ಚಿತ್ರ ಕವನ: ಭಾರದ ಶಿರ.!

Chandrashekhara Kulamarva
0


ಕೇಳಿದರೆ ಸಾಕು

ನಾಲ್ಕು ಜೈಕಾರ..

ನಾವೇ ಜಗಕೆಲ್ಲ 

ಮಿರಮಿರ ಚಂದ್ರ.!


ಕಿವಿಗೆ ಬಿದ್ದರಾಯ್ತು

ಚಪ್ಪಾಳೆ ಝೇಂಕಾರ

ನಾವೇ ಲೋಕಕೆಲ್ಲ 

ಝಗಮಗಿಸೊ ಇಂದ್ರ.!


ಒಮ್ಮೆ ಹತ್ತಿದರೆ 

ತಲೆಗೆ ಅಹಂಕಾರ..

ಅಬ್ಬಬ್ಬಾ.! ಆರಂಭ 

ನಾನಾ ಅವತಾರ.!


ಹಿರಿ-ಕಿರಿಯರೆಲ್ಲ 

ತೃಣ ಸಮಾನ.!

ನಮಗಿಲ್ಲ ಇಲ್ಲಿ 

ಯಾರೂ ಸರಿಸಮಾನ.!


ಎಲ್ಲರ ಕೆಕ್ಕರಿಸಿ

ಎಲ್ಲವ ಧಿಕ್ಕರಿಸಿ

ನಡೆವ ಹುಚ್ಚು.!

ಆತ್ಮವಿನಾಶಿ ಕಿಚ್ಚು.!


ಬಾವಿಗೆ ಕಾಣದು 

ಸಾಗರದ ವಿಸ್ತಾರ.!

ನಾನೇ ಎಂಬುವಗೆ

ಸರ್ವವೂ ತಾತ್ಸಾರ.!


ಹಿಡಿದರೆ ಸಾಕು..

ಭ್ರಮೆಭ್ರಾಂತಿ ರೋಗ.

ಸರ್ವನಾಶವಾಗಲಿಕ್ಕೆ 

ಏಕೈಕ ಮಾರ್ಗ.!


ತಲೆಯಾದರೆ ಭಾರ

ಬದುಕು ದುರ್ಭರ

ಕಂಗಳಿಗೆ ಬೆಳಕಿನ ಬರ

ಅರಿವಿರದ ಅಂಧಕಾರ.!


- ಎ.ಎನ್. ರಮೇಶ್ ಗುಬ್ಬಿ



("ಇದು ಭಾರದ ತಲೆಯ ಕಥೆ ಹೇಳುವ ವಿಷಾದದ ಕವಿತೆ. EGO ಎನ್ನುವ ಮದ್ದಿರದ ಖಾಯಿಲೆ ಹತ್ತಿಸಿಕೊಂಡ ತಲೆಗಳ ದುರಂತ ಭಾವಗೀತೆ. ಈ ಪ್ರಪಂಚದಲ್ಲಿ ತಲೆಯಿಲ್ಲದವರ ಜೊತೆಗೆ ಬದುಕಬಹುದು. ತಲೆ ತಿರುಗಿದವರ ಜೊತೆ ಬದುಕುವುದಿರಲಿ, ಕೆಲ ಘಳಿಗೆ ಕಳೆಯುವುದೂ ಕಷ್ಟ. ಈ ಇಳೆ ಯುಗ ಯುಗಗಳಿಂದ ಹೆಚ್ಚು ನರಳಿರುವುದು ಇಗೋಸ್ಟಿಕ್ ವ್ಯಕ್ತಿಗಳಿಂದಲೇ ಹೊರತು ಇವಿಲ್ ಶಕ್ತಿಗಳಿಂದಲ್ಲ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top