.
ನಗು ಯಾರಿಗೆ ತಾನೇ ಇಷ್ಟವಾಗಲಿಕ್ಕಿಲ್ಲ? ಚಿಕ್ಕ ಮಕ್ಕಳ ಕಿಲ ಕಿಲ ನಗು ಎಂಥವರನ್ನೂ ಮುದ ಗೊಳಿಸುತ್ತದೆ. ನಮ್ಮ ಮುಖಕ್ಕೆ ಮಂದಹಾಸವೇ ಒಂದು ಆಭರಣ. ಜಗತ್ತಿನಲ್ಲಿ ಎಲ್ಲ ಕಡೆಗೆ ನಗುವನ್ನು ಚೆಲ್ಲಲು ಪ್ರತಿ ವರ್ಷ ಮೇ ತಿಂಗಳ ಮೊದಲನೇ ರವಿವಾರವನ್ನು ಅಂತರರಾಷ್ಟ್ರೀಯ ನಗುವಿನ ದಿನವನ್ನಾಗಿ ಆಚರಿಸಲಾಗುತ್ತದೆ.
ನಗು ಮತ್ತು ಅಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಜೀವನದಲ್ಲಿ ಎರಡು ನಮಗೆ ಗೊತ್ತಿಲ್ಲದಂತೆ ಭಾಗಗಳಾಗಿ ಬಿಟ್ಟಿವೆ.
ನಗುವಿನಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಮುಖ ಅರಳುತ್ತದೆ. ಒಂದು ಹೊಸ ಉತ್ಸಾಹ ಮೂಡುತ್ತದೆ. ನಗು ನಮ್ಮ ಸಂತೋಷದ ಪ್ರತೀಕ. ನಾವು ಮುಖದ ಮೇಲೆ ಮುಗುಳ್ನಗೆ ಇಟ್ಟುಕೊಂಡಿದ್ದರೆ ಅದು ಎಲ್ಲರನ್ನೂ ಆಕರ್ಷಿಸುವ ಶಕ್ತಿ ಹೊಂದಿದೆ. ಅದಕ್ಕೆಂದೇ ಜನ ನಗಲೆಂದೇ laugher club ಸೇರುವುದುಂಟು.
ನಗುಗಳಲ್ಲಿ ಅನೇಕ ಪ್ರಕಾರಗಳನ್ನು ನೋಡಬಹುದು. ಚಿಕ್ಕ ಚಿಕ್ಕ ಮಕ್ಕಳ ಕಿಲಕಿಲ ನಗೆ, ಮುಗುಳ್ನಗೆ, ನೋವುಗಳನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ನಗುವ ಬಲವಂತದ ನಗೆ, ಯಾರಾದರೂ ಕೆಳಗೆ ಜಾರಿ ಬಿದ್ದಾಗ ನೋಡಿ ನಗುವ ಅಪಹಾಸ್ಯದ ನಗೆ, ಅಸಹಾಯಕರನ್ನು ನೋಡಿ ನಗುವ ಕುಹಕದ ನಗೆ ಮುಂತಾದವುಗಳನ್ನು ನೋಡ ಬಹುದು. ಆದರೆ ಯಾರಾದರೂ ಕೆಳಗೆ ಬಿದ್ದಾಗ ನೋಡಿ ನಗುವ ನಗು ಎಂತಹ ಅನಾಹುತವನ್ನು ಸೃಷ್ಟಿಸಿ ಕೊಡುತ್ತದೆ. ಅದಕ್ಕೆ "ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು" ಎನ್ನುವುದು ಇದನ್ನು ಎತ್ತಿ ತೋರಿಸುತ್ತದೆ.
ದುರ್ಯೋಧನ ಇಂದ್ರಪ್ರಸ್ಥದ ಮಯ ನಿರ್ಮಿತ ಸಭಾಭವನದಲ್ಲಿ ಕೆಳಗೆ ಜಾರಿ ಬಿದ್ದಾಗ ದ್ರೌಪದಿ ನೋಡಿ ನಕ್ಕಿದ್ದೇ ಮಹಾಭಾರತ ಯುದ್ಧಕ್ಕೆ ಮೂಲವಾಯಿತು.
ನಾವು ಚಿಕ್ಕವರಿದ್ದಾಗ ಕನ್ನಡ ಚಿತ್ರಗಳಲ್ಲಿ ವಜ್ರಮುನಿಯ ನಗೆ, ಮತ್ತು ಹಿಂದಿ ಚಿತ್ರಗಳಲ್ಲಿ ಅಂಬರೀಶ ಪುರಿಯ ನಗೆ ನೋಡಿ ಗಾಬರಿ ಆಗುತ್ತಿದ್ದೆವು. ನಾಟಕಗಳಲ್ಲಿ ದ್ರೌಪದಿ ವಸ್ತ್ರಾಪಹರಣ ದೃಶ್ಯದ ದುಶ್ಯಾಸನನ ಪಾತ್ರಧಾರಿಯ ನಗೆ ನೋಡಿ ಗಾಬರಿಯಾಗಿ ನಮ್ಮ ಅಮ್ಮನನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತಿದ್ದವು. ಅಷ್ಟರ ಮಟ್ಟಿಗೆ ನಗು ನಮ್ಮ ಮೇಲೆ ಪ್ರಭಾವ ಬೀರಿತ್ತು.
ಜನ ಈಗ ನಗುವ ಸಲುವಾಗಿಯೇ ಕಾಮಿಡಿ ಶೋ ನೋಡುತ್ತಾರೆ. ಬನ್ನಿ ನಗುವನ್ನು ಹಂಚೋಣ. ನಕ್ಕು ಎಲ್ಲರನ್ನೂ ನಗಿಸೋಣ. ಏನಂತೀರಾ...
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ