ಕಲಬುರಗಿಯಲ್ಲಿ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಕೈಚಳಕ

Upayuktha
0

ಸಮ್ಮೋಹನ ಜಾಲಕ್ಕೆ ಆರ್.ಸಿ, ಡಿಸಿ, ಸಿಇಓ ಫುಲ್ ಖುಷ್ 





ಕಲಬುರಗಿ: ಅಂತಾರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ್ ಅವರ ಮೈಂಡ್ ಮ್ಯಾಜಿಕ್ ಮೆಂಟಲಿಸಂ ಜಾದೂ ಪ್ರಯೋಗಕ್ಕೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಮೋಹನಗೊಂಡು ಫುಲ್ ಖುಷ್ ಆದ ಅಪೂರ್ವ ಪ್ರಸಂಗ ಸೇರಿದ ಜನಸ್ತೋಮಕ್ಕೆ ವಿಸ್ಮಯ ಹುಟ್ಟಿಸಿತು. 


ಕಲಬುರಗಿ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಿನ್ನೆ ಭಾನುವಾರ ಸಾಯಂಕಾಲ ನಡೆದ ಮೈಂಡ್ ಮ್ಯಾಜಿಕ್ ಪ್ರದರ್ಶನದಲ್ಲಿ ಕುದ್ರೋಳಿ ಗಣೇಶ್ ಅವರ ಕೈಚಳಕ ಮತ್ತು ಮೈಂಡ್ ಮೇಲಿನ ಅಪೂರ್ವ ಪ್ರಯೋಗದಿಂದ ಬೆಕ್ಕಸ ಬೆರಗಾಗುವಂತೆ ಅಧಿಕಾರಿಗಳು, ಸಾರ್ವಜನಿಕರು ಏಕಕಾಲಕ್ಕೆ ಸಮ್ಮೋ ಹನಗೊಂಡು ಆಶ್ಚರ್ಯ ಚಕಿತರಾದರು.


ಸುಮಾರು ಎರಡುವರೆ ಗಂಟೆಗಳ ಕಾಲ ನಡೆದ ವಿಜ್ಞಾನ ಮನಶಾಸ್ತ್ರದ ಸಮ್ಮಿಲನದ ವಿಶೇಷ ಮೈಂಡ್ ಮ್ಯಾಜಿಕ್ ಮನೋ ಭ್ರಮೆ ಮತ್ತು ಜಾದು ಚಮತ್ಕಾರಗಳ ಮನೋರಂಜನೆಯಿಂದ ಸಾಂಸ್ಕೃತಿಕ ಲೋಕದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿತು. ಅಗೋಚರ ಟೆಲಿಪತಿ, ಮನಸ್ಸಿನಲ್ಲಿ ನೆನೆದ ಹಾಡು ಕೊಳಲಿನಲ್ಲಿ ನುಡಿಸುವುದು, ಚೀಟಿ ಬರೆದ ಪೆಟ್ಟಿಗೆಯಲ್ಲಿ ಹಾಕಿದ ಹಾಡನ್ನು ನುಡಿಸುವುದು, ಸತ್ತವರ ಹೆಸರಿನಲ್ಲಿ ಬರೆದು ಹಾಕಿದ ಚೀಟಿ ಪೆಟ್ಟಿಗೆಯೊಳಗೆ ಹಾಕಿದಾಗ ಕುರ್ಚಿ ಸಮೇತ ವೇದಿಕೆಯಲ್ಲಿ ಗಾಳಿಯಲ್ಲಿ ತೇಲಾಡುವುದು, ನೆಂಟರಿಷ್ಟರ ಹೆಸರು ಬರೆದು ಚೀಟಿ ಹಾಕಿ ಯಾರು ಬರೆದರು ಮತ್ತು ಯಾರ ಹೆಸರನ್ನು ಬರೆದರು ಎಂಬುದನ್ನು ಹೇಳುವ ಅಪೂರ್ವ ಮೈಂಡ್ ರೀಡಿಂಗ್, ಚಲನಚಿತ್ರ ನಟರೊಬ್ಬರ ಹೆಸರಿನ ಚೀಟಿ ಬರುತ್ತಿದ್ದಂತೆ ವೇದಿಕೆಯಲ್ಲಿ ಅವರ ಭಾವಚಿತ್ರ ಪ್ರತ್ಯಕ್ಷ, ಗ್ಲಾಸಿನಲ್ಲಿರುವ ಉಂಗುರ ಮಾಯವಾಗಿ ಮ್ಯಾಜಿಕ್ ದಂಡದಲ್ಲಿ ಪ್ರತ್ಯಕ್ಷ, ಡಿಸಿ ಅವರು ಎತ್ತಿದ ಕಾರ್ಡ್, ಸಂಖ್ಯೆ ಹಾಗೂ ಆಕೃತಿ ಯನ್ನು ಜಾದೂಗಾರ ಚಿತ್ರ ಬರೆಯುವ ಮೂಲಕ ವೇದಿಕೆಯಲ್ಲಿ ಪ್ರದರ್ಶಿಸಿ ಮನಸ್ಸು ಅರ್ಥೈಸುವ ಬಗೆ ಪಂಚೇಂದ್ರಿಯಗಳನ್ನು ಮೀರಿದ ಆರನೇ ಇಂದ್ರಿಯದ ಅನುಭೂತಿ ವಿಸ್ಮಯದ ಪ್ರದರ್ಶನಕ್ಕೆ ಇಡೀ ಸಭಾಂಗಣ ಫುಲ್ ಖುಷ್ ಆಗಿ ಕಣ್ಣು ಎವೆಯಿಕ್ಕದೆ ನೋಡಿದ್ದು ವಿಶೇಷ.


ಪ್ರಾದೇಶಿಕ ಆಯುಕ್ತರು ಬರೆದ ಚೀಟಿಯಲ್ಲಿದ್ದ ಬಾಲ್ಯದ ಗೆಳೆಯನನ್ನು ಜಾದುಗಾರ ಮೈಂಡ್ ರೀಡಿಂಗ್ ಮೂಲಕ ಹೆಸರು ಪ್ರಕಟಿಸಿದಾಗ ಸಭಾಂಗಣದಲ್ಲಿ ಕೈ ಚಪ್ಪಾಳೆಯ ಸಂಭ್ರಮ. ಅಧಿಕಾರಿಗಳು ವೈದ್ಯರು ಇಂಜಿನಿಯರ್ ಗಳು, ವಿದ್ಯಾರ್ಥಿಗಳು ಉದ್ಯಮಿಗಳು ಮಹಿಳೆಯರು ವಿಸ್ಮಯದಿಂದ ನೋಡಿದ ಜಾದೂ ಪ್ರದರ್ಶನ ಮುಗಿದಾಗ ಎಲ್ಲರೂ ಕೇಳಿದ ಒಂದೇ ಪ್ರಶ್ನೆ "ಅದು ಹೇಗೆ ಸಾಧ್ಯ?" ಜಾದು ಕೊಳಲ ಹಾಡು ಈ ಎಲ್ಲಾ ಮನರಂಜನೆಯೊಂದಿಗೆ ಮೆಂಟಲ್ ಮ್ಯಾಜಿಕ್ ಅತ್ಯಂತ ಅದ್ಭುತ ಪ್ರದರ್ಶನವಾಗಿ ದಾಖಲಾಯಿತು.


ಕಲಬುರಗಿ ಸಹಾಯಕ ರಿಜಿಸ್ಟರ್ ಬಸವರಾಜ್ ಚೇಂಗಟಿ ದೀಪ ಬೆಳಗಿಸಿ ಮೈಂಡ್ ಮ್ಯಾಚ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಮಹಾನಗರ ಪಾಲಿಕೆ ಉಪ ಆಯುಕ್ತರಾದ ಪ್ರಮೀಳಾ ಎಂ ಕೆ, ಸಂಘಟಕರಾದ ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ, ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ, ಹೋಟೆಲ್ ವಸತಿ ಮತ್ತು ಬೇಕರಿ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ನ ಮಾಲಾ ಕಣ್ಣಿ, ಶಿವರಾಜ ಕೋಟ್ಯಾನ್, ಸತ್ಯನಾಥ ಶೆಟ್ಟಿ ಅರುಣಾಚಲ ಭಟ್, ವಿದ್ಯಾಧರ ಭಟ್ ಪಾಲ್ಗೊಂಡಿದ್ದರು.


ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತಾರಾದ ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ ಪೌಜಿಯ ತರನುಮ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನ್ವಾರ್, ಸಿ ಇ ಓ  ಭಂವರಲಾಲ್ ಮೀನಾ, ಡಾ. ಸದಾನಂದ ಪೆರ್ಲ, ಪ್ರೊ.ಪ್ರಹ್ಲಾದ ಬುರ್ಲಿ, ಸಿದ್ದಪ್ಪ ಭಗವತಿ, ಡಾ. ವೀಣಾ ಸಿದ್ದಾರೆಡ್ಡಿ, ಡಾ. ರಕ್ಷಾ ಶೆಟ್ಟಿ, ಇಷ್ಟೇ ಮಹಾದೇವ ಗುತ್ತೇದಾರ್, ಉದ್ಯಮಿಗಳಾದ ವೆಂಕಟೇಶ್ ಕಡೆಚೂರು ಕುಪೇಂದ್ರ ಗುತ್ತೇದಾರ್, ರಾಜೇಶ್ ಗುತ್ತೇದಾರ್, ಶ್ರೀಮತಿ ನಳಿನಿ ನಾಯಕ್, ಜೀವನ್ ಜತ್ತನ್, ಡಾ. ಶಶಾಂಕ್ ರಾಮದುರ್ಗ, ಡಾ. ರಾಜೇಂದ್ರ ಯರನಾಳೆ, ನಿತಿನ್ ನಾಯಕ್, ಎಸ್ ಎಸ್ ಹಿರೇಮಠ, ಸುನಿಲ್ ಶೆಟ್ಟಿ, ಮಹಾಕೀರ್ತಿ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಜಾದೂಪ್ರಿಯರಿಂದ ಸ್ಯಾಕ್ ಸಭಾಂಗಣವು ತುಂಬಿ ತುಳುಕುತ್ತಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top