ದೇಶ ಭಾಷೆ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ದೇಶದ ಬಗ್ಗೆ ಅಭಿಮಾನ, ಭಾಷೆಯ ಬಗ್ಗೆ ಪ್ರೀತಿ, ಉಡುಗೆ ತೊಡುಗೆಗಳ ಬಗ್ಗೆ ಪ್ರತಿಯೊಬ್ಬರಿಗೆ ಆದರದ ಭಾವ ಬೇಕು. ಆಚಾರ- ವಿಚಾರದ ಬಗ್ಗೆ ಗೌರವ ಬೇಕು. ಆದ್ದರಿಂದ  ಸಂಸ್ಕøತಿಯ ಸಂಕೇತವಾಗಿರುವ ಭಾಷೆಯನ್ನು ಶ್ರೀಮಂತಗೊಳಿಸುವ ಪ್ರಯತ್ನ ಈ ಚಾತುರ್ಮಾಸ್ಯದಲ್ಲಿ ನಡೆಯುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.


ಸ್ವಭಾಷಾ ಚಾತುರ್ಮಾಸ್ಯ ವ್ರತಾರಂಭದಂದು ನಡೆದ ಧರ್ಮಸಭೆಯನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು. ನಮ್ಮ ಪೂರ್ವಜರು ಬಳಸುತ್ತಿದ್ದ ಶಬ್ದಗಳನ್ನು ಹೊರತೆಯಬೇಕು. ಮಾತೃಭಾಷೆಯನ್ನು ಮರೆತವರು ಮಾತಾ ಪಿತೃಗಳನ್ನೂ ಕಡೆಗಣಿಸುವ ದೂರವಿಲ್ಲ ಎಂದು ಎಚ್ಚರಿಸಿದರು, ಚಾತುರ್ಮಾಸ್ಯದಲ್ಲಿ ಪುಣ್ಯ ಸಂಪಾದನೆ ಮಾಡಿ ಜೀವನದಲ್ಲಿ ಒಳ್ಳೆಯ ಮಾರ್ಗ ಕಂಡುಕೊಳ್ಳಿ ಎಂದು ಕಿವಿಮಾತು ಹೇಳಿದರು.


ಮಾತೃಭಾಷೆಯನ್ನೇ ಮರೆತ ಸ್ಥಿತಿಯಲ್ಲಿ ನಾವಿದ್ದೇವೆ. ಭಾಷೆಯನ್ನು ಮರೆತು ಬಹುದೂರ ಸಾಗಿದ್ದೇವೆ. ಇದು ನಿಜಕ್ಕೂ ಶೋಚನೀಯ ಸ್ಥಿತಿ. ನಮ್ಮ ಭಾಷೆಯನ್ನೇ ಮಾತನಾಡಲು ಸಾಧ್ಯವಾಗದ ಸ್ಥಿತಿ ನಾಚಿಕೆಗೇಡು. ಭಾರತತ್ವವನ್ನೇ ಕಳೆದುಕೊಂಡು ಯಾವ ಸಾಧನೆಯೂ ಮಾಡಲಾಗದು. ಪೇಟೆಗಳಲ್ಲಿ ಸಂಸ್ಕøತಿಯ ಬದಲು ವಿಕೃತಿಯೇ ಮೆರೆಯುವ ವಿಕಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದರು.


ಹೆಚ್ಚು ಹೆಚ್ಚು ಮಾತೃಭಾಷೆ ಮಾತನಾಡಬೇಕು. ಅಂಥ ಪರಿಸ್ಥಿತಿ ಬಂದಾಗ ಬೇರೆ ಭಾಷೆ ಮಾತನಾಡಿ; ಶೋಕಿಗಾಗಿ ಇಂಗ್ಲಿಷ್ ಪದಗಳ ಬಳಕೆ ಬೇಡ. ನಮ್ಮ ಭಾಷೆಯ ಬಗ್ಗ ನಾವು ಕೀಳರಿಮೆ ತಾಳಬಾರದು; ಮಾತೃಭಾಷೆಯನ್ನು ಎಂದೂ ತುಚ್ಛವಾಗಿ ಕಾರಣಬಾರದು ಎಂದು ಎಚ್ಚರಿಸಿದರು.


ಅಂತರ್ಮುಖಿಯಾಗಲು, ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಲು ಚಾತುರ್ಮಾಸ ಉತ್ತಮ ಸಂದರ್ಭ. ಪ್ರಪಂಚವನ್ನು ಕತ್ತಲು ಮಾಡಿ ಆಧ್ಯಾತ್ಮದ ಬೆಳಕನ್ನು ಕಾಣಿಸುವ ಸಾಮಥ್ರ್ಯ ತಮೋಗ್ರಹವಾದ ಶನಿಗೆ ಇದೆ. ಚಾತುರ್ಮಾಸ್ಯ ಕೂಡಾ ಪ್ರಕೃತಿ ಕಾರ್ಮೋಡದಿಂದ ಆವರಿಸಿರುವ ಕಾಲ. ಇದು ಧ್ಯಾನ, ಅನುಷ್ಠಾನಕ್ಕೆ ಯೋಗ್ಯ ಸಮಯ. ಬಾಹ್ಯ ಸಂಚಾರ ನಿಲ್ಲಿಸಿ ಅಂತಃಸಂಚಾರ ಆರಂಭಿಸಲು ಸೂಕ್ತ ಸಮಯ ಎಂದು ವಿಶ್ಲೇಷಿಸಿದರು.



ಗುರುಗಳಲ್ಲಿ ಎಲ್ಲ ದೇವರ ಸನ್ನಿಧಾನ ಇದೆ. ಸಮುದ್ರದಲ್ಲಿ ಎಲ್ಲ ನದಿಗಳು ಇರುವಂತೆ ಎಲ್ಲ ದೇವರಾಶಿಗಳು ಗುರುತತ್ವದಲ್ಲಿ ಅಡಗಿದೆ. ಹೆಜ್ಜೆ ಮುಂದಿಡಲು ಗುರು ಬೇಕು. ದಾರಿ ತೋರಿಸುವವನು ಗುರು. ಗುರುವಿನಲ್ಲಿ ಪರಿಪೂರ್ಣತೆಯನ್ನು ನಾವು ಕಾಣುತ್ತೇವೆ. ಗುರುಪೂರ್ಣಿಮೆ ಗುರುಗಳ ಆರಾಧನೆಗೆ ವಿಶೇಷ ಸಂದರ್ಭ ಎಂದು ಬಣ್ಣಿಸಿದರು.


ಜಗದ್ಗುರು ಕೃಷ್ಣ ಸೇರಿದಂತೆ ಗುರುಪರಂಪರೆಯ ಆರಾಧನೆಯ ಶುಭ ಸಂದರ್ಭದವಾದ ಗುರುಪೂರ್ಣಿಮೆ ಸಾಧನೆಯ ಆರಂಭದ ಪರ್ವಕಾಲ. ಚಾತುರ್ಮಾಸ್ಯದಲ್ಲಿ ಗುರುಗಳಂತೆ ಶಿಷ್ಯರೂ ಅನುಷ್ಠಾನಗಳನ್ನು ಮಾಡಬೇಕು. ಗೃಹಸ್ಥರು ಚಾತುರ್ಮಾಸ್ಯ ನಿಯಮಗಳನ್ನು ಪಾಲಿಸಬಹುದು. ಪುರುಷರು ನಿತ್ಯಾನುಷ್ಠಾನವನ್ನು ಮಾಡಬಹುದು. ಮಾತೆಯರೂ ಧ್ಯಾನ ಮಾಡಬಹುದು ಎಂದು ಸಲಹೆ ಮಾಡಿದರು.


ಪುನರುತ್ಥಾನ

ಸ್ವಭಾಷಾ ಚಾತುರ್ಮಾಸ್ಯದ ಸಂದರ್ಭದಲ್ಲಿ ಮೂಲಮಠ ಪುನರುತ್ಥಾನದ ಸಂಕಲ್ಪವನ್ನು ಶ್ರೀಗಳು ಪ್ರಕಟಿಸಿದರು. ಮೂಲಮಠದ ಅಂಗಗಳು, ಕಟ್ಟಡಗಳು ಈಗಾಗಲೇ ನಿರ್ಮಾಣವಾಗಿವೆ. ಪ್ರಾಣಪ್ರತಿಷ್ಠೆಯ ಕಾರ್ಯ ಮಾತ್ರ ಆರಂಭವಾಗಬೇಕಿದೆ. ಮೂಲಮಠದ ಮೂಲ ಎನಿಸಿದ ಮಲ್ಲಿಕಾರ್ಜುನ ದೇಗುಲ ಪುನರುತ್ಥಾನವಾಗಿದೆ. ಸೇವಾಸೌಧ, ಗುರುದೃಷ್ಟಿ ಸಭಾಂಗಣ, ಸೇವಕ ಸೌಧ, ಗುರುಕುಲಗಳು, ಬೋಧಗ್ರಾಮ, ಗೋವಿಶ್ವ, ಸರೋವರಗಳು, ಭಾರತೀಭವನ, ವಿದ್ಯಾನಂದ, ಶೋಧಕೇಂದ್ರ, ಅಶ್ವಶಾಲೆ, ಯಾನಶಾಲೆ, ಕುಟೀರಗಳು, ಮಾತೃಭೂಮಿ ಸಮುಚ್ಛಯ ಸೇರಿ 100 ಕೋಟಿಗೂ ಅಧಿಕ ಮೌಲ್ಯದ ಮೂಲಸೌಕರ್ಯಗಳು ಮೂಲಮಠದ ಭಾಗವಾಗಿ ನಿರ್ಮಾಣಗೊಂಡಿವೆ ಎಂದು ಹೇಳಿದರು.


ಮೂಲಮಠದ ಗರ್ಭಗೃಹ, ಚಂದ್ರಶಾಲೆಗಳ ಕಾರ್ಯ ಆರಂಭವಾಗಬೇಕಿದೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. 20 ವರ್ಷಗಳ ಪ್ರಯತ್ನದ ಬಳಿಕ ಮೂಲಮಠದ ಜಾಗ ನಮ್ಮ ಕೈಸೇರಿದೆ. ಅಂಥ ಪ್ರಶಸ್ತವಾದ ಭೂಮಿ ನಮಗೆ ಪ್ರಾಪ್ತವಾಗಿದೆ ಎಂದು ವಿವರ ನಿಡಿದರು. ಮೂಲಮಠದ ನಿರ್ಮಾಣದಲ್ಲಿ ಸಮಾಜದ ಶಿಷ್ಯರೆಲ್ಲರೂ ಕೈಜೋಡಿಸಿದಲ್ಲಿ ಸಹಸ್ರಮಾನದ ಪುಣ್ಯ ಪ್ರಾಪ್ತವಾಗಲಿದೆ ಎಂದರು.


ಚಾತುರ್ಮಾಸ್ಯದಲ್ಲಿ ಪ್ರತಿ ಗುರುವಾರ ಗುರುಪರಂಪರೆಯ ಪ್ರೀತ್ಯರ್ಥವಾಗು ಲಕ್ಷ ತುಳಸಿ ಅರ್ಚನೆ ನೆರವೇರಿಸಲಾಗುವುದು. ವಿಷ್ಣುಸಹಸ್ರನಾಮದ ಅರ್ಚನೆಯಲ್ಲಿ ಇಡೀ ಸಮಾಜ ಭಾಗವಹಿಸಬೇಕು ಎಂದು ಕರೆ ನೀಡಿದರು.


ಪೀಠದ ಪ್ರತಿಯೊಬ್ಬ ಶಿಷ್ಯನಿಗೆ ಗುರುಸೇವೆಯ ಅವಕಾಶವನ್ನು ಕಲ್ಪಿಸುವ ಸವಾಲು ನೂತನ ಮಹಾಮಂಡಲದ ಮುಂದಿದೆ. ಪ್ರತಿಯೊಬ್ಬ ಶಿಷ್ಯರಿಂದ ಯಾವುದಾದರೂ ಒಂದು ಬಗೆಯ ಸೇವೆ ಪೀಠಕ್ಕೆ ಸಲ್ಲಬೇಕು ಎಂದು ಆಶಿಸಿದರು.


ಇದಕ್ಕೂ ಮುನ್ನ ಚಾತುರ್ಮಾಸ್ಯ ವ್ರತಾರಂಭದ ಅಂಗವಾಗಿ ವ್ಯಾಸಪೂಜೆ ವಿದ್ಯುಕ್ತವಾಗಿ ನೆರವೇರಿತು. ಇದೇ ಸಂದರ್ಭದಲ್ಲಿ ನೂತನ ಮಹಾಮಂಡಲ ಮತ್ತು ಶಾಸನತಂತ್ರ ಪದಾಧಿಕಾರಿಗಳ ಉದ್ಘೋಷಣೆ ನೆರವೇರಿತು. ಕನ್ನಡ ಭಾಷೆ- ಸಂಸ್ಕøತಿ ಬಗ್ಗೆ ಅಭಿಮಾನ ಮೂಡಿಸುವ ಸ್ವಭಾಷಾ ಚಿಂತನ ಎಂಬ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.


ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕೋಶಾಧ್ಯಕ್ಷ ಕೆ.ಬಿ. ರಾಮಮೂರ್ತಿ, ಮೂಲಮಠ ಪುನರುತ್ಥಾನ ಸಮಿತಿಯ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಮಾಜಿ ಅಧ್ಯಕ್ಷರಾದ ಡಾ.ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಹಿರಿಯರಾದ ಸತ್ಯನಾರಾಯಣ ಶರ್ಮಾ, ಡಿ.ಡಿ.ಶರ್ಮಾ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top