ಮೌಲ್ಯವರ್ಧಿತ ಶಿಕ್ಷಣ ಇಂದಿನ ಅಗತ್ಯ: ಡಾ. ಸತೀಶ್ಚಂದ್ರ ಎಸ್.

Upayuktha
0

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನೆ



ಉಜಿರೆ: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಿರಂತರ ಸುಧಾರಣೆ ಅಗತ್ಯ ಮಾನದಂಡವಾಗಿದೆ ಹಾಗೂ ಮೌಲ್ಯವರ್ಧಿತ ಶಿಕ್ಷಣ ಇಂದಿನ ಅಗತ್ಯ ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.


 ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದು (ಮೇ 6) 2023-24ನೇ ಸಾಲಿನ ವಿವಿಧ ವಿಭಾಗಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನೆ Academic and Administrative Audit ಪ್ರಕ್ರಿಯೆಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಆಶಯ ಭಾಷಣ ಪ್ರಸ್ತುತಪಡಿಸಿದರು.


 ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನೀತಿ ನಿರೂಪಣೆಗಳಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಮುನ್ನಡೆಯುವ ಸವಾಲಿನ ನಡುವೆ ನಿರಂತರ ಸುಧಾರಣೆಯೂ ಅಗತ್ಯವಾಗಿದೆ. ಮೌಲ್ಯವರ್ಧಿತ ಶಿಕ್ಷಣ ನೀಡಲು ಸ್ಪಷ್ಟ ಗುರಿ, ಉದ್ದೇಶ ಹೊಂದಿರಬೇಕು. ಸಮರ್ಪಕ ಕಾರ್ಯಯೋಜನೆಯೊಂದಿಗೆ ಉದ್ದೇಶ ಮತ್ತು ಫಲಿತಾಂಶದ ಸಾಮ್ಯದ ಪರಿಶೀಲನೆಯೂ ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು.


“ಎಸ್.ಡಿ.ಎಂ. ಕಾಲೇಜು ಮೌಲ್ಯಾಧಾರಿತ ಸಾಂಪ್ರದಾಯಿಕ ಶಿಕ್ಷಣ ನೀಡುವ ಪರಂಪರೆ ಹೊಂದಿದ್ದು, ಅದನ್ನು ಉಳಿಸಿಕೊಳ್ಳುವ ಜೊತೆಜೊತೆಗೆ ಮತ್ತಷ್ಟು ಬೆಳೆಯುವ ಸವಾಲೂ ನಿಮ್ಮ ಮುಂದಿದೆ. ಕಾರ್ಪೊರೇಟ್ ಶೈಲಿಯ ಆಡಳಿತಕ್ಕೆ ಭಿನ್ನವಾದ ಆಡಳಿತ ವ್ಯವಸ್ಥೆ ಹೊಂದಿರುವ ಈ ಕಾಲೇಜಿನಲ್ಲಿ ಪಾಲುದಾರರು (ವಿದ್ಯಾರ್ಥಿಗಳು, ಪೋಷಕರು ಇತ್ಯಾದಿ) ಮತ್ತು ಆಡಳಿತ ಮಂಡಳಿಯ ನಿರೀಕ್ಷೆಗಳನ್ನು ಪೂರೈಸುವುದು ಕಷ್ಟವೆನಿಸಿದರೂ ಅಸಾಧ್ಯವಲ್ಲ. ಸಮರ್ಪಣೆ, ಪರಿಶ್ರಮ ಇತ್ಯಾದಿ ಮೌಲ್ಯಗಳ ಜೊತೆಗೆ ಟೀಂವರ್ಕ್ ಸೂತ್ರವನ್ನೂ ಅಳವಡಿಸಿಕೊಂಡು ನೀವೆಲ್ಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಆ ಮೂಲಕ ಕಾಲೇಜಿನ ಪರಂಪರೆಯನ್ನು ಮುನ್ನಡೆಸುತ್ತಿದ್ದೀರಿ” ಎಂದು ಅವರು ಬೋಧಕ ಸಿಬ್ಬಂದಿಯನ್ನು ಅಭಿನಂದಿಸಿದರು.


ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಕಾಲೇಜಿನ ಅಭಿವೃದ್ಧಿ, ಸಾಧನೆಗಳ ಕುರಿತು ಬೆಳಕು ಚೆಲ್ಲಿದರು. 1966ರಲ್ಲಿ ಆರಂಭಗೊಂಡ ಕಾಲೇಜು ಮೌಲ್ಯಾಧಾರಿತ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸಾಮರ್ಥ್ಯವೃದ್ಧಿಗೆ ನೆರವಾಗುತ್ತಿದೆ ಎಂದು ಅವರು ತಿಳಿಸಿದರು.


ವಿದ್ಯಾರ್ಥಿಗಳಿಗೆ ಪಠ್ಯ, ಸಹಪಠ್ಯ  ಹಾಗೂ ಪಠ್ಯೇತರ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆಗೆ ಅವಕಾಶ ನೀಡುತ್ತಿದೆ. ಮಣ್ಣು ಪರೀಕ್ಷಾ ಕೇಂದ್ರ, ತೆರಿಗೆ ಸಲಹೆ ಕೇಂದ್ರ, ಸಮುದಾಯ ಬಾನುಲಿ ಇತ್ಯಾದಿ ವ್ಯವಸ್ಥೆಗಳ ಉಚಿತ ಸೇವೆಯ ಮೂಲಕ ಸಾರ್ವಜನಿಕರಿಗೂ ಪ್ರಯೋಜನಕಾರಿಯಾಗಿದೆ. 1601 ವಿದ್ಯಾರ್ಥಿಗಳಿಗೆ ಒಟ್ಟು 66,37,893 ರೂ. ಮೊತ್ತದ ವಿದ್ಯಾರ್ಥಿವೇತನ ಒದಗಿಸಲಾಗಿದೆ. ಶೇ. 45.56ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಾಗೂ ಶೇ. 34.80 ರಷ್ಟು ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರ ಪ್ರವೇಶಿಸಿದ್ದಾರೆ ಎಂದು ಅವರು ವಿವರಿಸಿದರು.


ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನಾ ಸಮಿತಿಯ ತಜ್ಞರಾದ ಎಸ್.ಡಿ.ಎಂ. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ಸಂಯೋಜಕ (ವಿಶ್ರಾಂತ) ಡಾ. ಶಂಕರನಾರಾಯಣ್, ವಿಶ್ರಾಂತ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಹಾಗೂ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಅಕ್ಯಾಡೆಮಿಕ್ ಕೊ-ಆರ್ಡಿನೇಟರ್ ಎಸ್.ಎನ್. ಕಾಕತ್ಕರ್ ಅವರು ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿವರಗಳನ್ನು ಪಡೆದು ಸಲಹೆ, ಸೂಚನೆ ನೀಡಿದರು.


ಕಾಲೇಜಿನ ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯಾ ಬಿ.ಪಿ. ಹಾಗೂ ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.


ಉಪ ಪ್ರಾಂಶುಪಾಲೆ ನಂದಕುಮಾರಿ ಕೆ.ಪಿ. ಸ್ವಾಗತಿಸಿದರು. ಐಕ್ಯುಎಸಿ ಸಂಯೋಜಕ ಗಜಾನನ ಆರ್. ಭಟ್ ನಿರೂಪಿಸಿ ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top