ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಂ ಬ್ರಹ್ಮ, ತಸ್ಮೈ ಶ್ರೀ ಗುರವೇ ನಮಃ'. ಎಂದರೆ, ಓ ಗುರುವೇ, ನೀವು ದೇವತೆಗಳಿಗೆ ಸಮಾನರು. ನೀನೇ ಬ್ರಹ್ಮ, ನೀನೇ ವಿಷ್ಣು ಮತ್ತು ನೀನೇ ಶಿವ. ನೀನೇ ದೇವತೆಯೂ ಕೂಡ. ಓ ಗುರುವೇ, ನೀನು ಪರಮ ಜೀವಿ ಮತ್ತು ನಾನು ನಿನಗೆ ಈ ಮೂಲಕ ನಮಸ್ಕರಿಸುತ್ತೇನೆ.
ಬದುಕಿನಲ್ಲಿ ಗುರು ಮತ್ತು ಗುರಿ ಇದ್ದರೆ ಅಸಾಧ್ಯವೂ ಸಾಧ್ಯವಂತೆ... ಬದುಕಿನಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂದು ದಾರ್ಶನಿಕನೊಬ್ಬ ಹೇಳಿದ್ದಾರೆ. ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಮಾರ್ಗ ತಿಳಿಯಲು ಸಾಧ್ಯವಿಲ್ಲ.
ಅರ್ಜುನ ಶ್ರೇಷ್ಠ ಧನುರ್ಧಾರಿಯಾಗಲು ಗುರು ದ್ರೋಣಾಚಾರ್ಯರು ಕಾರಣ, ರಾಮ ಶ್ರೀರಾಮಚಂದ್ರನಾಗಲು ಗುರುವೇ ಕಾರಣ ದೇವ ಪುರುಷನಿಗೂ ಗುರುವಿನ ಮಾರ್ಗದರ್ಶನಬೇಕು. ಅಂಧಕಾರದಿಂದ ಬೆಳಕಿನಡೆಗೆ ಕರೆದೊಯ್ಯಲು ಗುರುವೇ ಬೇಕು ತಾಯಿ ಮೊದಲ ಗುರು ವಿದ್ಯೆ ನೀಡುವ ಶಿಕ್ಷಕ ಬದುಕು ಕಲಿಸುವ ತಂದೆ- ಹೀಗೆ ಬದುಕಿನಲ್ಲಿ ಬರುವ ಪ್ರತಿಪಾತ್ರವೂ ಗುರುವೇ ಆಗಿರುತ್ತಾನೆ. ನೆಲದ ಮೇಲೆ ಬಿದ್ದ ಹಾಳೆಗೂ ಗುರುವೆಂಬ ಅಕ್ಕರೆಯ ಗಾಳಿ ಸೋಕಿದರೆ ಗಗನದಲ್ಲಿ ಹಾರುವುದು ಬದುಕೆಂಬ ಗಾಳಿಪಟ.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಎಲ್ಲಗುರುಗಳಿಗೂ ಕೃತಜ್ಞತೆ ಸಲ್ಲಿಸುವ ಸುದಿನ ಗುರುಪೂರ್ಣಿಮೆ ಮಹಾಗುರು ವ್ಯಾಸ ಮಹರ್ಷಿಗಳ ಜನ್ಮದಿನ ಕೂಡ ಆದ್ದರಿಂದ ವ್ಯಾಸಪೂರ್ಣಿಮೆ ಎಂತಲೂ ಕರೆಯಲಾಗುತ್ತದೆ
ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ.
ಒಬ್ಬ ಯುವರಾಜ ಅಹಂಕಾರಿಯಾಗಿದ್ದ ಅವನನ್ನು ಉತ್ತಮ ರಾಜನನ್ನಾಗಿ ಮಾಡುವ ಉದ್ದೆಶದಿಂದ ರಾಜ ಗುರುಕುಲಕ್ಕೆ ಕಳುಹಿಸಿದ.ಇನ್ನೊಬ್ಬ ಬಡವ ಆದರೆ ಕಲಿಯುವ ಹಂಬಲ ಗುರು ತನ್ನ ಇಬ್ಬರು ಶಿಷ್ಯರನ್ನು ಕರೆದು ಬಹುದೂರದಲ್ಲಿದ್ದ ಬೆಟ್ಟದಲ್ಲಿರುವ ಹೂವುಗಳನ್ನು ತರಲು ಹೇಳಿದ
ಅವರು ತರಲು ಹೊರಟರು ಯುವರಾಜನಿಗೆ ನಡೆದು ಆಯಾಸವಾಯಿತು ತನ್ನ ಸಹಪಾಠಿಯು ಅಲ್ಲಿ ಕುದುರೆಗಾಡಿ ನಿಂತಿದೆ ಸಾರಥಿಗೆ ಸಹಾಯ ಬೇಡಿದ ಅವರಿಬ್ಬರು ಗಾಡಿ ಹತ್ತಿದರು ಸಹಪಾಠಿ ಕುದುರೆ ಸವಾರನಿಂದ ಕುದುರೆ ಸವಾರಿ ಬಗ್ಗೆ ಕುತೂಹಲದಿಂದ ಕೇಳಿದ ನಂತರ ನಮಗೆ ಕುದುರೆ ಸವಾರಿ ಕಲಿಸಿಕೊಡಿ ಎಂದ ಆತನು ಕಲಿಸಿದ. ಆದರೆ ಯುವರಾಜನಿಗೆ ಕಲಿಯಲಿಚ್ಛೆ ಇರಲಿಲ್ಲ. ನಾನು ಮುಂದೆ ರಾಜನಾಗುವವನು, ಇವನಿಂದ ಸವಾರಿ ಕಲಿಯುವ ಅವಶ್ಯಕತೆ ಇಲ್ಲ. ನನ್ನ ರಥಕ್ಕೆ ಸಾರಥಿ ಇರುತ್ತಾರೆ ಎಂದು ಮನದಲ್ಲಿ ತನ್ನ ಬಗ್ಗೆ ಹೆಮ್ಮೆ ಪಡುತ್ತ ಕಲಿಕೆಯನ್ನು ತಿರಸ್ಕರಿಸಿದ.
ನಂತರ ಗಾಡಿಯಿಂದ ಇಳಿದು ನಡೆದರು. ಮತ್ತೆ ನದಿ ದಾಟಬೇಕಿತ್ತು. ಅಲ್ಲಿ ದೋಣಿಯಲ್ಲಿ ಕೂತರು. ಅಂಬಿಗ ದೋಣಿ ಸಾಗಿಸುವುದನ್ನು ನೋಡಿ ಆ ಸಹಪಾಠಿಯೂ ಅಷ್ಟೆ ಕುತೂಹಲದಿಂದ ಆ ವಿದ್ಯೆಯನ್ನು ಕಲಿತ ಯುವರಾಜ, ಮತ್ತೆ ಅದನ್ನುಕೂಡ ತಿರಸ್ಕರಿಸಿದ ಸಹಪಾಠಿ ಮೀನುಗಾರನೊಬ್ಬ ಈಜು ಕಲಿತ ಮತ್ತೆ ಯುವರಾಜ ಅದನ್ನು ಕೂಡ ತಿರಸ್ಕರಿಸಿದ.
ಗುರುಗಳು ಹೇಳಿದ ಕೆಲಸವಾಯಿತು... ವರ್ಷಗಳೇ ಕಳೆದವು. ಈಗ ಯುವರಾಜ ರಾಜನಾದ... ಮುನ್ಸೂಚನೆಯೇ ಇಲ್ಲದೆ ರಾಜ್ಯದ ಮೇಲೆ ದಾಳಿಯಾದಾಗ ರಾಜ ತನ್ನ ಪ್ರಾಣ ಕಾಪಾಡಿಕೊಳ್ಳುವುದಷ್ಟೇ ಉಪಾಯವೆಂದು ರಥವೇರಿ ಕೂತನು. ಶತ್ರುಗಳ ಬಾಣಕ್ಕೆ ಸಾರಥಿ ಗುರಿಯಾದ.
ಕುದುರೆ ಸವಾರಿ ತನಗೆ ಬರದ ಕಾರಣ ಕೆಳಗಿಳಿದು ಓಡತೊಡಗಿದ. ಮುಂದೆ ನದಿ ದಾಟಬೇಕಿತ್ತು. ದೋಣಿಯು ಇತ್ತು. ದೋಣಿ ಸಾಗಿಸಲು ಬಾರದೆ ಈಜಲೂ ಬಾರದೆ ಶತ್ರುಗಳ ಕೈಗೆ ಸಿಕ್ಕಿ ಪ್ರಾಣ ಕಳೆದುಕೊಂಡ.
ಅಸಮರ್ಥ ರಾಜನಾಗಿ ವಿದ್ಯೆಗೆ ವಿನಯವೇ ಭೂಷಣವೆಂಬವುದು ಮರೆತ. ಬದುಕಿನಲ್ಲಿ ಸಿಗುವ ಪ್ರತಿಯೊಬ್ಬರಲ್ಲೂ ಗುರುವಿರುವನು ಗುರುವೆಂಬುವನು ಗೌರವಾನ್ವಿತನು. ಬಡವ ಶ್ರೀಮಂತನೆಂಬ ಭೇಧವಿಲ್ಲದೆ ಸರಸ್ವತಿಯು ಒಲಿದಿರುತ್ತಾಳೆ. ವಿದ್ಯೆಗೆ ಇಲ್ಲದ ಭೇದ ಭಾವ ವಿದ್ಯಾರ್ಥಿಗೇಕೆ? ಪ್ರತಿಯೊಂದು ಜೀವಿಯಲ್ಲೂ ಗುರುವನ್ನು ಕಾಣುವ ಸೂಕ್ಷ್ಮತೆ ನಮ್ಮಲ್ಲಿರಲಿ.
- ಅಂಜಲಿ ಶ್ರೀನಿವಾಸ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ