ಜೂನ್ 29: ನೀರ್ಚಾಲಿನಲ್ಲಿ ಭತ್ತಕೃಷಿ ಮಹತ್ವದ ಬಗ್ಗೆ ಜಾಗೃತಿ ಕಂಡೊಕೋರಿ ಸಂಭ್ರಮ

Upayuktha
0



ನೀರ್ಚಾಲು (ಕಾಸರಗೋಡು): ಬಂಜರು ಭೂಮಿಯೊಂದನ್ನು ಹಸನುಗೊಳಿಸಿ, ವೈವಿಧ್ಯ ಕೃಷಿಯನ್ನು ಮಾಡುವುದರ ಜತೆಗೆ ಸೌರಶಕ್ತಿ ಮತ್ತು ಮಳೆಕೊಯ್ಲು ಯೋಜನೆಗಳನ್ನು ಮಾಡಿ ಪರಿಸರ ಪ್ರೇಮಿಗಳ ಹಾಗೂ ಸೌಂದರ್ಯಾಸಕ್ತರ  ಗಮನ ಸೆಳೆಯುತ್ತಿರುವ ಬನವಾಸಿಯಲ್ಲಿ ಕೃಷಿಯ ಬಗ್ಗೆ ಯುವ ತಲೆಮಾರಿಗೆ, ಜಾಗೃತಿಯನ್ನುಂಟು ಮಾಡಲು, ಇದೇ ಜೂನ್ 29 ರಂದು ನೇಜಿ ನಾಟಿ ʼಕಂಡೊಕೋರಿ ಸಂಭ್ರಮʼ ನಡೆಯಲಿದೆ.  


ಈ ವರ್ಷದಿಂದ ಬನವಾಸಿಯಲ್ಲಿ ಭತ್ತ ಬೇಸಾಯವನ್ನು ಪರಂಪರಾಗತ ಕೃಷಿ ಮೌಲ್ಯಗಳೊಂದಿಗೆ ಮಾಡಲು ತೀರ್ಮಾನಿಸಿದ್ದು ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ.  ಬನವಾಸಿ ಮನೆ ಬಳಿಯ  ಎರಡು ಕಡೆಗಳಲ್ಲಿ ಇದಕ್ಕಾಗಿ ಅರ್ಧ ಎಕರೆಗಿಂತಲೂ ಹೆಚ್ಚು ಜಾಗವನ್ನು ಮೀಸಲಿರಿಸಿ, ಗದ್ದೆಯಾಗಿ ಪರಿವರ್ತಿಸಲಾಗಿದೆ.  ಇದರ ಮುನ್ನುಡಿಯಾಗಿ ಪ್ರಾದೇಶಿಕ ಜನಪದ ಕೃಷಿ ಸಂಸ್ಕೃತಿ ಶೈಲಿಯಲ್ಲಿ ನೇಜಿನಾಟಿ ನಡೆಯಲಿದೆ. 


ಕರಾವಳಿಯ ಜೀವನಾಡಿಯಾದ ಭತ್ತಕೃಷಿಯ ಮಹತ್ವದ ಬಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಬೆಳೇರಿ ಸತ್ಯನಾರಾಯಣ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ಅವರ ಜತೆಗೆ ಸಂವಾದ ನಡೆಯಲಿದೆ. ನೇಗಿಲು ಹಿಡಿದು ಗದ್ದೆ ಉಳುಮೆ ಮಾಡಿ ಅನುಭವ ಇರುವ ಹಿರಿಯರು, ಪ್ರಕೃತಿಜನ್ಯ ಪರಿಕರಗಳಿಂದ ಗೊರಬೆ, ಮುಟ್ಟಾಳೆಯಂತಹ ಕರಕುಶಲ ಕೃಷಿ ಸಹಾಯಿ ಸಾಮಗ್ರಿಗಳನ್ನು ತಯಾರಿಸುತ್ತಿದ್ದ ಕರಾವಳಿಯ ಅನುಭವಿ ಹಿರಿಯರು ಅಂದು ಭಾಗವಿಸುತ್ತಾರೆ. 


ಭತ್ತ ಕೃಷಿಗೆ ಸಂಬಂಧಿಸಿದ ಓ ಬೇಲೆ ಜನಪದ ಹಾಡಿನೊಂದಿಗೆ ನಾಟಿಮಾಡುವ ಕೃಷಿ ಜನಪದ ಕಲಾವಿದೆಯರನ್ನು ಭತ್ತ ಕೃಷಿಗೆ ಸಂಬಂದಿಸಿದ ಲಭ್ಯವಿರುವ ಕೆಲವು ಉಪಕರಣಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮವಿದೆ.  ವಿದ್ಯಾರ್ಥಿಗಳು ಇಷ್ಟಪಡುವ ಆಟದೊಂದಿಗೆ ಅವರಲ್ಲಿ ಪರಿಸರ ಪ್ರೀತಿಯನ್ನು ಹಾಗೂ ಕೃಷಿ ಒಲವನ್ನು ಉಂಟುಮಾಡಲು, ಮಧ್ಯಾಹ್ನ ತನಕ ಬನವಾಸಿಯ ಹೊಸಗದ್ದೆಯಲ್ಲಿ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಕುಣಿತ, ಕೆಸರು ಗದ್ದೆ ಓಟ ಹಾಗೂ ಕೃಷಿ ಸಂಬಂಧಿ ಜನಪದ ಕ್ರೀಡೆ ಹಾಗೂ  ಲಘು ಸ್ಪರ್ಧೆಗಳನ್ನು ಅಂದು ಏರ್ಪಡಿಸಲಾಗಿದೆ. ಅನಂತರ ʼಓ ಬೇಲೆʼ ಹಾಡಿನೊಂದಿಗೆ ಜನಪದ ಕೃಷಿ ಕಲಾವಿದರಿಂದ ನೇಜಿ  ನಾಟಿ ನಡೆಯಲಿರುವುದು.   


ಕೇರಳ ಕನ್ನಡ ಮಾಧ್ಯಮ ಶಾಲೆಯ ನಾಲ್ಕನೆಯ ತರಗತಿಯ ಪಠ್ಯ ಪುಸ್ತಕದಲ್ಲಿ ಭತ್ತ ತಳಿಯ ಸಂರಕ್ಷಕರಾದ ಬೆಳೇರಿ ಸತ್ಯನಾರಾಯಣ ಅವರ ಪಾಠವಿದೆ. ಅದೇ ರೀತಿಯಲ್ಲಿ ಏಳನೆಯ ತರಗತಿಯ ಪಠ್ಯದಲ್ಲಿ ಭತ್ತ ಬೇಸಾಯದ ಮಹ್ವದ ಬಗ್ಗೆಯೂ ಪಾಠವಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಕೃಷಿಯ ಪ್ರಾಯೋಗಿಕ ಅನುಭವವನ್ನುಂಟು ಮಾಡಲು  ಬನವಾಸಿ ಕೃಷಿ ಯೋಜನೆಗಳಿಗೆ ನೇತೃತ್ವ ನೀಡುತ್ತಿರುವ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆಯವರು ತೀರ್ಮಾನಿಸಿದ್ದಾರೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top