ಭತ್ತದ ಬೆಳೆಗಳ ಮಹತ್ವದ ಬಗ್ಗೆ ಸೈದ್ಧಾಂತಿಕ ಜಾಗೃತಿಗಳು ಹೇರಳವಾಗಿ ನಡೆಯುತ್ತಿದ್ದರೂ ಪ್ರಾಯೋಗಿಕನೆಲೆಯ ಕಾರ್ಯಚಟುವಟಿಕೆಗಳು ಇಂದು ಕಡಿಮೆ. ಆದರೆ ನೀರ್ಚಾಲಿನ ಬನವಾಸಿಯು ಇದಕ್ಕೆ ಹೊರತಾಗಿದೆ.” ಎಂದು ಭತ್ತದ 650 ತಳಿಗಳನ್ನು ಸಂರಕ್ಷಿಸಿ ಪದ್ಮಶ್ರೀ ಪ್ರಶಸ್ತಿ ಪಡೆದ ಬೆಳೇರಿ ಸತ್ಯನಾರಾಯಣ ಅವರು ಅಭಿಪ್ರಾಯಪಟ್ಟರು.
ಬನವಾಸಿಯ ಮನೆಯೆದುರು ನೂತನವಾಗಿ ನಿರ್ಮಿಸಿದ ಗದ್ದೆಗಳಲ್ಲಿ ನೇಜಿನಾಟಿ ಮಾಡುವುದರ ಮೂಲಕ ಕಂಡೊಕೋರಿ 2025 ಸಂಭ್ರಮವನ್ನು ಉದ್ಘಾಟಿಸಿ ಅವರು ಭತ್ತಬೆಳೆಯ ಮಹತ್ವದ ಕುರಿತು ಮಾತನಾಡುತ್ತಿದ್ದರು. “ಹಿರಿಯರು ಮಾಡಿಟ್ಟ ಗದ್ದೆಗಳಲ್ಲಿ ಭತ್ತ ಬೇಸಾಯ ಮಾಡುವ ಆಸಕ್ತಿ ಇಂದಿನವರಿಗೆ ಕಡಿಮೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ವಾಣಿಜ್ಯಲಾಭಕ್ಕೆ ಉಪಯೋಗಿಸಿ ಲಾಭ ಪಡೆಯಬಹುದಾದ ಬಂಜರು ಭೂಮಿಯೊಂದನ್ನು ಭತ್ತದ ಗದ್ದೆಯನ್ನಾಗಿ ಪರಿವರ್ತಿಸಿ ಬನವಾಸಿಯನ್ನು ಕೃಷಿ ಪ್ರಾಯೋಗಿಕ ಅಧ್ಯಯನ ಕೇಂದ್ರದಂತೆ ಬೆಳೆಸಿ, ಪ್ರತಿ ಹಂತದಲ್ಲೂ ಯುವತಲೆಮಾರನ್ನು ಕರೆಸಿ ಕೃಷಿಯ ಪ್ರಾಯೋಗಿಕ ಜ್ಞಾನವೊದಗಿಸುತ್ತಿರುವ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆಯವರ ಪರಿಶ್ರಮವು ಸ್ತುತ್ಯರ್ಹ” ಎಂದು ಸತ್ಯನಾರಾಯಣ ನುಡಿದರು.
ಕಾಸರಗೋಡು ಜಿಲ್ಲೆಯ ಸುಮಾರು ಹದಿಮೂರು ಶಾಲೆಯ ವಿದ್ಯಾರ್ಥಿಗಳು ಹಾಗೂ ಕಾಲೇಜು ಮಕ್ಕಳು, ಜನಪ್ರತಿನಿಧಿಗಳು, ಹೆತ್ತವರು, ಶಿಕ್ಷಕರು, ಕೃಷಿತಜ್ಞರು, ಪತ್ರಕರ್ತರು, ವೈದ್ಯರು, ಪರಿಸರಪ್ರೇಮಿಗಳು, ಊರವರು ಸೇರಿದಂತೆ ಸುಮಾರು ಇನ್ನೂರಕ್ಕೂ ಮಿಕ್ಕಿ ಜನರು ಬನವಾಸಿಯ ಕಂಡೊಕೋರಿ ನಾಟಿ ಸಂಭ್ರಮದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ತನಕ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಕೃಷಿಜನಪದಕ್ಕೆ ಸಂಬಂಧಿಸಿದ ವಿವಿಧ ಕ್ರೀಡೆ ಹಾಗೂ ಆಟೋಟ ಸ್ಪರ್ದೇಗಳನ್ನು ಏರ್ಪಡಿಸಲಾಗಿತ್ತು.
ಜನಪದ ಕೃಷಿಕಲಾವಿದರಾದ ಲಕ್ಷ್ಮೀ ಕುಂಬ್ಡಾಜೆ ಹಾಗೂ ರಾಧಾ ಮಣ್ಣಾಪು ಇವರು ವಿದ್ಯಾರ್ಥಿಗಳನ್ನು ಜತೆಸೇರಿಸಿ ಓಬೇಲೆ ಕಬಿತವನ್ನು ಹಾಡುತ್ತಾ ನಾಟಿಕಾರ್ಯವನ್ನು ಮುಂದುವರೆಸಿದರು. ಪ್ರಾಧ್ಯಾಪಕಿ ಡಾ. ಆಶಾಲತ ಅವರು ಓಬೇಲೆ ಹಾಡುಗಳ ಆಶಯವನ್ನು ತಿಳಿಸಿದರು. ಗದ್ದೆಬೇಸಾಯದ ಬಗ್ಗೆ ಸುಧೀರ್ಘ ಅನುಭವ ಇರುವ ಕೃಷ್ಣ ಮಣಿಯಾಣಿ ಮಲ್ಲಮೂಲೆ ಹಾಗೂ ಶ್ರೀನಿವಾಸ ಆಳ್ವ ಕಳತ್ತೂರು ಇವರು ವಿದ್ಯಾರ್ಥಿಗಳಿಗೆ ಗೊರಬೆ, ನೊಗ, ನೇಗಿಲು, ಮುಟ್ಟಾಳೆ ಈ ಮುಂತಾದ ಪಾರಂಪರಿಕ ಕೃಷಿ ಉಪಕರಣಗಳ ಪರಿಚಯವನ್ನು ಮತ್ತು ಅವುಗಳ ಉಪಯೋಗವನ್ನು ತಿಳಿಸಿಕೊಟ್ಟರು.
ಬದಿಯಡ್ಕ ಪಂಚಾಯತು ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಈ ಸಂದರ್ಭದಲ್ಲಿ ಮಾತನಾಡಿದರು. ಪ್ರಾಧ್ಯಾಪಕ ಡಾ. ರಾಜೇಶ್ ಬೆಜ್ಜಂಗಳ, ಅಧ್ಯಾಪಕರಾದ ದಿವಾಕರ ಬಲ್ಲಾಳ್, ಜಯಲತ ಟೀಚರ್, ರಾಜೇಶ್ ಮಾಸ್ತರ್ ಉಬ್ರಂಗಳ, ಅನಿಲ್ ಕುಮಾರ್ ಮಾಸ್ತರ್, ಸುಜಿತ್ ಉಪ್ಪಳ, ಜಲಜಾಕ್ಷಿ ಟೀಚರ್, ಮಾಲತಿ ಟೀಚರ್, ಮಹೇಶ ಏತಡ್ಕ, ಶಶಿಧರ ಕುದಿಂಗಿಲ ಈ ಮುಂತಾದವರು ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಗಳಿಗೆ ನೇತೃತ್ವ ನೀಡಿದರು. ವಿವಿಧ ಶಾಲೆಯ ನೂರೈವತ್ತರಷ್ಟು ವಿದ್ಯಾರ್ಥಿಗಳು ಕೆಸರಿಗಿಳಿದರು.
ಮಕ್ಕಳ ಕಂಬಳ, ಮುಟ್ಟಾಟ, ಓಟ, ಹಗ್ಗ ಜಗ್ಗಾಟ, ನಿಧಿ ಹುಡುಕಾಟ, ರಿಲೆ ಈ ಮುಂತಾದ ಕರಾವಳಿ ಜನಪದ ಆಟಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ಇದರಲ್ಲಿ ನಲ್ವತ್ತು ವಿದ್ಯಾರ್ಥಿಗಳು ಬಹುಮಾನ ಪಡೆದರು. ಹೊಸಗದ್ದೆಯಲ್ಲಿ ನಡೆದ ನಾಲ್ಕಕ್ಕಿಂತಲೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ ಪೆರಡಾಲ ಸರಕಾರಿ ಹೈಸ್ಕೂಲಿನ ವಿದ್ಯಾರ್ಥಿ ಸಂದೇಶ ಇವರನ್ನು ʼಬನವಾಸಿ ಕಂಡೊದ ಕೋರಿ ಬಿರ್ಸೆʼ ಎಂದು ಗುರುತಿಸಿ ಅಭಿನಂದಿಸಲಾಯಿತು.
ಹಿರಿಯರಿಗಾಗಿ ನಡೆಸಿದ ಗದ್ದೆ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳಲ್ಲಿ ಜನಪ್ರಿನಿಧಿಗಳು, ಪೋಷಕರು, ಶಿಕ್ಷಕರು ಭಾಗವಹಿದರು. ಬಂದವರಿಗೆಲ್ಲರಿಗೂ ಕರಾವಳಿಯ ಸಾಂಪ್ರದಾಯಿಕ ಶೈಲಿಯ ಲಘೂಪಹಾರ ಹಾಗೂ ಪಾಯಸದೂಟವನ್ನು ಏರ್ಪಡಿಸಲಾಗಿತ್ತು. ಹುರುಳಿ ಚಟ್ನಿ, ಹಲಸಿನಿಂದ ಮಾಡಿದ ವಿವಿಧ ಭಕ್ಷ್ಯಗಳು ವಿದ್ಯಾರ್ಥಿಗಳಿಗೆ ಊರಬೆಳೆಗಳಿಂದ ಮಾಡಿದ ಆಹಾರಗಳ ತಾಜಾರುಚಿಯ ಮಹತ್ವವನ್ನು ತಿಳಿಸಿಕೊಟ್ಟವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ