ಇದೊಳ್ಳೆ ವರಸೆ- ಹೊಸ ಪುಸ್ತಕ; ಸಂದೇಶ್ ನಾಯ್ಕರ ಅಂಕಣ ಬರಹಗಳ ಸಂಕಲನ

Upayuktha
0


ಸಂದೇಶ್ ನಾಯ್ಕ್ ಅವರು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರತಿ ಸೋಮವಾರ ಬರೆಯುತ್ತಿರುವ ’ವಾರದ ವರಸೆ’ ಅಂಕಣದಿಂದ ಆಯ್ದ 30 ಬರಹಗಳ ಸಂಕಲನ ಪುಸ್ತಕರೂಪದಲ್ಲಿ ಬರುತ್ತಿದೆ. ’ಇದೊಳ್ಳೆ ವರಸೆ’ ಎಂದು ಪುಸ್ತಕದ ಹೆಸರು. ಕಳೆದ 400 ವಾರಗಳಲ್ಲಿ (ಇಂದಿನದು 400ನೆಯ ವರಸೆ ಅಂತೆ!) ವಾರದ ವರಸೆ ಅಂಕಣ ಹೊಸದಿಗಂತ ಪತ್ರಿಕೆಯ ಸೋಮವಾರದ ಸಂಚಿಕೆಯ ಸಂಪಾದಕೀಯ ಪುಟವನ್ನು ಅಲಂಕರಿಸಿದೆ. ಸಂದೇಶ್ ನಾಯ್ಕ್ ಅವರ ನಿಷ್ಠೆ-ಶ್ರದ್ಧೆಗಳಿಗೆ ಅದೊಂದು ಕೈಗನ್ನಡಿಯಾದರೆ, ಅವರ ಬರಹಗಳು, ಕಥೆ-ಕವಿತೆಗಳು ಕನ್ನಡದ ಬೇರೆ ಪತ್ರಿಕೆ/ನಿಯತಕಾಲಿಕಗಳಲ್ಲೂ ಪ್ರಕಟವಾಗುತ್ತಿರುವುದು, ಮತ್ತು ಸ್ಪರ್ಧೆಗಳಲ್ಲೂ ಬಹುಮಾನ ಗಳಿಸುತ್ತಿರುವುದು ಅವರ ಬರವಣಿಗೆಯ ಸತ್ತ್ವ ಸೌಂದರ್ಯಕ್ಕೆ ಪುರಾವೆ. ಪುಸ್ತಕರೂಪದಲ್ಲಿ ಇದು ಅವರ ಚೊಚ್ಚಲ ಕೃತಿ. ಇದರ ಪ್ರಕಾಶಕರು ಕಾರ್ಕಳದ ’ಕ್ರಿಯೇಟಿವ್ ಪುಸ್ತಕ ಮನೆ’ (ಎನ್ನುವುದು ಕಾರ್ಕಳದವನಾಗಿ ನನಗೆ ಹೆಚ್ಚಿನ ಖುಷಿ)!  ಮುಖಪುಟ ಆಕರ್ಷಕವಾಗಿ ಬಂದಿದ್ದು ಪುಸ್ತಕವನ್ನೊಮ್ಮೆ ತೆರೆದು ನೋಡೋಣ, ಓದಿಯೇಬಿಡೋಣ ಅನಿಸುವಂತಿದೆ.  ಕೊಂಡು ಓದಲಿಕ್ಕೆ, ಇನ್ನೊಬ್ಬರಿಗೆ ಉಡುಗೊರೆಯಾಗಿ ಕೊಡಲಿಕ್ಕೂ ಯೋಗ್ಯವಾಗಿದೆ ಈ ಪುಸ್ತಕ. 

= = =


‘ಲಘುವಾಗೆಲೆ ಮನ...’ ಎಂದರು ಪು.ತಿ.ನ. 

ಸಂದೇಶ್ ನಾಯ್ಕ್ ಅವರ ಈ ಚೊಚ್ಚಲ ಕೃತಿಯ ಪ್ರತಿಯೊಂದು ಪು.ತಿ.ನೋ- ಅರ್ಥಾತ್ ಪುಟ ತಿರುಗಿಸಿ ನೋಡಿದರೆ, ಮನಸ್ಸನ್ನು ಲಘುವಾಗಿಸಬಲ್ಲ, ಮುಖದಲ್ಲಿ ನಗು ಮೂಡಿಸಬಲ್ಲ ಬರಹಗಳೇ ನಿಮಗೆ ಸಿಗುತ್ತವೆ. ಮನಸ್ಸು-ದೇಹಗಳೆರಡನ್ನೂ ಹಗುರವಾಗಿಟ್ಟುಕೊಳ್ಳುವುದು ಇಂದಿನ ಅಗತ್ಯವೂ ಹೌದೆನ್ನಿ.


ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಸಾಪ್ತಾಹಿಕ ಅಂಕಣವಾಗಿ ಮೂಡಿಬಂದ ಅಕ್ಷರಪುಷ್ಪಗಳಲ್ಲಿ ಆಯ್ದ ಮೂವತ್ತರ ಗುಚ್ಛವಿದು. ಕಳೆದ ಆರೇಳು ವರ್ಷಗಳಿಂದ, ಅಂದರೆ 300ಕ್ಕೂ ಹೆಚ್ಚು ಅಂಕಣಬರಹಗಳನ್ನು ಇದೇ ‘ಲಘು’ ರೀತಿಯಲ್ಲಿ ಹೊಸೆದಿದ್ದಾರೆ, ಈಗಲೂ ಹೊಸೆಯುತ್ತಿದ್ದಾರೆ ಸಂದೇಶ್ ನಾಯ್ಕ್. ಅದೇ ಒಂದು ಪುರಾವೆ, ಅವರ ಬರಹಗಳು ಪತ್ರಿಕೆಯ ಸಂಪಾದಕರಿಗೂ ಓದುಗರಿಗೂ ಬಹಳವೇ ರುಚಿಕರವೆನಿಸಿವೆ, ಹಿಡಿಸಿವೆ ಎಂಬುದಕ್ಕೆ. 


ಒಂದು ರೀತಿಯಲ್ಲಿ ಡುಂಡಿರಾಜರ ಮಾತು-ಕ(ವಿ)ತೆ ಅಂಕಣವನ್ನು ಹೋಲುವ, ಅದೇ ರೀತಿ ಸರಳ ನಿರೂಪಣೆಯ ನಡುವೆ ಅಲ್ಲಲ್ಲಿ ಚಿಕ್ಕ ಚುಟುಕಗಳು ಕಾಣಿಸಿಕೊಳ್ಳುವ, ಧುತ್ತೆಂದು ಕಾಣಿಸಿಕೊಳ್ಳುವ ಪದವಿನೋದಗಳು ಮತ್ತು ವಕ್ರೋಕ್ತಿಗಳು ಕಚಗುಳಿಯಿಡುವ ಈ ಬರಹಗಳು ಮನಸ್ಸನ್ನು ಹಗುರಾಗಿಸುವ ಒಳ್ಳೆಯ ಮದ್ದು. ಇವು ಚಿಂತೆ ಹುಟ್ಟಿಸುವುದಿಲ್ಲ, ಚಿಂತನಕ್ಕೆ ಪ್ರೇರಣೆ ನೀಡುತ್ತವೆ. ಬೋರ್ ಹೊಡೆಸುವುದಿಲ್ಲ, ಹೊಡೆಸಬಹುದೇನೋ ಅಂದುಕೊಳ್ಳುವುದರೊಳಗೆ ಮುಗಿದುಹೋಗುತ್ತವೆ. ಬೇಗಬೇಗ ಓದಿ ಮುಗಿಸಬಹುದು ಎಂಬರ್ಥದಲ್ಲೂ ಇವು ‘ಲಘು’ವೇ.  ಇಲ್ಲಿ ನಿಮಗೆ ಬೆನಕ-ಮೂಷಿಕರ ಉಭಯಕುಶಲೋಪರಿ ಸಿಗುತ್ತದೆ; ಸೊಳ್ಳೆಯೊಂದಿಗೆ ಸಂದರ್ಶನ ಸಿಗುತ್ತದೆ; ಥರಾವರಿ ಪಟಾಕಿಗಳು ಸಿಗುತ್ತವೆ; ಚಳಿ-ಮಳೆ-ಬಿಸಿಲುಗಳ ಉಪದ್ವ್ಯಾಪಗಳೂ ಅನುಭವಕ್ಕೆ ಬರುತ್ತವೆ. ಡೋಸೇಜ್ ಸಾಕೆನಿಸದಿದ್ದರೆ ಪ್ರತಿಯೊಂದು ಬರಹದ ಕೊನೆಗೆ ಓವರ್‌ಡೋಸ್ ಸಹ ಸಿಗುತ್ತದೆ! ಪ್ರಚಲಿತ ವಿಚಾರಗಳು, ದೈನಂದಿನ ಜೀವನದಲ್ಲಿ ನಮ್ಮ ಗಮನದ ರೇಡಾರ್‌ನಿಂದ ತಪ್ಪಿಸಿಕೊಳ್ಳುವ ಸ್ವಾರಸ್ಯಗಳು, ಹಬ್ಬ-ಹರಿದಿನಗಳ ಆಸುಪಾಸಿನ ಸಾಂದರ್ಭಿಕ ಪ್ರಸ್ತುತಿಗಳು ಎಲ್ಲ ಸೇರಿ ಈ ಸಂಕಲನಕ್ಕೊಂದು ರಸಮಯ ವೈವಿಧ್ಯವನ್ನು ತಂದುಕೊಟ್ಟಿವೆ.


ಬಾಯಾಡಿಸಲಿಕ್ಕೆ ಹುರಿಗಾಳಿನ ಥರ, ಚಹಾದ ಜೋಡಿ ಚೂಡಾ ಥರ, ಸಿನೆಮಾ ನೋಡುವಾಗಿನ ಪಾಪ್‌ಕಾನ್ ಥರ, ಅಥವಾ ಬೇಕಿದ್ದರೆ ಟೈಮ್‌ಪಾಸ್ ಕಡ್ಲೆ ಥರವೇ ಅಂತ ಅಂದ್ಕೊಳ್ಳಿ,  ಆದರೆ ಇದು ಕಬ್ಬಿಣದ ಕಡಲೆಯಲ್ಲ. ಏಕೆಂದರೆ ಇಲ್ಲಿ ಅಂಕಣಕಾರನ ಪಾಂಡಿತ್ಯ ಪ್ರದರ್ಶನ ಇಲ್ಲ, ದಂತಗೋಪುರದಲ್ಲಿ ಕುಳಿತು ಉಪದೇಶದ ರೀತಿಯ ಬೋಧನೆಯೂ ಇಲ್ಲ. ಇರುವುದೇನಿದ್ದರೂ ಎಲ್ಲ ವಯಸ್ಸಿನ ಓದುಗರಿಗೂ ಇಷ್ಟವಾಗುವಂತೆ, ಓದಿದ್ದರಲ್ಲೊಂದಿಷ್ಟು ಸತ್ತ್ವವನ್ನು ಹೀರಿ ಉಪಯುಕ್ತ ಎನಿಸುವಂತೆ ಇರುವ ಅಕ್ಷರವರಸೆ. ಹೌದು, ಇದೊಳ್ಳೆ ವರಸೆ!


- ಶ್ರೀವತ್ಸ ಜೋಶಿ, ವಾಷಿಂಗ್ಟನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top