ಬದಿಯಡ್ಕ, ಏತಡ್ಕ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ; ಕಣ್ಣುಮುಚ್ಚಿ ಕುಳಿತ ಸ್ಥಳೀಯಾಡಳಿತ

Upayuktha
0


ಬದಿಯಡ್ಕ: ಇಲ್ಲಿನ ಏತಡ್ಕ ಪರಿಸರದಲ್ಲಿ ಬೀದಿನಾಯಿಗಳ ಉಪದ್ರವ ಹೆಚ್ಚುತ್ತಿದ್ದು ನಾಗರಿಕರು ಆತಂಕಕ್ಕೊಳಗಾಗಿದ್ದಾರೆ. 7ನೇ ತರಗತಿ ವರೆಗೆ ಏತಡ್ಕ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ದಿನನಿತ್ಯ ಅನೇಕ ಮಕ್ಕಳು ತೆರಳುತ್ತಿದ್ದು ಇಲ್ಲಿ ನಾಯಿಗಳ ಉಪಟಳ ಹೆಚ್ಚಿದೆ. ಮಕ್ಕಳು ನಡೆದುಕೊಂಡು ಹೋಗುವ ವೇಳೆ ಬೆದರಿಸುವ ಘಟನೆಗಳೂ ನಡೆಯುತ್ತಿವೆ. ದ್ವಿಚಕ್ರ ಸವಾರರ ಹಿಂದಿನಿಂದ ಅಟ್ಟಾಡಿಸಿಕೊಂಡು ಬರುವುದು ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಅಂಗಡಿ ಮುಂಗಟ್ಟುಗಳಲ್ಲಿ ಬಂದು ಮಲಗುವುದು ಹಾಗೂ ಅಲ್ಲೇ ಸಮೀಪವಿರುವ ಮನೆಗಳಿಗೆ ತೆರಳಿ ಚಪ್ಪಲಿಗಳನ್ನು ಕಚ್ಚಿ ಹಾಳುಮಾಡುವುದು  ಇಂತಹ ಘಟನೆಗಳು, ಮತ್ತು ಅಂಗಡಿ ಮುಂಗಟ್ಟುಗಳನ್ನು ಮಲಿನಗೊಳಿಸುವುದು, ಇಂತಹ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತಿವೆ. 


ಇತ್ತೀಚೆಗೆ ಏತಡ್ಕ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ನಾಯಿಗಳು ರಸ್ತೆ ಮಧ್ಯದಲ್ಲಿ ಮಲಗಿರುವುದು, ಅಂಗಡಿಗಳ ಮುಂದೆ ಗುಂಪುಗಳಾಗಿ ಮಲಗಿರುವುದು ಸಾಮಾನ್ಯ ದೃಶ್ಯವಾಗಿದೆ. ಮಕ್ಕಳು ಇದರಿಂದಾಗಿ ಶಾಲೆಗೆ ತೆಳಲು ಭಯಭೀತರಾಗುವುದು ಮಾತ್ರವಲ್ಲದೆ ವೃದ್ಧರೂ, ದ್ವಿಚಕ್ರ ಸವಾರರೂ ಈ ಶ್ವಾನಗಳಿಂದ ಭಯಭೀತರಾಗುತ್ತಿದ್ದಾರೆ. ಈ ಬೀದಿ ನಾಯಿಗಳು ಮುಂದೊಂದು ದಿನ ಭೀಕರ ಅಪಘಾತಕ್ಕೂ ಕಾರಣವಾಗಬಹುದು. ರಸ್ತೆ ಮಧ್ಯದಲ್ಲಿ ಮಲಗುವ ಶ್ವಾನಗಳು ವಾಹನಗಳ ಚಲನವಲನಕ್ಕೆ ತೊಂದರೆ ನೀಡುತ್ತಿವೆ. ಅಂಗಡಿಗಳ ಮುಂದೆ ಗುಂಪುಗೂಡುವ ನಾಯಿಗಳು ಗ್ರಾಹಕರಿಗೆ ತೊಂದರೆ ಕೊಡುತ್ತಿವೆ.


ಕೆಲವು ಅನಾಗರಿಕರು ರಸ್ತೆಗಳಲ್ಲಿ ಆಹಾರ ಎಸೆಯುವ ಪರಿಣಾಮವಾಗಿ ನಾಯಿಗಳು ಒಂದೇ ಪ್ರದೇಶದಲ್ಲಿ ನೆಲೆಸುತ್ತಿವೆ. ತಿರುಗಾಡಿ ನಾಯಿಗಳ ಸಮಸ್ಯೆಯು ದಿನೇ ದಿನೇ ಹೆಚ್ಚಾಗಲು ಕಾರಣವೇನೆಂದರೆ ನಮಗೆ ಒಂದೇ ನಾಯಿ ಸಾಕೆಂದು ನಾವು ನಾಯಿ ಮರಿಗಳನ್ನು ಕಸದ ತೊಟ್ಟಿ, ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಬಿಡುತ್ತಿರುವುದು. ಹೀಗಾಗಿ ನಾಯಿಗಳು ಬೀದಿಗಳಲ್ಲಿ ಬೆಳೆದು ಉಪಟಳಕಾರಿಯಾಗಿ ಪರಿಣಮಿಸುತ್ತಿವೆ. 


ಬೀದಿ ನಾಯಿಗಳ ಸಮಸ್ಯೆ ನಿವಾರಣೆಗೆ ಸಮಗ್ರ ಮತ್ತು ಸಮುದಾಯದ ಸಹಕಾರದ ಅಗತ್ಯವಿದ್ದು, ಸರಿಯಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ ನಾಗರಿಕರ ಮತ್ತು ನಾಯಿಗಳ ಆರೋಗ್ಯವನ್ನು ಸುಧಾರಿಸಬಹುದು. ಸರ್ವರ ಸಹಕಾರ ಮತ್ತು ಜಾಗೃತಿಯಿಂದ ಈ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಬಹುದಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಈ ಬೀದಿ ನಾಯಿಗಳ ಸಮಸ್ಯೆಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು, ಆದರೆ ಅವರು ಕಂಡರೂ ಕಾಣದಂತಿರುತ್ತಾರೆ. ಈ ಸಮಸ್ಯೆಗೆ ನಮ್ಮ ಸರಕಾರವು ಆದಷ್ಟು ಬೇಗ ಒಂದು ಉತ್ತಮ ಪರಿಹಾರ  ನೀಡಬೇಕಾದುದು ಅತೀ ಅಗತ್ಯ. 


ಬೀದಿ ನಾಯಿಗಳ ಸಂಖ್ಯೆ ಅಧಿಕವಾಗಲು ಕಾರಣವೇನು? 

1. ಹೆಣ್ಣು ನಾಯಿಮರಿಗಳನ್ನು  ಬೇರೆ ಸ್ಥಳಗಳಿಂದ ತಂದು ಬಿಡುವುದು.

2. ಮಾಂಸಾಹಾರಿ ಹೋಟೆಲ್‌ಗಳ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದಿರುವುದು.

3. ಜನಸಂಖ್ಯೆ ಹೆಚ್ಚಳ ಹಾಗೂ ನಗರೀಕರಣ

4. ತಾಜ್ಯ ನಿರ್ವಹಣೆ ಕೊರತೆ

5. ನಾಯಿಗಳ ಸಂತಾನಹರಣ (ಸ್ಟೆಲ್ರೈಸೇಶನ್) ಕಾರ್ಯಕ್ರಮಗಳ ಕೊರತೆ


ಹೆಣ್ಣು ನಾಯಿ ಮರಿಗಳನ್ನು ಬೇರೆ ಸ್ಥಳಗಳಿಂದ ತಂದು ಬಿಡುವುದು:

ಹೆಣ್ಣು ನಾಯಿ ಮರಿ ಇಟ್ಟ ಮೇಲೆ ಅದನ್ನು ಊರಿನಲ್ಲಿ ತಂದು ಬಿಡುವುದರಿಂದ ತಿರುಗಾಡಿ ನಾಯಿಗಳ ಸಂಖ್ಯೆ ಅಧಿಕವಾಗಲು ಮುಖ್ಯ ಕಾರಣವಾಗಿದೆ. 

ಮಾಂಸಾಹಾರಿ ಹೋಟೆಲ್‌ಗಳ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದಿರುವುದು. ಇತ್ತೀಚೆಗೆ ಎಲ್ಲಾ ಕಡೆ ಮಾಂಸಾಹಾರಿ ಹೋಟೆಲ್‌ಗಳು ತಲೆ ಎತ್ತಿ ಅಲ್ಲಿನ ತ್ಯಾಜ್ಯ ಸಂಸ್ಕರಣೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ಬಿಸಾಡುವುದರಿಂದ ಅವುಗಳಿಗೆ ಆಹಾರಗಳು ಸಿಗುವ ಕಾರಣದಿಂದಾಗಿ ಹೋಟೆಲಿನ ಮುಂಭಾಗಗಳಲ್ಲಿ ಠಿಕಾಣಿ ಹೂಡುತ್ತವೆ.


ಜನಸಂಖ್ಯೆ ಹೆಚ್ಚಳ ಹಾಗೂ ನಗರೀಕರಣ:

ಜನಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ನಗರ ಪ್ರದೇಶಗಳು ವಿಕಸನಗೊಳ್ಳುತ್ತಿವೆ. ಈ ವಿಸ್ತರಣೆಗೆ ಹೊಂದಿಕೊಂಡು ತ್ಯಾಜ್ಯ ನಿರ್ವಹಣೆ ಇಲ್ಲದಿದ್ದರೆ ಬೀದಿ ನಾಯಿಗಳಿಗೆ ಆಹಾರದ ಮೂಲ ಸಿಗುವುದರಿಂದ ಅವು ಅಲ್ಲೇ ಸುತ್ತ ಮುತ್ತ ನೆಲೆಯಾಗುತ್ತವೆ.

 

ತಾಜ್ಯ ನಿರ್ವಹಣೆ ಕೊರತೆ:

ಹೆಚ್ಚಿನ ಕಡೆಗಳಲ್ಲಿ ಊರಿನ ರಸ್ತೆ ಪಕ್ಕದಲ್ಲಿ ತ್ಯಾಜ್ಯಗಳನ್ನು ಎಸೆಯುವುದು ಆಹಾರದ ಮೂಲಗಳಾಗಿ ಬೀದಿ ನಾಯಿಗಳನ್ನು ಆಕರ್ಷಿಸುತ್ತದೆ. ಇದೂ ಕೂಡಾ ಬೀದಿ ನಾಯಿಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.


ನಾಯಿ ಸಂತಾನಹರಣ (ಸ್ಟೆಲ್ರೈಸೇಶನ್) ಕಾರ್ಯಕ್ರಮಗಳ ಕೊರತೆ:

ನಾಯಿ ನಿಭಾರಣಾ (ಸ್ಟೆಲ್ರೈಸೇಶನ್) ಕಾರ್ಯಕ್ರಮಗಳು ಅಂದರೆ ಪಾಲಿಕೆ ಅಥವಾ ಸರಕಾರದ ವತಿಯಿಂದ ಲಸಿಕೆ ನೀಡುವಂತಹ ಕಾರ್ಯಗಳು ನಿರಂತರವಾಗಿ ನಡೆಯದಿರುವುದರಿಂದ ನಾಯಿಗಳ ಜನನದ ಪ್ರಮಾಣ ಅಧಿಕವಾಗುವುದೂ ಬೀದಿ ನಾಯಿಗಳ ಸಂಖ್ಯೆ ವೃದ್ಧಿಗೆ ಒಂದು ಮೂಲ ಕಾರಣವಾಗಿ ಪರಿಣಮಿಸುತ್ತದೆ.


ಸಾಕು ನಾಯಿಗಳ ರಿಜಿಸ್ಟ್ರೇಶನ್ ಪ್ರಕ್ರಿಯೆ:

ನಾವು ಮನೆಯಲ್ಲಿ ನಾಯಿಗಳನ್ನು ಸಾಕುವಾಗ ತಮ್ಮಲ್ಲಿನ ಪಮಚಾಯತ್ ಕಛೇರಿಗೆ ಭೇಟಿ ನೀಡಿ ಶ್ವಾನಗಳನ್ನು ಸಾಕಲು ಲೈಸೆನ್ಸ್‌ಗಳನ್ನು ಮಾಡಿಸಿಕೊಳ್ಳಬೇಕು. ನಮ್ಮ ಪರಿಸರಗಳಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ಪರಿಸರಗಳನ್ನು ಕಾಪಾಡಲು ಬಲು ಮುಖ್ಯವಾದ ಪ್ರಕ್ರಿಯೆಗಳಲ್ಲಿ ಒಂದಾಗಿದೆ ಇದು. 


ಸಾಕುನಾಯಿ ನೋಂದಣಿ ಪ್ರಕ್ರಿಯೆ ಹೇಗೆ? 

ಆವಶ್ಯಕ ದಾಖಲೆಗಳು: 

1. ಇತ್ತೀಚೆಗೆ ತೆಗೆದ ನಾಯಿಯ ಪಾಸ್ಪೋಟ್ ಸೈಜ್ ಫೋಟೋ

2. ಮಾಲೀಕನ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ (ಗುರುತಿನ ಚೀಟಿ) 

3. ಪಶುವೈದ್ಯರಿಂದ ನೀಡಲ್ಪಟ್ಟ ಲಸಿಕಾ ಪ್ರಮಾಣ ಪತ್ರ

4. ನಾಯಿಯ ತಳಿ ಲಿಂಗ, ವಯಸ್ಸು (ಅಗತ್ಯ) ಮತ್ತು ಹೆಸರು (ನೀಡಿದ್ದಲ್ಲಿ ಮಾತ್ರ). 


ನೋಂದಣಿ ಶುಲ್ಕ:

ಪ್ರತಿವರ್ಷ ಅಥವಾ ಮೂರು ವರ್ಷಕ್ಕೊಮ್ಮೆ ನಾಯಿಯನ್ನು ಶುಲ್ಕ ಪಾವತಿಸಿ ನೋಂದಣಿ ಮಾಡಬೇಕು. ನಗರಪಾಲಿಕೆ ಅಥವಾ ಪಂಚಾಯತಿಗೆ ಹೊಂದಿಕೊಂಡು ಶುಲ್ಕ ಬದಲಾವಣೆಯಾಗುತ್ತದೆ. ನೋಂದಣಿ ಮಾಡಿದ ಬಳಿಕ ನಾಯಿಯ ಮಾಲಕನಿಗೆ ಒಂದು ಕಾರ್ಡ್ ನೀಡಲಾಗುತ್ತದೆ. ಅದನ್ನು ನಿಯಮಿತವಾಗಿ ನವೀಕರಿಸಬೇಕು.


ರಿಜಿಸ್ಟ್ರೇಶನ್ ಯಾಕೆ ಅಗತ್ಯ? 

1. ನಾಯಿಗೆ ಲಸಿಕೆ ನೀಡಲಾಗಿದೆ ಎಂದು ಪ್ರಮಾಣೀಕರಿಸಲು 

2. ಬೀದಿ ನಾಯಿಗಳು ಮತ್ತು ಸಾಕು ನಾಯಿಗಳ ನಡುವಿನ ವ್ಯತ್ಯಾಸ ತಿಳಿಯಲು

3. ಜಂಟಿ ಕುಟುಂಬ ಪ್ರದೇಶಗಳಲ್ಲಿ ಶಿಸ್ತಿನ ಮೂಲಕ ನಾಯಿ ಪೋಷಣೆಗಾಗಿ 

4. ನಾಯಿಯ ತಪ್ಪುವಿಕೆ ಅಥವಾ ಕಾನೂನು ಪ್ರಕರಣಗಳ ಸಂದರ್ಭದಲ್ಲಿ ಪರಿಹಾರಕ್ಕೆ

5. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ


ರಿಜಿಸ್ಟ್ರೇಶನ್ ಮಾಡದೇ ಸಾಕಿದರೆ ಪರಿಣಾಮ ಏನು? 

1. ದಂಡ ವಿಧಿಸುವ ಸಾಧ್ಯತೆ (ರೂ.500-ರೂ.5000 ದ ವರೆಗೆ)

2. ನಾಯಿಯ ಮೇಲೆ ಅಥವಾ ಮಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. 

3. ಸಾರ್ವಜನಿಕ ಸ್ಥಳಗಳಲ್ಲಿ ನಾಯಿಯನ್ನು ಕರೆದುಕೊಂಡು ಹೋಗಲು ನಿರ್ಬಂಧ


ಬೀದಿನಾಯಿಗಳು ಸಮಸ್ಯೆಯಲ್ಲ, ಆದರೆ ಇದು ನಮ್ಮ ನಿರ್ಲಕ್ಯದ ಪರಿಣಾಮ. ಪ್ರೀತಿ ಜವಾಬ್ದಾರಿ ಮತ್ತು ಸಹಕರಿಸುವ ಮನೋಭಾವದಿಂದ ನಾವು ಪರಿಹಾರ ಕಂಡು ಹಿಡಿಯಬಹುದು. ಸುರಕ್ಷಿತ ಸಮಾಜಕ್ಕೆ ನಮ್ಮೆಲ್ಲರ ನೆರವು ಅತೀ ಅವಶ್ಯಕ. ಇದೊಂದು ಸಾಮಾಜಿಕ ಜವಾಬ್ದಾರಿ. ಶಾಂತಿಯುತ ಪ್ರಾಣಿ ಸ್ನೇಹಿ ಸಮಾಜಕ್ಕಾಗಿ ಕೈ ಜೋಡಿಸೋಣ. 




- ಕಾರ್ತಿಕ್ ಕುಮಾರ್ ಕೆ. ಕಡೆಕಲ್ಲು ಏತಡ್ಕ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top