ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ : ಜೆ.ಬಿ. ತಮ್ಮಣ್ಣಗೌಡ

Upayuktha
0



ಹಾಸನ :ಕಲಿಯುಗ ಕಲಿಯುವ ಯುಗವಾಗಿದೆ. ಕಲಿಸುವವರು ಪರಿಣಾಮಕಾರಿಯಾಗಿ ಕಲಿಸಬೇಕು ಹಾಗೆಯೇ ಕಲಿಯುವವರು ಪರಿಣಾಮಕಾರಿಯಾಗಿ ಕಲಿಯಬೇಕು. ಇಷ್ಟಪಟ್ಟು ಕಲಿಸುವವರು ಇರುವಾಗ ಇಷ್ಟಪಟ್ಟು ಕಲಿಯವವರೂ ಇರಬೇಕು. ಇದು ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಯುಗವಾಗಿದೆ. ಕಲಿಕೆಯ ಮೂಲಕ ಲಭಿಸುವ ಜ್ಞಾನ ಮಹತ್ವಪೂರ್ಣವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣಗೌಡ ಸಲಹೆ ನೀಡಿದರು. 


ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಭಿನಂದಿಸಿ ಮಾತನಾಡಿದ ಅವರು 'ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದು, ಉನ್ನತ ಸ್ಥಾನ ಪಡೆದವರು. ಆ ಶಾಲೆಗಳ ದಾಖಲಾತಿ ಸಂಖ್ಯೆ ಹೆಚ್ಚಿಸಿ, ಉಳಿಸುವ ಪ್ರಯತ್ನವನ್ನು ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ಗುಣಮಟ್ಟದ ಫಲಿತಾಂಶವು ಹಾಗೂ ಎಲ್ಲಾ ರೀತಿಯ ಮೂಲಸೌಕರ್ಯ ಇದ್ದರೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ' ಎಂದರು. 


ನಮ್ಮ ಶಾಲೆ ಎಂಬ ಪರಿಕಲ್ಪನೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಇಪ್ಪತ್ತು ವರ್ಷಗಳ ಕಾಲ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಂದಲಿಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯದಲ್ಲಿರುವಾಗಲೇ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಎಸ್.ಎಸ್ ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷವೂ ನಗದು ಬಹುಮಾನವನ್ನು ನೀಡುತ್ತ ಬಂದಿರುವ ತಮ್ಮಣ್ಣಗೌಡರು ಜಿನ್ನೇನಹಳ್ಳಿ ಸರ್ಕಾರಿ ಪ್ರೌಢಶಾಲೆಯು ಅವರ ತವರಿನ ಶಾಲೆಯಾಗಿದ್ದು 'ನಮ್ಮೂರ ಶಾಲೆ' ಎಂಬ ಪರಿಕಲ್ಪನೆಯಲ್ಲಿ ಇಲ್ಲಿಯೂ ಎಸ್.ಎಸ್.ಎಲ್ ಸಿ, ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾನದಂಡವನ್ನು ನಿಗದಿ ಪಡಿಸಿ ಈ ಹಿಂದೆಯೇ ಘೋಷಿಸಿದಂತೆ ಈ ಸಾಲಿನಲ್ಲಿ ಹನ್ನೊಂದು ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದರು. 


2025 - 26 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್ ಎಲ್.ಸಿ. ಯಲ್ಲಿ ಶೇ.80 ರಿಂದ ಶೇ. 85 ಅಂಕಗಳನ್ನು ಪಡೆದವರಿಗೆ ರೂ. 1000/, ಶೇ.86 ರಿಂದ ಶೇ. 90 ಅಂಕಗಳನ್ನು ಪಡೆದವರಿಗೆ ರೂ. 1500/, ಶೇ.91 ರಿಂದ ಶೇ. 95 ಅಂಕಗಳನ್ನು ಪಡೆದವರಿಗೆ ರೂ. 2000/, ಶೇ.96 ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದವರಿಗೆ ರೂ. 3000/ ಮತ್ತು ಅತೀ ಹೆಚ್ಚು ಅಂಕಗಳನ್ನು ಪಡೆದ ಪ್ರಥಮ ವಿದ್ಯಾರ್ಥಿ ಗೆ ರೂ. 4000/ ಗಳನ್ನು ತಾವು ಬದುಕಿರುವವರೆಗೂ ನೀಡುವುದಾಗಿ ಘೋಷಿಸಿ, 'ಮುಂದಿನ ವರ್ಷ ಈ ಶಾಲೆಯ ಎಂಟನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದಿಂದ ಉಚಿತವಾಗಿ ಸೈಕಲ್‌ಗಳನ್ನು ನೀಡುವುದಾಗಿ ಘೋಷಿಸಿದರು.


ಭವಿಷ್ಯಕ್ಕಾಗಿ ಬದುಕಿಗಾಗಿ ಕಲಿಯುವುದು ಅನಿವಾರ್ಯವಾಗಿದೆ. ಏಕೆಂದರೆ ಸ್ಪರ್ಧಾತ್ಮಕ ಯುಗ ಜ್ಞಾನದ ಮೇಲೆ ಆಧಾರಿತವಾಗಿದೆ ಎಂದು ಮಾತನಾಡಿದ ಅವರನ್ನು ಊರಿನ ಹಿರಿಯರು, ಶಾಲೆಯ ಶಿಕ್ಷಕರು ಗೌರವಿಸಿ ಸನ್ಮಾನಿಸಲು ಮುಂದಾದಾಗ, ಶಾಲೆಯಲ್ಲಿ ದಾಖಲಾತಿ ಕಡಿಮೆ ಇರುವ ಈ ಸಂದರ್ಭದಲ್ಲಿ ಸನ್ಮಾನವು ಬೇಡ. ಮುಂದಿನ ಎರಡು ಮೂರು ವರ್ಷಗಳಲ್ಲಿ ಪ್ರತೀ ತರಗತಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳಂತೆ ಒಟ್ಟಾರೆ ಶಾಲೆಯ ದಾಖಲಾತಿ ಸಂಖ್ಯೆ 75ಕ್ಕೆ ಏರಿಕೆಯಾದಾಗ ಸನ್ಮಾನವನ್ನು ಸ್ವೀಕರಿಸುತ್ತೇನೆಂದು ನಯವಾಗಿ ಹೇಳಿದರು. 


ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾವರ್ತಮ್ಮ, ಸದಸ್ಯರಾದ ರುಕ್ಮಿಣಿ, ಮಂಜುನಾಥ್, ನಿವೃತ್ತ ಶಿಕ್ಷಕ ರಮೇಶ್, ವಕೀಲ ದೊರೆಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್, ಗ್ರಾಮದ ಕೃಷ್ಣಮೂರ್ತಿ, ತಮ್ಮಣ್ಣಗೌಡ, ಮುಖ್ಯಶಿಕ್ಷಕ ಓಂಕಾರಮೂರ್ತಿ ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top