ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ನ ವತಿಯಿಂದ ಬೆಂಗಳೂರಿನ ಶ್ರೀ ಶ್ರೀಪಾದರಾಜ ಮಠದಲ್ಲಿ ಮೈತ್ರೇಯಿ ಕನ್ನಡ ಮಹಿಳಾ ಹರಿದಾನ ಟ್ರಸ್ಟ್ (ರಿ), ಇವರು, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ, ಬೆಂಗಳೂರು ಹಾಗೂ ದಾಸವಾಣಿ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಹರಿದಾಸರ ಪರಿಚಯದ ಉಪನ್ಯಾಸ ಮಾಲಿಕೆಯಲ್ಲಿ ಶ್ರೀಮತಿ ನಂಜನಗೂಡು ತಿರುಮಲಾಂಬಾ ಇವರ ಪರಿಚಯದ ಕಾರ್ಯಕ್ರಮ ಜೂ.14ರಂದು ಆಯೋಜಿಸಲಾಗಿತ್ತು.
ವಿದ್ಯಾವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿಯವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಅಮೂಲ್ಯವಾದ ಕನ್ನಡ ಮಹಿಳಾ ಹರಿದಾಸರ ಸಾಧನೆ ಸರ್ವರಿಗೂ ತಲುಪಬೇಕು, ಅದಕ್ಕೆ ಪೂರಕವಾಗಿ, ಮಹಿಳಾ ಹರಿದಾಸರ ಕೃತಿಗಳನ್ನು ಹೆಚ್ಚು ಹೆಚ್ಚು ಹಾಡುವುದರ ಮೂಲಕ, ಅವುಗಳ ಅರ್ಥ ಚಿಂತನೆ ಮಾಡುವುದರ ಮೂಲಕ, ಹಿರಿಯ ಮಹಿಳಾ ಹರಿದಾಸರು ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಲು, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ನವರ ಕಾರ್ಯವನ್ನು ಶ್ಲಾಘಿಸಿದರು.
ಕೇವಲ ಪ್ರಾಥಮಿಕ ಶಿಕ್ಷಣ ಪಡೆದ ವಿಧವಾ ಸ್ತ್ರೀಯೊಬ್ಬಳು, ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರನ್ನು ಭೇಟಿಯಾಗಿ, ಸಮಾಜದಲ್ಲಿ ಪ್ರಕೃತಿ ಸ್ವರೂಪಿಣಿಯಾದ ಸ್ತ್ರೀಗೆ ದೊರೆಯಬೇಕಾದ ಗೌರವದ ಸ್ಥಾನಮಾನದ ಬಗ್ಗೆ ಅಂದಿನ ದಿನಮಾನದಲ್ಲಿ, ಸಹೋದರಿಗೆ ಒಡನಾಟ, sisterhood ಬಗ್ಗೆ ವಿವರಿಸಿದ ಧೈರ್ಯದ ಬಗ್ಗೆ ಶ್ಲಾಘಿಸಿ, sisterhood ಪರಿಕಲ್ಪನೆ ಇಂದಿನ ದಿನಗಳಲ್ಲೂ ತುಂಬ ಪ್ರಸ್ತುತವಾಗಿದೆ ಎಂದರು. ಹರಿದಾಸ ಸಾಹಿತ್ಯದ ಕೃತಿಗಳ ಪ್ರಕಟಣೆಯ ಬಗ್ಗೆ ಮೈಸೂರಿನ ಮಹಾರಾಜರಿಗೆ ವಿವರಿಸಿ, ಅವರಿಂದ ಧನಸಹಾಯ ಪಡೆದು, ಕನ್ನಡದ ಕೃತಿಗಳ ಪ್ರಕಾಶನ ಕಾರ್ಯ ನಿರ್ವಹಿಸಿದ ಗಟ್ಟಿಗಿತ್ತಿ ಎಂಬುದಾಗಿ ತಿಳಿಸಿದರು.
ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ವತಿಯಿಂದ ಕನ್ನಡ ಮಹಿಳಾ ಹರಿದಾಸರ ಪರಿಚಯದ ಉಪನ್ಯಾಸ ಮಾಲಿಕೆಯಲ್ಲಿ ಡಾ. ವೃಂದಾ ಸಂಗಮ್ ಇವರು, "ಶ್ರೀಮತಿ ನಂಜನಗೂಡು ತಿರುಮಲಾಂಬಾ" ಇವರು ಕನ್ನಡ ಪುಸ್ತಕಗಳ ಲೇಖಕಿಯಾಗಿ, ಪ್ರಕಾಶಕಿಯಾಗಿ, ನಾಟಕಕಾರ್ತಿಯಾಗಿ ಕನ್ನಡ ಪತ್ರಿಕೆಯ ಸಂಪಾದಕಿಯಾಗಿ ಹೆಸರುವಾಸಿಯಾಗಿದ್ದಾರೆ. ಈ ಶತಮಾನದ ಪ್ರಥಮ ಕನ್ನಡ ಲೇಖಕಿ ಎಂದು ದಾಖಲಾಗಿದ್ದಾರೆ. ಬಾಲ ವಿಧವೆಯಾಗಿ, ಕೇವಲ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪಡೆದು, ಗ್ರಂಥಾವಲೋಕನದಲ್ಲಿ ಆಸಕ್ತಿ ಹೊಂದಿದವರಾಗಿ, ಕನ್ನಡದಲ್ಲಿ ಸುಮಾರು ಹತ್ತು ಪುಸ್ತಕಗಳನ್ನು ಬರೆದಿದ್ದು, ಶೇಷಾದ್ರಿ ಶಯನ ಶೇಷಗಿರಿವಾಸ ಮುಂತಾದ ಅಂಕಿತಗಳಿಂದ ಭದ್ರಗೀತಾವಲಿ, ಭಕ್ತಿಗೀತಾವಳಿ ಎಂಬ ಕೃತಿ ರಚನೆ ಮಾಡಿದ್ದಾರೆ. ಅವರ ಕೃತಿಗಳಲ್ಲಿನ ಸೂಕ್ತಿ ವಿಶೇಷ ಅಂಶಗಳು, ಕವಿತಾ ಚಾತುರ್ಯ ಮುಂತಾದವುಗಳೊಂದಿಗೆ, ಅವರ ಜೀವನ ಹಾಗೂ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಾನಸ ಜಯರಾಜ್ ಕುಲ್ಕರ್ಣಿ ಇವರು, 'ಶ್ರೀಮತಿ ನಂಜನಗೂಡು ತಿರುಮಲಾಂಬಾ' ಇವರ ಕೃತಿಗಳಿಗೆ ರಾಗ ಸಂಯೋಜನೆ ಮಾಡಿ, ಹಾಡಿದರು. ಡಾ. ಸುಧಾ ದೇಶಪಾಂಡೆ ಇವರು, 'ಶ್ರೀಮತಿ ನಂಜನಗೂಡು ತಿರುಮಲಾಂಬಾ" ಇವರ ಕೃತಿಗಳಿಗೆ ಆರ್ಧಾನುಸಂಧಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಲಕ್ಷ್ಮೀನಾರಾಯಣಾಚಾರ್ ವಹಿಸಿದ್ದರು. ಡಾ. ವಿದ್ಯಾಶ್ರೀ ಕುಲ್ಕರ್ಣಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಮೈತ್ರೇಯಿ ಉಪಾಧ್ಯಕ್ಷರಾದ ಡಾ. ಶಾಂತಾ ರಘೂತ್ತಮ, ದಾಸವಾಣಿ ಕರ್ನಾಟಕದ ಜಯರಾಜ್ ಕುಲ್ಕರ್ಣಿ ಹಾಗೂ ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ