ರಾಣಿಗೆ ರಾಷ್ಟ್ರ ಗೌರವ ಸಲ್ಲಿಸಿದ ರಾಷ್ಟ್ರಪತಿ ಮುರ್ಮು
ಮೂಡುಬಿದಿರೆ: ತನ್ನ ರಾಜಕೀಯ ಮುತ್ಸದ್ದಿತನ, ಶೌರ್ಯ, ವಿದೇಶಿ ವ್ಯವಹಾರದ ಮೂಲಕ ಕನ್ನಡ ನಾಡಿಗೆ ಕೀರ್ತಿಯ ಕಳಶವಿಟ್ಟ ಕಾಣುಮೆಣಸಿನ ರಾಣಿ ಖ್ಯಾತಿಯ ರಾಣಿ ಚೆನ್ನ ಬೈರಾದೇವಿಯ ಅಂಚೆ ಚೀಟಿಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಗುರುವಾರ (ಜುಲೈ 24) ತಮ್ಮ ರಾಷ್ಟ್ರಪತಿ ಭವನದಲ್ಲಿ ನಡೆಸ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು.
ನಾಡಿನ ರಕ್ಷಣೆಗಾಗಿ ಆಕೆ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯಾತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜ ನೀತಿಗಳನ್ನು ಮುಕ್ತಕಂಠದಿಂದದ ಪ್ರಶಂಶಿಸಿದ ಅವರು ಧೈರ್ಯ ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು ಎಂದರು. ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಅದರ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳನ್ನು ಅವರು ಅಭಿನಂದಿಸಿದರು.
ಸ್ವಾಗತಿಸಿದ ರಾಜ್ಯಸಭಾ ಸದಸ್ಯ. ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು“ರಾಜ್ಯ ವಿಸ್ತರಣೆ ಗಿಂತ ಪ್ರಜೆಗಳ ಬದುಕಿಗೆ ಸುಖ ಸೌಲಭ್ಯ ರಾಣಿಯ ರಾಜ ನೀತಿಯಾಗಿತ್ತು. ವಾಣಿಜ್ಯ ವ್ಯವಹಾರದಲ್ಲಿ ನಿಷ್ಣಾತೆಯಾಗಿದ್ದ ಆಕೆ ತನ್ನ ರಾಜ್ಯದಿಂದ, ಕರಿ ಮೆಣಸು, ದಾಲ್ಚಿನ್ನಿ, ಶುಂಠಿ, ಏಲಕ್ಕಿ, ಗಂಧ, ಅಕ್ಕಿ, ಬೆಲ್ಲ, ದಂತ ಮುಂತಾದ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿಅಪಾರ ಪ್ರಮಾಣದ ವಿದೇಶೀ ವಿನಿಮಯ ಗಳಿಸಿದ್ದಳು. ರಾಜಕೀಯವಾಗಿ ವೈರ ಸಾಧಿಸುತ್ತಿದ್ದ ಪೋರ್ಚುಗೀಸರೊಡನೆ ಉತ್ತಮ ವ್ಯಾವಹಾರಿಕ ಸಂಬಂಧ ಇರಿಸಿಕೊಂಡು, ಅವರಿಂದಲೇ "ರೈನಾದ ಪೆಮೆಂಟಾ" ಅರ್ಥಾತ್ "ಕರಿಮೆಣಸಿನ ಅರಸಿ" ಎಂಬ ಬಿರುದು ಪಡೆದಿದ್ದಳು.ಅಂಥ ಹೆಮ್ಮೆಯ ವೀರ ವನಿತೆಗೆಇಂದು ಅಂಚೆ ಚೀಟಿಯ ಮೂಲಕ ದೇಶದದೊಡ್ಡಗೌರವ ಪ್ರಾಪ್ತವಾಗುತ್ತಿದೆ ಎಂದರು.
ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ತುಳುನಾಡಿನ ರಾಣಿ ಚೆನ್ನಭೈರಾದೇವಿಯ ಇತಿಹಾಸ, ವೀರತ್ವ ಹಾಗೂ ಸಮಾಜಮುಖಿ ಕಾರ್ಯಗಳನ್ನು ವಿವರಿಸಿ ಗೌರವ ಸೂಚಿಸಿದರು.
ಕೇಂದ್ರ ಸಚಿವ ಪ್ರಹ್ಲಾದಜೋಷಿ ರಾಣಿ ಚೆನ್ನಭೈರಾದೇವಿಯ ಶೌರ್ಯ, ದೃಢ ನಿರ್ಧಾರ ಮತ್ತು ಆಡಳಿತ ಕೌಶಲ್ಯವನ್ನು ಸ್ಮರಿಸಿದರು. ಪೋರ್ಚುಗೀಸ್ ಬಲಗಳ ವಿರುದ್ಧ ನಿರ್ಭೀತಿಯಿಂದ ಪ್ರತಿರೋಧಿಸಿದ ಆಕೆ ರಾಷ್ಟ್ರೀಯ ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ದೆಹಲಿಯ ಅಂಚೆ ಮಹಾನಿರ್ದೇಶಕ ಅಖಿಲೇಶ್ ಕುಮಾರ್ ಪಾಂಡಿ, ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಸಿಂಗ್, ಉದ್ಯಮಿ ಮಹಾವೀರ ಕುಂದೂರ್, ಚೆನ್ನಬೈರಾದೇವಿ ಕಾದಂಬರಿಯ ಲೇಖಕ ಡಾ. ಗಜಾನನ ಶರ್ಮ, ಸಂಯೋಜಕ ಹುಬ್ಬಳ್ಳಿಯ ಖ್ಯಾತ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ, ಕಾರ್ಯಕ್ರಮ ಸಂಯೋಜಕ ಡಾ. ಬಿ.ಪಿ. ಸಂಪತ್‌ಕುಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತುಇತರ ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.
ತುಳುನಾಡ ರಾಣಿಯರಿಗೆ "ಎಕ್ಸಲೆಂಟ್ " ಗೌರವ!
ಇಡೀ ಭರತಖಂಡದಲ್ಲಿ 1552 ರಿಂದ 1606 ರವರೆಗೆ 54 ವರ್ಷಗಳ ಸುದೀರ್ಘಕಾಲ ರಾಜ್ಯಭಾರ ನಡೆಸಿದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯನ್ನು ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಪ್ರಾಯೋಜಿಸಿತ್ತು. ಈ ಹಿಂದೆ ಪೋರ್ಚುಗೀಸರ ವಿರುದ್ಧ ಸಮರ ಸಾರಿ ಗಮನ ಸೆಳೆದ ಸಾಹಸಿ ಕರಾವಳಿಯ ರಾಣಿ ಅಬ್ಬಕ್ಕನ ಅಂಚೆ ಚೀಟಿಯನ್ನೂ ಎಕ್ಸಲೆಂಟ್ ಪ್ರಾಯೋಜಿಸಿತ್ತು. ಅದನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದ್ದರು.
ಇತಿಹಾಸದ ಗರ್ಭದಲ್ಲಿ ಮರೆಯಾಗಿದ್ದ ವೀರ ಚೇತನಗಳಿಗೆ ಅಂಚೆ ಚೀಟಿಯ ಮೂಲಕ ಹೊಸತಲೆಮಾರಿನ ಜನತೆಗೆ ರಾಣಿಯರ ಸ್ವಾಭಿಮಾನ, ರಾಷ್ಟ್ರಾಭಿಮಾನ, ಸಾಧನೆಗಳನ್ನು ಪರಿಚಯಿಸಿದಂತಾಗಿದೆ.
ರಾಣಿಯ ಪೌರುಷ, ರಾಜನೀತಿ, ದೂರದೃಷ್ಟಿಯ ಆಡಳಿತ, ನಾಡಪ್ರೇಮ, ಸಂಸ್ಕೃತಿ ಪ್ರೀತಿ ಮೊದಲಾದ ನೆನಪುಗಳನ್ನು ಪುನರ್ ಸ್ಥಾಪಿಸುವ ರಾಷ್ಟ್ರಭಕ್ತಿಯ ಪ್ರತೀಕವಾಗಿಯೂ ಗಮನಸೆಳೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ