ಅರ್ಜುನನು 104 ಸೋದರರೊಂದಿಗೆ, ತನ್ನ ಬಾಣದಂತಿರುವ ದೃಷ್ಟಿಯನ್ನು ಗುರುಗಳಾದ ದ್ರೋಣಾಚಾರ್ಯರ ಮೀನಿನಂತಹ ಕಣ್ಣಿನ ಕಡೆಗೆ ನೆಟ್ಟು, ಗುರುಗಳು ಹೇಳುತ್ತಿದ್ದ ಥಿಯರಿ ಪಾಠವನ್ನು ಕೇಳುತ್ತಿದ್ದನು.
ದ್ರೋಣಾಚಾರ್ಯರು ಪಾಠವನ್ನು ಮುಂದುವರಿಸಿದರು "ಶಿಷ್ಯರೆ, ಇತ್ತೀಚೆಗಿನ ಏಕಲವ್ಯನ ಪ್ರಕರಣ ನಂತರ ನಿಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶಬ್ದವೇಧಿ ವಿದ್ಯೆಯನ್ನೂ ಕಲಿತಿದ್ದೀರಿ. ದರ್ಶನ ಮಾಡದೇ ಇದ್ದರೂ, ದೂರದಲ್ಲಿನ ಶಬ್ದವನ್ನು ಕೇಳಿ ಆಲಿಸಿ, ಬಾಣ ಪ್ರಯೋಗಿಸಿ, ಗುರಿಯನ್ನು ಬೇಧಿಸಲು ಸಮರ್ಥರಾಗಿದ್ದೀರಿ.
ಮುಂದಿನ ಭಾಗವಾಗಿ, ಇವತ್ತು ಹೊಸ ಪಾಠ ಒಂದನ್ನು ಪ್ರಾರಂಭಿಸೋಣ. ಒಂದು ರೀತಿಯಲ್ಲಿ ಇದೂ ಕೂಡ ಶಬ್ದವೇಧಿಯ ರೀತಿ ದೂರ ಸಂವೇಧಿ ವಿದ್ಯೆ. ಆದರೆ, ವರ್ತಮಾನದಲ್ಲಿ ಯೋಜನಾಂತರ ದೂರದಲ್ಲಿರುವ ಗುರಿಯನ್ನು ಗಮನಿಸುವುದಲ್ಲ. ಬದಲಾಗಿ, ಕಾಲದಲ್ಲಿ ಸಾವಿರಾರು ವರ್ಷಗಳಷ್ಟು ಮುಂದಕ್ಕೆ ಹೋಗಿ, ಅಲ್ಲಿ ನೆಡೆಯುತ್ತಿರುವ ದೃಶ್ಯದ ಮೇಲೆ ಗಮನ ಕೇಂದ್ರೀಕರಿಸಿ, ನನ್ನ ಪ್ರಶ್ನೆಗಳಿಗೆ ನೀವು ಉತ್ತರಿಸಬೇಕು. ಹಾಗೆ ಭವಿಷ್ಯದೆಡೆಗೆ ಗಮನ ಹರಿಸಲು ಬೇಕಾದ ತಾತ್ಕಾಲಿಕವಾದ ದಿವ್ಯದೃಷ್ಟಿಯನ್ನು ನಾನು ನಿಮ್ಮೊಳಗೆ ಸಂಮೋಹನಾ ಶಕ್ತಿಯಿಂದ ನಿಕ್ಷೇಪಿಸುತ್ತೇನೆ. ಎಲ್ಲರೂ ನಿಮ್ಮ ನಿಮ್ಮ ಬಾಹ್ಯ ಕಣ್ಣುಗಳನ್ನು ಮುಚ್ಚಿಕೊಂಡು, ಗಮನವನ್ನು ಭ್ರೂಮಧ್ಯೆ ಇರುವ ಅಂತರ್ಚಕ್ಷುವಿನ ಮೇಲೆ ಹರಿಸಿ.
ನೀವೀಗ ನಿ..,.ಧಾ....ನ....ವಾ....ಗಿ.... ವರ್ತಮಾನವನ್ನು ದಾಟಿ, ಭವಿಷ್ಯದಲ್ಲಿ ಸಂಚರಿಸುತ್ತಿದ್ದೀರಿ, ನಿ..,.ಧಾ....ನ....ವಾ....ಗಿ....
ಮುಂದೆ..... ಮುಂದೆ.....
ಸು..... ಮಾ..... ರು..... ಕಲಿಯುಗದ 5126 ವರ್ಷಗಳು ಮುಂದೆ ಬಂದಿದ್ದೀರಿ. ಮುಚ್ಚಿದ ಕಣ್ಣುಗಳು ಹಾಗೇ ಇದ್ದರೂ, ನಿಮಗೆ ಲಭ್ಯವಾದ ದಿವ್ಯ ದೂರದೃಷ್ಟಿಯೊಂದಿಗೆ, ಒಂದು ದೂರದರ್ಶನ ಯಂತ್ರದ ಮುಂದೆ ಕುಳಿತಿದ್ದೀರಿ.
ಕಲಿಯುಗದ ಓರ್ವ ಮಾನವ ಸುದ್ದಿಯೊಂದನ್ನು ಓದುತ್ತಿದ್ದಾನೆ. ನಿಮಗದು ಸ್ಪಷ್ಟವಾಗಿ ಕೇಳುತ್ತಿದೆ.
ಗಮನಿಸಿ ಕೇಳುತ್ತಾ ನೋಡಿ, ನೋಡುತ್ತಾ ಕೇಳಿ. ಅದು ಸುವರ್ಣ ಎನ್ನುವ ನಾಮದೇಯದ, ಅಂದಿನ ವರ್ತಮಾನದ ಸುದ್ಧಿಗಳನ್ನು ಭಿತ್ತರಿಸುವ ಚಾನಲ್.
ಈಗ ಪ್ರಶ್ನೆಗಳನ್ನು ಕೇಳುತ್ತೇನೆ. ನಿಮ್ಮ ಮನಸ್ಥಿತಿಗೆ ಅನುಗುಣವಾಗಿ, ನೀವು ಉತ್ತರಿಸುತ್ತಾ ಹೋಗಬೇಕು.
ತರಗತಿಯಲ್ಲಿ 105 ವಿದ್ಯಾರ್ಥಿಗಳ ಮಂದ್ರಸ್ಥಾಯಿಯ ಉಸಿರಾಟದ ಶಬ್ದ ಬಿಟ್ಟರೆ, ಮತ್ತೆಲ್ಲ ನಿಶ್ಯಬ್ಧ!!
ದ್ರೋಣಾಚಾರ್ಯರು ದೃತರಾಷ್ಟ್ರನ ಕೊನೇಯ ಮಗ ವಿರಣಗಾಂಧಿ ಯನ್ನು ಕೇಳಿದರು 'ನಿನಗೆ ಏನು ಕಾಣುತ್ತಿದೆ?' ಎಂದು. ನಾಮಕರಣದಲ್ಲಿ ಅವನಿಗೆ ವಿರಣ ಎಂದು ಹೆಸರಿಟ್ಟಿದ್ದರೂ, ಕೊನೇಯ ಮಗನಾಗಿ ತಾಯಿ ಗಾಂಧಾರಿಗೆ ವಿರಣನ ಮೇಲೆ ಹೆಚ್ಚು ಪ್ರೀತಿ ಇದ್ದ ಕಾರಣ ವಿರಣಗಾಂಧಾರಿ ಎಂದೂ ಕರೆಯುತ್ತಾ ಕರೆಯುತ್ತಾ, ಕೊನೆಗೆ ವಿರಣಗಾಂಧಿ ಯಂದೂ ಕರೆಯುವಲ್ಲಿಗೆ ಬಂದು ನಿಂತಿತ್ತು.
"ಗುರುಗಳೆ, ಯಂತ್ರದ ಬಲ ಭಾಗದ ಮೇಲ್ತುದಿಯಲ್ಲಿ, ನನಗೆ ಸಾಯಿ ಶುಭ್ ಅನ್ನುವ ಶಬ್ದ ಕಾಣಿಸುತ್ತಿದೆ" ಎಂದು ವಿರಣಗಾಂಧಿ ಉಚ್ಚರಿಸಿದ.
"ನಿನಗೇನು ಕಾಣುತ್ತಿದೆ ದುಶ್ಯಾಸನ?"
"ಗುರುಗಳೆ, 100 ಕೋಟಿಯ ಮೇನಕೆ, ಮುದ್ದು ರಾಕ್ಷಸಿ!, ಸುಲಿಗೆ ಸುಂದರಿ!, ಸನ್ಯಾಸಿಗಳಿಗೆ ಖೆಡ್ಡಾ! ಎಂಬ ಅರ್ಥವಾಗದ ವಾಕ್ಯ, ಜೊತೆಗೆ ಓರ್ವ ನಾರೀಮಣಿ, ಮತ್ತವಳ ನೆರಳು ಕಾಣುತ್ತಿದೆ"
"ನಿನ್ನ ಮನಸ್ಥಿತಿಗೆ ಯೋಗ್ಯವಾಗಿರುವುದೇ ಕಾಣುತ್ತಿದೆ. ಕುಳಿತುಕೊ" ಎಂದ ಗುರುಗಳು "ನಕುಲ ಸಹದೇವರೆ ನಿಮಗೇನು ಕಾಣಿಸುತ್ತಿದೆ?" ಎಂದರು
ಇಬ್ಬರು ಒಟ್ಟಿಗೆ "ದರ್ಶಕ ಪೆಟ್ಟಿಗೆಯ ಎಡ ಭಾಗ ಮತ್ತು ಕೆಳ ಭಾಗ ಪೂರ್ತಿ ಯಾವುದೋ ವೈದ್ಯಕೀಯ ಸಂಸ್ಥೆಯ ಬಗ್ಗೆ ಪ್ರಚಾರ ಕೊಡುತ್ತಿರುವಂತೆ ಕಾಣುತ್ತಿದೆ ಗುರುಗಳೆ". ಗುರುಗಳು "ನೀವು ದೇವ ವೈದ್ಯರಾದ ಅಶ್ವಿನಿ ಕುಮಾರರು ಎಂದು ರುಜುವಾತು ಮಾಡಿದ್ದೀರಿ, ಬಾಪುರೆ" ಎನ್ನುತ್ತ...
"ಗಾಂಧೇಯ, ನಿನಗೇನು ಕಾಣುತ್ತಿದೆ?" ಎಂದರು ಗುರುಗಳು ಕಣ್ಣು ಮುಚ್ಚಿ ಕುಳಿತ ದುರ್ಯೋಧನನ ಮುಖ ನೋಡುತ್ತ. ಹಸ್ತಿನಾಪುರದಲ್ಲಿ ಗಂಗೆಯ ಮಗನಿಗೆ ಗಾಂಗೇಯ, ಕುಂತಿಯ ಮಗನಿಗೆ ಕೌಂತೇಯ ಎಂದು ಕರೆವಂತೆ, ಗಾಂಧಾರಿ ಹಿರಿಯ ಮಗ ದುರ್ಯೋಧನ ಎಲ್ಲರಿಗೂ ಗಾಂಧೇಯ ಆಗಿದ್ದ!!
ಮುಂದೆ ಕಾಣುತ್ತಿದ್ದ ದೂರ'ದರ್ಶನ'ದ ಮೇಲೆ 'ದೃಷ್ಟಿ'ಯನ್ನು ಕೇಂದ್ರೀಕರಿಸಿ "ಗುರುಗಳೆ, ಯಂತ್ರದ ಮೇಲ್ಭಾಗದಲ್ಲಿ ಒಂದು ಅರ್ಥವಾಗದ ವಾಕ್ಯ ಪುಂಜವೇ ಪ್ರಕಟಗೊಳ್ಳುತ್ತಿದೆ, ಆದರೆ, ಆ ವಾಕ್ಯ ಅರ್ಥವಾಗುತ್ತಿಲ್ಲ".
"ಅರ್ಥವಾಗುವುದು ಬೇಡ, ವಾಕ್ಯ ಓದು" ಗುರುಗಳು ನುಡಿದರು.
"ಬಿಕ್ಲು ದೂರು ಕೊಟ್ಟಾಗ ಕ್ರಮ ಆಗಿದ್ರೆ ಕೊಲೆ ಆಗ್ತಾ ಇರಲಿಲ್ಲ". ಕೊಲೆ ಶಬ್ದವನ್ನು ಮತ್ತಷ್ಟು ದಪ್ಪ ಸ್ವರದಲ್ಲಿ ಒತ್ತಿ ದುರ್ಯೋಧನ ನುಡಿದ.
ಗುರುಗಳು ಬಲ ಭೀಮನ ಕಡೆ ತಿರುಗಿದರು. ತಿರುಗಿ ಕೇಳಿದರು.
"ಗುರುಗಳೆ, ಅದು ಯಾವುದೋ ಅನ್ಯ ಭಾಷೆಯಲ್ಲಿ ಬರೆದಿದ್ದಾರೆ. ಎರಡು ಕಡೆ ಬರೆದಿದ್ದಾರೆ. ಒಂದು ವಾರ್ತಾ ವಾಚಕನ ಮುಂಭಾಗದಲ್ಲಿ, ಇನ್ನೊಂದು ಮಾಯಾ ಪೆಟ್ಟಿಗೆಯ ಎಡಭಾಗದಲ್ಲಿ, ಮೇಲ್ನೋಟಕ್ಕೆ ಅದು ಕಟ್ಟಡ ನಿರ್ಮಾಣದಲ್ಲಿ ಬಳಸುವ ಬಲಿಷ್ಟವಾದ ಬಲಯುತವಾದ ಕಬ್ಬಿಣದ ಸರಳುಗಳ ಮಾಹಿತಿಯಂತಿದೆ.".
ಕೊನೆಯದಾಗಿ ಅರ್ಜುನನ ಕಡೆ ತಿರುಗಿದ ದ್ರೋಣಾಚಾರ್ಯರು "ನಿನಗೆ ಏನು ಕಾಣುತ್ತಿದೆ. ಪಕ್ಷಿಯ ಕಣ್ಣೇನಾದರು ಕಾಣುತ್ತಿದೆಯಾ?" ಎಂದು ನಗುತ್ತಲೇ ಕೇಳಿದರು.
"ಇಲ್ಲ ಗುರುಗಳೆ, ಪಕ್ಷಿಯ ಕಣ್ಣು ಕಾಣುವುದು ಸೂಕ್ಷ್ಮಕ್ಕೆ ಸಂಬಂಧಿಸಿದ್ದು. ಇಲ್ಲಿ ಕಾಣುತ್ತಿರುವುದು ಅದಕ್ಕೆ ವಿರುದ್ಧವಾದುದು. ನನಗೆ ಇಲ್ಲಿನ ವಾರ್ತಾ ವಾಚಕದ ಪೆಟ್ಟಿಗೆಯಲ್ಲಿ ಸ್ಥೂಲ ಎಂದರೆ ದೊಡ್ಡ ಪ್ರಮಾಣದಲ್ಲಿ, ಸಮಗ್ರವಾಗಿ ಅಥವಾ ಒಟ್ಟಾರೆಯಾಗಿ ಅರ್ಥೈಸಿಕೊಳ್ಳಬೇಕಾದ್ದು ಕಾಣುತ್ತಿದೆ ಗುರುಗಳೆ. ಒಟ್ಟಾರೆ ವಾರ್ತಾ ವಾಚನವನ್ನು ಕೇಳುವಾಗ ಬೇರೆಯವರಿಗೆಲ್ಲ ಏನು ಕಂಡಿದೆಯೋ ಅದೆಲ್ಲವುದೂ ಒಟ್ಟಾಗಿ ಆದರೆ ಬೇರೆ ಬೇರೆಯಾಗಿ ಸಮಗ್ರವಾಗಿ ಕಾಣುತ್ತಿದೆ ಗುರುಗಳೆ. ಇದರರ್ಥ ಇಷ್ಟೆ ಇಷ್ಟೆ ಗುರುಗಳೆ ವಾರ್ತಾ ವಿವರವನ್ನು ಕೇಳುವಾಗ ಮತ್ತು ನೋಡುವಾಗ, ಅದರ ಸುತ್ತ ಪ್ರಸಾರವಾಗುವ ಪ್ರಚಾರದ ಎಲ್ಲವನ್ನೂ ಗಮನಿಸಬೇಕು. ಏಕ ಕಾಲದಲ್ಲಿ, ಅಷ್ಟನ್ನೂ ಗಮನಿಸುವ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ವಾರ್ತೆಯನ್ನು ನೋಡುವಷ್ಟೇ ಪ್ರಾಮುಖ್ಯತೆಯನ್ನು 'ವಿಮಲ' ಎಂದು ಬರೆದಿರುವ ವಸ್ತುವಿನ ಬಗ್ಗೆ, ಕಟ್ಟಡದ ಲೋಹದ ಸರಳಿನ ಬಗ್ಗೆ ಅಥವಾ ಯಾವುದೋ ವೈದ್ಯಕೀಯ ಉಪಚಾರದ ವ್ಯವಸ್ಥೆಯ ಬಗ್ಗೆ ಅಥವಾ ಸಾಯದೇ ಶುಭವಾಗಿ ಮಾಡಬಹುದಾದ ಪ್ರವಾಸದ ಪ್ರಚಾರದ ಬಗ್ಗೆಯೂ ಕೊಡಬೇಕಾಗುತ್ತದೆ ಎಂಬುದೇ ಆಗಿದೆ ಗುರುಗಳೆ. ಬಹುಷಃ ನೀವು ನಮ್ಮನ್ನು ಕೊಂಡು ಹೋಗಿರುವ ಭವಿಷ್ಯದ ಕಾಲದಲ್ಲಿ ಸೂಕ್ಷ್ಮಕ್ಕಿಂತ ಸ್ಥೂಲದ ಬಗ್ಗೆ ಸಮಗ್ರವಾಗಿ ಅರಿಯುವುದೇ ಜ್ಞಾನವಾಗಿರುವಂತಿದೆ ಗುರುಗಳೆ" ಎಂದು ಹೇಳಿ ಅರ್ಜುನ ಮಾತು ನಿಲ್ಲಿಸಿದ!!
ಗುರುಗಳು ಅರ್ಜುನನ ಬೆನ್ನು ತಟ್ಟಿದರು.
"ಎಲ್ಲರೂ ನಿಧಾನವಾಗಿ ಕಣ್ಣು ತೆರೆಯಿರಿ" ಎನ್ನುತ್ತ ದ್ರೋಣಾಚಾರ್ಯರು ಅವತ್ತಿನ ವರ್ತಮಾನಕ್ಕೆ ಎಲ್ಲರನ್ನೂ ಹಿಂದಿರುಗುವಂತೆ ಮಾಡಿದರು.
ಸೂಕ್ಷ್ಮ ಏಕಾಗ್ರತೆಗೂ, ಸ್ಥೂಲ ಏಕಾಗ್ರತೆಗೂ ಮತ್ತೊಮ್ಮೆ ವಿವರಿಸಿ, ಮನೆಯಲ್ಲಿ ಮಾಡಬೇಕಾದ ಅಭ್ಯಾಸಗಳನ್ನು ತಿಳಿಸಿ, ತರಗತಿ ಮುಕ್ತಾಯವಾದ ಗಂಟೆ ಬಾರಿಸುವಂತೆ ಕೊನೆಯ ಆಸನದಲ್ಲಿ ಕುಳಿತಿದ್ದ ವಿರಣಗಾಂಧಿಗೆ ಸೂಚನೆ ಕೊಟ್ಟರು.
ಶುಭಂ
(ನ್ಯೂಸ್ ಚಾನಲ್‌ಗಳಲ್ಲಿ ನ್ಯೂಸ್ ಬರುವಾಗ ಯಾಕೆ ಇಷ್ಟೊಂದು ಜಾಹೀರಾತುಗಳನ್ನು ಒಟ್ಟಿಗೆ ಕೊಡ್ತಾರೆ? ಅದನ್ನು ಯಾರು ನೋಡ್ತಾರೆ? ಯಾರಿಗಾದರು ಏನಾದರು ಉಪಯೋಗವಿದೆಯಾ? ಕರೆಕ್ಟಾಗಿ ನ್ಯೂಸ್ ನೋಡುವುದಕ್ಕೂ ಆಗುವುದಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿದಾಗ, ಮಹಾಭಾರತದ ಮೇಲಿನ ಸತ್ಯ ಕಾಲ್ಪನಿಕ ಕತೆಯನ್ನು ಹೀಗೆ ವಿವರಿಸಬೇಕಾಯ್ತು!!. ವಾರ್ತೆಯನ್ನು ನೋಡುವ ಎಲ್ಲಾ ವೀಕ್ಷಕರು ಸ್ಥೂಲ ಮತಿಗಳಾಗಿರುತ್ತಾರೆ ಮತ್ತು ಆಗಿರಬೇಕು ಎಂಬುದು ಸಮಸ್ತ ಚಾನಲ್‌ಗಳ ನಂಬಿಕೆ-ನಿರ್ಣಯ. ನಿಮಗೂ ಈಗ ಅರ್ಜುನನ ಮಾತು ಅರ್ಥವಾಗಿರಲೇಬೇಕು. ಅದಕ್ಕೆ ಸಾಕ್ಷಿ, ಇದನ್ನು ಪೂರ್ಣ ಓದಿದ ಮೇಲೆ, ನೀವೀಗ ನ್ಯೂಸ್ ಚಾನಲ್‌ನಲ್ಲಿ ಕೇವಲ ವಾರ್ತೆಯನ್ನು ಮಾತ್ರ ನೋಡಲು ಸಾಧ್ಯವಾಗದಿರುವುದು!)
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ