ವಿಷ್ಣುಗುಪ್ತ ವಿವಿಗೆ ಕರ್ಣಾಟಕ ಬ್ಯಾಂಕ್ ಸಂಶೋಧನಾ ಕೇಂದ್ರ ಕೊಡುಗೆ

Chandrashekhara Kulamarva
0


ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಆಳವಾದ ಸಂಶೋಧನೆ ಕೈಗೊಳ್ಳುವ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ನಿರ್ಮಿಸಿಕೊಟ್ಟಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಪ್ರಕಟಿಸಿದರು.


ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಭಾನುವಾರ ಆಶೀರ್ವಚನ ನೀಡಿ, ಈ ಸಂಶೋಧನಾ ಕೇಂದ್ರವನ್ನು ಪ್ರಾಯೋಜಿಸುವ ಮೂಲಕ ಕರ್ಣಾಟಕ ಬ್ಯಾಂಕ್ ನಿಜ ಅರ್ಥದಲ್ಲಿ ಸಾಮಾಜಿಕ ಹೊಣೆಗಾರಿಕೆ ಮೆರೆದಿದೆ. ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಬ್ಯಾಂಕಿನ ಕೊಡುಗೆ ಶ್ಲಾಘನೀಯ ಎಂದರು.


ಮಠ ಎಂಬ ಶಬ್ದಕ್ಕೆ ವಿದ್ಯಾರ್ಥಿಗಳಿರುವ ಸ್ಥಾನ ಎಂಬ ವಿವರಣೆ ಕೋಶದಲ್ಲಿದೆ. ಮಠಕ್ಕೆ ಮಠತ್ವ ಸಿದ್ಧಿಸುವುದೇ ವಿದ್ಯಾರ್ಥಿಗಳಿಂದ. ಆದ್ದರಿಂದಲೇ ಇಲ್ಲಿನ ಮೂಲಮಠ ಅಭಿವೃದ್ಧಿಪಡಿಸುವುದಕ್ಕೆ ಪೂರ್ವಭಾವಿಯಾಗಿ ಗುರುಕುಲಗಳ ಸಮುಚ್ಛಯ ಅಂದರೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯಾಗಿದೆ ಎಂದು ಬಣ್ಣಿಸಿದರು.


ಯಾವುದೇ ಸರ್ಕಾರಿ ಅನುದಾನವಿಲ್ಲದೇ ಸಮಾಜದ ಭಿಕ್ಷೆಯಿಂದಲೇ ಈ ಸತ್ಕಾರ್ಯಗಳು ನಡೆಯುತ್ತಿವೆ. ಇದಕ್ಕಾಗಿಯೇ ಛಾತ್ರಭಿಕ್ಷೆ ಎಂಬ ವಿಶಿಷ್ಟ ಪರಿಕಲ್ಪನೆ ರೂಪುಗೊಂಡಿದೆ. ಛಾತ್ರಭಿಕ್ಷೆಯಲ್ಲಿ ಸಮಾಜದ ಮಾತೆಯರು ಇಲ್ಲಿನ ವಿದ್ಯಾರ್ಥಿಗಳಿಂದ ಪೂಜೆಗೊಳ್ಳುತ್ತಾರೆ. ಮಾತೆಯರು ಪ್ರತಿಯಾಗಿ ಛಾತ್ರರಿಗೆ ಭಿಕ್ಷೆ ನೀಡುತ್ತಾರೆ. ಇಂದಿನ ಛಾತ್ರಭಿಕ್ಷೆಯಲ್ಲಿ ಕುಮಟಾ ಮಂಡಲದಿಂದ 120 ಮಾತೆಯರು ಇಂದಿನ ಛಾತ್ರಭಿಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.


ಗುರುಕುಲದ ಮಕ್ಕಳಿಗೆ ಮಾತೃಸ್ಥಾನದಲ್ಲಿ ನಿಂತು ಮಾತೆಯರು ಆದರ್ಶ ಮೆರೆದಿದ್ದಾರೆ. ಮಾತೆಯರ ಕೊಡುಗೆ ಛಾತ್ರರಿಗೆ ಮಾತ್ರವಲ್ಲದೇ ಗುರುಕುಲಕ್ಕೂ ಭಿಕ್ಷೆ ಎಂದು ಬಣ್ಣಿಸಿದರು.


ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕ ಬಿ.ಎಸ್.ರಾಜಾ, ಉಪ ಮಹಾಪ್ರಬಂಧಕ ಕೆ.ಶ್ಯಾಮ್, ಸಹಾಯಕ ಮಹಾಪ್ರಬಂಧಕ ವಾದಿರಾಜ, ಗೋಕರ್ಣ ಶಾಖೆಯ ಪ್ರಬಂಧಕ ಪರಮೇಶ್ವರ ಹೆಗಡೆ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ದೇವಸ್ಯ ಪುರುಷೋತ್ತಮ ಭಟ್ ಮತ್ತು ಕುಟುಂಬ ಸರ್ವಸೇವೆ ನೆರವೇರಿಸಿತು. ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ ಸುವರ್ಣಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿವಿ ಆಡಳಿತಾಧಿಕಾರಿ ಡಾ. ಟಿ. ಜಿ. ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮಹೇಶ್ ಹೆಗಡೆ, ಮಡಿಕೇರಿಯ ಪುರುಷೋತ್ತಮ ಭಟ್, ನಾರಾಯಣಮೂರ್ತಿ, ಶ್ರೀಮಠದ ಶಾಸ್ತ್ರಿಗಳಾದ ಸುಚೇತನ ಶಾಸ್ತ್ರಿ, ಸುಬ್ರಾಯ ಅಗ್ನಿಹೋತ್ರಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top