ವಿನ್ಯಾಸಗಳು ಸೃಜನಶೀಲತೆಯಿಂದ ಕೂಡಿದ್ದರೆ ಪ್ರಚಾರದ ಅವಶ್ಯಕತೆಯೇ ಇಲ್ಲ: ಡಾ. ಸ್ವಪ್ನಾ ಮಿಶ್ರಾ

Upayuktha
0

ನಿಟ್ಟೆ ಸ್ಕೂಲ್ ಆಫ್‌ ಫ್ಯಾಶನ್ ಟೆಕ್ನಾಲಜಿ ಮತ್ತು ಇಂಟೀರಿಯರ್ ಡಿಸೈನ್ ಸಂಸ್ಥೆಯ 2022-2025ರ ಅವಧಿಯ ಪದವಿ ಪ್ರದಾನ ಸಮಾರಂಭ




ಬೆಂಗಳೂರು: ‘ನೀವು ಮಾಡುವ ವಿನ್ಯಾಸಗಳು ತಂತಾವೇ ಅವುಗಳ ಉದ್ದೇಶ, ಗುರಿ ಹಾಗೂ ವಿಧಿವಿಧಾನಗಳನ್ನು ಗ್ರಾಹಕರಿಗೆ ನೇರವಾಗಿ ನಿವೇದಿಸುತ್ತವೆ. ವಿನ್ಯಾಸಗಳಿಗೆ ಭಾಷೆಯ ಮೂಲಕ ಪ್ರಚಾರದ ನೆರವಿನ ಅಗತ್ಯವಿಲ್ಲ. ವಿನ್ಯಾಸಗಳು ಸೃಜನಶೀಲತೆಯಿಂದ ಕೂಡಿದ್ದರೆ ಅವು ಸ್ವತಃ ತಾವೇ ತಲುಪಬೇಕಾಗಿರುವ ಮನಸ್ಸುಗಳನ್ನು ಆಕರ್ಷಿಸುತ್ತವೆ. ಬಳಕೆದಾರರ ಅಗತ್ಯಗಳನ್ನು, ಅವರ ಜೀವನ ಶೈಲಿಯನ್ನು ಹಾಗೂ ಚಟುವಟಿಕೆಗಳನ್ನು ನೀವು ವಿನ್ಯಾಸ ರೂಪಿಸುವಾಗ ಸರಿಯಾಗಿ ಅರ್ಥಮಾಡಿ ಕೊಂಡಿದ್ದರೆ ಯಶಸ್ಸು ಖಚಿತ. ಅಷ್ಟೇ ಅಲ್ಲ, ವಿನ್ಯಾಸಗಳನ್ನು ರೂಪಿಸುವಲ್ಲಿ ಪರಿಸರದ ಸುಸ್ಥಿರತೆ ಯನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ವಿನ್ಯಾಸಗಳು ಪರಿಸರಸ್ನೇಹಿಯಾಗಿರ ಬೇಕು’ ಎಂದು ಭಾರತ ಸರ್ಕಾರದ ಜವಳಿ ವಲಯದ ಕೌಶಲ್ಯ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸ್ವಪ್ನಾ ಮಿಶ್ರಾ ನುಡಿದರು.


ಅವರು ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್‌ ಫ್ಯಾಶನ್ ಟೆಕ್ನಾಲಜಿ ಮತ್ತು ಇಂಟೀರಿಯರ್ ಡಿಸೈನ್ ಸಂಸ್ಥೆಯ 2022-2025ರ ಅವಧಿಯ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. 


ನಂತರ ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಮಟ್ಟದಲ್ಲಿ 12 ರ‍್ಯಾಂಕ್‌ಗಳನ್ನು ಪಡೆದ ಸಂಸ್ಥೆಯ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲಾ 25,000ರೂಗಳ ನಗದು ಪುರಸ್ಕಾರ ನೀಡಿ ಸತ್ಕರಿಸಲಾಯಿತು. ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಆಂಡ್ ಡೆಕೊರೇಶನ್‌ನಲ್ಲಿ ಹನ್ನಾ ಕ್ಯೂರಿ ಜಾಸ್ಲಿನ್ ಮೂರನೇ ರ‍್ಯಾಂಕ್ ಗಳಿಸಿದ್ದರು. ಎಂ.ಎಸ್ಸಿ ಫ್ಯಾಶನ್ ಆಂಡ್ ಅಪಾರೆಲ್ ಡಿಸೈನ್‌ನಲ್ಲಿ ತೃಪ್ತಿ ಮೊದಲನೇ ರ‍್ಯಾಂಕ್ ಗಳಿಸಿದ್ದರು. 


ಮತ್ತೋರ್ವ ಮುಖ್ಯ ಅತಿಥಿ, ಆದಿತ್ಯ ಬಿರ್ಲಾ ಫ್ಯಾಶನ್ ಆಂಡ್ ಲೈಫ್‌ ಸ್ಟೈಲ್‌ನ ಉಪಾಧ್ಯಕ್ಷ ದರ್ಶನ್ ಠಕ್ಕರ್. ಅವರು ತಮ್ಮ ಭಾಷಣದಲ್ಲಿ, ‘ತಂತ್ರಜ್ಞಾನದ ಸೂಕ್ತ ಅರಿವು, ಕೌಶಲ್ಯ ಹಾಗೂ ನೈತಿಕ ಮೌಲ್ಯಗಳು ವಿನ್ಯಾಸ ಕ್ಷೇತ್ರದ ಪರಿಣತರನ್ನು ರೂಪಿಸುತ್ತವೆ; ಮಾತ್ರವಲ್ಲದೆ ಸಮಾಜದ ದೃಷ್ಟಿಕೋನವನ್ನೇ ಕ್ರಮೇಣ ಬದಲಿಸುತ್ತವೆ. ಇದಕ್ಕೆ ಪೂರಕವಾಗಿ ಅಗತ್ಯವಿರುವುದು ಅಪರಿಮಿತ ವಿದ್ವತ್ತು, ಶದ್ಧೆ ಹಾಗೂ ಕಠಿಣ ಪರಿಶ್ರಮ’ ಎಂದರು.


ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ನಿಟ್ಟೆ ಸ್ಕೂಲ್ ಆಫ್‌ ಫ್ಯಾಶನ್ ಟೆಕ್ನಾಲಜಿ ಹಾಗೂ ಇಂಟೀರಿಯರ್ ಡಿಸೈನ್ ಸಂಸ್ಥೆಯ ಪ್ರಾಂಶುಪಾಲೆ ಡಾ. ಸಂಧ್ಯಾ ರವಿ ಮೊದಲು ಸ್ವಾಗತಿಸಿದರು. ಸಮಾರಂಭದಲ್ಲಿ ಆರ್ಮಿ ಇನ್ಸ್‌ಟಿಟ್ಯೂಟ್ ಆಫ್‌ ಫ್ಯಾಶನ್ ಟೆಕ್ನಾಲಜಿಯ ಮುಖ್ಯಸ್ಥೆ ಡಾ. ಶಶಿಕಲಾ ಎಚ್, ಡಿಸೈನಿಂಗ್ ಸ್ಪೇಸ್ ಸ್ಟುಡಿಯೋದ ಸಹಸಂಸ್ಥಾಪಕರಾದ ಜೋಶ್ನಾ ಮೆರಿನ್ ಥಾಮಸ್, ರಾಯ್‌ಬರೈಲಿಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್‌ ಫ್ಯಾಶನ್ ಟೆಕ್ನಾಲಜಿಯ ನಿರ್ದೇಶಕ ಡಾ. ಜೊನಾಲಿ ಡಿ. ಬಾಜ್‌ಪೈ, ಹಿರಿಯ ವಾಸ್ತುಶಿಲ್ಪಿ ಸರೋಜಿನಿ ಎ. ಹೊಂಬಾಳಿ, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಹಾಗೂ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಫ್ಯಾಶನ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top