ಕಾರಂತರ ಕಾದಂಬರಿಗಳಲ್ಲಿ ಮಾನವತಾವಾದಕ್ಕೆ ಹೆಚ್ಚು ಒತ್ತು: ಪ್ರೊ. ಎಂ. ಪ್ರಸಾದ್ ರಾವ್

Upayuktha
0


ಉಡುಪಿ:
ಹೆಣ್ಣನ್ನು ಮನುಷ್ಯರಾಗಿ ನೋಡುವುದರೊಂದಿಗೆ ಅವರಿಗೆ ಸಮಾಜದಲ್ಲಿ ಸಮಾನತೆಯನ್ನು ಒದಗಿಸಬೇಕು ಎಂಬುದು ಡಾ. ಶಿವರಾಮ ಕಾರಂತರ ಕಾದಂಬರಿಗಳಲ್ಲಿರುವ ಮುಖ್ಯ ಧೋರಣೆ,  ಅವರು ತಮ್ಮ ಕಾದಂಬರಿಗಳಲ್ಲಿ ಸ್ತ್ರೀ ವಾದದೊಂದಿಗೆ ಮಾನವತಾವಾದಕ್ಕೆ ಹೆಚ್ಚು ಒತ್ತು ನೀಡಿದವರು ಎಂದು ಬಾರ್ಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂಗ್ಲ ವಿಭಾಗ ಮುಖ್ಯಸ್ಥ ಪ್ರೊ. ಎಂ ಪ್ರಸಾದ್ ರಾವ್ ಹೇಳಿದರು. 


ಅವರು  ಅಜ್ಜರಕಾಡಿನ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್  ವತಿಯಿಂದ  ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘ ಇವರ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ ಒಂದು ದಿನದ ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.


ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತರ ಮಹಿಳಾ ಅಭಿವ್ಯಕ್ತಿಯ ಸ್ವರೂಪ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಖ್ಯಾತ ಲೇಖಕಿ ಮತ್ತು ಭಾಷಾಂತರ ತಜ್ಞೆ  ಡಾ. ಪಾರ್ವತಿ ಜಿ ಐತಾಳ್, ಲಿಂಗಧಾರಿತ ಕಾರಣಗಳಿಗಾಗಿ ಅಸಮಾನತೆಯನ್ನು ಒಂದು ವ್ಯವಸ್ಥೆ ಸೃಷ್ಠಿಸಿಕೊಂಡಾಗ, ಅದನ್ನು ಪ್ರತಿಭಟಿಸುವ ಒಂದು ರೂಪವೇ ಸ್ತ್ರೀವಾದ,  ಕಾರಂತರು ಸ್ತ್ರೀ ಸಂವೇದನೆಯನ್ನು ತಮ್ಮ ಕೃತಿಗಳಲ್ಲಿ ಶಕ್ತಿಯುತವಾಗಿ ಬಳಿಸಿದವರು, ಹೆಣ್ಣನ್ನು ಪ್ರಕೃತಿ ಜತೆ ಹೋಲಿಸುವುದರೊಂದಿಗೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧಗಳನ್ನು  ವಿವರಿಸಿ ಹೆಣ್ಣಿನ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟವರು ಎಂದರು. ಬಳಿಕ ಈ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿದ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ. ನಿಕೇತನ,  ಸಮಾಜದಲ್ಲಿ ಕಂಡುಬರುವ ಅಸಮಾನತೆಯನ್ನು ತಿದ್ದಿ ಸಮಾಜವನ್ನು ಸರಿಮಾರ್ಗದಲ್ಲಿ ನಡೆಸುವಲ್ಲಿ ಕಾರಂತರು ಮತ್ತು ಕಾರಂತರ ಕೃತಿಗಳ ಅಧ್ಯಯನ ಅತೀ ಅವಶ್ಯಕ ಎಂದರು. 


ಕಾರ್ಯಕ್ರಮದಲ್ಲಿ  ಟ್ರಸ್ಟಿನ ಅಧ್ಯಕ್ಷ ಗಣನಾಥ ಶೆಟ್ಟಿ ಎಕ್ಕಾರು, ಖ್ಯಾತ ಕವಯಿತ್ರಿ ಜ್ಯೋತಿ ಗುರುಪ್ರಸಾದ್, ಟ್ರಸ್ಟಿನ ಸದಸ್ಯರಾದ ಡಾ.ಚೇತನ ಶೆಟ್ಟಿ ಕೋವಾಡಿ, ಜಿ.ಎಂ ಶರೀಫ್ ಹೂಡೆ, ಡಾ. ಬಿ.ಬಿ ಹೆಗ್ಡೆ ಕಾಲೇಜಿನ ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಉಪಸ್ಥಿತರಿದ್ದರು. ಕಾರ್ಯಕ್ರಮ ಮತ್ತು ಸಂವಾದವನ್ನು ಅಧ್ಯಾಪಕರಾದ ಶಾಲಿನಿ ಮತ್ತು ವಸಂತಿ ಅಂಬಲಪಾಡಿ ನಿರೂಪಿಸಿದರು. 

                                                                

                                                                  

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top