ವಿಶ್ವ ನಗು ದಿನ ನಾಳೆ...ನಕ್ಕರೇ ಅದುವೇ ಸ್ವರ್ಗ

Upayuktha
0


ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರದಂದು ವಿಶ್ವ ನಗು ದಿನ  ಎಂದು ಆಚರಿಸಿ ಸಂಭ್ರಮಿಸಲಾಗುತ್ತದೆ. ಈ ದಿನದಂದು ಎಲ್ಲಾ ಜಾತಿ, ಧರ್ಮದ ಜನರು ಯಾವುದೇ ಮತ, ಭೇದವಿಲ್ಲದೆ, ಲಿಂಗ ಭೇದವಿಲ್ಲದೆ ವಯಸ್ಸಿನ ನಿರ್ಭಂದ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸೇರಿ ಮನ ಬಿಚ್ಚಿ ನಗುತ್ತಾರೆ. ನಿಷ್ಕಲ್ಮಶವಾಗಿ ಮತ್ತು ವ್ಯಾಪಾರೀಕರಣವಿಲ್ಲದೆ ಮನ ಬಿಚ್ಚಿ ನಕ್ಕು ವಿಶ್ವಬಾತ್ರತ್ವ, ಸಹೋದರತ್ವ ಮತ್ತು ಶಾಂತಿಯ ಸಂಕೇತ ಎಂಬಂತೆ ಎಲ್ಲರೂ ಒಟ್ಟು ಸೇರಿ ನಕ್ಕು ಮನಸ್ಸನ್ನು ಹಗುರಾಗಿಸಲು ಪ್ರಯತ್ನಿಸಲಾಗುತ್ತದೆ. 

ಜನವರಿ 11, 1998 ರಂದು ಭಾರತ ದೇಶದ ಬಾಂಬೆ ನಗರದಲ್ಲಿ  ಈ ಆಚರಣೆ ಆರಂಭವಾಯಿತು. ಸುಮಾರು 12000 ಮಂದಿ ಒಟ್ಟು ಸೇರಿ ನಕ್ಕಿದ್ದರು. ಭಾರತ ದೇಶದ ಡಾ|| ಮದನ್ ಕಟಾರಿಯಾ ಅವರು ಈ ನಗು ಯೋಗ ಆಂದೋಲನದ ರೂವಾರಿ ಯಾಗಿರುತ್ತದೆ. ವೃತ್ತಿಯಲ್ಲಿ ವೈದ್ಯರಾಗಿರುವ ಶ್ರೀಯುತರು ಈ ನಗು ಆಂದೋಲನವನ್ನು 1995 ರಿಂದಲೇ ನಡೆಸುತ್ತಿದ್ದು, ಸಾವಿರಾರು ನಗು ಕ್ಲಬ್‍ಗಳನ್ನು ಆರಂಭಿಸಿ ಜನರಲ್ಲಿ ನಗೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ನಗೆ ಆಂದೋಲನದ ಕೊಡುಗೆಯನ್ನು ಲಂಡನ್ ಟೈಮ್ಸ್ ಪತ್ರಿಕೆ ಗುರುತಿಸಿ ಅವರನ್ನು ಗುರು ಆಫ್ ಗಿಗ್ಲಿಂಗ್ ಎಂಬ ಬಿರುದು ನೀಡಿ ಗುರುತಿಸಿದೆ. ಒಟ್ಟಿನಲ್ಲಿ ನಗುವಿಂದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಹಾಗೂ ಜಾಗೃತಿ ಮೂಡಿಸಿ, ಜನರು ಹೆಚ್ಚು ಹೆಚ್ಚು ನಗುವಂತೆ ಮಾಡುವ ಸದುದ್ಧೇಶ ಈ ಆಚರಣೆ ಹಿಂದೆ ಇದೆ.

ನಕ್ಕರೇ ಅದುವೇ ಸ್ವರ್ಗ:  ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದು ಕೂಡಾ ಒಂದು ಹಣ ಸಂಪಾದನೆಯ ಮಾರ್ಗ ಎಂಬ ಸತ್ಯ ಹಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.ಎಂದು ಸುಂದರವಾದ ದಂತ ಪಂಕ್ತಿಗಳಿಂದ ಮನಬಿಚ್ಚಿ ನಿಷ್ಕಲ್ಮಶವಾಗಿ ಹೃದಯ ತುಂಬಿ ನಕ್ಕಲ್ಲಿ ಮನುಷ್ಯನಿಗೆ ಯಾವುದೇ ರೋಗ ಬರಲಿಕ್ಕಿಲ್ಲ ಎಂದು ತಿಳಿದವರು ಹೇಳುತ್ತಾರೆ. ಜಗತ್ತಿನಲ್ಲಿ ಉಚಿತವಾಗಿ  ಸಿಗುವ ಒಂದೇ ವಸ್ತು ಎಂದರೆ ನಗು. ನಗು ಎನ್ನುವುದು ಸಾಂಕ್ರಾಮಿಕ ನಗುವಿನಿಂದ ಒಬ್ಬ ವ್ಯಕ್ತಿ ತನ್ನ ಜೊತೆಗಿರುವವರನ್ನು ತನ್ನ ಮೋಡಿಗೆ ಬೀಳಿಸುವ ಪರಸ್ಪರ ಅನ್ಯೋನ್ಯತೆ ಬೆಳೆಸುವ ವಿಶ್ವಾಸ ವರ್ಧಿಸುವ ನವಚೈತನ್ಯ ಮೂಡಿಸುವ ಅದ್ಬುತ ಶಕ್ತಿ ನಗುವಿಗೆ ಇದೆ.

ನಾವು ಯಾಕಾಗಿ ನಗಬೇಕು?
1. ನಗು ನಮ್ಮ ಮನಸ್ಸಿಗೆ ಉಲ್ಲಾಸ, ಸಂತಸ ಮತ್ತು ಸಮಾಧಾನ ನೀಡುತ್ತದೆ.
2. ನಗುವಿನಿಂದ ನಮ್ಮ ಶ್ವಾಸಕೋಶದ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು.
3. ನಗುವಿನಿಂದ ಮಾನಸಿಕ ತಳಮಳ, ಭಯ, ಆತಂಕ ಮತ್ತು ಮನೋವ್ಯಾಕುಲತೆಯನ್ನು ಶಮನ ಮಾಡಬಹುದು.
4. ನಗು ನಮ್ಮ ಮನಸ್ಸಿಗೆ ಧೈರ್ಯ ಮತ್ತು ಸದೃಢತೆಯನ್ನು ನೀಡಿ, ಮನೋ ಸ್ಥಿತಿಯನ್ನು ಉಚ್ಚಾಯ ಸ್ಥಿತಿಯಲ್ಲಿ ಇಡುತ್ತದೆ.
5. ಧನಾತ್ಮಕ ಮತ್ತು ಆಶಾದಾಯಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ.
6. ನಗು ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಮತ್ತು ಆಯಾಮವನ್ನು, ದಿಶೆಯನ್ನು ನೀಡುತ್ತದೆ.
7.  ಯಾತನಾಮಯ ಮತ್ತು ನೋವಿನ ಸ್ಥಿತಿಗಳಲ್ಲಿ ಮಾನಸಿಕ ಧೈರ್ಯ ನೀಡಿ ಮನಸ್ಸಿಗೆ ಉಲ್ಲಾಸ ಮತ್ತು ಮುದ ನೀಡುತ್ತದೆ.
8. ದೇಹದ ಪ್ರತಿ ಗ್ರಂಥಿಗಳಿಂದಲೂ ಆರೋಗ್ಯಕ್ಕೆ ಪೂರಕ ದ್ರವ್ಯ ಸ್ರವಿಸಲ್ಪಟ್ಟು ಜೀವಕೋಶಗಳಿಗೆ ಹೊಸ ಚೈತನ್ಯ ನೀಡುತ್ತದೆ.
9. ನಮ್ಮ ಬದುಕಿಗೆ ನಗು ಹೊಸ ಆಯಾಮವನ್ನು ನೀಡಿ ಬಾಳಿಗೆ ಬೆಳಕು ನೀಡುತ್ತದೆ.
10. ನಮ್ಮ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸದೃಢಗೊಳಿಸುತ್ತದೆ. ಜೊತೆಗಿದ್ದವರನ್ನು ಮತ್ತಷ್ಟು ಉಲ್ಲಸಿತರನ್ನಾಗಿ ಮಾಡಿ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಸಣ್ಣಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ವಿವಾದಗಳನ್ನು ಅಂತ್ಯ ಮಾಡುತ್ತದೆ. ಒಟ್ಟಿನಲ್ಲಿ ನಗು ಎನ್ನುವುದು ಉಚಿತವಾಗಿ ದೊರಕುವ ಔಷಧಿ.

ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ.ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಮನಸ್ಸು ಒಮ್ಮೆ ಹಾಯಾಗಿ ನಕ್ಕಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ನಾಯುಗಳು ಸಡಿಲಗೊಂಡು ರಕ್ತ ಸಂಚಾರ ಸುಗಮವಾಗಿ ಆ ಮೂಲಕ ಹೃದಯದ ಕೆಲಸ ಕಾರ್ಯಗಳು ಯಶಸ್ವಿಯಾಗುವಂತೆ ಪರೋಕ್ಷವಾಗಿಕಾರಣವಾಗುತ್ತದೆ.ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.ಅದಕ್ಕಾಗಿಯೇ ನಗುವಿನಲ್ಲಿದೆ ಸ್ವರ್ಗ, ನಗಬಾರದೇಕೆ ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ

ನಗು ಎನ್ನುವುದುಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡುಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳ ಜೊತೆ ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಿ ಬಂದು ಮಾನಸಿಕ ಒತ್ತಡಕಡಿಮೆಯಾಗಿ ನಾವು ಕೂಡ ಹೆಚ್ಚು ಹೆಚ್ಚು ನಗುನಗುತ್ತಾ ನೂರು ಕಾಲ ಬದುಕಬಹುದು.

ನಾವು ಬದುಕುತ್ತಿರುವ ಈಗೀನ ಲೆಕ್ಕಾಚಾರದಜಗತ್ತಿನಲ್ಲಿ ನಗಲೂ ಕೂಡಾ ವ್ಯಾಪಾರಿ ಮನೋಭಾವ ತಾಳುವಂತಹ ಪರಿಸ್ಥಿತಿ ಬಂದೊದಗಿದೆ. ಜೀವನಎನ್ನುವುದು ಬಹುದೊಡ್ಡ ಪ್ರಯಾಣ ಈ ಪ್ರಯಾಣದಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಬರುವುದು ಸಹಜ, ನಮ್ಮ ಜೀವನವೇ ನಮಗೆ ಸವಾಲಾದಾಗ, ಜಟಿಲವಾದಾಗ, ಸಮಸ್ಯೆಯಾಗಿ, ಕಂಟಕವಾಗಿ ನಾವು ತುಂಬಾ ಗಂಭೀರವಾಗಿ ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಸೋಲುತ್ತೇವೆ. ಎದುರಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮುಕ್ತ ಮನಸ್ಸಿನಿಂದ ನಿರ್ಮಲವಾಗಿ, ಸಮಾಧಾನದಿಂದ ಎದುರಿಸುವುದನ್ನು ಕಲಿತಾಗ ಸಮಸ್ಯೆಗಳೇ ಹೊಸತನ್ನು ಮಾಡಲು, ಕಲಿಯಲು ಪ್ರೇರೇಪಿಸುತ್ತದೆ. ನಗುನಗುತ್ತಾ ಇದ್ದರೆ ಜೀವನದಲ್ಲಿ ಬರುವಂತಹಾ ಎಂತಹುದೇ ಕಷ್ಟಗಳನ್ನುಲೀಲಾಜಾಲವಾಗಿ ಎದುರಿಸಬಹುದು.ಬದುಕಿನ ಮಹತ್ತರವಾದ ಗಳಿಗೆಯಲ್ಲಿ, ಕಷ್ಟಕಾಲದಲ್ಲಿ ಆಶಾಕಿರಣವನ್ನು ಬದುಕಿನ ಹೊಸ ಚೈತನ್ಯವನ್ನು, ದಾರಿಯನ್ನುತೋರುವ ಶಕ್ತಿ ನಗುವಿಗೆ ಖಂಡಿತಾ ಇದೆ. ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ. ನಕ್ಕರೆಅದೇ ಸ್ವರ್ಗ, ನಗಬಾರದೇಕೆ ?

-ಡಾ|| ಮುರಲೀ ಮೋಹನ್‍ ಚೂಂತಾರು                                                                               MDS,DNB,MOSRCSEd(U.K), FPFA, M.B.A
ಮೊ : 9845135787 drmuraleechoontharu@gmail.com


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top