ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ: ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್

Upayuktha
0

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’




ಮೂಡುಬಿದಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’ ನಡೆಯಿತು.


ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಜೊತೆಯಲ್ಲಿ ಜೀವನದ ದಾರಿಯನ್ನು ತೋರಿಸುತ್ತಾರೆ.  ದೀಪ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಹಾಗೆ ಶಿಕ್ಷಕರು ಜ್ಞಾನ, ಮೌಲ್ಯ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಾರೆ. ಆ ಮೂಲಕ ಸಮಾಜದ ಬೆಳವಣಿಗೆಗೆ ಕಾರಣರಾಗುತ್ತಾರೆ. 


ಪ್ರಾಚೀನ ಕಾಲದ ಚಾಣಕ್ಯನಾಗಿರಬಹುದು ಅಥವಾ ಆಧುನಿಕ ಕಾಲದ ಸರ್ವಪಳ್ಳಿ ರಾಧಾಕೃಷ್ಣರಿರಬಹುದು, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ ನಿರ್ಮಾಣಕ್ಕೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ.  ತಂತ್ರಜ್ಞಾನದ ಬೆಳವಣಿಗೆಯ ಈ ಕಾಲ ಘಟ್ಟದಲ್ಲಿ ಶಿಕ್ಷಕರ ಪಾತ್ರ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ.  ಮೌಲ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವ,  ವಿದ್ಯಾರ್ಥಿ ಕೇಂದ್ರಿತ, ನವಯುಗದ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕವೃಂದ ನಮ್ಮದಾಗಬೇಕು ಎಂದು ಆಶಿಸಿದರು.    


ಹೊಸ ದಿಗಂತ ಪತ್ರಿಕೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿಎಸ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ.  ದೇಶ ಅಥವಾ ಸಮಾಜ ಶಿಕ್ಷಣದಿಂದ ರೂಪಿತವಾಗಬೇಕು.  ಸಮಾಜದ ನಡೆ ಶಿಕ್ಷಣದಿಂದ ನಿರ್ಧರಿತವಾಗಬೇಕು. ಸತ್ಯದ ದಾರಿಯಲ್ಲಿ ಮೌಲ್ಯವನ್ನು ಹೆಚ್ಚಿಸುವುದೇ ಶಿಕ್ಷಣ. ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಆಸ್ಥೆಯ, ಅಪರಿಗ್ರಹದಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಸ್ವಾಭಿಮಾನಿ ಸಮಾಜ ನಿರ್ಮಾಣವಾಗಬೇಕೆಂದರೆ   ಅಂತಹ ಶಿಕ್ಷಣ ನೀಡಬೇಕು  ಎಂದರು.


ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್ ಡಾ. ಹೆಚ್ ಎಸ್ ಬಲ್ಲಾಳ್ ಹಾಗೂ ಸರಸ್ವತಿ ಸಮೂಹ ವಿದ್ಯಾಸಂಸ್ಥೆ ಮೇಘಾಲಯದ ಸ್ಥಾಪಕರು ಹಾಗೂ ಸಂವಿಧಾನ ತಜ್ಞ ಡಾ. ಅನಂತಕೃಷ್ಣ ಭಟ್‌ರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್, ಡಾ ಹೆಚ್ ಎಸ್ ಬಲ್ಲಾಳ, ಈ ತರಹದ ಗುರುತಿಸುವಿಕೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರೇರೆಪಿಸುತ್ತದೆ. ಹುಟ್ಟು ಸಾವಿನ ನಡುವೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ. ಇನ್ನೊಬ್ಬರಿಗಾಗಿ ಬದುಕಿದರೆ, ಅದೇ ಶ್ರೇಷ್ಠ ಬದುಕು ಎಂದು ನುಡಿದರು.

 

ಕಾಲೇಜು ಆಡಳಿತ ನಿರ್ವಹಣೆಯಲ್ಲಿನ ಸಾಧನೆಗಾಗಿ ಅತ್ಯುತ್ತಮ ಆಡಳಿತ ನಿರ್ವಾಹಕ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ (ಸ್ವಾಯತ್ತ)  ಪ್ರಾಚರ‍್ಯ ಡಾ ಕುರಿಯನ್ ಹಾಗೂ ಮಂಗಳೂರಿನ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಇವರಿಗೆ ನೀಡಲಾಯಿತು.


ಸಂಶೋಧನ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿಗೆ ಮಣಿಪಾಲ್ ಯೂನಿವರ್ಸಿಟಿಯ, ಸ್ಕೂಲ್ ಆಫ್ ಎಕನಾಮಿಕ್ಸ್ನ ಪ್ರೊ. ಹರೀಶ್ ಜೋಶಿ ಹಾಗೂ ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶಾಂತರಾಮ ರೈ ಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕಿ ಡಾ ಸುಭಾಷಿಣಿ ಶ್ರೀವತ್ಸ ಹಾಗೂ ಅಜ್ಜರಕಾಡಿನ ಡಾ ಜಿ ಶಂಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಜೇಂದ್ರ ಪಿ ಇವರಿಗೆ ನೀಡಲಾಯಿತು.


ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರೊ. ವಿಜಯಲತಾ ಹಾಗೂ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಯಶೋಧರಿಗೆ ನೀಡಿ ಗೌರವಿಸಲಾಯಿತು.  ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿಯನ್ನು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಡಾ. ರಾಧಾಕೃಷ್ಣ ಹಾಗೂ  ವಿರಾಜಪೇಟೆಯ ಕಾವೇರಿ ಕಾಲೇಜಿನ ತಮ್ಮಯ್ಯರಿಗೆ ನೀಡಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ 2025ನೇ ಸಾಲಿನಲ್ಲಿ ಪಿಹೆಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಮಾನ್ಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಮಂಗಳೂರು ವಿವಿಯ ಕುಲಸಚಿವ ಡಾ ಪಿಎಲ್ ಧರ್ಮಾ, ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.  


ಕೆಆರ್‌ಎಂಎಸ್‌ಎಸ್ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ್, ಕೆಆರ್‌ಎಂಎಸ್‌ಎಸ್‌ನ  ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ,  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ,  ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ ಮಹಾದೇಶ ಸಿ, ಡಾ ಎಸ್ ಬಿ ಎಂ ಪ್ರಸನ್ನ, ಕೆಆರ್‌ಎಂಎಸ್‌ಎಸ್‌ನ ಮಂಗಳೂರು ವಿಭಾಗದ ಅಧ್ಯಕ್ಷೆ ವಾಣಿ ಯುಎಸ್, ಕಾರ್ಯದರ್ಶಿ ರಾಜೇಶ್ ಇದ್ದರು. ಕೆಆರ್‌ಎಂಎಸ್‌ಎಸ್‌ನ ಮಮತಾ ಶೆಟ್ಟಿ ಹಾಗೂ  ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top