ಮೆಟಾ ಎಐ ಚಿತ್ರ
ಅಂದು ಶುಕ್ರವಾರ, ತರಗತಿಗಳನ್ನೆಲ್ಲಾ ಮುಗಿಸಿ ಕಾಲೇಜಿನಿಂದ ಮನೆಗೆ ತುಸು ಬೇಗ ಹೊರಟೆ. ಹಲವು ದಿನಗಳ ನಂತರ ನನ್ನೂರಿಗೆ ಹೋಗುವ ಬಸ್ ಸಿಕ್ಕಿತು. ಈ ಬಸ್ ಹತ್ತಿ ಹೋದರೆ ಮತ್ತೇ ಜಂಕ್ಷನ್ ನಲ್ಲಿ ಇಳಿಬೇಕೆಂದೇನಿಲ್ಲ ಸೀದಾ ನಮ್ಮ ಊರಿಗೆ ಹೋಗಬಹುದು ಎಂದು ಭಾವಿಸಿ ಆ ಬಸ್ ನಲ್ಲಿ ಕುಳಿತೆ. ಆ ಬಸ್ ನಲ್ಲಿ ಕುಳಿತಾಗ ಏನೋ ಒಂದು ಹೇಳತೀರದ ಸಂತಸ. ಕಾರಣ ಏನೆಂದು ನಾ ಅರಿಯಲಾರೆ.
ಹೀಗೆ ನಾ ನನ್ನ ಗೆಳತಿಯೊಂದಿಗೆ ಕುಳಿತು ಮಾತನಾಡುತ್ತಿದ್ದೆವು. ಅದೇ ಸಮಯಕ್ಕೆ ಎಳೆ ವಯಸ್ಸಿನ ಹುಡುಗಿಯು ನೋಟ್ಸ್ ಪುಸ್ತಕಗಳಿಗೆ ಅಂಟಿಸುವ ಸ್ಟಿಕರ್ ಅನ್ನು ಮಾರುತ್ತಾ ಬಂದಳು. ಅವಳನ್ನು ಕಂಡಾಗ ಅಯ್ಯೋ ಅನಿಸುತ್ತಿತ್ತು. ಏಕೆಂದರೆ ಅವಳು ತೀರಾ ಬಡತನವನ್ನು ಅನುಭವಿಸುತ್ತಿರುವಂತೆ ನನಗೆ ಕಂಡಳು. ಅವಳು, “ಹೊಟ್ಟೆ ಹಸಿವಮ್ಮ,ಬೆಳಗಿನಿಂದ ಏನೂ ತಿನ್ನಲಿಲ್ಲ, ಈ ಸ್ಟಿಕರ್ ಗೆ ಇಪ್ಪತ್ತು ರೂಪಾಯಿ ತಗೋಳಿ ಅಮ್ಮಾ, ನನ್ನ ಹಸಿವನ್ನು ನೀಗಿಸಬೇಕಮ್ಮ ಎಂದಳು.
ಬಸ್ಸಿನಲ್ಲಿ ಕುಳಿತ ಕೆಲವು ಅವಿವೇಕಿಗಳು ಆಕೆಯ ಆ ಸ್ಥಿತಿಯನ್ನು ಕಂಡು ನಕ್ಕರು, ಇನ್ನೂ ಕೆಲವರು ನಿದ್ದೆ ಮಾಡಿರುವವರಂತೆ, ಕಾಲ್ ಅಲ್ಲಿ ಮಾತನಾಡುತ್ತಿರುವವರಂತೆ ನಟಿಸಿದರು. ಮತ್ತೂ ಕೆಲವರು ನೋಡಿಯೂ ನೋಡದವರಂತೆ ಸುಮ್ಮನೆ ಕುಳಿತರು. ಹಸಿವಿನ ಬೆಲೆ ಅರಿತವರು ಆ ಸ್ಟಿಕರ್ ಪ್ಯಾಕೆಟ್ ಖರೀದಿಸಿ ಅವಳಿಗೆ ಸಹಾಯ ಮಾಡಿದರು. ಅವಳು ನನ್ನ ಬಳಿ ಬಂದಾಗ ನಾನು ಅವಳಿಂದ ಆ ಸ್ಟಿಕರ್ ಪಡೆದುಕೊಂಡೆ. ಅವಳ ಆ ಕಣ್ಣುಗಳು ಹೇಳುತ್ತಿದ್ದವು ಅವಳೆಷ್ಟೊಂದು ಹಸಿವಿನಿಂದ ಬಳಲುತ್ತಿದ್ದಳೆಂದು. ನನಗೆ ಆಶ್ಚರ್ಯ ಎನಿಸಿದ್ದು ಒಂದೇ ಮನುಷ್ಯನಿಗೆ ಮನುಷ್ಯತ್ವ ಎಂಬುದಿಲ್ಲವೇ?.
‘ದುಡ್ಡಿದ್ರೆ ದುನಿಯಾ' ಎಂಬ ಮಾತಿನ ಹಾಗೆ ನಾವೆಲ್ಲಾ ತಿನ್ನೋದಕ್ಕೆ ಅಂತ ಎಷ್ಟೊಂದು ಹಣ ವೆಚ್ಚ ಮಾಡ್ತೇವೆ. ನಮಗೆಲ್ಲ ಫೈವ್ ಸ್ಟಾರ್ ಹೋಟೆಲ್, ರೆಸ್ಟೋರೆಂಟ್ ಗಳೇ ಬೇಕು. ಮತ್ತೆ ಅಲ್ಲಿ ಆಹಾರವನ್ನು ಆರ್ಡರ್ ಮಾಡಿ, ಅದರಲ್ಲಿ ಹೆಚ್ಚು ಎಂದರೆ ಕಾಲು ಭಾಗದಷ್ಟು ತಿಂದು ಉಳಿದದ್ದನ್ನು ಅಲ್ಲೇ ಬಿಟ್ಟು, ನೂರಾರು ರೂಪಾಯಿಯ ಬಿಲ್ ಕಟ್ಟಿ ಬರುತ್ತೇವೆ. ಆದರೆ ಇನ್ನೂ ಕೆಲವರಿಗೆ ಅದೇ ಈ ಹುಡುಗಿಯ ಸ್ಥಿತಿಯಲ್ಲಿರುವವರು ಒಂದು ಒಂದು ರೂಪಾಯಿಯ ಹಾಗೂ ಪ್ರತಿ ಅನ್ನದ ಅಗುಳಿನ ಬೆಲೆಯನ್ನು ತಿಳಿದಿರುತ್ತಾರೆ. ಓದಿ ಓದಿ ಜ್ಞಾನಿಗಳಾದ ನಾವುಗಳು ದುಡ್ಡು ಮತ್ತು ಆಹಾರದ ಬೆಲೆಯನ್ನು ತಿಳಿಯುವಲ್ಲಿ ಅಜ್ಞಾನಿಗಳಾಗಿದ್ದೇವೆ ಎಂದು ನನಗನಿಸುತ್ತಿದೆ.
- ಕೃತಿಕಾ ಕಣಿಯಾರು
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ