- ದ.ಕ ಜಿಲ್ಲಾ ಕೇಟರಿಂಗ್ ಮಾಲಕರ ಅಸೋಸಿಯೇಶನ್ ಮತ್ತು ಕೆಎಂಸಿ ಅತ್ತಾವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
- 'ತುಳುವ ಮಣ್ಣ್‌ದ ಕಮ್ಮೆನ ಆಟಿದ ವನಸ್ದ ತಮ್ಮನ'- ಭೋಜನ ಕೂಟ
ಮಂಗಳೂರು: ಸಾರ್ವಜನಿಕ ಸಭೆ ಸಮಾರಂಭಗಳು ಹಾಗೂ ಮದುವೆ ಮುಂತಾದ ಶುಭಸಮಾರಂಭಗಳಿಗೆ ವೈವಿಧ್ಯಮಯ ಅಡುಗೆಗಳನ್ನು ತಯಾರಿಸಿ ಅತಿಥಿಗಳಿಗೆ ಉಣಬಡಿಸುವ ಪುಣ್ಯ ಕಾರ್ಯವನ್ನು ಮಾಡುವ ಅಡುಗೆ ಉದ್ಯಮದವರು ಒಟ್ಟಾಗಿ ಮುನ್ನಡೆಯುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಇದರಿಂದ ಈ ಉದ್ಯಮದಲ್ಲಿ ಸೇವೆ ಸಲ್ಲಿಸುವ ಸಾವಿರಾರು ಮಂದಿಯ ಹಿತರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಟರಿಂಗ್ ಮಾಲಕರ ಅಸೋಸಿಯೇಶನ್ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಅಡುಗೆ ಮತ್ತು ಆಹಾರ ಪೂರೈಕೆ ಉದ್ಯಮದಲ್ಲಿ ದುಡಿಯುವ ಸಾವಿರಾರು ಮಂದಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದೆ. ಇದು ಇನ್ನಷ್ಟು ಸುಸಜ್ಜಿತವಾಗಿ ಬೆಳೆದು ಕೇಟರಿಂಗ್ ಉದ್ಯಮದ ಕೆಲಸಗಾರರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿರುವುದು ಸ್ವಾಗತಾರ್ಹ ಎಂದು ಕೃಷ್ಣ ಪಾಲೆಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ವರ್ಷ ಸಂಘದ ಅಧ್ಯಕ್ಷರನ್ನು ಬದಲಾಯಿಸುವ ಕ್ರಮ ಒಂದು ಮಾದರಿಯಾಗಿದೆ. ಸಂಘವು ಶಕ್ತಿಯುತವಾಗಿ ಬೆಳೆಯ ಬೇಕು. ಸಂಘದ ಅನುಮೋದನೆಯನ್ನನುಸರಿಸಿ ಮಾಲಕರಿಗೆ ಸರಕಾರ ಲೈಸನ್ಸ್ ನೀಡುವ ವ್ಯವಸ್ಥೆ ಬರಬೇಕು ಎಂದರು.
ಅವರು ದಕ್ಷಿಣ ಕನ್ನಡ ಕೇಟರಿಂಗ್ ಓನರ್ಸ್ ಅಸೋಸಿಯೇಶನ್ ಮತ್ತು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಇವರ ಜಂಟಿ ಆಶ್ರಯದಲ್ಲಿ ಇಂದು (ಜುಲೈ 20) ನಗರದ ಮೋರ್ಗನ್ಸ್ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್‌ನಲ್ಲಿ ಆಯೋಜಿಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಕಷ್ಟದಲ್ಲಿರುವ ಸಾವಿರಾರು ಮಂದಿ ಈ ಉದ್ಯಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗಾಗಿ ಕೇಟರಿಂಗ್ ಮಾಲಕರ ಸಂಘವೂ ಹಲವಾರು ಸೇವಾ ಕಾರ್ಯಗಳನ್ನು ನಡೆಸುತ್ತಲೇ ಬಂದಿದೆ. ಸಮಾಜಕ್ಕೆ ಉಪಯೋಗವಾಗುವ ಈ ಸಂಘಟನೆಯ ಎಲ್ಲ ಕಾರ್ಯಗಳಿಗೂ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪಾಲೆಮಾರ್ ಹೇಳಿದರು.
ಅಡುಗೆ ಉದ್ಯಮದವರ ಕಾರ್ಯಕ್ರಮಗಳಿಗೆ ತಮ್ಮ ಮಾಲೀಕತ್ವದ ಪಾಲೆಮಾರ್ ಗಾರ್ಡನ್‌ನಲ್ಲಿ ಉಚಿತ ಸ್ಥಳಾವಕಾಶವನ್ನು ನೀಡುವುದಾಗಿ ಯೂ ಭರವಸೆ ನೀಡಿದರು.
ಕೇಟರಿಂಗ್ ಮಾಲೀಕರ ಸಂಘದ ಅಧ್ಯಕ್ಷರಾದ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಕರುಣಾಕರ ಪಡಿಯಾರ್ ಮತ್ತು ಇತರ ಎಲ್ಲ ಪದಾಧಿ ಕಾರಿಗಳು ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕೇಟರಿಂಗ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್ ಅವರು ವಹಿಸಿದ್ದರು.
ಅಡ್ಕ ಗ್ರೂಪ್ ಅಧ್ಯಕ್ಷ ಅಬ್ದುಲ್ ಕರೀಂ ಅಡ್ಕ, ದಕ್ಷಿಣ ಕನ್ನಡ ಕೇಟರಿಂಗ್ ಮಾಲಕರ ಸಂಘದ ಗೌರವ ಅಧ್ಯಕ್ಷರಾದ ಸುಧಾಕರ ಕಾಮತ್, ಎಂ.ಎ.ಎಸ್. ಇಕ್ಬಾಲ್ ಮತ್ತು ವೆವೆಲ್ ಫೆಲಿಕ್ಸ್ ಲಸ್ರಾದೊ, ಸಂಘದ ಬಂಟ್ವಾಳ ಒಲಯ ಅಧ್ಯಕ್ಷ ನಾರಾಯಣ ಪೂಜಾರಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರುಣಾಕರ ಪಡಿಯಾರ್, ಕೋಶಾಧಿಕಾರಿ ಪ್ರಕಾಶ್ ಲೋಬೊ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಸ್ಥಾಪಕ ಸಲಹೆಗಾರರಾದ ವಿಜಯ ಕುಮಾರ್ ಎಸ್.ಆರ್., ಹರಿ ಪ್ರಸಾದ್ ಅಂಚನ್, ಯಶವಂತ್ ಪೂಜಾರಿ, ಬಾಲಕೃಷ್ಣ ಕುಕ್ಯಾನ್ ಪಚ್ಚನಾಡಿ ಅವರು ಉಪಸ್ಥಿತರಿದ್ದರು.
ಈ ಶಿಬಿರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ ನಡೆಯಿತು. ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಬಿಪಿ ಮತ್ತು ಮಧುಮೇಹ ಪರೀಕ್ಷೆ, ಕಣ್ಣಿನ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ಎಲುಬು ಮತ್ತು ಕೀಲು ರೋಗ ತಪಾಸಣೆ, ಚರ್ಮರೋಗ ತಪಾಸಣೆ, ಕ್ಯಾನ್ಸರ್ ರೋಗ ತಪಾಸಣೆ, ಸ್ತ್ರೀ ರೋಗ ತಪಾಸಣೆ ಮತ್ತು ದಂತ ತಪಾಸಣೆ (ಹಲ್ಲಿನ ಶುಚಿಗೊಳಿಸುವಿಕೆ, ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು, ಹುಳುಕು ಹಲ್ಲುಗಳನ್ನು ಕೀಳುವುದು ಇತ್ಯಾದಿ) ಮುಂತಾದ ಆರೋಗ್ಯ ಸೇವೆಗಳನ್ನು ನೀಡಲಾಯಿತು.
ಐನೂರಕ್ಕೂ ಹೆಚ್ಚು ಮಂದಿ ಉಚಿತ ಅರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು. ಕಣ್ಣಿನ ತಪಾಸಣೆ ನಡೆಸಿದ ಬಳಿಕ ಅಗತ್ಯವಿರುವವರಿಗೆ ಕನ್ನಡಕಗಳನ್ನೂ ಸ್ಥಳದಲ್ಲೇ ಉಚಿತವಾಗಿ ವಿತರಿಸಲಾಯಿತು.
'ತುಳುವ ಮಣ್ಣ್‌ದ ಕಮ್ಮೆನ ಆಟಿದ ವನಸ್ದ ತಮ್ಮನ'- ಭೋಜನ ಕೂಟವನ್ನೂ ಆಯೋಜಿಸಲಾಯಿತು. 70ಕ್ಕೂ ಹೆಚ್ಚು ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳು ಭೋಜನ ಕೂಟದಲ್ಲಿ ಪಾಲ್ಗೊಂಡವರ ಹೊಟ್ಟೆ ತಣಿಸಿದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ