ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ, ಆಲೂರು ವತಿಯಿಂದ ಸ್ಕೌಟ್ಸ್ ಗೈಡ್ಸ್ ನಡೆ ಪ್ರಕೃತಿಯೆಡೆ ಕಾರ್ಯಕ್ರಮ
ಆಲೂರು: ಪರಿಸರ ಪ್ರೀತಿ, ಜಾಗೃತಿ, ಅರಣ್ಯೀಕರಣ ಕೇವಲ ಜೂನ್ ಐದಕ್ಕೆ ಸೀಮಿತವಾಗದೇ ನಿರಂತರ ಪ್ರಕ್ರಿಯೆಯಾಗಬೇಕು. ಗಿಡಮರಗಳು ಸಕಲ ಜೀವರಾಶಿಗಳ ಉಸಿರ ಗರ್ಭಗಳು. ಹಸಿರು ಚೆನ್ನಾಗಿದ್ದರೆ ನಮ್ಮ ಉಸಿರು ಸ್ವಸ್ಥವಾಗಿರುತ್ತದೆ ಎಂದು ಆಲೂರಿನ ವಿಶ್ವೇಶ್ವರಯ್ಯ ಪಬ್ಲಿಕ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಸಿ.ಎಸ್. ಪೂರ್ಣಿಮಾ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಪಟ್ಟಣದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಗೈಡ್ಸ್ ನಡೆ ಪ್ರಕೃತಿಯೆಡೆ ಕಾರ್ಯಕ್ರಮವನ್ನು ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರ ನಾಶ ಸಕಲ ಜೀವಿಗಳ ನಾಶ, ಈಗಾಗಲೇ ಪ್ರಕೃತಿ ನಾಶದಿಂದ ಮನುಷ್ಯ ವಿಚಿತ್ರ ರೋಗಗಳಿಗೆ ತುತ್ತಾಗುತ್ತಿದ್ದಾನೆ. ವಾತಾವರಣದಲ್ಲಿ ಇಂಗಾಲದ ಪ್ರಮಾಣ ತಗ್ಗಿ ಉತ್ತಮ ಆಮ್ಲಜನಕ ಲಭ್ಯವಾಗಬೇಕಾದರೆ ಮರಗಿಡಗಳ ಬೆಳೆಸುವಿಕೆ, ಅರಣ್ಯೀಕರಣದ ಅವಶ್ಯಕತೆ ಬಹಳ ತುರ್ತಿನ ಕೆಲಸವಾಗಿದೆ. ಕೋವಿಡ್ 19 ಸಂದರ್ಭದಲ್ಲಿ ಉಸಿರಾಟದ ತೊಂದರೆಯಿಂದ ಸಹಸ್ರಾರು ಮಂದಿ ಉಸಿರು ಚೆಲ್ಲಿದ್ದನ್ನು ಇನ್ನೂ ಮರೆಯಲಾಗುತ್ತಿಲ್ಲ. ಮುಂದಿನ ಪೀಳೀಗೆ ಉತ್ತಮ ಜೀವನ ಸಾಗಿಸಬೇಕಾದರೆ ಅವರಿಗೆ ನಾವೆಲ್ಲಾ ಉತ್ತಮವಾದ ಪ್ರಕೃತಿಯ ಕೊಡುಗೆ ನೀಡಲೇಬೇಕಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಕಾಳಜಿ ರೂಢಿಸಿಕೊಂಡು ಸಸಿಗಳನ್ನು ನೆಟ್ಟು ಬೆಳೆಸುತ್ತಾ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳಲ್ಲಿ ಇಂತಹ ಉದಾತ್ತ ಚಿಂತನೆಗಳನ್ನು ಮಕ್ಕಳಲ್ಲಿ ಜಾಗೃತಿಗೊಳಿಸುತ್ತದೆ ಎಂದರು.
ಸಂಸ್ಥೆಯ ಮುಖ್ಯಸ್ಥರಾದ ಎಚ್.ವಿ. ನಾಗಭೂಷಣ್ ಪರಿಸರ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನ ದುರಾಸೆ ಹಾಗೂ ಅತಿಯಾದ ಬಳಕೆಯಿಂದ ಇಂದು ಪರಿಸರ ನಾಶವಾಗುತ್ತಿದೆ. ಎಲ್ಲದಕ್ಕೂ ಒಂದು ಮಿತಿಯಿರಬೇಕು ಇಲ್ಲವಾದರೆ ಸಕಲ ಜೀವಜಂತುಗಳು ಅವಸಾನದ ಅಂಚಿಗೆ ತಲುಪಬೇಕಾಗುತ್ತದೆ. ಮನೆಗೊಂದು ಮರ ಊರಿಗೊಂದು ವನ ಎಂಬಂತೆ ನಮ್ಮ ನಮ್ಮ ಮನೆ, ಜಮೀನು, ರಸ್ತೆಗಳ ಇಕ್ಕೆಲಗಳಲ್ಲಿ ನಮ್ಮ ಕೈಲಾದಷ್ಟು ಸಸಿಗಳನ್ನು ನೆಟ್ಟು ಬೆಳೆಸಿದರೆ ಸಾಕು ನಾವೆಲ್ಲಾ ಒಳ್ಳೆಯ ಗಾಳಿಯನ್ನು ಸೇವಿಸಬಹುದು. ಸಾಲುಮರದ ತಿಮ್ಮಕ್ಕ ತನ್ನ ಸುತ್ತಮುತ್ತ ಹಾಗೂ ಸಮೀಪದ ರಸ್ತೆಬದಿಗಳಲ್ಲಿ ಸಸಿಗಳನ್ನು ನೆಟ್ಟು ತನ್ನ ಮಕ್ಕಳಂತೆಯೇ ಸಾಕಿ ಪೊರೆದುದಕ್ಕಾಗಿ ಇಂದು ನಾವೆಲ್ಲಾ ಅವರನ್ನು ಆರಾಧಿಸುತ್ತವೆ. ಪಠ್ಯಪುಸ್ತಕಗಳನ್ನು ಅವರ ಬಗ್ಗೆ ಓದುತ್ತೇವೆ. ಅಂತಹವರನ್ನು ನಾವು ಆದರ್ಶವಾಗಿಟ್ಟುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಕಬ್ ಮಾಸ್ಟರ್ ರಾಮಚಂದ್ರ, ಲೇಡಿ ಸ್ಕೌಟ್ ಮಾಸ್ಟರ್ ಶಕುಂತಲಾ & ರೋಹಿಣಿ ಹಾಗೂ ಗೈಡ್ ಕ್ಯಾಪ್ಟನ್ಸ್ಗಳಾದ ರೂಹಿ & ಜ್ಯೋತಿ ಸೇರಿದಂತೆ ಅರವತ್ತಕ್ಕೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ಮಕ್ಕಳು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ