ಎಲ್ಲಾ ಕ್ಷೇತ್ರದಲ್ಲೂ ಸರಕಾರದ ಬೇಜವಾಬ್ದಾರಿತನ ಅರಾಜಕತೆಯನ್ನು ಉಂಟುಮಾಡುತ್ತಿದೆ. ದುರಂತಗಳಿಗೆ ಕಾರಣವಾಗುತ್ತಿದೆ. ಮಲೆಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ 5 ಹುಲಿಗಳ ಅಸಹಜ ಸಾವಿನ ಘೋರ ದುರಂತದ ವರದಿ ಬಂದಿದೆ.
ಕಾಡಂಚಿನಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿವೆ ಎಂಬ ಕಾರಣಕ್ಕೆ ವಿಷ ಪ್ರಾಶನವಾಗಿ ಹುಲಿಗಳು ಮೃತಪಟ್ಟಿರಬಹುದೆಂಬ ಶಂಕೆಯೂ ವರದಿಯಾಗಿದೆ
**
ಚನ್ನರಾಯ ಪಟ್ಟಣದಲ್ಲಿ ಅನ್ನದಾತನ ಜೀವನಕ್ಕೆ ಆಧಾರವಾದ ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕಾಗಿ ಬಲವಂತವಾಗಿ ಪಡೆಯಲು ಸರಕಾರ ಮುಂದಾಗಿದ್ದು, 1,183 ದಿನಗಳಿಂದ ಹೋರಾಟ ನೆಡೆಯುತ್ತಿದೆ. ಸರಕಾರಕ್ಕೆ ಮರುಕವಿಲ್ಲ!!
***
ಭಾರೀ ವಿರೋಧದ ನಡುವೆಯೂ, ಬೆಂಗಳೂರಿನ ಜ್ಞಾನಭಾರತಿಯಲ್ಲಿ 419 ಮರಗಳನ್ನು ಕಡಿದು ಸಂಶೋಧನಾ ಕಟ್ಟಡ ನಿರ್ಮಾಣಕ್ಕೆ ಅಲ್ಲಿನ ಆಡಳಿತ ವ್ಯವಸ್ಥೆ ಮೊಂಡುತನ ಹಿಡಿದು ಮುಂದಾಗಿದೆ.
**
ಮಲೆನಾಡಿನ ಸಮಸ್ಯೆಗಳಂತು ಹಾಸಿ ಹೊದೆಯುವಷ್ಟು ರಾಶಿ ಬಿದ್ದಿವೆ. ಊರಿನ ಮೇಲೆ, ಜನರ ಮೇಲೆ, ಕೃಷಿ ಭೂಮಿಯ ಮೇಲೆ ಕಾಡು ಪ್ರಾಣಿಗಳ ಧಾಳಿ-ಹಾವಳಿ, ಅಸಂಬದ್ದ ಅರಣ್ಯ ನೀತಿಗಳು, ಆತಂಕಗಳ ಪಟ್ಟಿಯನ್ನೇ ಸೃಷ್ಟಿಸಿರುವ ಅಡಿಕೆ, ಕಾಫಿ, ಭತ್ತ ಬೆಳೆಗಾರರ ಸಮಸ್ಯೆಗಳು, ವಿಸ್ತಾರಗೊಂಡು ಜೀವ ವೈವಿಧ್ಯಕ್ಕೆ ಮಾರಕವಾಗುತ್ತಿರುವ ಅಕೇಶಿಯ ಕಾಡುಗಳು, ಕ್ಷೀಣಿಸುತ್ತಿರುವ ಭತ್ತ ಮುಂತಾದ ಆಹಾರ ಬೆಳೆಯ ಕೃಷಿ ಭೂಮಿಗಳು, ನಿರ್ವಹಣೆ ಸಾಧ್ಯವೇ ಇಲ್ಲ ಅಂತಾಗಿರುವ ಪರಿಸರ ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ.....
**
ರೈತರು, ಕೃಷಿ, ಕೃಷಿ ಭೂಮಿ, ಕಾಡು, ಕಾಡುಪ್ರಾಣಿಗಳು, ನೀರು, ಪ್ಲಾಸ್ಟಿಕ್, ಪರಿಸರ, ಗ್ಲೋಬಲ್ ವಾರ್ಮಿಂಗ್... ಇಂತಹ ವಿಚಾರಗಳಲ್ಲಿ ಸರಕಾರದ, ಇಲಾಖೆಗಳ, ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜವಬ್ದಾರಿತನ, ಅಹಂಕಾರ, ನಿರ್ಲಕ್ಷ್ಯ, ತಾತ್ಸಾರ, ಆರ್ಥಿಕ ಅಶಿಸ್ತು, ಅಜ್ಞಾನ ಭ್ರಷ್ಟತೆ, ಕಾಳಜಿ ರಹಿತ ಮನೋಭಾವಗಳು ಪೂರ್ತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ ಅನ್ನಿಸುತ್ತಿದೆ.
ಮೇಲಿನ ಗದ್ದೆಯಿಂದ ಏಡಿಗಳು ಹುಗುಳು ಮಾಡಿ ಕೆಳಗಡೆಗೆ ನೀರು ಹರಿಯುವಾಗ, ಕೆಳಗಡೆಯಿಂದ ಅದನ್ನು ಕಟ್ಟುವ ಪ್ರಯತ್ನ ಎಷ್ಟೇ ಮಾಡಿದರೂ ಅದು ಕ್ಷಣಿಕ ಪರಿಹಾರ ಮಾತ್ರ. ನಿಮಿಷಾರ್ಧದಲ್ಲಿ ಆ ಪ್ರಯತ್ನ ವ್ಯರ್ಥವಾಗಿ ಪರಿಣಮಿಸುತ್ತದೆ.
ಇವತ್ತು ರಾಜ್ಯದಲ್ಲಿ ಎಲ್ಲ ವಿಷಯದಲ್ಲೂ ಆಗುತ್ತಿರುವುದು ಇದೇ. ಡ್ಯಾಮೇಜ್ ಆದ ಮೇಲೆ, ಕೆಳಗಿನ ಗದ್ದೆಯಿಂದ ನೀರು ಕಟ್ಟುವ ಪರಿಹಾರದ ಮೂರ್ಖ ಯತ್ನ ಅಲ್ಲಿ ಇಲ್ಲಿ ನಡೆಯುತ್ತಿದೆ!
ಅಜ್ಞಾನ, ದುಷ್ಟತನ, ಭ್ರಷ್ಟತೆ ಮತ್ತು ನಾನ್ಸೆನ್ಸ್‌ಗಳು ಅಧಿಕಾರದ ಮುಂಚೂಣಿಯಲ್ಲಿವೆ. ಹೀಗೆ ಮುಂದುವರೆದರೆ ಇನ್ನಷ್ಟು ಅಪಾಯಗಳು ಖಂಡಿತ.
ನಿನ್ನೆ ಹುಲಿಗಳು ಸತ್ತ ಹಾಗೆ ನಾಳೆ ಕಾಡುಕೋಣ, ನಾಡಿದ್ದು ಮಂಗ, ಆಚೆ ನಾಡಿದ್ದಿನಿಂದ ಮನುಷ್ಯ ಸಂತತಿ!
ತಾಯಿ ಭುವನೇಶ್ವರಿ ನೀನೇ ಕಾಪಾಡು.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ