ಸ್ಫೂರ್ತಿ ಸೆಲೆ: ವೃತ್ತಿ-ನಿವೃತ್ತಿ ಜೀವನದ ಸುತ್ತ ಮುತ್ತ

Upayuktha
0


ಹಲೋ, ಹೇಗಿದ್ದೀರಾ?

ಪ್ರತಿಯೊಬ್ಬ ವ್ಯಕ್ತಿ ವೃತ್ತಿ, ನಿವೃತ್ತಿಯ ಚಕ್ರದಲ್ಲಿ ಸಿಕ್ಕಿ ಜೀವನವನ್ನು ಮಾಗಿದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಒಬ್ಬ ವ್ಯಕ್ತಿ ಅಪಾಯಿಂಟ್ಮೆಂಟ್ ಮತ್ತು ರಿಟೈರ್ಮೆಂಟ್ ಎರಡನ್ನೂ ಅನುಭವಿಸಬೇಕಾಗುತ್ತದೆ.


ಒಂದು ವೃತ್ತಿ ಜೀವನದಲ್ಲಿ ವ್ಯಕ್ತಿ ಸುಮಾರು ವರ್ಷಗಳ ವೃತ್ತಿ ಜೀವನವನ್ನು ಅನುಭವಿಸಿದಾಗ, ಕೊನೆಗೊಮ್ಮೆ ಬಯಸದ ಅತಿಥಿ ನಿವೃತ್ತಿ ಜೀವನಕ್ಕೂ ತಯಾರು ಆಗಲೇ ಬೇಕಾಗುತ್ತದೆ. ಆದರೆ ಅದಕ್ಕೆ ಮಾನಸಿಕ ತಯಾರಿಯೂ ಕೂಡ ಅಗತ್ಯ.


ಅಧಿಕಾರ, ದರ್ಪ, ಬಾಸಿಸಂ, ವೈಭವೀಕರಣ, ಮುಗಿದ ಮೇಲೆ ಕೊನೆಗೊಮ್ಮೆ ಶುರು. ಆಗುವುದೂ ನಿವೃತ್ತಿ ಜೀವನ. ಪಗಡೆ ಆತ ಮುಗಿದ ಮೇಲೆ ಎಲ್ಲ ಕಾಯಿಗಳನ್ನು ಒಂದೇ ಡಬ್ಬಿಯಲ್ಲಿ ಹಾಕಿಡುವಂತೆ, ನಿವೃತ್ತಿ ಜೀವನದಲ್ಲಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗಲಾಗುತ್ತದೆ.


ನಿವೃತ್ತಿ ಜೀವನವೆಂದರೆ ಅದು ನಮ್ಮ ಜೀವನದ ಮತ್ತೊಂದು ಇನ್ನಿಂಗ್ಸ್ ಇದ್ದಂತೆ. ನಿವೃತ್ತಿಯಾದ ಮೇಲೆ ಹುಲಿಯಂತೆ ವರ್ತಿಸುವ ಕೆಲವರು ಇಲಿ ಆಗಿಬಿಡುತ್ತಾರೆ ಎಂದು ಕೆಲವರೂ ಅಪಹಾಸ್ಯ ಮಾಡುವುದುಂಟು. ಕೆಲವರು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಆಗದೆ ಖಾಸಗಿ ಕೆಲಸಕ್ಕೆ ಸೇರುವುದು ಉಂಟು. ಆದರೆ ಮೊದಲಿನ ಉತ್ಸಾಹ, ಸಹೋದ್ಯೋಗಿಗಳ ಗಾಸಿಪ್, ಟಾಮ್ ಮತ್ತು ಜೆರ್ರಿ ಯಂತಹ ಆಫೀಸಿನ ರೋಚಕ ಸನ್ನಿವೇಶಗಳು ಈಗ ಇರುವುದಿಲ್ಲ. 


ಮತ್ತೆ ಕೆಲವರು, ದಿನವೂ ರಾಯರ ಮಠ, ದೇವಸ್ಥಾನಕ್ಕೆ ಹೋಗುವುದು, ಯಾವುದಾದರೂ ಆರಾಧನೆಗಳಿಗೆ ಹೋಗಿ ಟೆಂಟ್ ಹಾಕುವುದು, ಸಮಾಜದ ಕೆಲಸಗಳಲ್ಲಿ ಹುರುಪಿನಿಂದ ಓಡಾಡುವುದು ಮಾಡುತ್ತಾರೆ. ಇಲ್ಲಿ ಮೊದಲಿನ ಸ್ಟೇಟಸ್ maintain ಮಾಡಿ ಮನೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲಿಕ್ಕೆ ಮಾಡುವ ಸರ್ಕಸ್ ಆದರೂ  ಟೈಂಪಾಸ್ ಮಾಡುವ, ಆದರೂ ನೆಮ್ಮದಿ ಪಡೆಯುವ ಉದ್ದೇಶಗಳಿರುತ್ತವೆ. ಆದರೆ ಮತ್ತೆ ಕೆಲವರ ಜೀವನ ಇದಕ್ಕಿಂತ ಭಿನ್ನ.


ಅದರಲ್ಲೂ ಹೆಣ್ಣು ಮಕ್ಕಳ ಜೀವನ ತುಂಬ ಸಂಕೀರ್ಣತೆಯಿಂದ ಕೂಡಿರುತ್ತದೆ. ಅತ್ತೆಯ ಪ್ರಮೋಷನ್ ಬಂದರೂ ಸೊಸೆಯ ಜೊತೆ ಹೊಂದು ಕೊಳ್ಳಲಿಕ್ಕೆ ಆಗದೆ, ಇಲ್ಲೀರಲ್ಲಾರೆ ಅಲ್ಲಿಗೆ ಹೋಗಲಾರೆ ಎನ್ನುವ ಪರಿಸ್ಥಿತಿ ಇರುತ್ತದೆ.


ಎಲ್ಲ ಜವಾಬ್ದಾರಿ ಮುಗಿಸಿದರೂ, ಸೊಸೆಯ ಜೊತೆಗೆ  ಹೊಂದಿಕೊಳ್ಳಲಾಗದೆ, ಎಲ್ಲರ ಮುಂದೆ ಸೊಸೆಯನ್ನು ಬಯ್ದುಕೊಂಡು, ಕೊನೆಗೆ ಯಾರ ಸಹಾಯವೂ ಸಿಗದೇ ಸೊಸೆಯ ಕಡೆಯಿಂದ ದಿನವೂ ಮಂಗಳಾರತಿ ಮಾಡಿಸಿಕೊಂಡು ದಿನ ದೂಡುವ ಪರಿಸ್ಥಿತಿ ಇರುತ್ತದೆ.


ಅದರ ಬದಲು ಇಲ್ಲದ ಅಹಂ ಬಿಟ್ಟು, ಆಧ್ಯಾತ್ಮ, ಬರವಣಿಗೆ, ಓದುವುದು, ಹಳೆಯ ಸ್ನೇಹಿತರೊಂದಿಗೆ ಸಂಪರ್ಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಆದಷ್ಟು ನಿರ್ಲಿಪ್ತತೆ, ಮೊಮ್ಮಕ್ಕಳ ಜೊತೆಗೆ ಕಾಲ ಕಳೆಯುವುದು ಒಂದು ರೀತಿಯ ಪರಿಹಾರ. 


ನಮ್ಮ ಶರೀರ ನಮಗೆ ಸ್ಪಂದಿಸದೆ ಇದ್ದಾಗ, ಹಿತಮಿತ ಆಹಾರವನ್ನು ರೂಡಿಸಿಕೊಂಡು, ನಮ್ಮವರು ನಮ್ಮ ಕಣ್ಣ ಮುಂದೆ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿ ಹೋಗುತ್ತಿರುವಾಗ ಇಲ್ಲದ ದರ್ಪ, ಒಣ ಪ್ರತಿಷ್ಠೆ, ಇನ್ನೊಬ್ಬರ ಜೊತೆ ಹೊಂದಿಕೊಳ್ಳದ attitude ಯಾವುದಕ್ಕೆ ಅನಿಸುತ್ತದೆ, ದೇವರು ಕೊಟ್ಟ ಜೀವನವನ್ನು ನೆಮ್ಮದಿಯಾಗಿ ಬಾಳಿ ಕೊನೆಗೆ ಖುಷಿಯಿಂದ ಜೀವನ ಸೇವಿಸಿದರೆ ಸಾಕು ಅನಿಸುತ್ತದೆ ಅಲ್ಲವೇ? ಏನಂತೀರಾ?



-ಗಾಯತ್ರಿ ಸುಂಕದ, ಬದಾಮಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top