ಹೆಂಡತಿ ಎಂದರೆ ಜಾಣ್ಮೆ ಮತ್ತು ಜವಾಬ್ದಾರಿಯ ಪ್ರತಿರೂಪವಾಗಿರಬೇಕು

Upayuktha
0



ಕಾರ್ಯೇಶು ದಾಸಿ, ಕರಣೇಶು ಮಂತ್ರಿ, ಭೋಜ್ಯೇಶು ಮಾತಾ, ರೂಪೇಶು ಲಕ್ಷ್ಮಿ, ಶಯನೇಷು ರಂಭಾ, ಕ್ಷಮಯಾಧರಿತ್ರಿ ಎಂಬ ಆರು ಗುಣಲಕ್ಷಣಗಳನ್ನು ಮಹಿಳೆಗೆ ನೀಡಿದ್ದು ಆಕೆ ಹೀಗೆಯೇ ಇರಬೇಕು ಎಂದು ಈ ಸಮಾಜ ಮತ್ತು ನಮ್ಮ ಸಂಸ್ಕೃತಿ ಹೇಳುತ್ತದೆ.

ಪ್ರತಿಯೊಬ್ಬ ವಿವಾಹಿತ ಸ್ತ್ರೀಯಿಂದ ಕೆಳಕಂಡ ವಿಷಯಗಳಲ್ಲಿ ನಿರೀಕ್ಷೆಯನ್ನು ಮಾಡಲಾಗುತ್ತದೆ. ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣು ಮಗಳು ತನ್ನ ಅತ್ತೆ ಮಾವನ ಊಟೋಪಚಾರ ಮತ್ತು ಆರೋಗ್ಯದ ಕಾಳಜಿಯನ್ನು ಮಾಡುತ್ತಾಳೆ. ಮನೆಗೆ ಬರುವ ಅತಿಥಿಗಳ ಆದರದಿಂದ ಸ್ವಾಗತಿಸಿ ಅವರ ತಿಂಡಿ ತೀರ್ಥದ ವ್ಯವಸ್ಥೆ ಮಾಡುತ್ತಾಳೆ. ಗಂಡನ ಎಲ್ಲಾ ಕಷ್ಟ ಸುಖಗಳಿಗೆ ಹೆಗಲು ನೀಡುವ ಹೆಂಡತಿ ಮಕ್ಕಳ ಆರೋಗ್ಯ, ಊಟ, ತಿಂಡಿ ಮತ್ತು ಶಿಕ್ಷಣದ ಕುರಿತ ಜವಾಬ್ದಾರಿಯನ್ನು ಕೂಡ ಹೊರುತ್ತಾಳೆ. ಇದು ಈ ಸಮಾಜ ಹೆಣ್ಣು ಮಕ್ಕಳಿಗೆ ನೀಡಿರುವ ಗುರುತರ ಜವಾಬ್ದಾರಿಯಾಗಿದೆ.


ಆದರೆ ಪತ್ನಿಯಾಗಿ ಆಕೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿರುತ್ತದೆ. ಎಷ್ಟೋ ಬಾರಿ ಕುಟುಂಬದ ಉಳಿದೆಲ್ಲ ವಿಷಯಗಳನ್ನು ನಿಭಾಯಿಸುವ ಹೆಣ್ಣುಮಗಳು ಒಳ್ಳೆಯ ಪತ್ನಿಯಾಗುವಲ್ಲಿ ಸೋಲಲು ಕಾರಣ ಆಕೆಗೆ ಕೆಲ ವಿಷಯಗಳ ಅರಿವು ಉಂಟಾಗದೆ ಹೋಗುವುದು. ಓರ್ವ ಒಳ್ಳೆಯ ಪತ್ನಿಯಾಗುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಈ ಕೆಳಗಿನ ವಿಷಯಗಳಲ್ಲಿ ಪರಿಣತಿಯನ್ನು ಸಾಧಿಸಲೇಬೇಕು. ಅವುಗಳಲ್ಲಿ ಮೊಟ್ಟ ಮೊದಲನೆಯದಾಗಿ ತನ್ನ ಪತಿ ಆಡುವ ಮಾತುಗಳನ್ನು ಸ್ಪಷ್ಟವಾಗಿ ಆಲಿಸುವ ಮೂಲಕ ಒಳ್ಳೆಯ ಕೇಳುಗಳಾಗಿರಬೇಕು. ಜೊತೆಗೆ ತಾನು ಕೂಡ ಉತ್ತಮ ಮತ್ತು ಮುಕ್ತ ಸಂವಹನಕಾರ್ತಿ ಯಾಗಿರಬೇಕು. 

ವಿಷಯವನ್ನು ಸ್ಪಷ್ಟವಾಗಿ ಹೇಳಲೇಬೇಕು. ಪತ್ನಿಯಾಗಿ ಬರುವ ಯುವತಿ ಭಾವನಾತ್ಮಕ ಜಾಣ್ಮೆಯನ್ನು ಹೊಂದಿದ್ದು ತನ್ನ ಭಾವನೆಗಳನ್ನು ಉತ್ತಮವಾಗಿ ನಿರ್ವಹಿಸುವ ಜಾಣ್ಮೆ ಆಕೆಯಲ್ಲಿದ್ದು ಆ ಮೂಲಕ ತನ್ನ ಪತಿ ಮತ್ತು ತನ್ನ ನಡುವೆ ಉಂಟಾಗುವ ಸಂಘರ್ಷಗಳನ್ನು ಆರೋಗ್ಯಕರವಾಗಿ ಮತ್ತು ರಚನಾತ್ಮಕವಾಗಿ ಬಗೆಹರಿಸುವ ಜಾಣತನ ಆಕೆಯಲ್ಲಿ ಇರಬೇಕು.


ಪತಿಗೆ ಉತ್ತಮ ಸಹಕಾರ ಮತ್ತು ಸಹಾಯವನ್ನು ನೀಡುವಂತಹ ಪತ್ನಿ ಆಗಿರಬೇಕು. ಗಂಡನ ಕನಸು, ಗುರಿ ಮತ್ತು ಆಕಾಂಕ್ಷೆಗಳಿಗೆ ಆಕೆ ಪ್ರೋತ್ಸಾಹ ನೀಡಬೇಕು. ಆತನ ಚಿಕ್ಕ ಪುಟ್ಟ ಯಶಸ್ಸುಗಳನ್ನು ಸಂಭ್ರಮಿಸಬೇಕು. ಪರಸ್ಪರ ಒಬ್ಬರಿಗೊಬ್ಬರು ಊರು ಗೋಲಾಗಿ ಬದುಕಿನ ಪಯಣದಲ್ಲಿ ಸಾಗಬೇಕು.  ಪತಿ ಪತ್ನಿಯರಲ್ಲಿ ಗೌರವ ಮತ್ತು ನಂಬಿಕೆ ಇರಬೇಕು. ಸಂಗಾತಿಯ ಭಾವನೆಗಳು, ಅಭಿಪ್ರಾಯಗಳು ಮತ್ತು ಮಿತಿಗಳನ್ನು ಅರಿತಿರಬೇಕು. ತನ್ನ ಮಾತುಕತೆ ಮತ್ತು ಕ್ರಿಯೆಗಳ ಮೂಲಕ ತನ್ನ ಪತಿಯೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಿಕೊಳ್ಳಬೇಕು.


ತನ್ನ ಪತಿಯೊಂದಿಗೆ ಉತ್ತಮ ಜೊತೆಗಾರಿಕೆಯನ್ನು ಹೊಂದಿದ್ದು ಜವಾಬ್ದಾರಿಗಳನ್ನು ಪರಸ್ಪರ ಹಂಚಿಕೊಂಡು ನಿರ್ವಹಿಸಬೇಕು. ಕೌಟುಂಬಿಕ ಗುರಿಗಳನ್ನು ಹೊಂದಿ ಅವುಗಳನ್ನು ನಿರ್ವಹಿಸುವಲ್ಲಿ ಜೊತೆಯಾಗಿರಬೇಕು. ಆತ್ಮೀಯತೆ ಮತ್ತು ಪ್ರೀತಿಯ ಭಾವ ದಾಂಪತ್ಯದಲ್ಲಿ ಬೆಚ್ಚನೆಯ ಅನುಭವವನ್ನು ನೀಡುತ್ತದೆ. ಪತಿಯೊಂದಿಗೆ ಉತ್ತಮ ಗುಣಮಟ್ಟದ ಸಮಯ ನಿರ್ವಹಣೆಯನ್ನು ಮಾಡಬೇಕು. ಜಾಣ ಮತ್ತು ಆಕರ್ಷಕ ಪತ್ನಿ ಪ್ರೀತಿ ಮತ್ತು ಅನ್ಯೋನ್ಯ ಭಾವದಿಂದ ಗಂಡನ ಮನಸ್ಸನ್ನು ಗೆಲ್ಲಬೇಕು. ತನ್ನ ವೈಯುಕ್ತಿಕ ಬೆಳವಣಿಗೆಯತ್ತ ಗಮನಹರಿಸುವ ನಿಟ್ಟಿನಲ್ಲಿ ತನಗೆ ಇಷ್ಟವಾದ ಹವ್ಯಾಸಗಳಲ್ಲಿ, ಹೊಸ ವಿಷಯಗಳ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ತನ್ನದೇ ಆದ ಗುರಿಗಳನ್ನು ಹೊಂದಿ ಅವುಗಳನ್ನು ಈಡೇರಿಸಿಕೊಳ್ಳಬೇಕು.  ಕೃತಜ್ಞತೆ ಮತ್ತು ಕ್ಷಮಾ ಗುಣವನ್ನು ರೂಡಿಸಿಕೊಂಡಿರಬೇಕು. ಗಂಡನ ಮತ್ತು ಕುಟುಂಬದವರ ಸ್ವಭಾವವನ್ನು ಅರಿಯಬೇಕು. ಯಾವುದೇ ರೀತಿಯ ತೊಂದರೆ, ಅಸಮಾಧಾನ ಮತ್ತು ಕಿರಿಕಿರಿಗಳು ಮನೆಯಲ್ಲಿ ಉಂಟಾದಾಗ ತನ್ನ ಸಂಗಾತಿಯ ದೃಷ್ಟಿಕೋನವನ್ನು ಅರ್ಥೈಸಿಕೊಳ್ಳಬೇಕು. 

  
ತನ್ನ ಎಲ್ಲಾ ಕ್ರಿಯೆಗಳಿಗೆ ತಾನೇ ಜವಾಬ್ದಾರಿಯಾಗುವ ಗುಣವನ್ನು ಹೊಂದಿರಬೇಕು ಅವಶ್ಯಕತೆ ಇದ್ದಾಗ ತನ್ನ ಕ್ರಿಯೆಗಳಿಗೆ ಕ್ಷಮೆ ಕೇಳುವುದು ಕೂಡ ಆಕೆಗೆ ಗೊತ್ತಿರಬೇಕು. ತನ್ನ ಬದ್ಧತೆಗಳಿಗೆ ತಾನೇ ಹೊಣೆಗಾರಳಾಗಬೇಕು.  ಪತ್ನಿಯಾದವಳು ಕೃತಜ್ಞತೆ ಮತ್ತು ಹೊಗಳಿಕೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ತನ್ನ ಸಂಗಾತಿಯ ಕೃತಜ್ಞತೆಯನ್ನು ಅರ್ಪಿಸುವ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು. 

.
ಈ ರೀತಿಯ ಉತ್ತಮ ಗುಣಗಳನ್ನು ಪತ್ನಿಯ ಹೊಂದಿದ್ದರೆ ಆಕೆ ಖಂಡಿತವಾಗಿಯೂ ಒಳ್ಳೆಯ ಪತ್ನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಕೂಡ ಉತ್ತಮ ಪತ್ನಿ ಎಂದು ಕರೆಸಿಕೊಳ್ಳುವ ಆಸಕ್ತಿಯನ್ನು ಹೊಂದಿದ್ದರೆ ಖಂಡಿತವಾಗಿಯೂ ಈ ಸಲಹೆಗಳನ್ನು ಪಾಲಿಸಿ.


 -ವೀಣಾ ಹೇಮಂತ್ ಗೌಡ ಪಾಟೀಲ್ 
ಮುಂಡರಗಿ, ಗದಗ್.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top