ದೆಹಲಿ-ಮುಂಬಯಿ-ಮಂಗಳೂರು ಮಧ್ಯೆ ಸಂಚಾರಕ್ಕೆ ವ್ಯಾಪಕ ಬೇಡಿಕೆ: ಡಾ. ಪೆರ್ಲ

Upayuktha
0

 ನಿತ್ಯ ವಿಮಾನ ಸೇವೆಗೆ ಹರ್ಷ: ಕಲಬುರಗಿ ಉಡಾನ್ ಸ್ಕೀಮ್ ಗೆ ಸೇರುವುದೇ? 



ಕಲಬುರಗಿ: ಪ್ರತಿಷ್ಠಿತ ಕಲಬುರಗಿ ವಿಮಾನ ನಿಲ್ದಾಣದಿಂದ ನಿತ್ಯ ವಿಮಾನ ಸಂಚಾರವು  ಏಪ್ರಿಲ್ 16 ರಿಂದ ಪ್ರಾರಂಭಗೊಂಡಿರುವುದಕ್ಕೆ ಸಂತಸವಾಗಿದೆ ಹಾಗೂ ಕೇಂದ್ರ ಸರಕಾರವು ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆ ಸ್ಕೀಮ್ ಗೆ ಸೇರಿಸುವಂತೆ  ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಒತ್ತಾಯಿಸಿದ್ದಾರೆ.


ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರವು ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ನೂರಾರು ಕೋಟಿ ವೆಚ್ಚ ಮಾಡಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸುಮಾರು 80 ಕೋಟಿ ರೂಪಾಯಿ ವೆಚ್ಚ ಮಾಡಿ 2023 ಮೇ ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ಹಾಗು ಇತರ ಸೌಲಭ್ಯಗಳನ್ನು ಕಲ್ಪಿಸಿದರೂ ಉಡಾನ್ ಯೋಜನೆಯಿಂದ ಕಲಬುರಗಿ ವಿಮಾನ ನಿಲ್ದಾಣವನ್ನು ಕೈಬಿಟ್ಟಿರುವುದು ಬೇಸರದ ಸಂಗತಿ.  ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ನಿರ್ವಹಣೆ ಮತ್ತು ವಿಮಾನ ನಿಲ್ದಾಣ ನಿರ್ವಹಣೆಗಾಗಿ ಒಟ್ಟು 350 ಮಂದಿ ಸಿಬ್ಬಂದಿಗಳು ಕಾರ್ಯ ವೆಸಗುತ್ತಿದ್ದು ನಿರೀಕ್ಷಿತ ಸಂಖ್ಯೆಯ ವಿಮಾನಗಳಿಲ್ಲದೆ ಸೊರಗುತ್ತಿದೆ.


ನಿತ್ಯ ವಿಮಾನ ಸಂಚಾರ ಆರಂಭ

ಕಲಬುರಗಿ ವಿಮಾನ ನಿಲ್ದಾಣದಿಂದ  ಪ್ರತಿನಿತ್ಯ ವಿಮಾನ ಸಂಚಾರ ನಡೆಸುತ್ತಿದ್ದು ಸ್ಟಾರ್ ಏರ್ ಲೈನ್ಸ್ ವಿಮಾನ ಬೆಂಗಳೂರಿನಿಂದ ಬೆಳಿಗ್ಗೆ 11 ಗಂಟೆಗೆ ಹೊರಟು ಕಲಬುರಗಿಗೆ 12.10ಕ್ಕೆ ಆಗಮಿಸಿ 12:40ಕ್ಕೆ ಬೆಂಗಳೂರಿಗೆ ವಾಪಸ್ ಆಗುತ್ತಿದೆ.  ಇದರಿಂದ ಪ್ರಯಾಣಿಕರಿಗೆ  ಅನುಕೂಲವಾದರೂ  ಮುಂಜಾನೆಯ ವೇಳೆ ವಿಮಾನ ಸಂಚಾರವಿದ್ದರೆ ಬೆಂಗಳೂರಿಗೆ ಹೋಗಿ ಕೆಲಸ ನಿರ್ವಹಿಸಲು ಇನ್ನಷ್ಟು ನೆರವಾಗುತ್ತಿತ್ತು. ವೇಳೆ ಬದಲಾವಣೆ ಮಾಡಿದರೆ  ಮಾತ್ರ ವಿಮಾನ ಸಂಸ್ಥೆಗಳು ಲಾಭದಾಯಕವಾಗಿ ಕಾರ್ಯನಿರ್ವಹಿಸಲಿದೆ. ಇಲ್ಲವಾದರೆ ಆದಾಯ ಕುಸಿತ ಕಾರಣ ಹೇಳಿ ಮತ್ತೆ  ಸಂಚಾರವನ್ನು ಸ್ಥಗಿತಗೊಳಿಸುವ ಅಪಾಯವಿದೆ. ಬಲ್ಲ ಮೂಲಗಳ ಪ್ರಕಾರ ಮೇ ತಿಂಗಳಿನಿಂದ ಸಂಚಾರ ವೇಳೆ ಬದಲಾಗುವ ಸೂಚನೆ ಇದೆ.


ಲಾಭದಾಯಕ ಮಾರ್ಗಗಳಿದ್ದರೂ ಸಂಚಾರಕ್ಕೆ ಹಿಂದೇಟು

ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯ ವಿಮಾನ ಸಂಚಾರ ಪ್ರಾರಂಭವಾಗಿ ಸಾಕಷ್ಟು ಪ್ರಯಾಣಿಕರು ಸಂಚರಿಸುವ ಅನುಕೂಲ ಸಿಕ್ಕಿದ್ದು ಇನ್ನಷ್ಟು ಲಾಭದಾಯಕವಾಗಿ ನಡೆಯಲು ಕಲಬುರಗಿಯಿಂದ ದೆಹಲಿ, ಮಂಗಳೂರು ಹಾಗೂ ಮುಂಬೈ ಮಾರ್ಗದಲ್ಲಿ ಶೀಘ್ರ ವಿಮಾನ  ಸಂಚಾರದ  ಅಗತ್ಯವಿದೆ. 


ಈ ಬಗ್ಗೆ ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರವು ಸಂಬಂಧಪಟ್ಟವರಿಗೆ ಮನವಿ ಮಾಡಿದರೂ  ನಿಷ್ಪಯೋಜಕವಾಗಿದ್ದು ಪ್ರಯಾಣಿಕರ ದಟ್ಟಣೆ, ಹೊಸ ಮಾರ್ಗಗಳಿಗೆ ಸಂಚರ ಆರಂಭಿಸುವ ಅಗತ್ಯ ಆದಾಯ ಗಳಿಕೆಯ ವಿವಿಧ ಮಾರ್ಗಗಳು ಈ ಬಗ್ಗೆ ವಿಸ್ತೃತ ಅಧ್ಯಯನ ವರದಿ ಸಿದ್ಧಪಡಿಸಲು ಈಗಾಗಲೇ ತಯಾರಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿಗೆ ಸದ್ಯ ಸಂಚರಿಸುತ್ತಿರುವ ಎಲ್ಲಾ ರೈಲುಗಾಡಿಗಳು ಭರ್ತಿಯಾಗಿ ಟಿಕೆಟ್ ಗಳು ಕೂಡಾ ಲಭ್ಯವಾಗುತ್ತಿಲ್ಲ. ಮಂಗಳೂರಿಗೆ ನಿತ್ಯ ನಾಲ್ಕರಿಂದ ಐದು ಬಸ್ಸುಗಳು ಸಂಚಾರ ಮಾಡುತ್ತಿದ್ದು ದುಬಾರಿ ಟಿಕೆಟ್ ದರ ನೀಡಬೇಕಾಗಿದೆ ಮಾತ್ರವಲ್ಲ 15 ಗಂಟೆಗಳ ಪ್ರಯಾಣದ ಕಷ್ಟ ಅನುಭವಿಸಬೇಕಾಗಿದೆ. ಮುಂಬೈಗೆ ಕಲ್ಯಾಣ ಕರ್ನಾಟಕ ಭಾಗದಿಂದ ಸಾಕಷ್ಟು ಜನ ರೈಲಿನಲ್ಲಿ ಸಂಚರಿಸುತ್ತಿದ್ದು ವಿಮಾನದ ಬೇಡಿಕೆ ಹೆಚ್ಚಾಗಿದೆ.  ಖಾಸಗಿ ವಿಮಾನ ಸಂಸ್ಥೆಯು ಮುಂಬೈಗೆ ಸಂಚಾರ ಪ್ರಾರಂಭ ಮಾಡಲು ಉತ್ಸುಕವಾಗಿದ್ದರೂ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲು ಮುಂಬೈ ವಿಮಾನ ನಿಲ್ದಾಣ ಅಧಿಕಾರಿಗಳು ಸ್ಲಾಟ್ ನೀಡದಿರುವುದು ಸಮಸ್ಯೆ ಆಗಿದೆ ಎಂದು  ತಿಳಿದು ಬಂದಿದೆ.


ಸಂಸದರಿಗೆ ಅಭಿನಂದನೆ

ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯ ವಿಮಾನ ಹಾರಾಟ ಪ್ರಾರಂಭ ಮಾಡಿರುವುದಕ್ಕೆ ಹಾಗೂ ದೆಹಲಿ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಸಂಪರ್ಕ ಮಾಡಲು ಒತ್ತಾಯಿಸಿ ಲೋಕಸಭೆಯಲ್ಲಿ ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿಯವರು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರ ಗಮನ ಸೆಳೆದು ಒತ್ತಾಯಿಸಿರುವುದಕ್ಕೆ ಅಭಿನಂದನೆಗಳು . ಕೇವಲ ದೆಹಲಿ ಮತ್ತು ಬೆಂಗಳೂರಿಗೆ ಮಾತ್ರ ವಿಮಾನ ಸಂಚಾರ ಪ್ರಾರಂಭಿಸುವುದಲ್ಲದೆ 


ಮಂಗಳೂರು ಮತ್ತು ಮುಂಬೈಗೂ ಸಂಚಾರ ಪ್ರಾರಂಭಿಸಲು ಲೋಕಸಭಾ ಸದಸ್ಯರು ಒತ್ತಾಯಿಸಬೇಕು. ಉಡಾನ್ ಯೋಜನೆಯಡಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣವು ಈ ಹಿಂದೆ ಕಾರ್ಯಾಚರಿಸುತ್ತಿದ್ದು ಈಗ ಆ ಸೌಲಭ್ಯದಿಂದ ವಂಚಿತವಾಗಿದೆ. ಮತ್ತೆ ಉಡಾನ್ ಯೋಜನೆಯಡಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಸೇರ್ಪಡೆ ಮಾಡಲು ಸಂಸದರು ಒತ್ತಾಯಿಸುವುದು ಕೂಡಾ ಅತ್ಯಂತ ಅಗತ್ಯ ಎಂದು ಸಲಹೆ ನೀಡಿದ್ದಾರೆ. 


ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ರಾಜ್ಯದ ಎರಡನೇ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣವೆಂದು ಕಲಬುರಗಿ ಹೆಸರು ಪಡೆದಿದ್ದರೂ ಎಲ್ಲವೂ ನಿಷ್ಪ್ರಯೋಜಕ ಎಂಬಂತಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಐಟಿ-ಬಿಟಿ ಸ್ಥಾಪನೆಗೆ ವಿಮಾನ ಸಂಚಾರದ ಸೌಲಭ್ಯವು ಒಂದು ಮಾನದಂಡವಾಗಿದ್ದು ಕೂಡಲೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಎಂದು ಡಾ.ಪೆರ್ಲ ಒತ್ತಾಯಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top