ಅಕ್ಷರ ನಮನ‌: ಶ್ರೇಷ್ಠ ಯೋಗ ಗುರು ಸ್ವಾಮಿ ಶಿವಾನಂದರು

Upayuktha
0



ಭಾರತೀಯ ಯೋಗ ಜೀವನ ಪದ್ಧತಿಯ ಶ್ರೇಷ್ಠ ರಾಯಭಾರಿಯಂತಿದ್ದ ಪ್ರಸಿದ್ಧ ಯೋಗ ಗುರು ಸ್ವಾಮಿ ಶಿವಾನಂದರು ಭಾನುವಾರ ಮೇ 4 ರಂದು ವಾರಣಾಸಿಯಲ್ಲಿ ವಿಧಿವಶರಾಗಿದ್ದಾರೆ. 


"ಹಿತಭುಕ್ ಮಿತಭುಕ್" ಎಂಬ ಯೋಗಸೂತ್ರದಂತೆ ಬದುಕು, ಸದಾ ಲೋಕಹಿತದ ಚಿಂತನೆ ಹಾಗೂ ಕಾರ್ಯಾನುಷ್ಠಾನ, ಸರಳ ಜೀವನ, ಬಾಲ್ಯದಿಂದಲೂ ಪ್ರತಿ ನಿತ್ಯ ಆಸನ ಪ್ರಾಣಾಯಾಮಗಳ ಸಹಿತ ಯೋಗಾಭ್ಯಾಸ  ಇವು ತಮ್ಮ ಆರೋಗ್ಯಪೂರ್ಣ ದೀರ್ಘಾಯುಷ್ಯದ ಗುಟ್ಟು ಎಂದು ಮೋದೀಜಿ ನೇತೃತ್ವದ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭ ಅವರು ಹೇಳಿದ ಮಾತು.


ಆಗಸ್ಟ್ 8, 1897 ರಂದು ಬ್ರಿಟಿಷ್ ಆಡಳಿತ ಭಾರತದ ಸಿಲೆಟ್ (ಇವತ್ತು ಬಾಂಗ್ಲಾದೇಶದಲ್ಲಿದೆ) ಜಿಲ್ಲೆಯಲ್ಲಿ ಕಡುಬಡತನದ ಬ್ರಾಹ್ಮಣ ಕುಟುಂಬದಲ್ಲಿ ಜನನ.‌ ಆರನೇ ವಯಸ್ಸಿಗೇ ಹೆತ್ತಬ್ಬೆ ಹಾಗೂ ತೀರ್ಥರೂಪರ ವಿಯೋಗದಿಂದ ಆಘಾತಗೊಂಡ ಬಾಲಕ ಮುಂದೆ ಪಶ್ಚಿಮ ಬಂಗಾಳದಲ್ಲಿ ಗುರು ಓಂಕಾರಾನಂದ ಗೋಸ್ವಾಮಿಯವರ ವಾತ್ಸಲ್ಯಪೂರ್ಣ ಪೋಷಣೆಯಲ್ಲಿ ಬೆಳೆದವರು. ಅಂದಿನಿಂದ ಕೊನೆಯುಸಿರಿನ ತನಕ ನಿತ್ಯವೂ ಭಾರತೀಯ ಯೋಗವನ್ನೇ ಉಸಿರಾಡಿದವರು; ಬದುಕಿದವರು ಸ್ವಾಮಿ ಶಿವಾನಂದರು.‌


ಯೋಗಾಭ್ಯಾಸ ನಿರತ ಸ್ವಾಮಿ ಶಿವಾನಂದರು (ಫೈಲ್ ಫೋಟೋ)


ನೂರಾರು ಮಂದಿಗೆ ಯೋಗಾಭ್ಯಾಸವನ್ನು ಯಾವ ಅಪೇಕ್ಷೆಯೂ ಇಲ್ಲದೇ ಕಲಿಸಿರುವುದು ಅವರ ಹೆಗ್ಗಳಿಕೆ. ಒಂದೊಮ್ಮೆ ಕುಷ್ಠ ರೋಗ ಭಾರತವನ್ನು ಬಹುವಾಗಿ ಕಾಡಿದ ಹೊತ್ತಲ್ಲಿ 600ಕ್ಕೂ ಅಧಿಕ ಕುಷ್ಠರೋಗಗಿಗಳ ಪ್ರೀತಿಯಿಂದ ಶುಶ್ರೂಷೆ ನಡೆಸಿ ಯಾವ ಪ್ರಚಾರ ಹಾಗೂ ಸ್ವಾರ್ಥದ ಹಂಬಲವೂ ಇಲ್ಲದೇ ಬದುಕಿಸಿದ್ದು ಅವರ ಜೀವನ ಶ್ರೇಷ್ಠತೆಗೆ ಮತ್ತೊಂದು ನಿದರ್ಶನವಾದೀತು. ದೇಶದಲ್ಲಿ ಕ್ರೈಸ್ತ ಮತಾಂತರಕ್ಕೆ ಶುಶ್ರೂಷೆಯ ಮುಖವಾಡ ಧರಿಸಿ ಪ್ರಚಾರ ಪಡೆದವರಂತೆ ಬದುಕದೇ ಇರುವುದು ಅವರ ಅಪ್ಪಟ ದೇಶಪ್ರೇಮಕ್ಕೆ ನಿದರ್ಶನ.


2019 ರಲ್ಲಿ ಬೆಂಗಳೂರಲ್ಲಿ ಯೋಗರತ್ನ ಪುರಸ್ಕಾರ, 2022 ರಲ್ಲಿ ಭಾರತ ಸರ್ಕಾರದಿಂದ ಅತ್ಯಂತ ಅರ್ಹವಾಗಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿ ಪ್ರಶಸ್ತಿಯ ಮೌಲ್ಯವನ್ನೇ ನೂರ್ಮಡಿಸಿದ ಶ್ರೇಷ್ಠ ದೇಶಪ್ರೇಮಿ ಸ್ವಾಮಿ ಶಿವಾನಂದರು.‌ ಜೀವನ ಪರ್ಯಂತ ಅತಿ ಆಸೆಗಳಿಗೆ ಮರುಳಾಗದೇ ಪ್ರಶಾಂತ ಹಾಗೂ ತೀರಾ ಸರಳ ಜೀವನ ನಡೆಸಿ ಜಗತ್ತೇ ಬೆರಗಾಗುವಂತೆ 129 ವರ್ಷಗಳ ಯಶಸ್ವಿ ನಿರೋಗಿ ಯೋಗ ಜೀವನ ನಡೆಸಿದ ಸಾರ್ಥಕ ದಾಖಲೆ ಮೆರೆದವರು. ಇತ್ತೀಚೆಗೆ ಸಂಪನ್ನಗೊಂಡ ಪ್ರಯಾಗರಾಜದ ಮಹಾಕುಂಭಮೇಳವೂ ಸೇರಿದಂತೆ ಬರೋಬ್ಬರಿ 100 ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಕುಂಭಮೇಳಗಳಲ್ಲಿ ಭಾಗವಹಿಸಿದ ಅದ್ವಿತೀಯ ಸಾಕ್ಷಿ ಪ್ರಜ್ಞೆ ಅವರಾಗಿದ್ದರು.


ಇವತ್ತು ಯೋಗನಾರಾಯಣನ ಪಾದ ಸೇರಿದ ಸ್ವಾಮಿ ಶಿವಾನಂದರ ದಿವ್ಯಾತ್ಮಕ್ಕೆ ದೇವರು ಪರಮಪದ ಕರುಣಿಸಲಿ. ಓಂ ಶಾಂತಿಃ


- ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top