ ಅಭಿನಯಿಸಿದ್ದು, ನನ್ನ ಸೌಭಾಗ್ಯ. ಉತ್ತರ ಕರ್ನಾಟಕದ ಅತ್ಯಂತ ಆರಂಭದ ರಂಗನಾಟಕಗಳನ್ನು ಬರೆದ ಶಾಂತಕವಿಗಳ (ಸಕ್ಕರಿ ಬಾಳಾಚಾರ್ಯ) ನಾಟಕ ವತ್ಸಲಾ ಹರಣ. ಅಭಿಮನ್ಯು. ಹಾಗೂ ವತ್ಸಲಾರ ವಿವಾಹದ ಬಗೆಗಿನ ಪೌರಾಣಿಕ ನಾಟಕವಿದು.
ನನ್ನ 16ನೇ ವಯಸ್ಸಿನಲ್ಲಿ ನನ್ನ ಹಾಡುವ ಮಧುರ ಕಂಠ ಗಡುಸಾದಾಗ, ಮಾಡಿದ ಮೊದಲ ಎರಡು ನಾಟಕಗಳಲ್ಲಿ ಒಂದು ಇದು. ಈ ನಾಟಕದಲ್ಲಿ ನಾನು ಅಭಿಮನ್ಯು. ಬೇಂದ್ರೆ ಅವರೊಡನೆ ನಮ್ಮ ಕುಟುಂಬಕ್ಕೆ ಆತ್ಮೀಯತೆ ಇತ್ತು. ಅವರು ಮಹಾಕವಿಗಳೆಂದು ಗೊತ್ತಿತ್ತೇ ಹೊರತು, ಮುಂದೆ ಜ್ಞಾನಪೀಠ ಪ್ರಶಸ್ತಿ ಪಡೆಯುವ ರಾಷ್ಟ್ರ ಮಟ್ಟದ ಕವಿ ಎಂದು ಆಗ ನನಗೆ ತಿಳಿದಿರಲಿಲ್ಲ. ನಾಟಕದ ರಿಹರ್ಸಲ್ ಆರಂಭಿಸುವ ಮೊದಲು ನಿರ್ದೇಶಕ ಬೇಂದ್ರೆ ನಾಟಕದ ಬಗ್ಗೆ ವಿವರಿಸುತ್ತಾ, ಶಾಂತಕವಿಗಳ ಬಗ್ಗೆ ತಿಳಿಸಿ, ನಾಟಕ ಓದಿ ಹೇಳಿದರು. ಅವರ ಕವಿಕಂಠದಲ್ಲಿ ನಾಟಕದ ಓದುವಿಕೆ ಕೇಳಿದ ಪುಣ್ಯ ನನ್ನದಾಗಿತ್ತು. ಅವರು ರಿಹರ್ಸಲ್‌ನಲ್ಲಿ ಕೆಲವೇ ಸೂಚನೆಗಳನ್ನು ಮೃದುವಾಗಿ ನೀಡಿದರು. ನಾನು ಅಭಿಮನ್ಯು. ನಾವು ಅಕ್ಕಿ ಕೊಳ್ಳುತ್ತಿದ್ದ ಅಂಗಡಿಯ, ನವಲಗುಂದ ನಮ್ಮ ತಂದೆ ಶಿಷ್ಯ ಹಾಗೂ ಕಲಾವಿದ. ಆತ ಘಟೋತ್ಗಜನ ಪಾತ್ರದಲ್ಲಿ ಅಭಿನಯಿಸಿದ್ದರು. ಪ್ರಸಾರದ ದಿನ ಶಾಂತಕವಿಗಳ ಆಯ್ದ 2 ನಾಟಕಗಳ ಸಂಪಾದಿತ ಭಾಗಗಳ ಪ್ರಸಾರ ಸಂಯೋಜನೆಯಾಗಿತ್ತು. ನಾಟಕ ಪ್ರಸಾರದ ಆರಂಭದಲ್ಲಿ ಬೇಂದ್ರೆ, ಶಾಂತಕವಿಗಳು, ಅವರ ನಾಟಕ ರಚನೆ ಬಗ್ಗೆ ಕೆಲವು ಮಾತುಗಳನ್ನಾಡಿದ್ದರು.
ಗರುಡ ಸದಾಶಿವರಾಯರು ಬರೆದ ಪಾದುಕಾ ಪಟ್ಟಾಭಿಷೇಕ ರಂಗನಾಟಕ. ಅದನ್ನು ಆಗ ಆಡುತ್ತಿದ್ದವರು ಬಸವರಾಜ ಮನ್ಸೂರ್ (ಮಲ್ಲಿಕಾರ್ಜುನ ಮನ್ಸೂರ್ ಅವರ ತಮ್ಮ) ಹಾಗೂ ತಂಡದವರು. ಈ ನಾಟಕದಲ್ಲಿ ಅವರು ದಶರಥನ ಪಾತ್ರ ವಹಿಸಿದ್ದರು. ರಂಗಭೂಮಿಯ ಖ್ಯಾತ ನಟಿ ಇಂದಿರಾಭಾಯಿ ಬೆಂಗಳೂರು, ಕೈಕೇಯಿ. ವಿಶೇಷ ಆಮಂತ್ರಣದ ಮೇಲೆ ನಾನು ಭರತನ ಪಾತ್ರ ಮಾಡಿದೆ. ರಂಗದ ಮೇಲೆ ಕೆಲವು ಪ್ರದರ್ಶನಗಳಾದರೆ, ಧಾರವಾಡ ಆಕಾಶವಾಣಿಯ ಬಾನುಲಿ ಕೇಂದ್ರದಿಂದ ಇದು ಬಾನುಲಿ ನಾಟಕವಾಗಿ ಪ್ರಸಾರವಾಯಿತು.
ಆ ಕಾಲದಲ್ಲಿ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರತೀ ಸೋಮವಾರ ಬಾನುಲಿ ನಾಟಕಗಳ ಬಗ್ಗೆ ಹೆಚ್. ಕೆ. ರಾಮಚಂದ್ರಮೂರ್ತಿ ವಿಮರ್ಶೆ ಬರೆಯುತ್ತಿದ್ದರು. ಆ ಸಂದರ್ಭದಲ್ಲಿ ಅವರು ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿಯ ನನ್ನ ಭರತನ ಪಾತ್ರವನ್ನು ಅಪಾರ ಮೆಚ್ಚಿಕೊಂಡು 4 ಸಾಲುಗಳನ್ನು ಬರೆದಿದ್ದರು. ಇಡೀ ನಾಟಕದಲ್ಲಿ ಭರತನ ಪಾತ್ರದ ಧ್ವನಿ, ಭಾವನೆಗಳಿಂದ ತುಂಬಿ ವಿವಿಧ ರಸಗಳ ಅಭಿವ್ಯಕ್ತಿಯಲ್ಲಿ ಓತ-ಪ್ರೋತವಾಗಿ ಸಂಚರಿಸಿತು. ಕೋಪ ಹಾಗೂ ದುಃಖ ಎರಡರಲ್ಲೂ ಇವರ ಧ್ವನಿಯ ಏರಿಳಿತ ಹಾಗೂ ಅಭಿನಯ ಅತ್ಯುತ್ತಮವಾಗಿತ್ತು ಎಂದು ಅವರು ಬರೆದಿದ್ದರು.
- ಎನ್.ವ್ಹಿ.ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ
ಮೊ:-98455-65238
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ