ವಿಜ್ಞಾನದ ಕೌತುಕಗಳ ಅರಿಯುವ ಹಾದಿಯಲ್ಲಿ ವಿಶ್ವನಾಥ್ ಮಾಳಿ

Upayuktha
0



ಪ್ರತಿಷ್ಠಿತ ಟಾಟಾ ಸಂಶೋಧನಾ ಕೇಂದ್ರಕ್ಕೆ 2025- 26ನೇ ಸಾಲಿನಲ್ಲಿ ಆಯ್ಕೆಯಾದ ಕರ್ನಾಟಕದ ಏಕೈಕ ವಿದ್ಯಾರ್ಥಿ  ವಿಶ್ವನಾಥ್ ಮಾಳಿ  ಎಂಬುದು ರಾಜ್ಯಕ್ಕೆ ಹೆಮ್ಮೆ.

ಮಾಜಿ ರಾಷ್ಟ್ರಪತಿ ಮತ್ತು ಕ್ಷಿಪಣಿ ಜನಕ ಎಂದು ಹೆಸರಾದ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಹೇಳುವಂತೆ ಕನಸು ನಮ್ಮನ್ನು ನಿದ್ದೆ ಮಾಡಲು ಬಿಡಬಾರದು ನಾವು ಕಾಣುವ ಕನಸು ನಮ್ಮ ನಿರಂತರ ಶ್ರಮ ಮತ್ತು ನಂಬಿಕೆಯ ಜೀವಂತ ನಿದರ್ಶನವಾಗಬೇಕು ಎಂಬುದನ್ನು ಸಾಧಿಸಿ ತೋರಿಸಿದ ಯುವಕನೇ ವಿಶ್ವನಾಥ ಮಾಳಿ.

 ಮೂಲತಃ ಅಥಣಿ ಮೂಲದ ಆದರೆ ಉದ್ಯೋಗ ನಿಮಿತ್ತ ಕರ್ನಾಟಕದ ಹೃದಯ ಭಾಗದಲ್ಲಿರುವ ಗದಗ ಜಿಲ್ಲೆಯ ಪುಟ್ಟ ತಾಲೂಕು ಮುಂಡರಗಿಯಲ್ಲಿ ವಾಸವಾಗಿರುವ ಸುರೇಶ್ ಮಾಳಿ ಅವರ ಪುತ್ರ ವಿಶ್ವನಾಥ್ ಮುಂಡರಗಿಯಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾನೆ. ತನ್ನ ಅಸೀಮ ಆಸಕ್ತಿ ಮತ್ತು ಶ್ರದ್ಧೆಯ ಪರಿಣಾಮವಾಗಿ ಭಾರತದ ಅತ್ಯುನ್ನತ ಸಂಶೋಧನಾ ಸಂಸ್ಥೆ ಯಲ್ಲಿ ಒಂದಾದ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ಸೆಂಟರ್ ನಲ್ಲಿ ಪಿ ಎಚ್ ಡಿ ಅಧ್ಯಯನಕ್ಕೆ ಭಾರತ ದೇಶದ  ಪ್ರತಿಭಾನ್ವಿತ 20 ಜನ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿ ಆಯ್ಕೆಯಾಗಿದ್ದಾನೆ. ವಿಶ್ವನಾಥ್ ಸುರೇಶ್ ಮಾಳಿ ಸಾಧನೆಯ ಹಾದಿ ಅದ್ಭುತವಾದದ್ದು.

ಇಂದಿನ ಯುವ ಸಮುದಾಯಕ್ಕೆ ಯಾವುದೇ ಗೊತ್ತು ಗುರಿಗಳಿಲ್ಲ ಎಂದು ಹೀಗಳೆಯುವ ಜನರ ನಡುವೆ ವೈಜ್ಞಾನಿಕ ಸಂಶೋಧನೆಯಲ್ಲೇ ಆಸಕ್ತಿ ಮತ್ತು ಬದ್ಧತೆಯನ್ನು ಹೊಂದಿದ ವಿಶ್ವನಾಥ್ ಮಾಳಿ ಅಪಾರ ಪ್ರತಿಭಾವಂತ.

 ವಿಜ್ಞಾನ ವಿಷಯವನ್ನು ಹೃದಯದಿಂದ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದಾಗ ಕಲಿಕೆ ಎಂಬುದು ಓರ್ವ ವ್ಯಕ್ತಿಯ ವರ್ತನೆ, ಒಳನೋಟ, ಆಸಕ್ತಿ ಮತ್ತು ಚಿಂತನೆಗಳ ಒಟ್ಟು ಒಳಹೂರಣವನ್ನು ಹೊಂದಿರುವ ತಪಸ್ಸಿನಂತೆ ಎಂದು ಭಾವಿಸಿದ ವಿಶ್ವನಾಥ್ ಎಲ್ಲಿಯೂ ಎಡವದೆ ತನ್ನ ಕಲಿಕೆಯನ್ನು ಮುಂದುವರಿಸಿ ತನ್ನ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದ. ತಂದೆ ಸುರೇಶ್ ಮಾಳಿ ತಾಲೂಕಿನ ನಾಗರಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು ತಾಯಿ ಪ್ರತಿಮಾ ಗೃಹಿಣಿ. ಓರ್ವಕಿರಿಯ ಸಹೋದರ ಪ್ರತೀಕ  ಪಿಯುಸಿ ಓದುತ್ತಿದ್ದಾನೆ. ವಿಶ್ವನಾಥ್ ಶಾಲಾ ಶಿಕ್ಷಣದ ಆರಂಭದಿಂದಲೂ ಚೂಟಿ ಹುಡುಗ ಎಂದೇ ಹೆಸರಾಗಿದ್ದ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಷ್ಟೇ ಅಲ್ಲದೆ ಅಬಾಕಸ್ ನಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಹೆಮ್ಮೆ ವಿಶ್ವನಾಥನದು.

ದೆಹಲಿ ವಿಶ್ವವಿದ್ಯಾಲಯದ ದೆಹಲಿಯ ಪ್ರಸಿದ್ಧ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಪದವಿ ಅಧ್ಯಯನದೊಂದಿಗೆ ಪ್ರಾರಂಭವಾದ ಈತನ ವಿಜ್ಞಾನದ ಆಸಕ್ತಿ ಅದರಲ್ಲೂ ಮುಖ್ಯವಾಗಿ ಭೌತಶಾಸ್ತ್ರದಲ್ಲಿನ ತೀವ್ರ ಆಸಕ್ತಿ ಹೆಚ್ಚಿನ ಅಧ್ಯಯನ ಮಾಡಲು ಪ್ರೇರೇಪಿಸಿತು.
' ಈ ಬೃಹತ್ ವಿಶ್ವವು ಅದೆಷ್ಟು ಸೂಕ್ಷ್ಮ ವಿಷಯಗಳಿಂದ ಕಾರ್ಯನಿರ್ವಹಿಸುತ್ತದೆ ಎಂಬ ಅರಿವು ನನ್ನನ್ನು ಈ ವಿಷಯದಲ್ಲಿ ಸೆಳೆ ಯಿತು' ಎಂದು ಹೇಳುವ ವಿಶ್ವನಾಥ್ ಈ ತಾತ್ವಿಕ ಆಕರ್ಷಣೆಯು ಮುಂದೆ ಐಐಟಿ ರೂಪರ್ ಪಂಜಾಬ್ ನಲ್ಲಿ ತಮ್ಮ ಸ್ನಾತ ಕೋತ್ತರ ವಿದ್ಯಾಭ್ಯಾಸವನ್ನು ಮುಂದುವರಿಸಲು ಪ್ರೇರೇಪಿಸಿತು.

ಕಾಲೇಜಿನ ಪಠ್ಯ ವಿಷಯದ ಹೊರತಾಗಿಯೂ ಸ್ವತಂತ್ರ ಅಧ್ಯಯನದ ಕಡೆ ಹೆಚ್ಚು ಗಮನಹರಿಸಿದ ವಿಶ್ವನಾಥ ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟಾಟಿಸ್ಟಿಕಲ್ ಫಿಸಿಕ್ಸ್ ಮತ್ತು ಇತರ ತತ್ವಾತ್ಮಕ ವಿಷಯಗಳಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡು ಮುಂದಿನ ದಿನಗಳಲ್ಲಿ ಇದೇ ವಿಷಯದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ನಿಖರ ದೃಷ್ಟಿಕೋನವನ್ನು ಗಳಿಸಿದರು.

ವಿಜ್ಞಾನ ಕೂಡ ಆಧ್ಯಾತ್ಮದಂತೆ ತತ್ವಜ್ಞಾನದಂತೆ, ವಿಜ್ಞಾನವೂ ಕೂಡ ತೀವ್ರ ತಾಳ್ಮೆ ಮತ್ತು ತಾಕತ್ತನ್ನು ಬೇಡುತ್ತದೆ ಎಂದು ವಿಶ್ವನಾಥ್ ಹೇಳುತ್ತಾರೆ. ಪ್ರತಿದಿನವೂ ಹೊಸ ಸವಾಲುಗಳು, ಸ್ಪರ್ಧೆಯ ಒತ್ತಡ,ಆತ್ಮಶಂಕೆಗಳ ನಡುವೆಯೂ ಕೂಡ ಭರವಸೆ ಯನ್ನು ಕಳೆದುಕೊಳ್ಳದ ವಿಶ್ವನಾಥ್ ಹೊಸ ಕಲಿಕೆಗೆ ಸವಾಲುಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡರು.

ಪರಿಣಾಮವಾಗಿ ಟಿ ಐ ಎಫ್ ಆರ್ ಪ್ರವೇಶ ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಿದರು. ಹಾಗೆಂದು ಮೂಲಭೂತ ವಿಜ್ಞಾನದ ಈ ಸಾಧನೆ ಕೇವಲ ಶೈಕ್ಷಣಿಕ ಸಾಧನೆ ಅಲ್ಲ... ತಾನು ಬೆಳೆಯುವುದರ ಜೊತೆ ಜೊತೆಗೆ ತನ್ನ ಜೊತೆಗಿರುವವರನ್ನು ಕೂಡ ಬೆಳೆಸುವ ಪ್ರಯತ್ನವನ್ನು ಈ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಕಾಣಬಹುದು.

 ಭಾರತ ದೇಶದಲ್ಲಿ ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯಲ್ಲಿ ಟಾಟಾ ಗ್ರೂಪ್ ಪ್ರಮುಖ ಪಾತ್ರವನ್ನು ವಹಿಸಿದೆ. ಅದರಲ್ಲಿ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಕೂಡ ಒಂದು.ಅಣು ಶಕ್ತಿಯ ಜನಕ ಡಾ.ಹೋಮಿ ಜಹಂಗೀರ್ ಬಾಬಾ ಅವರು  ಟಾಟಾ ಗ್ರೂಪ್ನವರೊಂದಿಗೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಆರ್ಥಿಕ ಸಹಾಯವನ್ನು ನೀಡಲು ಕೋರಿಕೊಂಡರು. ಅದರ ಪರಿಣಾಮವೇ ಸರ್ ದೊರಾಬ್ಜಿ ಟಾಟಾ ಟ್ರಸ್ಟ್. 1945 ಜೂನ್ 1 ರಂದು 
ಜೆ ಆರ್ ಡಿ ಟಾಟಾ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಆರ್ಥಿಕ ಸಹಾಯಕ್ಕಾಗಿನ ಈ ಟ್ರಸ್ಟ್ ನ ಅಡಿಯಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಮೊದಲ ಅಧ್ಯಕ್ಷರಾಗಿ ಭಾರತದ ಅಣು ಶಕ್ತಿ ಜನಕ ಎಂದು ಹೆಸರಾದ ಡಾ. ಹೋಮಿ ಜಹಂಗೀರ್ ಬಾಬಾ ಅವರು ಕಾರ್ಯನಿರ್ವಹಿಸಿದರು. 

ಮೂರು ವಿವಿಧ ರೀತಿಯ ಕೋರ್ಸ್ ಗಳನ್ನು ಕಲಿಯಲು ಟಿ ಐ ಎಫ್ ಆರ್ ನಲ್ಲಿ ಅವಕಾಶವಿದೆ.ಎಂ ಎಸ್ ಸಿ ಮತ್ತು ಪಿಎಚ್ ಡಿ ಯನ್ನು ಜೊತೆಯಾಗಿ, ಕೇವಲ ಪಿಎಚ್ಡಿಯನ್ನು ಮತ್ತು ಜೀವಶಾಸ್ತ್ರ ವಿಷಯದಲ್ಲಿ ಎಂ ಎಸ್ ಸಿ ಯನ್ನು ಕಲಿಯಬಹುದು. ಇಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಮತ್ತು ಸಿಸ್ಟಮ್ ಸೈನ್ಸ್ ಗಳಲ್ಲಿ ಅಧ್ಯಯನ ಮಾಡ ಬಹುದು.

 ಟಿ ಐ ಎಫ್ ಆರ್ ನಲ್ಲಿ ಓದಲು ಮೊದಲು ಅಲ್ಲಿಯ ಪ್ರವೇಶ ಪರೀಕ್ಷೆಯನ್ನು ಪಾಸ್ ಆಗಬೇಕು ಈ ಪ್ರವೇಶ ಪರೀಕ್ಷೆ ಲಿಖಿತವಾಗಿದ್ದು ಇಲ್ಲಿ ಪಾಸಾದ ನಂತರ ಎರಡನೇ ಸುತ್ತಿನಲ್ಲಿ ಮೌಖಿಕ ಇಲ್ಲವೇ ಮತ್ತೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
 ಇದಲ್ಲದೆ ಪರೀಕ್ಷೆ ಇಲ್ಲದೆ ಪ್ರವೇಶ ಪಡೆಯಲು ಜೆಸ್ಟ್(jest) ಗೇಟ್(gate) ನೆಟ್(net) ಪರೀಕ್ಷೆಗಳಲ್ಲಿ ಭೌತಶಾಸ್ತ್ರ ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರಬೇಕು.

 ಟಿ ಐ ಎಫ್ ಆರ್ ನ ಫೆಲೋಶಿಪ್ ಪಡೆದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗೆ ಪ್ರತಿ ತಿಂಗಳು 16 ಸಾವಿರ ರೂಗಳು, ಪಿ ಎಚ್ ಡಿ ಫೆಲೋಶಿಪ್ ನ ವಿದ್ಯಾರ್ಥಿಗಳಿಗೆ ಮೊದಲ ವರ್ಷ ಪ್ರತಿ ತಿಂಗಳು 21 ಸಾವಿರ ಎರಡನೇ ವರ್ಷ 35,000 ಪ್ರತಿ ತಿಂಗಳು ದೊರೆ ಯುತ್ತದೆ.

 ಭಾರತದಾದ್ಯಂತ ಒಟ್ಟು ಏಳು ಟಿ ಐ ಎಫ್ ಆರ್ ನ  ಸಂಶೋಧನಾ ಕೇಂದ್ರಗಳಿದ್ದು ಮುಖ್ಯ ಕೇಂದ್ರವು ಮುಂಬೈಯಲ್ಲಿ ಇದೆ. ಅದಲ್ಲದೆ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಎಂಬ ಶಿಕ್ಷಣ ಸಂಸ್ಥೆಯು ಕೂಡ ಮುಂಬೈಯಲ್ಲಿದೆ. ಮಹಾ ರಾಷ್ಟ್ರದ ಪುಣೆಯಲ್ಲಿ ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಅಸ್ಟ್ರೋ ಫಿಸಿಕ್ಸ್ ಕೇಂದ್ರವಿದ್ದು ಹೈದರಾಬಾದ್ ನಲ್ಲಿ ಕೂಡ ಟಿ ಐ ಎಫ್ ಆರ್ ನ ಶಿಕ್ಷಣ ಕೇಂದ್ರವಿದೆ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (ಅಪ್ಲಿಕೇಶನ್ ಮೆಥೆಮೆಟಿಕ್ಸ್ ), ಐಸಿಟಿಎಸ್ ( ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥೆರಾಟಿಕಲ್ ಸೈನ್ಸಸ್), ಎನ್‌ಸಿಬಿಎಸ್  ನ್ಯಾಷನಲ್ ಸೆಂಟರ್ ಫಾರ್ ಬಯಾಲಜಿಕಲ್ ಸೈನ್ಸ್ )  ಒಟ್ಟು ಮೂರು ಕೇಂದ್ರಗಳಿದ್ದು ಟಿ ಐ ಎಫ್ ಆರ್ ನಲ್ಲಿ ಶಿಕ್ಷಣ ಪಡೆಯಲು ಬಯಸುವವರಿಂದ ಸಂಸ್ಥೆಯು ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾರೆಯೇ ಹೊರತು ಅಗಾಧ ಪ್ರಮಾಣತೆಗಲ್ಲ.

ತತ್ವಶಾಸ್ತ್ರದಲ್ಲಿ ಬಲವಾದ ಸೆಲೆ ಮತ್ತು ನೆಲೆಯನ್ನು ನಿರ್ಮಿಸಿದ ಭೌತಿಕ ವಿಶ್ವದ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಯತ್ನಶೀಲತೆ ಮತ್ತು ಆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವುದು ತನ್ನ ಗುರಿ ಎಂದು ಹೇಳುವ ವಿಶ್ವನಾಥ ನ ಆತ್ಮವಿಶ್ವಾಸದ ಮಾತುಗಳು ಸಂತಸ ಮತ್ತು ಹೆಮ್ಮೆಯನ್ನು ಮೂಡಿಸುತ್ತದೆ.

 ಅತ್ಯಂತ ಚಿಕ್ಕ ತಾಲೂಕು ಪ್ರದೇಶವೊಂದರಲ್ಲಿ ಬೆಳೆದು ವೈಯುಕ್ತಿಕ ಪರಿಶ್ರಮ, ಶ್ರದ್ಧೆ ಮತ್ತು ಶ್ರಮದ ಫಲಶ್ರುತಿಯಾಗಿ ವಿಶ್ವ ಭೂಪಟದಲ್ಲಿ ವಿಶ್ವನಾಥ್ ಕಾಣಿಸಿಕೊಳ್ಳುತ್ತಿರುವುದು ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ ವಿಷಯವಾಗಿದೆ. ಇಂದಿನ ಮೊಬೈಲ್ ಮತ್ತು ಇಂಟರ್ನೆಟ್ ಯುಗದಲ್ಲಿ ರೀಲ್ ಮತ್ತು ಗೇಮ್ಸ್ ಗಳಲ್ಲಿ ತೊಡಗಿಸಿಕೊಂಡು ತಮ್ಮ ರಿಯಲ್ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಯುವಕರ ಮಧ್ಯದಲ್ಲಿ ಸಂಶೋಧನೆಗಾಗಿಯೇ ತಮ್ಮ ಬದುಕನ್ನು ಮುಡುಪಾಗಿರುವ ವಿಶ್ವನಾಥ್ ಅವರ ಸಾಧನೆ ಹೀಗೆ ಮುಂದುವರೆಯಲಿ. ಅವರ ಸಾಧನೆಯಿಂದ ಇನ್ನೂ ಸಾಕಷ್ಟು ಜನ ಪ್ರೇರೇಪಿತರಾಗಲಿ. ಸಮಾಜದ ಹೊಸ ತಲೆಮಾರಿನ ಮಕ್ಕಳಿಗೆ ದಾರಿ ದೀಪವಾಗಲಿ ಎಂದು ಹಾರೈಸುವ

-ವೀಣಾ ಹೇಮಂತ್ ಗೌಡ ಪಾಟೀಲ್
 ಮುಂಡರಗಿ, ಗದಗ್

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top