ದೇವರು, ದೇಶ ಹಾಗೂ ಇತರರಿಗಾಗಿ ಸೇವೆ ಸಲ್ಲಿಸುವುದೇ ಸ್ಕೌಟ್ಸ್ & ಗೈಡ್ಸ್ ಮುಖ್ಯ ಉದ್ದೇಶ: ಪ್ರಾಂಶುಪಾಲೆ ರೀನಾ ಮ್ಯಾಥ್ಯೂ
ಆಲೂರು: ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳಲ್ಲಿ ದೇವರಿಗಾಗಿ ಸೇವೆ, ದೇಶಕ್ಕಾಗಿ ಸೇವೆ, ಇತರರಿಗಾಗಿ ಸೇವೆ ಹಾಗೂ ಸ್ವಯಂ ಮೌಲ್ಯಗಳ ವರ್ಧನೆಯನ್ನು ಬೆಳೆಸುತ್ತದೆ ಎಂದು ಭೈರಾಪುರದ ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ರೀನಾ ಮ್ಯಾಥ್ಯೂ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಹಾಗೂ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಭೈರಾಪುರದ ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ & ಗೈಡ್ಸ್ ಜಿಲ್ಲಾಮಟ್ಟದ ತೃತೀಯ ಸೋಪಾನ ಪರೀಕ್ಷಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಲ್ಲಿ ನಂಬಿಕೆ, ನಿಷ್ಠೆ, ಪ್ರಾಮಾಣಿಕತೆ, ಧೈರ್ಯ, ಕಾಯಕ ನಿಷ್ಠೆ, ಪ್ರಾಣಿ-ಪಕ್ಷಿ-ಪ್ರಕೃತಿ ಪ್ರೀತಿ, ಪರಿಶುದ್ಧತೆ, ಪಾರದರ್ಶಕತೆ ಗಳಂತಹ ಉದಾತ್ತ ಗುಣಗಳನ್ನು ಬೆಳೆಸುವುದರ ಜೊತೆಗೆ ಬದುಕನ್ನು ಉನ್ನತೀಕರಿಸುತ್ತದೆ ಎಂದರು.
ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ಸಮಾಜಕ್ಕಾಗಿ, ಈ ನಾಡು-ನುಡಿಗಾಗಿ ನಾನೇನು ಕೊಟ್ಟಿದ್ದೇನೆ ಎನ್ನುವ ಹಿನ್ನೆಲೆಯಲ್ಲಿ ಇಲ್ಲಿ ಅನೇಕರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ದಾರಿಯಲ್ಲಿ ಕಿಂಚಿತ್ತು ಸಾಮಾಜಿಕ ಸೇವೆಗೈಯಲು ಸ್ಕೌಟ್ಸ್ & ಗೈಡ್ಸ್ ಎಡೆಮಾಡಿಕೊಟ್ಟಿದೆ. ತಂದೆ, ತಾಯಿ, ಗುರು-ಹಿರಿಯರನ್ನು ಗೌರವ ಭಾವದಿಂದ ಕಾಣುವುದು ಇಲ್ಲಿನ ಬಹುಮುಖ್ಯ ಧ್ಯೇಯವಾಗಿದೆ. ಇಲ್ಲಿನ ಮೌಲ್ಯಗಳನ್ನು ಅರಿತು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತದೆ. ಇಲ್ಲಿನ ಪಠ್ಯೇತರ ಚಟವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿವೆ. ಹಾಸನ ಜಿಲ್ಲೆಯಲ್ಲಿ ಆಲೂರು ಅತ್ಯಂತ ಕ್ರಿಯಾಶೀಲವಾಗಿರುವ ತಾಲ್ಲೂಕು ಘಟಕವಾಗಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು, ಸ್ಕೌಟ್ಸ್ ಗೈಡ್ಸ್ ಶಿಕ್ಷಕರ ನಿರಂತರ ಆಸಕ್ತಿ ಹಾಗೂ ನಾವೀನ್ಯತೆಯ ಕಾರ್ಯಚಟವಟಿಕೆಗಳಿಂದ ಮಕ್ಕಳ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬರುತ್ತಿವೆ. ಒಂದು ತಾಲ್ಲೂಕು ಹಂತದಲ್ಲಿ 150 ಕ್ಕೂ ಹೆಚ್ಚು ಮಕ್ಕಳು ಜಿಲ್ಲಾಮಟ್ಟದ ಪರೀಕ್ಷೆಯಲ್ಲಿ ಭಾಗವಹಿಸುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ತಾಲ್ಲೂಕು ಖಜಾಂಚಿ ಬಿ.ಎಸ್.ಹಿಮ, ತಾಲ್ಲೂಕು ಜಂಟಿ ಕಾರ್ಯದರ್ಶಿ ಎಲಿಜಬೆತ್ ಎಂ. ಎಲ್. ಸ್ಕೌಟ್ಸ್ & ಗೈಡ್ಸ್ ಚಳವಳಿ ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಭೈರಾಪುರದ ಎಸ್.ವಿ. ಪಬ್ಲಿಕ್ ಶಾಲೆಯ ಸ್ಕೌಟ್ ಮಾಸ್ಟರ್ ಸತೀಶ್, ಗೈಡ್ ಕ್ಯಾಪ್ಟನ್ ಪೃಥ್ವಿನಿ; ಆಲೂರಿನ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಶಕುಂತಲಾ, ಗೈಡ್ ಕ್ಯಾಪ್ಟನ್ ರೋಹಿಣಿ; ಮರಸು ಹೊಸಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಕಾವ್ಯ; ಮಗ್ಗೆ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯ ಗೈಡ್ ಕ್ಯಾಪ್ಟನ್ ಪುಷ್ಪ; ಭೈರಾಪುರ ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಶಿಲ್ಪಕೃತಿ ಜಿ.ಕೆ, ಸ್ಕೌಟ್ ಮಾಸ್ಟರ್ ಚಂದ್ರು ಪಿ. ಗೌಡ, ಗೈಡ್ ಕ್ಯಾಪ್ಟನ್ ಸೌಮ್ಯ ಎಚ್.ಎನ್, ಗೈಡ್ ಕ್ಯಾಪ್ಟನ್ ಶೃತಿ ಜಿ.ಎನ್, ಚಂದ್ರಕಲಾ ಎಂ, ಲೇಡಿ ಸ್ಕೌಟ್ ಮಾಸ್ಟರ್ ಬಾನು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ಕೌಟ್ ಮಾಸ್ಟರ್ ಚಂದ್ರು ಪಿ. ನಿರೂಪಿಸಿದರು, ಗೈಡ್ ಕ್ಯಾಪ್ಟನ್ ಪುಷ್ಪ ಸ್ವಾಗತಿಸಿದರು, ಗೈಡ್ ಕ್ಯಾಪ್ಟನ್ ಎಂ. ಚಂದ್ರಕಲಾ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ