ಎಂಸಿಸಿ ಬ್ಯಾಂಕ್ ನಿಂದ ‘ಐಡಿಯಾ ಸಮ್ಮಿಟ್ 2025’

Upayuktha
0


ಮಂಗಳೂರು: ಬ್ಯಾಂಕಿಂಗ್‌ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಗುರುವಾರ (ಜುಲೈ 24) ಮಂಗಳೂರಿನ ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ‘ಐಡಿಯಾ ಸಮ್ಮಿಟ್ 2025’ (Idea Summit 2025) ಅನ್ನು ಆಯೋಜಿಸಿತ್ತು.


ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಸರಾಂತ ಎನ್‌ಆರ್‌ಐ ಉದ್ಯಮಿ ಮತ್ತು ಉದಾರ ದಾನಿ ಮೈಕಲ್ ಡಿಸೋಜಾ, ಎನ್‌ಐಟಿಕೆ ಸುರತ್ಕಲ್‌ನ ನಿವೃತ್ತ ಪ್ರಾಧ್ಯಾಪಕ (HAG) ಪ್ರೊ. ಡಾ| ಅಲೋಶಿಯಸ್ ಸಿಕ್ವೇರಾ, ಆರ್‌ಎಂಸಿಆರ್ & ಕಂ., ಪಾಲುದಾರ ರಾದ ಸಿಎ ಮ್ಯಾಕ್ಸಿಮ್ ಎಂ. ಫೆರ್ನಾಂಡಿಸ್, ಚಾರ್ಟರ್ಡ್ ಅಕೌಂಟೆಂಟ್, ಆರ್ಬಿಟ್ರೇಟರ್ ಮತ್ತು IIM kozhikode ಇದರ ಅತಿಥಿ ಪ್ರಾಧ್ಯಾಪಕ ಪ್ರೊ. ಸಿಎ ಲಾಯ್ನಲ್ ಅರಾನ್ಹಾ ಮತ್ತು ಅನುಭವಿ ಬ್ಯಾಂಕರ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಲೆನ್ ಸಿ. ಪಿರೇರಾ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು.


ಕಳೆದ ಏಳು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್‌'ನ ಗಮನಾರ್ಹ ಬೆಳವಣಿಗೆ ಮತ್ತು ಕಳೆದ 105 ವರ್ಷಗಳ ಪ್ರಗತಿಯನ್ನು ಪ್ರಸ್ತುತಪಡಿಸಲಾಯಿತು. 

ಮಂಗಳೂರಿನ ಬಿಷಪ್ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮತ್ತು ಉಡುಪಿಯ ಬಿಷಪ್ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಗಣ್ಯರ ಉಪಸ್ಥಿತಿಯಲ್ಲಿ ಸಭೆಯನ್ನು ಉದ್ಘಾಟಿಸಿದರು.


ತಮ್ಮ ಉದ್ಘಾಟನಾ ಭಾಷಣದಲ್ಲಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರು, ಬ್ಯಾಂಕ್‌ನ 113 ವರ್ಷದ ಪ್ರಯಾಣವನ್ನು ಸ್ಮರಿಸಿ 105 ವರ್ಷಗಳಲ್ಲಿ ಗಳಿಸಿದ ವ್ಯವಹಾರವನ್ನು ಕೇವಲ ಏಳು ವರ್ಷಗಳಲ್ಲಿ ದ್ವಿಗುಣಗೊಳಿಸಲು ಸಾಧ್ಯವಾದ ಪ್ರಸಕ್ತ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಕಳೆದ ಏಳು ವರ್ಷಗಳಲ್ಲಿ ಬಂದಿರುವ ಈ ವೇಗ ಮುಂದುವರಿಯಬೇಕು ಎಂದು ಹೇಳಿ ಮುಂದಿನ ಹತ್ತು ವರ್ಷಗಳಲ್ಲಿ ಬ್ಯಾಂಕ್ 100% ಬೆಳವಣಿಗೆ ಸಾಧಿಸಲಿ ಎಂದು ಹಾರೈಸಿದರು. ಆಶಯವನ್ನು ವ್ಯಕ್ತಪಡಿಸಿದರು.


ಬ್ಯಾಂಕ್ ಕಳೆದ 105 ವರ್ಷಗಳ ಕಷ್ಟ-ತೊಡಕುಗಳು, ತ್ಯಾಗಗಳು ಮತ್ತು ಸಾಧನೆಗಳನ್ನು ನೆನೆಸಿ ದೇವರಿಗೆ ಧನ್ಯವಾದ ಹೇಳಬೇಕು. ಜೊತೆಗೆ, ಕಳೆದ ಏಳು ವರ್ಷಗಳಲ್ಲಿ ನಡೆದ ಪ್ರಗತಿ ಮತ್ತು ಬದಲಾವಣೆಗಳನ್ನು ಪರಿಶೀಲಿಸಬೇಕು. ಮುಂದಿನ ಹತ್ತು ವರ್ಷಗಳ ಗುರಿ ನಿಜವಾಗಿಸಲು ಆಶಾವಾದ ಮತ್ತು ದೃಢನಿಶ್ಚಯದಿಂದ ಮುಂದಿನತ್ತ ನೋಡುವಂತೆ ಅವರು ಹೇಳಿದರು. ಮುಂದಿನ ದಶಕದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ತಯಾರಿ ಮಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿ, ಬ್ಯಾಂಕ್ ತನ್ನ ದೃಷ್ಟಿಕೋನ (vision) ಮತ್ತು ಗುರಿಯನ್ನು (mission) ಮರುಪರಿಶೀಲಿಸಿ, ಇನ್ನಷ್ಟು ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.


ಬ್ಯಾಂಕ್ ಈಗಾಗಲೇ ಪಾರದರ್ಶಕತೆ (transparency) ಮತ್ತು ಹೊಣೆಗಾರಿಕೆ (accountability) ಅಳವಡಿಸಿಕೊಂಡಿರುವುದನ್ನು ಗಮನಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಕ್ಕೆ ಹೆಚ್ಚಿನ ಉತ್ತರದಾಯಿತ್ವದಿಂದ ನಡೆದುಕೊಳ್ಳುವುದು ಅವಶ್ಯಕವೆಂದು ಅವರು ಹೇಳಿದರು. ಹೊಸ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI), ಕಡೆಗೆ ಬ್ಯಾಂಕ್ ತಕ್ಕ ರೀತಿಯಲ್ಲಿ ಹೊಂದಿಕೊಳ್ಳಬೇಕು ಮತ್ತು ಭವಿಷ್ಯಮುಖಿ ದೃಷ್ಟಿಕೋನವನ್ನು ಹೊಂದಬೇಕೆಂದು ಈ ಸಭೆಯ ಮೂಲಕ ಪ್ರೇರಣೆ ನೀಡಿದರು.


ಮಂಗಳೂರು ಧರ್ಮಾಧ್ಯಕ್ಷರಾದ ಬಿಷಪ್ ಡಾ| ಪೀಟರ್ ಪಾಲ್ ಸಲ್ದಾನ್ಹಾ ಅವರು, ಕಳೆದ ಏಳು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿದ ಯಶಸ್ಸಿಗೆ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ನಗು ಮುಖದಿಂದ ಉತ್ತಮ ಸೇವೆ ನೀಡುವುದನ್ನು ಮುಂದುವರಿಸಲು ಸೂಚಿಸಿದರು. 


ಬ್ಯಾಂಕ್ ನೀಡುತ್ತಿರುವ ವಿಶೇಷ ಸೇವೆಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಹಕರಿಗೆ ಮನಸ್ಸಿಗೆ ಹತ್ತಿರವಾದ ಭಾಷೆಯಲ್ಲಿ ಮಾತನಾಡುವುದು ಬಹಳ ಮುಖ್ಯವೆಂದು ಸಲಹೆ ನೀಡಿದರು. ಯುವಜನರಿಗೆ ಬ್ಯಾಂಕಿಂಗ್ ಬಗ್ಗೆ ಅರಿವು ನೀಡಲು ಮತ್ತು ಎಂಎಸ್‌ಎಂಇ ಸಾಲಗಳ ಮೂಲಕ ಅವರ ಶಕ್ತಿಗೆ ಬಲ ನೀಡಲು ಚಿಂತನೆಯನ್ನು ಪ್ರಾರಂಭಿಸಲು ಸಲಹೆ ನೀಡಿದರು.


ಬ್ಯಾಂಕಿನ ಎಲ್ಲ ಸಿಬ್ಬಂದಿಯೂ ಸ್ಪರ್ಧಾತ್ಮಕವಾಗಿ ಕೆಲಸ ಮಾಡಲು ಸಿದ್ಧರಾಗಿರಬೇಕು. ಮನೆಮನೆಗೂ, ಹಳ್ಳಿಗಳಿಗೂ ಹೋಗಿ ಬ್ಯಾಂಕಿನ ಸೇವೆಗಳನ್ನು ಎಲ್ಲೆಡೆ ಪರಿಚಯಿಸಬೇಕು ಎಂದು ಹೇಳಿದರು. ಜೊತೆಗೆ, ಪ್ರತಿ ಸಮುದಾಯದ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ಹೇಳಿದರು.


ಅಧ್ಯಕ್ಷತೆವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಅವರು, ಎಲ್ಲಾ ಗಣ್ಯರಿಗೆ ಅವರ ಅಮೂಲ್ಯ ಸಲಹೆ ಮತ್ತು ಸೂಚನೆಗಳಿಗಾಗಿ ಕೃತಜ್ಞತೆ ಸಲ್ಲಿಸಿದರು. ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ, ಬ್ಯಾಂಕ್ ತನ್ನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಯೋಜಿತ ಗುರಿಗಳನ್ನು ಸಾಧಿಸಿದೆ ಎಂದು ಹೇಳಿದರು. ಪ್ರಸ್ತುತ ನಾಯಕತ್ವದ ಅಡಿಯಲ್ಲಿ ಬ್ಯಾಂಕಿನ ಸಾಧನೆಗಳು ಮತ್ತು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವಲ್ಲಿ ಆದ ಯಶಸ್ಸನ್ನು ಅವರು ವಿವರಿಸಿದರು.


ಪ್ರಧಾನ ಭಾಷಣ ಮಾಡಿದ ಮೈಕಲ್ ಡಿಸೋಜಾ ಅವರು, ಬ್ಯಾಂಕಿನ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಬ್ಯಾಂಕಿನ ದೀರ್ಘಕಾಲೀನ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅಗತ್ಯವಾದ ಚಿಂತನೆಗಳನ್ನು ಒಗ್ಗೂಡಿಸುವಲ್ಲಿ ಶೃಂಗಸಭೆಯ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಬಿಷಪ್‌ಗಳ ಉಪಸ್ಥಿತಿಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, ಇದು ಎಂಸಿಸಿ ಬ್ಯಾಂಕಿಗೆ ಅವರ ಬೆಂಬಲ ಮತ್ತು ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.


ಸವಾಲನ್ನು ಎದುರಿಸಿ ಸಾಧನೆಗೈದ ಅಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಸಮಗ್ರತೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು. ಗುಣಮಟ್ಟದ ಗ್ರಾಹಕ ಸೇವೆಯನ್ನು ಒದಗಿಸುವುದು, ಠೇವಣಿಗಳನ್ನು ಹೆಚ್ಚಿಸುವುದು, ಸಾಲ ನೀಡುವಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ವಸೂಲಾತಿ ಪ್ರಕ್ರಿಯೆಯನ್ನು ಬಲಪಡಿಸುವುದು ಮತ್ತು ಶಾಖಾ ಕಾರ್ಯಾಚರಣೆಗಳನ್ನು ನವೀಕರಿಸುವುದು ಮತ್ತು ವಿಸ್ತರಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.


ವಿಶ್ವಾಸವನ್ನು ಸೃಷ್ಟಿಸಲು ಎಲ್ಲಾ ಹಂತಗಳಲ್ಲಿ ಗ್ರಾಹಕರನ್ನು ತಲುಪುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿಮೆ ಮತ್ತು ಮ್ಯೂಚುವಲ್ ಫಂಡ್‌ ಗಳಂತಹ ಕ್ಷೇತ್ರಗಳಲ್ಲಿ ವ್ಯಾಪಾರ ಸಹಯೋಗಗಳನ್ನು ಅನ್ವೇಷಿಸಲು ಬ್ಯಾಂಕ್'ಅನ್ನು ಪ್ರೋತ್ಸಾಹಿಸಿದ ಅವರು, ಬ್ಯಾಂಕಿಗೆ ಬ್ರ್ಯಾಂಡ್ ರಾಯಭಾರಿಗಳಾಗುವಂತೆ ಸಭೆಯ ಸದಸ್ಯರಿಗೆ ಕರೆ ನೀಡಿದರು.


ಪ್ರೊ. ಡಾ| ಅಲೋಶಿಯಸ್ ಸಿಕ್ವೇರಾ ಅವರು ಹಿಂದಿನ ಕಾರ್ಯಾಗಾರಗಳಲ್ಲಿ ಮಾಡಿದ ಪ್ರಗತಿಯ ಬಗ್ಗೆ, ವಿಶೇಷವಾಗಿ ಬ್ಯಾಂಕ್‌'ನ ದೃಷ್ಟಿಕೋನ, ಧ್ಯೇಯ ಮತ್ತು ಪ್ರಮುಖ ಮೌಲ್ಯಗಳನ್ನು ರೂಪಿಸುವಲ್ಲಿನ ಪ್ರಗತಿಯ ಬಗ್ಗೆ ವಿವರಿಸಿದರು. ಮುಂದಿನ 10 ವರ್ಷಗಳಲ್ಲಿ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಹೆಚ್ಚಿನ ಗುರಿಗಳನ್ನು ಹೊಂದಲು ಮತ್ತು ಈ ಮಾರ್ಗದರ್ಶಿ ತತ್ವಗಳಿಗೆ ಬದ್ಧವಾಗಿರುವಂತೆ ಸಲಹೆ ನೀಡಿದರು.


ಸಿಎ ಮ್ಯಾಕ್ಸಿಮ್ ಎಂ. ಫೆರ್ನಾಂಡಿಸ್ ಅವರು ಪಟ್ಟಣ ಸಹಕಾರಿ ಬ್ಯಾಂಕ್ ಆಗಿರುವ ಎಮ್‌ಸಿಸಿ ಬ್ಯಾಂಕಿನ ಅನುಕೂಲಗಳನ್ನು ಎತ್ತಿ ತೋರಿಸಿದರು: ಸಮುದಾಯ-ಕೇಂದ್ರಿತ ಬ್ಯಾಂಕಿಂಗ್, ಪ್ರವೇಶದ ಸುಲಭತೆ, ವೈಯಕ್ತಿಕ ಸೇವೆ, ಸದಸ್ಯತ್ವ-ಆಧಾರಿತ ಲಾಭ ಹಂಚಿಕೆ, ಸ್ಥಳೀಯ ಅಭಿವೃದ್ಧಿಗೆ ಬೆಂಬಲ, ಮತ್ತು ಆರ್‌ಬಿಐ ಮತ್ತು ಸಹಕಾರಿ ಇಲಾಖೆ ಎರಡರಿಂದಲೂ ದ್ವಿ-ನಿಯಂತ್ರಣ. ಕಳೆದ ಏಳು ವರ್ಷಗಳಲ್ಲಿ ಬ್ಯಾಂಕಿನ ವೃತ್ತಿಪರ ಚಿತ್ರಣ ಮತ್ತು ಪರಿಣಾಮಕಾರಿ ಎನ್‌ಪಿಎ ನಿರ್ವಹಣೆಗಾಗಿ ಅವರು ಬ್ಯಾಂಕ್ ಅನ್ನು ಶ್ಲಾಘಿಸಿದರು. ಯುವ ಉದ್ಯಮಿಗಳಿಗೆ, ವಿಶೇಷವಾಗಿ ಎಂಎಸ್‌ಎಂಇ ವಲಯದಲ್ಲಿ, ಬೆಂಬಲ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ಬ್ಯಾಂಕಿನ ಉತ್ತಮ ಭವಿಷ್ಯಕ್ಕಾಗಿ ಸಾಮೂಹಿಕ ಪ್ರಯತ್ನಗಳು ಬೇಕು ಎಂದರು.


ಪ್ರೊ. ಸಿಎ ಲಾಯ್ನಲ್ ಅರಾನ್ಹಾ ಅವರು ಎಲ್ಲಾ ಸಮುದಾಯ ಸದಸ್ಯರಿಗೆ ಖಾತೆಗಳನ್ನು ತೆರೆಯಲು ಮತ್ತು ಸಮುದಾಯ ಅಭಿವೃದ್ಧಿಯನ್ನು ಉತ್ತೇಜಿಸಲು ಬದಲಾಗುತ್ತಿರುವ ಪ್ರವೃತ್ತಿಗಳಿಗೆ ಹೊಂದಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಬ್ಯಾಂಕ್’ಅನ್ನು ಪ್ರೋತ್ಸಾಹಿಸಿದರು. ವಿಮಾ ಸೇವೆಗಳು, ಡಿಮ್ಯಾಟ್ ಖಾತೆಗಳು, ಗುತ್ತಿಗೆ ಕೃಷಿ ಮತ್ತು ರಿವರ್ಸ್ ಅಡಮಾನಗಳಂತಹ ಹೊಸ ಆದಾಯದ ಮೂಲಗಳನ್ನು ಅನ್ವೇಷಿಸಲು ಸಲಹೆ ನೀಡಿದರು ಮತ್ತು ಉತ್ತಮವಾಗಿ ವ್ಯಾಖ್ಯಾನಿಸಲಾದ ಬೆಳವಣಿಗೆಯ ತಂತ್ರಗಳ ಅಗತ್ಯವನ್ನು ಒತ್ತಿ ಹೇಳಿದರು.


ಅಲೆನ್ ಸಿ. ಪಿರೇರಾ ಅವರು ಪ್ರಗತಿಗೆ ಒಂದು ಸಾಧನವಾಗಿ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಸಾಮಾನ್ಯ ಜನರ ಸಾಮರ್ಥ್ಯವನ್ನು ಗುರುತಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಭವಿಷ್ಯದ ಪಾಲುದಾರರಾಗಿ ವಿದ್ಯಾರ್ಥಿಗಳು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳಲು ಅವರು ಬ್ಯಾಂಕ್‌ಗೆ ಸಲಹೆ ನೀಡಿದರು.


ಹಾಜರಿದ್ದ ಕೆಲವು ಗ್ರಾಹಕರು ಬ್ಯಾಂಕಿನ ಮುಂದಿನ ಬೆಳವಣಿಗೆಗೆ ಸಹಾಯ ಮಾಡಲು ತಮ್ಮ ಸಲಹೆಗಳನ್ನು ಹಂಚಿಕೊಂಡರು. ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ ಅವರು ಬ್ಯಾಂಕಿನ ಪ್ರಭಾವಶಾಲಿ ಸಾಧನೆಗಳನ್ನು ಶ್ಲಾಘಿಸಿದರು ಮತ್ತು ಯಾವಾಗಲೂ ನಗುಮುಖದಿಂದ ಗುಣಮಟ್ಟದ ಸೇವೆಯನ್ನು ಮುಂದುವರಿಸುವಂತೆ ಸಿಬ್ಬಂದಿಗಳನ್ನು ಒತ್ತಾಯಿಸಿದರು.


ಸಭೆಯಲ್ಲಿ ಉಪಾಧ್ಯಕ್ಷರು, ನಿರ್ದೇಶಕರು, ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಹಿರಿಯ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರು, ಬ್ಯಾಂಕ್ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉನ್ನತ ಠೇವಣಿದಾರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಫ್ಲಾಯ್ಡ್ ಡಿಮೆಲ್ಲೋ ನಿರೂಪಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top