ವಾದ ವಿವಾದಗಳಿಂದ ನಮ್ಮ ಶಕ್ತಿ ವ್ಯಯ ಮಾತ್ರ

Upayuktha
0



ನೀವು ಯಾರೊಂದಿಗಾದರೂ ವಾದ ಮಾಡುವಾಗ ಆ ವ್ಯಕ್ತಿಯಲ್ಲಿ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುವ ಮತ್ತೊಂದು ರೀತಿಯಲ್ಲಿ ಗ್ರಹಿಸುವ ಶಕ್ತಿ ಇದೆಯೇ ಎಂಬುದನ್ನು ಯೋಚಿಸಬೇಕು. ನಿಮ್ಮ ಮಾತುಗಳನ್ನು ಅವರು ಗ್ರಹಿಸಿಕೊಳ್ಳುವುದಿಲ್ಲ ಎಂದಾದರೆ ನೀವು ಅವರೊಂದಿಗೆ ಮಾತನಾಡುವುದರಲ್ಲಿ ಯಾವುದೇ ಅರ್ಥ ಇಲ್ಲ.  ಎಷ್ಟೋ ಬಾರಿ ನಾವು ಮಾಡುವ ಚರ್ಚೆ ಮತ್ತು ವಾದ ವಿವಾದಗಳು ನಮ್ಮ ಶಕ್ತಿಯ ವ್ಯಯವನ್ನು ಮಾತ್ರ ಮಾಡುತ್ತದೆ.

ಒಂದು ಅರ್ಥಪೂರ್ಣ ಸಂಭಾಷಣೆ ಮತ್ತು ಅನಗತ್ಯವಾದ ವಿವಾದಗಳ ನಡುವಿನ ವ್ಯತ್ಯಾಸವೇ ಇದು. ಅನೇಕ ಬಾರಿ ನಾವು ಅದೆಷ್ಟೇ ಸ್ಪಷ್ಟವಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೂ ಕೂಡ ತಿಳಿಯದವರಂತೆ ವರ್ತಿಸುತ್ತಾರೆ. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಇದು ಒಂದು ರೀತಿಯಲ್ಲಿ ಮಲಗಿದಂತೆ ನಟನೆ ಮಾಡುವವರನ್ನು ಎಬ್ಬಿಸಿದಂತೆ,ಎಂದೂ ಸಾಧ್ಯವಾಗು ವುದಿಲ್ಲ. ಅವರು ಕೇಳಿದಂತೆ ನಟಿಸುತ್ತಾರೆ ಆದರೆ ಪ್ರತಿಕ್ರಿಯಿಸುವುದಿಲ್ಲ.


ತಮ್ಮದೇ ನಂಬಿಕೆಯ ಒಳ ಬಾಗಿಲನ್ನು ಚಿಲಕ ಹಾಕಿಕೊಂಡು ಕುಳಿತಿರುವ ಅವರು ಬೇರೆ ರೀತಿಯ ಗ್ರಹಿಕೆಗಳನ್ನು ಒಪ್ಪುವುದೇ ಇಲ್ಲ. ಅಂತಹವರೊಂದಿಗಿನ ಮಾತುಕಥೆಗಳು ನಮ್ಮನ್ನು ಖಾಲಿಯಾಗಿಸುತ್ತವೆ.   ಓರ್ವ ವ್ಯಕ್ತಿಯನ್ನು ನಾವು ಒಪ್ಪಿಕೊಳ್ಳದೆ ಇದ್ದಾಗಲೂ ಕೂಡ ಬೆಳವಣಿಗೆ ಮತ್ತು ತಿಳುವಳಿಕೆಯನ್ನು ಹೊಂದಿರುವ ಮತ್ತು ಅರ್ಥ ಮಾಡಿಕೊಳ್ಳುವ ಪ್ರಗತಿಯಲ್ಲಿ ಕೊಂಡೊಯ್ಯುವ ಜನ ರೊಂದಿಗೆ ಮುಕ್ತವಾಗಿ ಮಾತುಕತೆಯನ್ನು ನಡೆಸಬಹುದು. ಆದರೆ ತಮ್ಮ ಅನುಕೂಲವನ್ನು ಬಿಟ್ಟು ಬೇರಾವುದನ್ನು ನೋಡಲು ಇಚ್ಚಿಸದ ವ್ಯಕ್ತಿಯೊಂದಿಗೆ ಮಾತನಾಡುವುದು ಬಂಡೆಗಲ್ಲಿಗೆ ನಮ್ಮ ಹಣೆಯನ್ನು ನಾವೇ ಜಜ್ಜಿಕೊಂಡಂತೆ.ಯಾವುದೇ ರೀತಿಯ ತರ್ಕ ಮತ್ತು ಸತ್ಯಕ್ಕೆ ನಿಲುಕದ ಅವರನ್ನು ಒಪ್ಪಿಸುವುದು ಗುಡ್ಡಕ್ಕೆ ಕಲ್ಲು ಹೊತ್ತಂತೆ. 


 ಪ್ರಬುದ್ಧತೆ ಎನ್ನುವುದು ವಾದಗಳನ್ನು ಗೆಲ್ಲಲು ಅಲ್ಲ. ಪ್ರಭುದ್ಧತೆ ಎನ್ನುವುದು ವಾದ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಅರಿತಾಗ ಮೌನವಾಗಿ ಒಡಂಬಡುತ್ತದೆ. ನಾನು ಬದಲಾಗುವುದೇ ಇಲ್ಲ ನನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ವ್ಯಕ್ತಿಯನ್ನು ಬದಲಾಯಿಸಲೇಬೇಕೆಂಬ ಹಟ, ಒಪ್ಪಿಸಿ ತೋರಿಸುತ್ತೇನೆ ಎಂಬ ಮೊಂಡತನಗಳು ನಿಜವಾಗಿಯೂ ಅಸಮಂಜಸ.


 ಎಲ್ಲ ಯುದ್ಧಗಳನ್ನು ಹೋರಾಡಿ ಗೆಲ್ಲಬೇಕೆಂದಿಲ್ಲ ಅಂತೆಯೇ ನಾವು ಪ್ರತಿ ಬಾರಿಯೂ ಪ್ರತಿಯೊಬ್ಬರಿಗೂ ಎಲ್ಲದಕ್ಕೂ ವಿವರಣೆ ನೀಡಲೇ ಬೇಕಿಲ್ಲ.  ಕೆಲ ಬಾರಿ ನಾವು ಅತ್ಯಂತ ಸರಳವಾಗಿ ಆದರೆ ದಿಟ್ಟವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರ ಎಂದರೆ ಸಮಸ್ಯೆಯನ್ನು ಸೃಷ್ಟಿಸುವ ಸ್ಥಳದಿಂದ, ವ್ಯಕ್ತಿಗಳಿಂದ ಸಂಬಂಧಗಳಿಂದ ದೂರವಾಗುವುದು. ಹಾಗೆ ಓಡಿ ಹೋಗುವುದು ಪಲಾಯನ ವಾದ ಎಂದೆನಿಸುವುದಿಲ್ಲವೇ ಎಂದು ನೀವು ಕೇಳಿದರೆ ನನ್ನ ಉತ್ತರ ಇಷ್ಟೇ ಅವರ ಮನಸ್ಸಿಗೆ ನಾಟುವಂತೆ ಹೇಳಲು ನಾವು ತಯಾರಿಸುತ್ತೇವೆ.


 ಮತ್ತೆ ಕೆಲ ಬಾರಿ ಕೌಟುಂಬಿಕವಾಗಿ ನಾವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ಇರುತ್ತದೆ. ಅನಿವಾರ್ಯ ವಾಗಿಯಾದರೂ ಸಂಬಂಧಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಹೊಂದಾಣಿಕೆ ಅತ್ಯವಶ್ಯಕ. ಆದರೆ ನಿಮ್ಮನ್ನು ನೀವು ಕೀಳಾಗಿಸಿಕೊಂಡು ನಿಮ್ಮ ಆತ್ಮ ಗೌರವವನ್ನು ಕಳೆದುಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ ಅಂತಹ ಸಮಯದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ ನಿಮ್ಮ ಆ ರೀತಿಯ ಹೊಂದಾಣಿಕೆಗೆ ಯೋಗ್ಯನೇ ಎಂಬುದನ್ನು ನೀವು ಯೋಚಿಸಬೇಕು.


ತೀರ ನಿಮ್ಮ ಆತ್ಮ ಗೌರವವನ್ನು ಕಳೆಯುವಂತಹ ಸಮಯದಲ್ಲಿ ಅಂತಹ ವ್ಯಕ್ತಿಗಳೊಂದಿಗೆ ಒಂದಷ್ಟು ದೂರವನ್ನು ಹೊಂದಲೇಬೇಕು. ಅದು ನಿಮ್ಮ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ.  ಇಲ್ಲದ ದಾಕ್ಷಿಣ್ಯ, ಭಿಡೆಗೆ ಒಳಗಾಗಿ ನಿಮ್ಮತನವನ್ನು ನೀವು ಕಳೆದುಕೊಳ್ಳಬೇಡಿ. ಅದಷ್ಟೇ ಆರ್ಥಿಕ ಸಾಮಾಜಿಕವಾಗಿ ಅವರು ನಿಮಗೆ ಸಹಾಯ ಮಾಡಿದ್ದರೂ ಸರಿಯೇ ಅವರ ಅವಮಾನವನ್ನು ಸಹಿಸುವ ಯಾವುದೇ ಅನಿವಾರ್ಯತೆ ನಿಮಗಿಲ್ಲ. ನಿಮ್ಮ ಭಾವನೆಗಳೊಂದಿಗೆ ಬೇರೆಯವರು ಆಟ ವಾಡಲು ಎಂದಿಗೂ ಅವಕಾಶ ಮಾಡಿಕೊಡಬೇಡಿ.


 ಮತ್ತೆ ಕೆಲ ಜನರು ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬಂತೆ ವರ್ತಿಸುತ್ತಾರೆ. ನೀವು ಅದೆಷ್ಟೇ ನಿಜವನ್ನು ಅವರಿಗೆ ಹೇಳಿ ಒಪ್ಪಿಸಲು ಪ್ರಯತ್ನಿಸಿದರೂ ಅವರು ತಮ್ಮದೇ ಆದ ವಾದಗಳನ್ನು ನಿಮ್ಮ ಮುಂದಿಟ್ಟು ನಿಮಗೆ ಸವಾಲು ಹಾಕುತ್ತಾರೆಯೇ ವಿನಃ  ಸರಿ ತಪ್ಪುಗಳು ಅವಲೋಕನ ಮಾಡುವುದಿಲ್ಲ. ಅಂತಹವರ ಮುಂದೆ ನಕ್ಕು ಸುಮ್ಮನಾಗಿ ಬಿಡುವುದು ಅತ್ಯುತ್ತಮ ಆಯ್ಕೆ.


 ಆದರೆ ಎಲ್ಲರೂ, ಎಲ್ಲರನ್ನೂ, ಎಲ್ಲಾ ಕಾಲದಲ್ಲೂ ಒಪ್ಪಿಸಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಗಳನ್ನು ಸರಿ ಎಂದು ಒಪ್ಪಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ ನಕ್ಕು ಮುಂದೆ ಸಾಗಿ ಬಿಡಿ. ತಪ್ಪೆಂದು ತೋರಿದಾಗ ವಾದ ಮಾಡಿ ನಿಮ್ಮ ಶಕ್ತಿಯನ್ನು ವ್ಯಯ ಮಾಡಿಕೊಳ್ಳ ಬೇಡಿ. ಸ್ನೇಹಿತರೆ ಬದುಕು ಬಲು ಚಿಕ್ಕದು. ಅನವಶ್ಯಕ ವಾದ ವಿವಾದಗಳಲ್ಲಿ ಸಿಲುಕಿಕೊಳ್ಳದೆ ಸುಂದರ ಬದುಕನ್ನು ಕಟ್ಟಿ ಕೊಳ್ಳೋಣ.. ಏನಂತೀರಾ ಸ್ನೇಹಿತರೆ?


-ವೀಣಾ ಹೇಮಂತ್ ಗೌಡ ಪಾಟೀಲ್
 ಮುಂಡರಗಿ, ಗದಗ್ 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top