ಜಿಎಸ್‌ಟಿ ವಿವಾದ: ರಾಜ್ಯ ಸರ್ಕಾರದ ಹಫ್ತಾ ವಸೂಲಿಗೆ ಕೇಂದ್ರದ ಪಾರುಪತ್ಯ...!?

Upayuktha
0


ರಾಜೀವ ಹೆಗಡೆ


ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಜಿಎಸ್‌ಟಿ ಬಗ್ಗೆ ವಿಪರೀತ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ಒಂದಿಷ್ಟು ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದಲ್ಲಿನ ಅತ್ಯಂತ ಬುದ್ಧಿವಂತರಿಂದ ವಿಶ್ವದ ಅತ್ಯಂತ ಶ್ರೇಷ್ಠ ಹಾಗೂ ಕ್ರಾಂತಿಕಾರಕ ಯುಪಿಐ ವ್ಯವಸ್ಥೆ ಹಳ್ಳ ಹಿಡಿಯುವ ಮುನ್ಸೂಚನೆ ಸಿಗುತ್ತಿದೆ.


ಬೇಕರಿ ಮಾಲೀಕರಿಗೆ ನೋಟಿಸ್‌ ಬಂದಿದೆ, ಇನ್ಯಾವುದೇ ಸಣ್ಣ ಪುಟ್ಟ ವರ್ತಕರಿಗೆ ತೆರಿಗೆ ಕಟ್ಟಲು ಸೂಚಿಸಿದ್ದಾರೆ ಎಂದಾಗ ನನಗೆ ಅಷ್ಟು ಕಾಡಲಿಲ್ಲ. ಅವರಲ್ಲಿ ಜಾಗೃತಿ ಮೂಡಿಸಬೇಕಿತ್ತು ಹಾಗೂ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ರೂಪಿಸಬೇಕಿತ್ತು ಎನ್ನುವುದನ್ನು ಬಿಟ್ಟರೆ, ಕಾನೂನುಬದ್ಧವಾಗಿ ತೆರಿಗೆ ವ್ಯಾಪ್ತಿಗೆ ಬಂದರೆ ಅವರು ಕಟ್ಟಲೇಬೇಕು. ಈ ದೇಶದಲ್ಲಿ ಉದ್ಯೋಗ ನಿರತ ವ್ಯಕ್ತಿ ಮಾತ್ರ ತೆರಿಗೆ ಕಟ್ಟಬೇಕು ಎಂದೇನಿಲ್ಲ. ಒಂದೊಮ್ಮೆ ವರ್ತಕರು ತೆರಿಗೆ ವ್ಯಾಪ್ತಿಗೆ ಬಂದರೆ, ಆ ಹಣವು ಸರ್ಕಾರಕ್ಕೆ ಸೇರಲೇಬೇಕು. ಆದರೆ ನನ್ನ ಸಮಸ್ಯೆ ಇರುವುದು ತರಕಾರಿ, ಹೂವು, ಎಳನೀರು ವ್ಯಾಪಾರಿಗಳ ಬಗ್ಗೆ. ಇವರಲ್ಲಿ ಹಲವರು ರೈತರು ಕೂಡ ಆಗಿರಬಹುದು. ಜಿಎಸ್‌ಟಿ ಕಾನೂನು ಹಾಗೂ ನಿಯಮದ ಪ್ರಕಾರ ತರಕಾರಿ, ಹೂವು, ಹಣ್ಣು ವ್ಯಾಪಾರಿಗಳು ಜಿಎಸ್‌ಟಿ ವ್ಯಾಪ್ತಿಗೇ ಬರುವುದೇ ಇಲ್ಲ. ಈ ವಸ್ತುಗಳನ್ನು ಶೂನ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಹೀಗಾಗಿ ಈ ವರ್ತಕರು ಅಥವಾ ರೈತರು ಗ್ರಾಹಕರಿಂದ ನಯಾಪೈಸೆ ಜಿಎಸ್‌ಟಿ ಹಣವನ್ನು ಸಂಗ್ರಹಿಸಿರುವುದಿಲ್ಲ. ಈ ವ್ಯಾಪಾರಸ್ಥರು ಜಿಎಸ್‌ಟಿಯನ್ನು ಸಂಗ್ರಹಿಸದೇ ಇರುವಾಗ, ಇವರಿಗೆ ತೆರಿಗೆ ಹಣ ಕಟ್ಟಿ ಎಂದು ನೋಟಿಸ್‌ ನೀಡುವುದು ಶುದ್ಧ ಮೂರ್ಖತನವಾಗುತ್ತದೆ.


ಒಂದೊಮ್ಮೆ ಆದಾಯ ತೆರಿಗೆಯಲ್ಲಿ ಇರುವಂತೆ ನೀವು ತೆರಿಗೆ ಮಿತಿಯ ವ್ಯಾಪ್ತಿಗೆ ಬರದಿದ್ದರೂ ಐಟಿ ರಿಟರ್ನ್ಸ್‌ ಮಾಡಬೇಕು ಎನ್ನುವ ನಿಯಮ ಇಲ್ಲಿದ್ದರೆ ಅದನ್ನು ಸಾಮಾನ್ಯ ಹಾಗೂ ಅನಕ್ಷರಸ್ಥ ವ್ಯಾಪಾರಸ್ಥರಿಗೆ ತಿಳಿಸಬೇಕು. ಇದಲ್ಲದೇ ಒಬ್ಬ ಜನಸಾಮಾನ್ಯ ವ್ಯಕ್ತಿಯು ಇಂತಹ ಸಂಕೀರ್ಣ ಜಿಎಸ್‌ಟಿ ಫೈಲ್‌ ಮಾಡುವಂತಹ ಸರಳ ವ್ಯವಸ್ಥೆಯನ್ನು ಜಾರಿ ಮಾಡಬೇಕು. ಇಲ್ಲವಾದಲ್ಲಿ ಪೊಲೀಸರು ಬೀದಿಬದಿ ಅಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿರುವಂತೆ, ಮುಂದಿನ ದಿನಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಫ್ತಾ ವಸೂಲಿ ಶುರು ಮಾಡುತ್ತಾರೆ. ತಾರ್ಕಿಕವಾಗಿ ನೋಡಿದರೂ ಈ ರೈತರು ಅಥವಾ ವ್ಯಾಪಾರಸ್ಥರು ಚಾರ್ಟೆಡ್‌ ಅಕೌಂಟಂಟ್‌ಗಳನ್ನು ಇರಿಸಿಕೊಂಡು ವ್ಯವಹಾರ ಮಾಡಲು ಸಾಧ್ಯವೇ ಇಲ್ಲ. ಇದನ್ನು ಬಯಸುವ ಬೃಹಸ್ಪತಿಗಳು ವಾಣಿಜ್ಯ ಇಲಾಖೆ ಅಥವಾ ಯಾವುದೇ ಸರ್ಕಾರದಲ್ಲಿದ್ದರೆ, ಅವರಿಗಿಂತ ದೊಡ್ಡ ಮೂರ್ಖರು ಈ ಜಗತ್ತಿನಲ್ಲಿ ಇನ್ನೊಬ್ಬರು ಇರಲು ಸಾಧ್ಯವಿಲ್ಲ.


ಅಂದ್ಹಾಗೆ ಈ ಸಮಸ್ಯೆಗೆ ಮೂಲ ಕಾರಣವಿರುವುದು ಕರ್ನಾಟಕದಲ್ಲಿ ಖಾಲಿಯಾದ ಖಜಾನೆ. ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು ಎಂದು ಕಳೆದ ಸಭೆಯಲ್ಲಿ ಮುಖ್ಯಮಂತ್ರಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆ ಪ್ರಕಾರ ಗುರಿ ಮುಟ್ಟಲು ಬ್ಯಾಂಕ್‌ಗಳಿಂದ ಮಾಹಿತಿ ತರಿಸಿಕೊಂಡು ಮಿತಿಯನ್ನು ಮೀರಿ ವಹಿವಾಟು ನಡೆಸುತ್ತಿರುವರೆಲ್ಲರಿಗೂ ಅಂಧಾದುಂಧಿಯಾಗಿ ನೋಟಿಸ್‌ ನೀಡಲಾಗಿದೆ. ಈ ನೋಟಿಸ್‌ಗೆ ಯಾವುದೇ ಕಾನೂನು, ತರ್ಕವನ್ನು ಅನ್ವಯ ಮಾಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈಗ ಬ್ಯಾಂಕ್‌ ಖಾತೆಗಳು ಬ್ಲಾಕ್‌ ಆಗುವುದನ್ನು ತಪ್ಪಿಸಲಾದರೂ ನೋಟಿಸ್‌ಗೆ ಉತ್ತರ ನೀಡಬೇಕು. ಹಾಗೆಯೇ ಇದಕ್ಕಾಗಿ ಅಲ್ಲಿ ಕೂತಿರುವ ಭ್ರಷ್ಟ ವ್ಯವಸ್ಥೆಯ ಕೈ ಬಿಸಿ ಮಾಡದಿದ್ದರೆ, ಯಾವ ನೋಟಿಸ್‌ಗೂ ಉತ್ತರ ಬಂದಿದೆ ಎನ್ನುವ ಷರಾ ಬೀಳುವುದಿಲ್ಲ. ಇದು ಭವಿಷ್ಯದ ಹಗಲು ದರೋಡೆಗೆ ನಾಂದಿ ಹಾಡಿದ ಕ್ರಮವಾಗಿದೆ. ಈಗ ಎಚ್ಚೆತ್ತುಕೊಂಡು ಮೈ ಚಳಿ ಬಿಡಿಸದಿದ್ದರೆ, ಇದೊಂದು ಸರ್ಕಾರಿ ಹಫ್ತಾ ಕಾರ್ಯಕ್ರಮವಾಗಿ ಪರಿವರ್ತನೆಯಾಗಲಿದೆ.


ಕೇಂದ್ರ ಸರ್ಕಾರ ಸುಮ್ಮನಿರಲಾಗದು!

ಈ ವಿಚಾರಕ್ಕೆ ಸಂಬಂಧಿಸಿ ರಾಜಕೀಯ ಹಾಗೂ ಸರ್ಕಾರದ ಮಟ್ಟದಲ್ಲಿ ಎರಡು ವಿಚಾರಗಳು ಆಗುತ್ತಿವೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರದತ್ತ, ರಾಜ್ಯ ಸರ್ಕಾರದವರು ಕೇಂದ್ರ ರೂಪಿಸಿದ ಜಿಎಸ್‌ಟಿ ಕಾನೂನಿನತ್ತ ಕೈ ತೋರಿಸಿ ಜನರನ್ನು ಮಂಗ ಮಾಡುತ್ತಿದ್ದಾರೆ. ಆದರೆ ವಾಸ್ತವಾಂಶವೇನೆಂದರೆ, ಕೇಂದ್ರ ರೂಪಿಸಿದ ಕಾನೂನಿನ ಮೂಲಕ ರಾಜ್ಯ ಲೂಟಿ ಮಾಡಲು ಹೊರಟಿದೆ. ಲೂಟಿ ಮಾಡುತ್ತಿರುವುದು ರಾಜ್ಯ ಎನ್ನುವುದರಲ್ಲಿ ಯಾವುದೇ ಸಂದೇಹ ಬೇಡ. ಆದರೆ ಲೂಟಿಗೆ ಅವಕಾಶ ಮಾಡಿಕೊಟ್ಟಿದ್ದು ಕೇಂದ್ರದ ಕಾನೂನು ಎನ್ನುವ ಪರಿಜ್ಞಾನವನ್ನು ಎಲ್ಲರೂ ಇರಿಸಿಕೊಳ್ಳಬೇಕು. ಇಂತಹ ಅವಧಿಯಲ್ಲಿ ಕೇಂದ್ರ ಸರ್ಕಾರ ಅಥವಾ ಕೇಂದ್ರ ಹಣಕಾಸು ಇಲಾಖೆ ವ್ಯಾಪ್ತಿಗೆ ಬರುವ ಜಿಎಸ್‌ಟಿ ಮಂಡಳಿಯು ಮಧ್ಯ ಪ್ರವೇಶಿಸಿ, ಸ್ಪಷ್ಟನೆ ಕೊಡುವ ಕೆಲಸ ಮಾಡಬೇಕು. ಹಾಗೆಯೇ ರಾಜ್ಯ ಸರ್ಕಾರಿ ಅಧಿಕಾರಿಗಳು ಹಾಗೂ ವರ್ತಕರಿಗೆ ಮಾರ್ಗದರ್ಶನ ಮಾಡುವ ಕಾಯಕವಾಗಬೇಕು. ಅದನ್ನು ಬಿಟ್ಟು ರಾಜಕೀಯದ ಮೇಲಾಟಕ್ಕಾಗಿ ಚೆಂದ ನೋಡಿಕೊಂಡು ಜನರ ಸಂಕಟದಲ್ಲಿ ಮಜಾ ತೆಗೆದುಕೊಳ್ಳಬಾರದು. ವಿಪರ್ಯಾಸವೆಂದರೆ ಎಲ್ಲ ಸರ್ಕಾರಗಳು ಇದೇ ಕೆಲಸ ಮಾಡುತ್ತಿವೆ. ಅಂದ್ಹಾಗೆ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯ ಬಗ್ಗೆ ಹೋದಲ್ಲೆಲ್ಲ ಕೊಚ್ಚಿಕೊಳ್ಳುವ ಕೇಂದ್ರ ಸರ್ಕಾರವು, ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಪ್ರತಿ ಹಂತದಲ್ಲೀ ತರಬೇಕು. ಹಾಗೆಯೇ ಇದು ಕರ್ನಾಟಕ ಸರ್ಕಾರದ ಎಡವಟ್ಟೆಂದು ಕೇಂದ್ರ ಕೈತೊಳೆದುಕೊಳ್ಳಲಾಗದು. ಈ ಹಫ್ತಾ ವಸೂಲಿ ಕಾರ್ಯಕ್ರಮ ಶೀಘ್ರವೇ ದೇಶಾದ್ಯಂತ ವಿಸ್ತರಿಸಬಹುದು.‌ ಏಕೆಂದರೆ ಅವೈಜ್ಞಾನಿಕ ಉಚಿತ ಯೋಜನೆಗಳು ಹಾಗೂ ಭ್ರಷ್ಟರು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಯಾವುದೇ ವಿಚಾರಕ್ಕೆ ಬೆನ್ನು ತಟ್ಟಿಕೊಳ್ಳುತ್ತಿದ್ದರೆ ಪ್ರತಿ ಹಂತದಲ್ಲಿಯೂ ಅಲ್ಲಿ ಗಟ್ಟಿಯಾಗಿ ನಿಲ್ಲಬೇಕು. ಇಲ್ಲವಾದಲ್ಲಿ ನೋಟು ಅಮಾನ್ಯೀಕರಣದ ರೀತಿಯಲ್ಲಿ ಎಲ್ಲವನ್ನೂ ಪಾಲಿಸಿದ ಪ್ರಾಮಾಣಿಕ ಜನಸಾಮಾನ್ಯರ ಗತಿಯೇ ಇಲ್ಲಿಯೂ ಆಗುತ್ತದೆ. ದಯವಿಟ್ಟು ರಾಜಕೀಯ ಬಿಟ್ಟು ಸಾಮಾನ್ಯ ಜನರ ಪಿಕ್ ಪಾಕೆಟ್ ಮಾಡುವುದಕ್ಕೆ ತಡೆ‌ ಹಾಕಿ..


ಯುಪಿಐ ವ್ಯವಸ್ಥೆಗೆ ದೊಡ್ಡ ಪೆಟ್ಟು!

ಕಳೆದ 8-9 ವರ್ಷಗಳಿಂದ ನಾನು ತಿಂಗಳಿಗೆ ನೂರು ರೂಪಾಯಿ ಕೂಡ ನಗದು ವ್ಯವಹಾರ ಮಾಡುವುದಿಲ್ಲ. ಯಾರಿಗಾದರೂ ಟಿಪ್ಸ್‌ ನೀಡಲು ಅಥವಾ ಪ್ರಯಾಣ ಮಾಡುವಾಗ ಕಾರಿಗೆ ಹೂವಿಡಲು ಮಾತ್ರ ನಗದನ್ನು ಬಳಸುತ್ತೇನೆ. ನನಗೀಗ ಹಣದ ನೋಟುಗಳನ್ನು ಕಿಸೆಯಲ್ಲಿ ಇರಿಸಿಕೊಂಡು ಹೋಗುವುದೇ ಮರೆತುಹೋಗಿದೆ. ನಾನು ಮತ್ತೆ ನಗದು ವ್ಯವಹಾರಕ್ಕೆ ಬರುವಂತೆ ಒತ್ತಡ ಹೇರಲು ಶುರು ಮಾಡಿದರೆ, ಅಲ್ಲಿ ಎಟಿಎಂ ಕೇಂದ್ರಗಳಲ್ಲಿ ಪಿಕ್‌ ಪಾಕೆಟ್‌ ಮಾಡಲು ಬ್ಯಾಂಕ್‌ ಸಿಬ್ಬಂದಿ ಕಾಯುತ್ತಿದ್ದಾರೆ. ಒಂದು ಮಿತಿಯನ್ನು ಮೀರಿ ಎಟಿಎಂ ವ್ಯವಹಾರ ಮಾಡಿದರೆ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ. ಇದರ ಜತೆಗೆ ಸಾರ್ವಜನಿಕ ಸಾರಿಗೆಗಳಲ್ಲಿ ನಗದು ಇರಿಸಿಕೊಂಡು ಓಡಾಡಿದರೆ ಸಮಾಜದಲ್ಲಿ ಪಿಕ್‌ ಪಾಕೆಟರ್‌ಗಳ ಅಪಾಯ. ಇದಲ್ಲದೇ ಯುಪಿಐನಿಂದ ಹಣಕಾಸು ವ್ಯವಹಾರ ಸ್ಟ್ರೀಮ್‌ಲೈನ್‌ ಆಗುತ್ತಿದೆ. ತೆರಿಗೆ ಲೆಕ್ಕಾಚಾರಕ್ಕೂ ಸುಲಭವಾಗುತ್ತದೆ. ಅಂದ್ಹಾಗೆ ಮಿತಿಗಿಂತ ಹೆಚ್ಚು ದುಡಿಯುವವರು ತೆರಿಗೆ ಕಟ್ಟಲೇಬೇಕು. ತೆರಿಗೆ ಕಟ್ಟಬೇಕೆಂದು ಸಂಬಳ ಹೆಚ್ಚಾಗುವುದನ್ನು ಹೇಗೆ ನಿರಾಕರಿಸುವುದಿಲ್ಲವೋ, ಅದುವೇ ವ್ಯಾಪಾರ, ಉದ್ಯಮಕ್ಕೂ ಅನ್ವಯವಾಗಬೇಕು ಹಾಗೂ ಅನ್ವಯವಾಗುತ್ತದೆ.


ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೇಬೇಕು!

* ತರಕಾರಿ, ಹಣ್ಣು, ಹೂವಿಗೆ ಜಿಎಸ್‌ಟಿ ಇಲ್ಲವೆಂದಾದಲ್ಲಿ ಅದಕ್ಕೆ ಸಂಬಂಧಿಸಿದ ವ್ಯವಹಾರಸ್ಥರು ಹೇಗೆ ಕಾರ್ಯನಿರ್ವಹಿಸಬೇಕು?

* ಇಂದು ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ಬಂದಂತೆ, ನಾಳೆ ರೈತರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಬರಬಹುದು. ಇಂತಹ ಸಂದರ್ಭದಲ್ಲಿ ಅವರು ಹೇಗೆ ದಾಖಲೆಗಳನ್ನು ಹೊಂದಿಸಿಡಬೇಕು, ಯಾವ ರೀತಿ ವ್ಯವಹರಿಸಬೇಕು?

* ಏಕೆಂದರೆ ಯಶಸ್ವಿ ರೈತ ಡಿಕೆ ಶಿವಕುಮಾರ್‌ ರೀತಿಯಲ್ಲಿ ಸಾಮಾನ್ಯ ರೈತರು ದೇಶದ ಶ್ರೀಮಂತ ವಕೀಲರ ನೆರವು ಪಡೆದು ಕಾನೂನು ಹೋರಾಟ ಮಾಡಲು ಆಗುವುದಿಲ್ಲ.

* ಈ ದೇಶದ ಆರ್ಥಿಕತೆಯು ಇಂತಹ ಸಣ್ಣ-ಪುಟ್ಟ ವ್ಯಾಪಾರಿಗಳ ಮೇಲೆ ನಿಂತಿದೆ. ಹೀಗಾಗಿ ಇವರು ಸಿಎ ಜಗತ್ತಿನ ಮೂಲಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಇವರಿಗೆ ಸರಳೀಕೃತ ಜಿಎಸ್‌ಟಿ ಕಾನೂನು ಹಾಗೂ ವ್ಯವಸ್ಥೆ ಹೇಗೆ ಜಾರಿ ಮಾಡಬೇಕು?

* ಸರ್ಕಾರಕ್ಕೆ ತೆರಿಗೆ ಹಾಗೂ ಇಲಾಖೆಯಲ್ಲಿನ ಅಧಿಕಾರಿಗಳಿಗೆ ಲಂಚ ಬೇಕಾದಾಗಲೆಲ್ಲ ಇಂತಹ ಹಫ್ತಾ ವಸೂಲಿ ಕಾರ್ಯಕ್ರಮ ಮಾಡುವುದನ್ನು ಹೇಗೆ ಕಾನೂನುಬದ್ಧವಾಗಿ ತಡೆಗಟ್ಟತ್ತೀರಿ?

* ತೆರಿಗೆ ಭಯೋತ್ಪಾದನೆಗೆ ನಿಯಂತ್ರಣ ಹೇರಲು ರಾಜಕೀಯ ಹೇಳಿಕೆ ನೀಡುವುದನ್ನು ಬಿಟ್ಟು, ಕಾನೂನಿನ ಮೂಲಕ ಉತ್ತರವನ್ನು ಎಂದು ನೀಡುತ್ತೀರಿ?

* ಒಬ್ಬ ರೈತ, ತರಕಾರಿ ಹೂವು ಹಣ್ಣಿನ ವ್ಯಾಪಾರಿಯು ಹೇಗೆ ಜಿಎಸ್‌ಟಿ ವ್ಯವಹಾರ ಮಾಡಬೇಕು?


ಕೊನೆಯದಾಗಿ: ಈ ವಿಚಾರಕ್ಕೆ ಸಂಬಂಧಿಸಿ ನನಗಿದ್ದ ಒಂದಿಷ್ಟು ಕಾನೂನಾತ್ಮಕ ಹಾಗೂ ವ್ಯಾವಹಾರಿಕ ಗೊಂದಲ ನಿವಾರಿಸಿದ ರಂಗಸ್ವಾಮಿ ಸರ್‌ಗೆ ಧನ್ಯವಾದಗಳು. ಈ ವಿಚಾರದಲ್ಲಿ ಅವರು ತೋರುತ್ತಿರುವ ಕಾಳಜಿ ಹಾಗೂ ತಮ್ಮ ಮಿತಿಯಲ್ಲಿ ಅವರು ಮಾಡುತ್ತಿರುವ ಜಾಗೃತಿ ಕಾರ್ಯ ಪ್ರಶಂಸನೀಯ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top