ಬೆಳೆದ ಮಕ್ಕಳಿಗೆ, ಅದರಲ್ಲೂ ಗಂಡು ಮಕ್ಕಳಿಗೆ ತಿಂಡಿ ಮಾಡಿಕೊಡುವ ಚಾಲೆಂಜ್ ಅಮ್ಮಂದಿರಿಗೆ ಮಾತ್ರ ಗೊತ್ತು. ಆ ದೇವರಿಗಾದರೂ ನೈವೇದ್ಯ ಇಟ್ಟು ಬಾಯಿ ಮುಚ್ಚಿಸಿ ಬಿಡಬಹುದು, ಗಂಡು ಮಕ್ಕಳಿಗೆ ಆಗಲ್ಲ. ಅವರೊಂಥರಾ ಕಂಬಳಿ ಹುಳುವಿನ ಥರ. ಬೆಳೆಯುವ ವಯಸ್ಸಿನಲ್ಲಿ ಇಡಿ ಇಡೀ ಗಿಡವನ್ನೇ ಕಬಳಿಸುವ ಬಕಾಸುರರಂಥವರು.
ವೆರೈಟಿ ಮಾಡಿದಷ್ಟೂ ಸಾಲಲ್ಲ, ನಿನ್ನೆ ಮಾಡಿದ್ದು ಇವತ್ತು ಕೊಡುವ ಹಾಗಿಲ್ಲ, ಅದು ಬೇಡ, ಇದು ಬೇಡ, ಅದೆಂಥ ಬೋರಿಂಗ್, ಇದು ಟೇಸ್ಟಿ ಇಲ್ಲ, ಇವತ್ತೂ ಅದೇನಾ? ಚಟ್ನಿ ಮಾಡ್ರೆ ಸೇರಲ್ಲ, ಸಾಂಬಾರ್ ಇಲ್ವಾ? ಎಂದು ನೂರೆಂಟು ಕಂಪ್ಲೇಂಟ್ ಮಾಡುವ ಮಕ್ಕಳನ್ನು ನೋಡಿದಾಗ, ಬೆಳಿಗ್ಗೆ ಮಾಡಿದ ತಿಂಡಿಯನ್ನೇ ಸಂಜೆಯೂ ತಿನ್ನುತ್ತಿದ್ದ ನಮ್ಮ ಬಡಪಾಯಿ ಜೀವನ ಆಗಾಗ ಕಣ್ಣಮುಂದೆ ಬರುತ್ತದೆ.
ಆಗೆಲ್ಲ ಬೇಕರಿಗಳು ಎಲ್ಲಿತ್ತು? ರೆಸ್ಟೋರೆಂಟ್? ದರ್ಶಿನಿ? ಪಿಜಾ ಹಟ್? ನೊ ವೇ, ಛಾನ್ಸೇ ಇಲ್ಲ. ಹಳ್ಳಿಗೊಂದು ಕಿರಾಣಿ ಅಂಗಡಿ ಇದ್ದರೆ ಅದೇ ಹೆಚ್ಚು. ಅದೇ ಮಾಲ್ ಥರ ನಮಗೆ ಅಲ್ಲೆ ಪೆನ್ಸಿಲ್, ರಬ್ಬರ್, ಸ್ಕೇಲ್, ಎಕ್ಸಾಮ್ ಪೇಪರ್ ಎಲ್ಲ ಸಿಗ್ತಾ ಇತ್ತು. ಅಲ್ಲಿ ಸಿಗುವ ರಸಗುಲ್ಲಾ (ಅದೇನೊ ಕೆಂಪಗಿತ್ತು) ಐದು ಪೈಸೆ, ಹತ್ತು ಪೈಸೆ ಪೆಪರ್ ಮೆಂಟ್, ಹುರಿಗಡ್ಲೆ, ಪಾರ್ಲೆಜಿ ಬಿಸ್ಕೆಟ್, ಶುಂಠಿ ಪೆಪರ್ಮೆಂಟ್ ಬಿಟ್ರೆ ಇನ್ನೇನು ತಿಂತಿದ್ವಿ?
ಉಹು. ಇನ್ನೇನು ಇರ್ಲಿಲ್ಲ. ತಿನ್ನಕ್ಕೆ ಕಾಸೂ ಇರ್ತಿರ್ಲಿಲ್ಲ. ಕಾಸಿದ್ರೂ ದೊಡ್ಡವರು ಕೊಡ್ತಿರ್ಲಿಲ್ಲ. ಮೀನು ಮಾರುವವನು ಅವನ ಗಾಡಿಯಲ್ಲೆ ಆರೆಂಜ್ ಐಸ್ ಕ್ಯಾಂಡಿ ತರ್ತಿದ್ದ. ಆ ಐಸ್ ಕ್ಯಾಂಡಿಗೂ ಮೀನಿನ ವಾಸನೆ ಇರ್ತಿತ್ತು. ಆದರೂ ಅದೇ ಆವತ್ತಿನ ಲಕ್ಷುರಿಯಾಗಿತ್ತು. ಮೊದ ಮೊದಲು ಇಪ್ಪತ್ತೈದು ಪೈಸೆಗೊಂದು ಸಿಗ್ತಾ ಇತ್ತು. ಹೋಗ್ತಾ ಹೋಗ್ತಾ ಐವತ್ತು ಪೈಸೆ ಮಾಡಿ ಬಿಟ್ಟ. ಎಷ್ಟು ಬೇಜಾರಾಗಿತ್ತು ಗೊತ್ತಾ ಆಗ.
ಇಷ್ಟು ಬಿಟ್ರೆ ಜಾತ್ರೆಲೊ ತೇರಲ್ಲೊ ಒಂದಷ್ಟು ಬೆಂಡು ಬತ್ತಾಸು ತಿನ್ನುವುದು. ಇಷ್ಟೇ ಆಗಿತ್ತು ಆಗಿನ ಜಗತ್ತು. ಇವತ್ತಿನ ನಮ್ಮಮಕ್ಕಳು ಬೆಂಡು ಬತ್ತಾಸು ಅಂದ್ರೆ ಏನು? ಎಂದು ಕೇಳುತ್ತಾರೆ. ಜಗತ್ತು ಎಲ್ಲಿಂದ ಎಲ್ಲಿಗೋ ಹೊರಟು ಹೋಗಿದೆ.
ನಮ್ಮ ಅಪ್ಪ ಹಾಗೂ ಅಜ್ಜಂದಿರ ಕಾಲಘಟ್ಟದಲ್ಲಿ ಅಷ್ಟೊಂದು ಬದಲಾವಣೆಗಳು ಬರಲಿಲ್ಲ. ಈ ಎರಡೂ ತಲೆಮಾರಿನ ಜೀವನ ಬಹುತೇಕ ಒಂದೇ ತೆರನಾಗಿತ್ತು. ಅಜ್ಜಂದಿರು ಚಕ್ಕಡಿಗಾಡಿಯಿಂದ ಸೈಕಲ್ ಗೆ ಶಿಪ್ಟ್ ಆದರೆ ಅಪ್ಪಂದಿರು ಸೈಕಲ್ ನಿಂದ ಮೋಟಾರ್ ಬೈಕ್ ಗೆ ಬಂದಿದ್ದರು ಅಷ್ಟೇ! ಇದು ಬಿಟ್ರೆ ಊಟ, ತಿಂಡಿಗಳಲ್ಲಿ ಮಹತ್ತರ ಬದಲಾವಣೆಗಳೆನೂ ಬಂದಿರಲಿಲ್ಲ.
ಆದರೆ ನಾವಿದ್ದೇವಲ್ಲ ಎಪ್ಪತ್ತು ಎಂಬತ್ತರ ದಶಕದ ಕೂಸುಗಳು... ನಮಗೂ ನಮ್ಮ ಮಕ್ಕಳಿಗೆ ಕಾಲ ಎಲ್ಲಿಂದ ಎಲ್ಲಿಗೋ ಹೊರಟು ಹೋಗಿದೆ.
ಬೆಳಿಗ್ಗೆ ತಿಂದಿದ್ದನ್ನು ಸಂಜೆಯೂ ತಿನ್ನುವ ಕಲ್ಚರ್ ಹೊರಟೇ ಹೋಗಿದೆ.
ಮನೆ ತಿಂಡಿಯಲ್ಲೂ ಉಪ್ಪಿಟ್ಟು, ಅವಲಕ್ಕಿಗೆ ಗೇಟ್ ಪಾಸ್ ಕೊಟ್ಟಾಗಿದೆ. ಸಂಜೆ ತಿಂಡಿ ಹೋಗಿ ಸ್ನ್ಯಾಕ್ಸ್ ಆಗಿದೆ. ಶಾಲೆ ಪುಸ್ತಕಗಳಲ್ಲಿ ಮಾತ್ರ ನೋಡುತ್ತಿದ್ದ ಪೂರಿ ಬೆಳಗಿನ ತಿಂಡಿಗೂ ಬಂದು ಕೂತಿದೆ. ಬೆಣ್ಣೆ ಗುಲ್ಕನ್ ಜಾಗಕ್ಕೆ ಚೀಸ್ ಬಂದು ವಕ್ಕರಿಸಿದೆ. ಜ್ವರ ಬಂದಾಗ ಮಾತ್ರ ತಿನ್ನುತ್ತಿದ್ದ ಬ್ರೆಡ್ ಬೆಳಗಿನ ಬ್ರೇಕ್ ಫಾಸ್ಟ್ ಆಗಿದೆ. ಕೆಲವು ಚಿಕ್ಕ ಮಕ್ಕಳ ತಂದೆತಾಯಿಗಳು ಹೇಳ್ತಾರೆ, ಇಲ್ಲಪ್ಪ ನನ್ನ ಮಗಳಿಗೆ ಅದೆಲ್ಲ ರೂಢಿ ಮಾಡ್ಸಿಲ್ಲ, ನನ್ ಮಗಳು ನಾನೇನ್ ಕೊಡ್ತಿನೋ ಅದನ್ನೇ ತಿನ್ನೋದು ಅಂತಾರೆ.
ಇದೊಳ್ಳೆ ಹೆಂಗಿದೆ ಅಂದ್ರೆ ನನ್ ಮಗಳಿಗಿನ್ನೂ ಎರಡು ವರ್ಷ. ಕಸನ ಡಸ್ಟ್ ಬಿನ್ ಗೇ ಹಾಕ್ತಾಳೆ ಗೊತ್ತಾ ಎಂದು ಬೀಗುತ್ತಾರೆ. ಆಮೇಲೆ ಅದೇ ಮಕ್ಕಳು ದೊಡ್ಡವರಾಗಿ ಪಕ್ಕದ ಸೈಟಿಗೆ ಕಸ ಎಸಿತಾರೆ. (ಇದರಲ್ಲಿ ದೊಡ್ಡವರ ತಪ್ಪೂ ಸಾಕಷ್ಟಿದೆ) ಮಕ್ಕಳು ದೊಡ್ಡವರಾದಂತೆ ಅವರ ಮನಸಿಗೆ ಕಂಡಂತೆ ರೂಢಿಸಿಕೊಳ್ತಾರೆ. ಊಟ ತಿಂಡಿ ವಿಚಾರದಲ್ಲೂ ಅಷ್ಟೇ.
ಹೊರಗಡೆ ಪಿಜ್ಜಾ, ಬರ್ಗರ್, ಫ್ರೆಂಚ್ ಪ್ರೈಸ್, ಗಾರ್ಲಿಕ್ ಬ್ರೆಡ್,ಪಾವ್ ಬಾಜಿ, ಚಾಟ್ಸ್ ಎಂದು ಇಷ್ಟೊಂದು ವೆರೈಟಿ ಐಟಮ್ ಸಿಗುತ್ತಿರುವಾಗ ಮನೆಯಲ್ಲೇ ಮಾಡಿದ್ದನ್ನು ತಿನ್ನು ಅಂದ್ರೆ ಯಾವ ಮಕ್ಕಳು ಕೇಳ್ತಾರೆ? ಇಂದು ಹಳ್ಳಿ ಮಕ್ಕಳು ಕೂಡ ಹತ್ತಿರದ ಪಟ್ಟಣಕ್ಕೆ ಬಂದು ತಿಂದು ಹೋಗ್ತಾರೆ.
ತಿನ್ನುವ ಕಲ್ಚರ್ ಸಂಪೂರ್ಣ ಬದಲಾಗಿ ಹೋಗಿದೆ.
ಇವತ್ತು ಗೇರು ಬೀಜವನ್ನು ಕಟ್ಟಿಗೆ ಒಲೆಯಲ್ಲಿ ಸುಟ್ಟು ಕೊಡಿ ಎಷ್ಟು ಮಕ್ಕಳು ತಿಂತಾರೆ ನೋಡೋಣ? ಶೀ, ಇದಕೆ ಬೂದಿ ಮೆತ್ಕೊಂಡಿದೆ ಅಂತಾರೆ. ಯಾವಾಗಲೂ ಫ್ರಿಡ್ಜ್ ನಲ್ಲಿ ಬೆಳ್ಳಗೆ ಪ್ಯಾಕೆಟ್ ನಲ್ಲಿ ಬರುವ ಪ್ರೊಸೆಸ್ಡ್ ಕ್ಯಾಶ್ಯು ತಿಂದವರಿಗೆ ಒಲೆಯಲ್ಲಿ ಸುಟ್ಟು ಕರ್ರಗೆ ಕಾಣುವ ಗೋಡಂಬಿ ಇಷ್ಟವಾಗಲು ಹೇಗೆ ಸಾಧ್ಯ?
ಇನ್ನು ನಾವೆಲ್ಲ ಸ್ಕೂಲ್ ಗೆ ಹೋಗುವಾಗ ಮಧ್ಯಾಹ್ನದ ಬಿಸಿಯೂಟ ಇತ್ತಾ? ಇರ್ಲಿಲ್ಲ. ಬಿಸಿಯೂಟ ಹೋಗ್ಲಿ, ಮಧ್ಯಾಹ್ನ ನೆಟ್ಟಗೆ ಊಟವೂ ಇರ್ತಿರ್ಲಿಲ್ಲ.ಮನೆಯಿಂದ ಶಾಲೆ ದೂರ. ನಡೆದೇ ಹೋಗಬೇಕಿತ್ತು. ಬರುವುದು ಸಂಜೆಯೇ. ಹೈಸ್ಕೂಲ್ ದಿನಗಳಲ್ಲಂತೂ ಬಹುತೇಕ ಎಲ್ಲ ದಿನಗಳೂ ಮಧ್ಯಾಹ್ನ ಉಪವಾಸವೇ!
ಆಗ ಈಗಿನಂತೆ ಲಂಚ್ ಬಾಕ್ಸ್ ಕಲ್ಪನೆಯೂ ಇರಲಿಲ್ಲ. ಇದ್ರೂ ಅದರೊಳಗೆ ನ್ಯೂಟ್ರಿಷಿಯನ್ ಫುಡ್ ಅಂತೂ ಕೇಳಲೇಬೇಡಿ. ಇವತ್ತಿನ ಮಕ್ಕಳ ಬಾಕ್ಸ್ ಒಳಗೆ ಇಡಿ ಇಡೀ ಆಪಲ್ ನ್ನೇ ತುಂಬಿಸಿ ಕಳಿಸಲಾಗುತ್ತದೆ. ಆಗ? ಮನೆ ಮಂದಿಗೆಲ್ಲ ಆಗಿ ಎರಡು ಪೀಸ್ ನಮ್ಮಪಾಲಿಗೆ ಬಂದರೆ ಅದೇ ಹೆಚ್ಚು.
ಕೊರತೆಗಳನ್ನೇ ಹೇಳುತ್ತಿಲ್ಲ. ಆಗಿನ ಕಾಲಮಾನವೇ ಹಾಗಿತ್ತು. ಬಹುಶಃ ಕಡಿಮೆ ಕಡಿಮೆಯಲ್ಲೇ ಬದುಕಿದವರಿಗೆ ಸಂಪತ್ತು ಬಂದಾಗ ಪೂರ್ತಿ ಅನುಭವಿಸುವ ಬಯಕೆ ಹೆಡೆಯಾಡಿಬಿಟ್ಟಿತು ಅನ್ಸತ್ತೆ. ಅದಕ್ಕೇ ತಮ್ಮಮಕ್ಕಳಿಗೆ ಕೊರತೆಯಾಗಬಾರದು ಎಂದು ಮೊಗೆ ಮೊಗೆದು ಕೊಟ್ಟಿದ್ದೇ ಕೊಟ್ಟಿದ್ದು. ಬಗೆಬಗೆಯದು ಕೊಂಡು ತಿನ್ನಿಸಿದ್ದೇ ತಿನ್ನಿಸಿದ್ದು. ಪರಿಣಾಮ ಇವತ್ತು ಎಷ್ಟು ವೆರೈಟಿ ಕೊಟ್ಟರೂ ಸಾಲಲ್ಲ.
ಹೊರಗೆ ಪ್ರಪಂಚ ನಮ್ಮ ಕೈ ಮೀರಿ ಬದಲಾದಾಗ ನಾವೂ ಅದರ ತಾಳಕ್ಕೆ ತಕ್ಕಂತೆ ಬದಲಾಗುತ್ತೇವೆ. ಆದರೆ ಅನುಕೂಲಗಳೆಲ್ಲ ಅನುಕೂಲಗಳಲ್ಲ ಎಂದು ಅರ್ಥವಾಗುವಷ್ಟರಲ್ಲಿ ಸುಮಾರು ಬದಲಾಗಿ ಹೋಗಿರುತ್ತದೆ. ಆಮೇಲೆ ಹೀಗೆ ಗೊಣಗುತ್ತೇವೆ. ಏನಂತೀರಾ?
- ಗೀರ್ವಾಣಿ ಎಂ.ಎಚ್, ಶಿರಸಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ