ಹಸುಗಳು ಕಾಡಲ್ಲಿ ಮೇಯಬಾರದು ಎಂದರೆ...? ಕಾಮನ್‌ಸೆನ್ಸ್ ಇಲ್ಲದ ಕಾನೂನು

Upayuktha
0


ಒಂದು ದಿನ ದನಗಳನ್ನು ಮೇಯುವುದಕ್ಕೆ ಬಿಡಲಿಲ್ಲ ಅಂದ್ರೆ, ಅವು 'ಅಂಬಾ' ಅಂತ ಕೂಗುವುದನ್ನು ಪತ್ರೊಡೆ ತಿನ್ನುವಾಗ ನಿಮ್ಮ ಕಿವಿಗಳು ಕೇಳಬೇಕು. ಅಷ್ಟೆ.


ಯಾರೋ ನಗರ ಪರಿಸರವಾದಿಗಳು ಹೇಳಿದ ಅಭಿಪ್ರಾಯಕ್ಕೆ ಹದಿನಾರಾಣೆ ಮಹತ್ವ ಕೊಡುವುದಾದರೆ, ಮಲೆನಾಡ ನೆಲವಾಸಿಗಳ ಅಭಿಪ್ರಾಯಕ್ಕೂ ನಾಲ್ಕಾಣೆ ಮಹತ್ವವನ್ನಾದರೂ ಕೊಡಲಿ.


ಶಾಸಕರು, ಮಿನಿಸ್ಟರ್‌ಗಳೇ ಮಲೆನಾಡ ಜನರ ಮಾತು ಕೇಳಲ್ಲ, ಇನ್ನು ಮೂಕ ದನಗಳಿಗೆ "ಕಾಡಿಗೆ ಹೋಗಿ ಮೆಯ್ಯಬೇಡಿ, ರಸ್ತೆ ಬದಿ ಇರುವ ಪ್ಲಾಸ್ಟಿಕ್ ತ್ಯಾಜ್ಯ ತಿನ್ಕಂಡು ಸಂಜೆ ಮನೆಗೆ ಬನ್ನಿ" ಅಂತ ಹೇಳಿದ್ರೆ ಕೇಳ್ತಾವಾ!?


ಹೈನುಗಾರಿಕೆಗೆ ಅಂತ ಇದ್ದ ಗೋಮಾಳ, ಕಾನು, ಸೊಪ್ಪಿನ ಬೆಟ್ಟವೂ ಈಗ ಅರಣ್ಯ ಅಂತಾಗಿದೆ. "ಅಲ್ಲಿಗೂ ಹೋಗ್ಬೇಡಿ" ಅಂತ ದನಗಳಿಗೆ ಹೇಳಿದರೆ, ದನಗಳು:

"ಆವ ಜಾಗದಿ ಮೇಯಲಮ್ಮ

ಆವ ಸೊಪ್ಪನು ತಿನ್ನಲಮ್ಮ

ಆವ ಸ್ಥಳದಲು ತಿರುಗಿ ಬದುಕಲು ಎಮಗೆ ಆಸ್ಪದ ಇಲ್ಲವೇ?"

ಅಂತ ಕಣ್ಣಲ್ಲಿ ನೀರು ಸುರಿಸಿ ಕೇಳಿದರೆ, ಆ ದನ ಸಾಕಿದವರು ಏನ್ ಸಾಯಬೇಕು!?


ಅಷ್ಟಕ್ಕೂ ಹುಲ್ಲು, ಮೇವು ಬೆಳೆಯುತ್ತಿದ್ದ ಕಾಡಂಚಿನ ಬೋಳು ಗುಡ್ಡಗಳಲ್ಲೂ ಈಗ ಅಕೇಶಿಯ, ನೀಲಗಿರಿಯಂತಹ ಪರಿಸರಕ್ಕೆ, ಜೀವ ವೈವಿದ್ಯಕ್ಕೆ ಮಾರಕವಾದ ಮರ ಬೆಳಸಿ ಅರಣ್ಯ ಇಲಾಖೆಯೇ ಬಿಸನೆಸ್ ಮಾಡ್ತಾ ಇದೆ!


ಸರಕಾರವು ಮಲೆನಾಡ ನೆಲವಾಸಿಗಳನ್ನು ಒಕ್ಕಲೆಬ್ಬಿಸಲು ಹಣೆಯುತ್ತಿರುವ ಅನೇಕ ಕುತಂತ್ರ ಮಾರ್ಗಗಳಲ್ಲಿ ಕಾಡಿನಲ್ಲಿ ದನಗಳು ಮೇಯುವಂತಿಲ್ಲ ಎನ್ನುವುದು ಮತ್ತೊಂದು ಹೊಸ ತಂತ್ರ.


ಮಲೆನಾಡಿನ ಬೇಸಿಕ್ ನಾಲೆಜ್ ಇಲ್ಲದ ಶಾಸಕರು, ಸಚಿವರು, ಅಧಿಕಾರಿಗಳು ಮಳೆಗಾಲದ ಒಂದೆರಡು ವಾರ, ಬೆಟ್ಟಂಬೇಸಿಗೆಯಲ್ಲಿ ಎರಡು ವಾರ ಮಲೆನಾಡಿನ ಕಾಡಂಚಿನ ಜನರೊಟ್ಟಿಗೆ ಇದ್ದು, ಇಲ್ಲಿನ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ನಂತರ ಕಾನೂನು ರೂಪಿಸಲಿ. (ಹಾಗಂತ AC ಕಾರಲ್ಲಿ ಬಂದು ಜಂಗಲ್ ರೆಸಾರ್ಟ್‌, ಹೈಟೆಕ್ ಹೋಟೆಲ್, ಪ್ರವಾಸಿ ಮಂದಿರಗಳಲ್ಲಿ ವಾಸ್ತವ್ಯ ಮಾಡಿದರೆ ಗೊತ್ತಾಗಲ್ಲ!) 


ಅಲ್ಲಿಯವರೆಗೆ ದನ ಕಾಡಲ್ಲಿ ಮೇಯಬಾರದು, ನವಿಲು ಗರಿ ಇಟ್ಟುಕೊಂಡರೆ ಕೇಸ್ ಹಾಕ್ತೀವಿ, ಅರ್ಧ ಎಕರೆ ಒತ್ತುವರಿಗೂ ನೋಟೀಸ್ ಕೊಡ್ತೀವಿ ಅಂತ ಹೆದರಿಸುವ ಪೇಪರ್ ಸ್ಟೇಟ್‌‌ಮೆಂಟ್‌ಗಳು ಮಲೆನಾಡಿನಲ್ಲಿ ಹಾಸ್ಯದ ವಿಚಾರಗಳಾಗಿರುತ್ತವೆ. ಕಾಮನ್ ಸೆನ್ಸ್ ಇಲ್ಲದ ಶಾಸಕರು ಸಚಿವರು ಯಕ್ಷಗಾನದ ಕಾಮಿಡಿ ಜೋಕರ್ ಪಾತ್ರವಾಗಿ ಕಾಣುತ್ತಾರೆ!!


ಮಲೆನಾಡಿನ ಕಾಡಿನಲ್ಲಿ ತಿನ್ನಲು ಹಲಸು, ಹೆಬ್ಬಹಲಸು, ಮಾವು ಯಾವುದೂ ಇಲ್ಲವಾಗುತ್ತಿದೆ. ಅವೆಲ್ಲ ನಾಟ, ಪೀಠೋಪಕರಣಗಳಾಗಿ ನಗರದ ಐಷಾರಾಮಿ ಜೀವಿಗಳ ಮನೆ ಸೇರಿದೆ. ಇದಕ್ಕೆ ಕಾರಣ ನಮ್ಮನೆಗಳ ಮೂಕ ದನ ಕರುಗಳಲ್ಲ! ಅವು ಕಾಡಂಚಿನಲ್ಲಿ ಹೋಗಿ ಮೆಂದಿದ್ದು ಕಾರಣ ಅಲ್ಲ.  ಮೆಂದವರು, ಮೇಯುತ್ತಿರುವವರು ಅರಣ್ಯ ಇಲಾಖೆಯಲ್ಲೇ ಇದ್ದಾರೆ.  


ಕಾಡಲ್ಲಿ ತಿನ್ನುವುದಕ್ಕೆ ಕಾಡು ಪ್ರಾಣಿಗಳಿಗೆ ಏನೂ ದೊರೆಯುತ್ತಿಲ್ಲ. ಮಂಗ, ಅಳಿಲು, ಪಕ್ಷಿಗಳು ಮರದಿಂದ ಮರಕ್ಕೆ ಹಾರಿ ಬಂದರೆ, ಆನೆ ಕಾಡುಕೋಣ, ಚಿರತೆ, ಹಂದಿಗಳು ತಾವೇ ರಸ್ತೆ ನಿರ್ಮಿಸಿಕೊಂಡು ಕಾಡಂಚಿನ ಮನೆ, ತೋಟ, ಗದ್ದೆಗಳನ್ನು ಧ್ವಂಸ ಮಾಡುತ್ತಿವೆ. ಜೀವಗಳನ್ನೇ ಬಲಿ ಪಡೆಯುತ್ತಿವೆ. ಸತ್ತವರ ಕುಟುಂಬಕ್ಕೆ 15 ಲಕ್ಷದ, ಮೂರು ಬೈ ಆರುವರೆ ಇಂಚಿನ ಚಕ್ ಹಂಚಿ ಕೈ ತೊಳೆಯುವ ಕೆಲಸ ಬಿಟ್ರೆ ಸರಕಾರದಿಂದ ಯಾವ ಸಮಸ್ಯೆಗೂ ಯಾವ ಕರ್ಮದ ಶಾಶ್ವತ ಪರಿಹಾರ ಆಗುತ್ತಿಲ್ಲ.


ಅಡಿಕೆ ತೋಟಕ್ಕೆ ಆಗುತ್ತಿರುವ ಕಾಟ ತಾಳಲಾರದೆ, ಅಲ್ಯಾರೋ  ಮಂಗಗಳನ್ನು ಹೊಡೆದರಂತೆ, ಕೆಂಜಳಿಲು ಹೊಡೆದು ತಿಂದರಂತೆ, ನೆಟ್ಟ ಸಣ್ಣ ಅಡಿಕೆ ಗಿಡಗಳನ್ನು ತಿಂದಿದ್ದಾವೆ ಅಂತ ಅದ್ಯಾರೋ 30 ರುಪಾಯಿಯ ತೆಳೂ ತಂತಿ ತಂದು ಉರುಳು ಕಟ್ಟಿ ಮೊಲ ಹೊಡೆದು, ಕೊಂದ ಪಾಪವನ್ನು ತಿಂದು ಪರಿಹಾರ ಮಾಡಿಕೊಂಡಿದ್ದಾರಂತೆ! ಐದು ಹುಲಿ ಸತ್ತ ವಿಚಾರ ಸುದ್ದಿ ಆಗುತ್ತೆ, ಮಂಗ, ಅಳಿಲು, ಮೊಲ, ಪಕ್ಷಿಗಳು ಸತ್ತರೆ ಪಕ್ಕದಲ್ಲಿದ್ದ ಮರಕ್ಕೂ ತಿಳಿಯುವುದಿಲ್ಲ.


ಮಲೆನಾಡಿನಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಕಾರಣ ಆಗಿರುವುದು ಅರಣ್ಯ ನೀತಿಗಳು, ಅರಣ್ಯ ಸಚಿವರ ಮತ್ತು ಅರಣ್ಯ ಅಧಿಕಾರಿಗಳ ಕಾಮನ್‌ಸೆನ್ಸೂ ಇಲ್ಲದ ಅಸಂಬದ್ಧ ಕಾನೂನುಗಳು.


ಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕಿಂತ ಹೆಚ್ಚಾಗಿ ಅಧಿಕಾರ ವ್ಯವಸ್ಥೆ ಮತ್ತು ನೆಲವಾಸಿಗಳ ಸಂಘರ್ಷವೇ ಹೆಚ್ಚು ದೊಡ್ಡದಾಗುತ್ತಿದೆ.


ಮಲೆನಾಡಿನ ನೆಲವಾಸಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಅರ್ಥ ಮಾಡಿಕೊಂಡು ಮೊದಲ ಆದ್ಯತೆಯೊಂದಿಗೆ ಪರಿಹಾರ ಕೊಡಿಸದೆ, AC ಕೋಣೆಯಲ್ಲಿ ಕುಳಿತು ದಿನಕ್ಕೊಂದು ಕಾನೂನು ಮಾಡಿದರೆ ಮಲೆನಾಡಿನಲ್ಲಿ ದನ ಕರುಗಳೂ ಬದುಕಿ ಉಳಿಯುವುದಿಲ್ಲ, ಕಾಟ ಕೊಡುವ ಕಾಡು ಪ್ರಾಣಿಗಳೂ ಉಳಿಯಲಾರವೇನೋ!? ಈಗ ಸಾಯುತ್ತಿರುವುದು ಕೆಂಜಳಿಲು, ಮೊಲ, ಮಂಗಗಳಾದರೆ ಮುಂದೆ?


ಬಾವಿಗೆ ಬಿದ್ದ ಮಂಗ, ಬಾವಿಯ ನೀರು ಏರುತ್ತಿದ್ದಂತೆ ತನ್ನ ಮರಿಯನ್ನು ಎತ್ತಿ ತಲೆಯ ಮೇಲೆ ಇಟ್ಟುಕೊಳ್ಳುತ್ತದೆ. ಬಾವಿಯ ನೀರು ಇನ್ನೂ ಏರಿದರೆ... ತಲೆಯಮೇಲೆ ಎತ್ತಿ ಹಿಡಿದ ತನ್ನದೇ ಮರಿಯನ್ನು ನೀರಿನ ಕೆಳಗೆ ಕಾಲಡಿ ಹಾಕಿಕೊಂಡು ತಾನು ಉಳಿಯುವ ಪ್ರಯತ್ನ ಮಾಡುತ್ತದೆ.  ಇದು ಕತೆ. ಇದೇ ಕತೆ ಮಲೆನಾಡ ನೆಲವಾಸಿಗಳದ್ದೂ ಆಗುವಂತೆ ಅರಣ್ಯ ಇಲಾಖೆ ಮಾಡದಿರಲಿ. ಮಲೆನಾಡ ನೆಲವಾಸಿಗಳು ಎಲ್ಲ ಪ್ರಾಣಿಗಳ ಸಹಯೋಗದಲ್ಲೇ ಬದುಕುತ್ತಿರುವುದು. ಸ್ವತಂತ್ರವಾಗಿ ಬದುಕಲಾಗದಂತೆ ಅರಣ್ಯ ಇಲಾಖೆ ತನ್ನ ಈಗಿರುವ ನೀತಿ, ಹೊಸ ಕಾನೂನುಗಳ ಮೂಲಕ ಕಾಟ ಕೊಡುತ್ತಾ ಹೋದರೆ ಆಗುವ ಪರಿಣಾಮದ ಬಗ್ಗೆ ಸರಕಾರದ ಒಳಗಿರುವವರು, ಹತ್ತಿರ ಇರುವವರು ಯೋಚನೆ ಮಾಡಲಿ.


ಕಾಡು ಪ್ರಾಣಿಯೂ ಉಳಿಯಲ್ಲ, ಜೀವ ವೈವಿದ್ಯವೂ ಉಳಿಯಲ್ಲ, ಪರಿಸರವೂ ಉಳಿಯಲ್ಲ ಎನ್ನುವಂತಹ ಪರಿಸ್ಥಿತಿಯನ್ನು ಸರಕಾರ ಮಾಡದಿರಲಿ.


ಮಲೆನಾಡ ನೆಲವಾಸಿಗಳನ್ನು ಉಸಿರು ಕಟ್ಟುತ್ತಿರುವ ಕತೆಯ ಮಂಗನಂತೆ ಮಾಡಬೇಡಿ.  ಮಂಗ ಮಾಡಬೇಡಿ.


ಸಚಿವರು, ಶಾಸಕರು ಪಕ್ಷದ ಪಟಾಲಂ ಬಿಟ್ಟು ನಿಜವಾದ ಪರಿಸರ ಕಾಳಜಿ, ಕಾಮನ್‌ಸೆನ್ಸ್ ಇರುವ ತಜ್ಞರ ಜೊತೆ ಮಲೆನಾಡಿಗೆ ಬಂದು ನಾಲ್ಕಾರು ದಿನ ವಾಸ್ತವ್ಯ ಮಾಡಲಿ. ಬರುವಾಗ ಹೆಲಿಕ್ಯಾಪ್ಟರ್‌ನಲ್ಲಿ ಬಾಳೆ ಹೊನ್ನೂರಿಗೆ ಬಂದು ಅಲ್ಲಿಂದ ಕಾರಲ್ಲಿ ಸುತ್ತುವುದು ಬೇಡ! ಊರಿನ ಮಧ್ಯದ ಹೈವೇಯಲ್ಲಿ ಪಾದ ಯಾತ್ರೆಯೋ ಬೇಡ! ಚಿಕ್ಕಮಗಳೂರಿನಿಂದಲೇ ಸಾಮಾನ್ಯ ಕಾರಿನಲ್ಲಿ (ಕೂಲಿಂಗ್ ಗ್ಲಾಸ್ ಇಲ್ಲದ!) ಅದ್ಭುತವಾದ ರಸ್ತೆಯಲ್ಲಿ ಪ್ರಯಾಣಿಸಿ ಬರಲಿ.  ಕಾಡಂಚಿನ ಸಾಮಾನ್ಯ ನೆಲವಾಸಿಗಳ ಮನೆಯಲ್ಲೇ ಉಳಿಯಿರಿ. ಅವರನ್ನು ವಿಶ್ವಾಸಕ್ಕೆ ಪಡೆದು, ಕಷ್ಟ ಸುಖ ಮಾತಾಡುತ್ತ, ಕಳಲೆ ಹುಳಿ, ಪತ್ರೊಡೆ ಪಲ್ಯ ಸವಿದು ಚರ್ಚೆ ಮಾಡೋಣ! ಅಂತ ಬನ್ನಿ. (ನಾಳೆ ರೈತರು ಕಳಲೆ ತಿನ್ನುವಂತಿಲ್ಲ, ಮರಗೆಸು ಮುಟ್ಟುವಂತಿಲ್ಲ ಅಂತ ಇನ್ನೊಂದು ಕಾನೂನು ಮಾಡಬೇಡಿ ಮಾರ್ರೆ!)


ಒಂದು ದಿನ ದನಗಳನ್ನು ಮೇಯುವುದಕ್ಕೆ ಬಿಡಲಿಲ್ಲ ಅಂದ್ರೆ, ಅವು 'ಅಂಬಾ' ಅಂತ ಕೂಗುವುದನ್ನು ಪತ್ರೊಡೆ ತಿನ್ನುವಾಗ ನಿಮ್ಮ ಕಿವಿಗಳು ಕೇಳಬೇಕು. ಅಷ್ಟೆ. ಬರ್ತೀರಾ?


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top