" ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. "
-ಕೆ.ಎನ್. ಚಿದಾನಂದ, ಹಾಸನ
ಇಂತಹ ಮನೆಮಾತಾಗಿರುವ ನೀತಿಯುಕ್ತ ವಚನಾಮೃತವನ್ನು ಈ ಲೋಕಕ್ಕೆ ನೀಡಿದವರ್ಯಾರು ಗೊತ್ತೆ? ಅವರೇ ಕಲ್ಯಾಣದ ಕ್ರಾಂತಿಯೋಗಿ, ಜಗಜ್ಯೋತಿ, ಜಗದ್ಗುರು, ಅನುಭವ ಮಂಟಪದ ನಿರ್ಮಾತೃ, ಸಾಮಾಜಿಕ ಧಾರ್ಮಿಕ ಸುಧಾರಕ, ಹಿಂದೂ ತತ್ವಜ್ಞಾನಿ, ವಚನ ಚಳವಳಿಯ ನಾಯಕ, ಮಹಾನ್ ಮಾನವತಾವಾದಿ, ನಡೆನುಡಿಗಳ ಸಮನ್ವಯ ಸಾಧಕ, ಕಾಯಕ ಯೋಗಿ, ಯೋಗಿಜಂಗಮ, ಅಧ್ಯಾತ್ಮ ಜ್ಞಾನಿ, ವೈಚಾರಿಕ ಚಿಂತಕ, ಅರ್ಥಶಾಸ್ತ್ರಜ್ಞ, ವಿಶ್ವಗುರು, ಭಕ್ತಿ ಭಂಡಾರಿ ಬಸವಣ್ಣ ನವರು. ಇವರ ಜನ್ಮದಿನವನ್ನು ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಬಸವಜಯಂತಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಬಸವೇಶ್ವರರು ಶಿವ ಪ್ರಧಾನವಾದ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದು, ವಚನಸಾಹಿತ್ಯಕ್ಕೆ ಅಡಿಪಾಯ ಹಾಕಿ ಪೋಷಿಸಿ, ಸಾಕಿ ಬೆಳೆಸಿದರು. ಬಸವಣ್ಣನವರು ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು, ಬಸವಣ್ಣನವರು ಲಿಂಗ, ವರ್ಣ, ಜಾತಿ, ಪ್ರದೇಶಗಳ ಸಾಮಾಜಿಕ ತಾರತಮ್ಯ ಹೋಗಲಾಡಿಸಲು ಬಹಳವಾಗಿ ಹೋರಾಟ ಮಾಡಿದರು.
ಜನನ ಮತ್ತು ಬಾಲ್ಯಬಸವೇಶ್ವರರು (ಬಸವಣ್ಣನವರು) ಕ್ರಿ.ಶ.1132 ರಲ್ಲಿ ಈಗಿನ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ ವೈಶಾಖ ಮಾಸದ ಅಕ್ಷಯ ತೃತೀಯದಂದು ಶೈವ ಬ್ರಾಹ್ಮಣರಾದ ಮಾದರಸ ಮತ್ತು ಮಾದಲಾಂಬಿಕೆ ದಂಪತಿ ಗಳಿಗೆ ಜನಿಸಿದರು. ಅಕ್ಕ ನಾಗಮ್ಮ ಮತ್ತು ಬಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಬಸವಣ್ಣನವರ ಎಂಟನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರಿಗೆ ಜನಿವಾರ ತೊಡಿಸಲು ಮುಂದಾದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಮೊದಲು ತೊಡಿಸಲು ಕೇಳಿಕೊಳ್ಳುತ್ತಾರೆ. ಆಗ ಇದು ಪುರುಷರಿಗೆ ಮಾತ್ರ ತೊಡಿಸುವಂತ ಹುದು ಆದ್ದರಿಂದ ಅಕ್ಕನಿಗೆ ತೊಡಿಸಲು ಬರುವುದಿಲ್ಲ ಎಂದು ಹೇಳಿದಾಗ, ಬಸವಣ್ಣನವರು ಗಂಡು ಮತ್ತು ಹೆಣ್ಣಿನ ನಡುವಿನ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಟರು. ಹೀಗೆ ಚಿಕ್ಕ ವಯಸ್ಸಿನಲ್ಲೇ ವಿಭಿನ್ನ ವಾಗಿ ಯೋಚನೆ ಮಾಡುವ ಚಿಂತಾನಾ ಶಕ್ತಿ ಬಸವಣ್ಣನವರಲ್ಲಿ ಇತ್ತು.ವಿದ್ಯಾಭ್ಯಾಸ ಮತ್ತು ವಿವಾಹಮನೆ ತೊರೆದು ಬಂದ ಬಸವಣ್ಣನವರು ಧಾರ್ಮಿಕ ಗುರು ಸಂತ ಜಾತವೇದ ಮುನಿಯ ಬಳಿ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿದರು. ಬಸವಣ್ಣ ಚಿಕ್ಕಂದಿನಿಂದಲೂ ಚಿಕಿತ್ಸಕ ಬುದ್ಧಿ ಹೊಂದಿದ್ದು , ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿ ಯಾಗಿದ್ದರು. ವೈಜ್ಞಾನಿಕವಾಗಿ ಚಿಂತಿಸುತ್ತಿದ್ದರು. ಮೂಢನಂಬಿಕೆಗಳನ್ನು ನಿರಾಕರಿಸಿದರು. ಕಲ್ಯಾಣದ ಕಲಚೂರಿ ಬಿಜ್ಜಳನ ಪ್ರಧಾನ ಮಂತ್ರಿಯ ಮಗಳಾದ ಗಂಗಾಂಬಿಕೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಬಸಮಾನವರಿಗೆ ಕೋಶಾಧಿಕಾರಿ (ರಾಜ್ಯದ ಹಣಕಾಸು ಸ್ಥಿತಿಯನ್ನು ನೋಡಿಕೊಳ್ಳುವ ಅಧಿಕಾರಿ) ಎಂಬ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದರು.ಕಲ್ಯಾಣ ಬಸವ ಕಲ್ಯಾಣವಾಯ್ತುಕ್ರಿ.ಶ. 1162 ರ ಹೊತ್ತಿಗೆ ಶೈವರಾಜನಾದ ಬಿಜ್ಜಳನು ಚಾಲುಕ್ಯ ಚಕ್ರಾಧಿಪತ್ಯವನ್ನು ಸ್ಥಾಪಿಸಿದನು. ತನ್ನ ರಾಜ್ಯ ವಿಸ್ತೃತ ಗೊಂಡಂತೆಲ್ಲಾ ಆಡಳಿತದ ಸಂವಿಧಾನತೆಗಾಗಿ, ರಾಜಧಾನಿಯಾಗಿದ್ದ ಮಂಗಳವಾಡೆಯನ್ನು ಕಲ್ಯಾಣಕ್ಕೆ ಬದಲಾಯಿಸಿದನು. ಕೋಶ ಭಂಡಾರಿ ಆಗಿದ್ದರಿಂದ ಬಸವಣ್ಣನವರೂ ಕಲ್ಯಾಣಕ್ಕೆ ತೆರಳಬೇಕಾಯಿತು. ಈಗ ಭಕ್ತಿ ಭಂಡಾರಿ ಬಸವಣ್ಣನವರು ಕೋಶ ಗಾರದ ಅತ್ಯುನ್ನತ ಅಧಿಕಾರಿಗಳೆನಿಸಿದ್ದರು. ಇವರ ಆಗಮನದ ನಂತರ ಇದೇ ಕಲ್ಯಾಣ ಪಟ್ಟಣವು ಬಸವಕಲ್ಯಾಣ ನಗರ ಎಂದು ಪ್ರಸಿದ್ಧವಾಯಿತು. ಕಲ್ಯಾಣ ನಗರವು ಚಾಲುಕ್ಯರ ಕಾಲದಿಂದಲೂ ಸಂಪತ್ಭರಿತ ಸ್ಥಳವಾಗಿತ್ತು. ವಾಣಿಜ್ಯ- ವ್ಯಾಪಾರದಲ್ಲಿಯೂ ಪ್ರಗತಿ ಪಡೆದಿತ್ತು, ಶೈವರು, ಬ್ರಾಹ್ಮಣರು, ಜೈನರು ಮೂರು ಪಂಗಡದ ಧರ್ಮೀಯರು ಇಲ್ಲಿ ನೆಲೆಸಿದ್ದರು. ಸುಸಂಸ್ಕೃತ, ಸಭ್ಯ ಜನರ ಬೀಡು ಎಂದೆನಿಸಿತ್ತು. ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ಹೆಸರು ಪಡೆದಿತ್ತು. ಬಿಜ್ಜಳನ ರಾಜ್ಯದ ಸರಹದ್ದು ವಿಸ್ತೃತ ಗೊಂಡಿದ್ದರಿಂದ ಆರ್ಥಿಕ ಸಂಪತ್ತು ಸಮೃದ್ಧ ಗೊಳ್ಳುತ್ತಿತ್ತು. ಇದರಿಂದಾಗಿ ಕೋಶಾಗಾರದ ಮುಖ್ಯ ಅಧಿಕಾರಿಯಾಗಿದ್ದ ಬಸವಣ್ಣ ನವರ ಜವಾಬ್ದಾರಿಯೂ ಕಾರ್ಯ ಮತ್ತು ಗೌರವದಲ್ಲಿ ಗುರುತರ ಎನಿಸಿತ್ತು. ರಾಜ್ಯಾದಾಯ ಹಾಗೂ ಖರ್ಚು-ವೆಚ್ಚದ ಬಗ್ಗೆ ಲೆಕ್ಕಪತ್ರಗಳ ಪರಿಶೀಲನೆಯ ವಿಚಾರವಾಗಿ ವಿಶೇಷ ಗಮನ ಹರಿಸಬೇಕಿತ್ತು.ಜಡ್ಡುಗಟ್ಟಿದ ಸಮಾಜ ಮತ್ತು ಹೋರಾಟಹನ್ನೆರಡನೆಯ ಶತಮಾನವು ಜಡ್ಡುಗಟ್ಟಿದ ಸಮಾಜದವು ಅರ್ಥಹೀನ ಆಚರಣೆಗಳಿಂದ, ಆಚಾರ, ವಿಚಾರಗಳಿಂದ ಮೇಲು-ಕೀಳು ಎಂಬ ಭಾವನೆಗಳಿಂದ ಸ್ತ್ರೀ- ಪುರುಷ ಎಂಬ ಲಿಂಗಭೇದದ ತಾರತಮ್ಯದಿಂದ ಬಡವ-ಶ್ರೀಮಂತ ಎಂಬ ಅಂತರದ ಸಂಘರ್ಷದಿಂದ ಸಾಮಾಜಿಕ ವ್ಯವಸ್ಥೆ ರೋಸಿ ಹೋಗಿತ್ತು. ಇದರ ವಿರುದ್ಧ ತಮ್ಮ ವಿಶಿಷ್ಟವಾದ ಮಾನವೀಯ ಮೌಲ್ಯಗಳ ಆಧಾರದ ಮೇರೆಗೆ, ನೈತಿಕ ಸೂತ್ರಗಳ ಹಿನ್ನೆಲೆ ಯಲ್ಲಿ ಹೋರಾಟ ನಡೆಸಿದ ಸಾಮಾಜಿಕ ಹೋರಾಟದ ಹರಿಕಾರ ಬಸವಣ್ಣನವರು. ಜನರಲ್ಲಿ ಆಳವಾಗಿ ಬೇರೂರಿದ್ದ ಮೂಢನಂಬಿಕೆ ಗಳನ್ನು ತೊಡೆದುಹಾಕಲು ಶ್ರಮಿಸಿದರು. ಅವರ ದೃಷ್ಟಿಯಲ್ಲಿ ದೇವರು ಒಬ್ಬನೆ. ಅವನು ಮಾನವನಲ್ಲಿದ್ದಾನೆಯೇ ವಿನಃ ಗುಡಿ-ದೇಗುಲ ಗಳಲ್ಲಿ ಅಲ್ಲ. ಎಲ್ಲರೂ ದೇವರ ಮಕ್ಕಳಾಗಿದ್ದು, ಎಲ್ಲರೂ ಸಮಾನ ಸಾಮಾಜಿಕ ನ್ಯಾಯ ಪಡೆಯಲು ಅರ್ಹರಾಗಿರುತ್ತಾರೆ. ಸಮಾಜದಲ್ಲಿ ಅಸ್ಪೃಶ್ಯತೆ ಮಹಾಪಾಪವಾಗಿದ್ದು, ಇದರಿಂದಾಗಿ ಯಾರಿಗೂ ಯಾವುದೇ ಸಮಾಜಕ್ಕೂ ಶ್ರೇಯಸ್ಸಲ್ಲ ಎಂದು ಹೇಳಿದ್ದಾರೆ. ಕಾಯಕ ಮಾಡಿ ಜೀವನ ನಡೆಸಬೇಕು, ಆಲಸ್ಯದ ಜೀವನ ಸಲ್ಲದು. ಸುಳ್ಳು ಹೇಳುವುದು, ಮೋಸಮಾಡುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಬೇರೆಯವರ ಧನವನ್ನು ಕಳುವು ಮಾಡುವುದು, ಪರಸ್ತ್ರೀಯನ್ನು ಮೋಹಿಸುವುದು, ಘೋರ ಅಪರಾಧಗಳಾಗಿವೆ. ಕೆಲಸದಲ್ಲಿ ಶ್ರೇಷ್ಠ- ಕನಿಷ್ಠ , ಮೇಲು-ಕೀಳು ಎಂಬುದಿಲ್ಲ. ಪುರುಷ ನಂತೆ ಸ್ತ್ರೀಯರಿಗೂ ವಿದ್ಯಾಭ್ಯಾಸ ಹೊಂದುವ ಮತ್ತು ತನ್ನ ಬದುಕನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಮೂಲಕ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವೇಶ್ವರರು ಸಾರಿದರು.ವಿಶ್ವದಾಕಾರದ ಪೂಜೆಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟಲಿಂಗದ ಪರಿಕಲ್ಪನೆ ಕೊಟ್ಟರು. ಪೊಳ್ಳು ದೇವರುಗಳನ್ನು ಆರಾಧಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ಮೋಸಕ್ಕೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಬದುಕನ್ನು ನೀಡಿದರು. ಜಾತಿ, ಮತ, ಲಿಂಗಗಳ ತಾರತಮ್ಯವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವೇಶ್ವರರ ಬೋಧನೆಗಳಿಗೆ ಮನಸೋತ ಜನಸಾಮಾನ್ಯರೆಲ್ಲರನ್ನೂ ಶಿವಶರಣರು ಎಂದು ಕರೆಯಲ್ಪಟ್ಟರು. ಇವರ ವಿಚಾರಗಳ ಚಿಂತನ-ಮಂಥನ ವೇದಿಕೆ ಯಾದ ಅನುಭವ ಮಂಟಪವನ್ನು ನಿರ್ಮಿಸಿ ಅಲ್ಲಮ ಪ್ರಭುರವರನ್ನು ಪೀಠಾಧಿಪತಿಯನ್ನಾಗಿ ಮಾಡಿದರು. ಅನುಭವ ಮಂಟಪದ ಮೂಲಕ ಬಸವಣ್ಣನವರು ವಹಿಸಿಕೊಂಡ ಚಳವಳಿ ಮಾನವೀಯ ಮೌಲ್ಯಗಳ ಪಂಥದ ತಳಹದಿಯಾಯಿತು.ವಚನ ಸಾಹಿತ್ಯ ರಚನೆಬಸವೇಶ್ವರರೂ ಸೇರಿದಂತೆ ಅನೇಕ ಶಿವಶರಣರು ವಚನಗಳನ್ನು ಬರೆದರು. ಇದು ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ ಚಳವಳಿಯಾಗಿ ಹೊರಹೊಮ್ಮಿತು. ವಚನ ಸಾಹಿತ್ಯವು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ, ಅನೇಕ ಶಿವಶರಣರ - ಜನಸಾಮಾನ್ಯರ ಚಳವಳಿಯ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುತ್ತದೆ. ಓದಿದರೆ ಗದ್ಯವಾಗುತ್ತದೆ. ಕನ್ನಡದಲ್ಲಿ ಇಂತಹ ವಿಶೇಷ ಕಾವ್ಯ ಪ್ರಕಾರವೇ ವಚನ ಸಾಹಿತ್ಯವೆನಿಸಿದೆ. ಸಮಾಜದ ಎಲ್ಲಾ ವರ್ಗದವರೂ ವಚನಗಳನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಗಿ ಬೆಳೆಯಿತು.*ದೇವಲೋಕ ಮರ್ತ್ಯಲೋಕವೆಂಬುದು*ಬೇರಿಲ್ಲ ಕಾಣಿರೋ !*ಸತ್ಯವ ನುಡಿವುದೇ ದೇವಲೋಕ..*ಮಿಥ್ಯವ ನುಡಿವುದೇ ಮರ್ತ್ಯಲೋಕ..*ಆಚಾರವೇ ಸ್ವರ್ಗ,ಅನಾಚಾರವೇ ನರಕ..*ಕೂಡಲಸಂಗಮದೇವಾ,ನೀವೇ ಪ್ರಮಾಣು.ಎಂಬ ಸಾಮಾನ್ಯ ಜ್ಞಾನವನ್ನು ಸಮಾಜಕ್ಕೆ ವಿಶೇಷ ಸಂದೇಶವನ್ನಾಗಿ ನೀಡಿದರು. ಮಾನವ ತನ್ನ ಬದುಕಿನ ಬಂಡಿಯನ್ನು ಸಾಗಿಸಲು ಅವಲಂಬಿಸಿರುವ ವೃತ್ತಿಯೇ ಕಾಯಕ. ಕಾಯಕದಲ್ಲಿ ಮೇಲುಕೀಳೆಂಬುದಿಲ್ಲ. ಅದನ್ನು ಮಾಡದವನು ತಿನ್ನಲು ಅರ್ಹನಲ್ಲ. ಧರ್ಮದೃಷ್ಟಿಯಿಂದ ನ್ಯಾಯವಾದ ರೀತಿಯಲ್ಲಿ ತನ್ನ ತನ್ನ ಕಾಯಕವನ್ನು ಮಾಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎನ್ನುತ್ತಾ ಕಾಯಕವೇ ಕೈಲಾಸ ಎಂದು ನಂಬಿ ಕಾಯಕ ತತ್ವಕ್ಕೆ ಮಹೋನ್ನತ ಸ್ಥಾನ ನೀಡಲಾಯಿತು. ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ಶಿವಶರಣರಾದವರು ನಂಬಿಕೆಯನ್ನು ಹೊಂದಿರಬೇಕೆಂದರು.ಸಮಾಜದಲ್ಲಿ ಉಚ್ಛ-ನೀಚ ಎಂಬ ಬೇಧ ಭಾವವನ್ನು ತೊಡೆದು ಹಾಕುವ ದೃಷ್ಟಿಯಿಂದ ಕಲ್ಯಾಣದಲ್ಲಿ ಮಧುವರಸ ಎಂಬ ಬ್ರಾಹ್ಮಣನ ಮಗಳಿಗೂ, ಹರಳಯ್ಯ ಎಂಬ ಚಮ್ಮಾರನ ಮಗನಿಗೂ ಮದುವೆ ಮಾಡಿಸಿದಾಗ, ಕಲ್ಯಾಣದಲ್ಲಿ ಕ್ರಾಂತಿಯೇ ನಡೆಯಿತು. ಈ ರೀತಿಯ ವಿವಾಹದಿಂದ ಸಂಪ್ರದಾಯ ವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಬಸವಣ್ಣನವರ ವಿರುದ್ದ ಪ್ರೇರೇಪಿಸಿ ಬಸವಣ್ಣನ ವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು. ಹಾಗೆಯೇ ಶಿಕ್ಷೆಯೂ ಆಯಿತು. ನಂತರ ಬಸವಣ್ಣ ನವರು ಶಿವಶರಣರಿಗಾದ ಹಿಂಸೆಯನ್ನು ತಾಳಲಾರದೆ ಕೂಡಲಸಂಗಮ ಎಂಬ ಸ್ಥಳಕ್ಕೆ ಬಂದು ಕ್ರಿ. ಶ. 1196 ರಲ್ಲಿ ಶಿವೈಕ್ಯ ರಾದರು.ಕೂಡಲ ಸಂಗಮಕೂಡಲಸಂಗಮ ಬಸವಣ್ಣನವರ ಕಾಲದಲ್ಲಿ ಒಂದು ಪವಿತ್ರ ಸ್ಥಳದಂತಿತ್ತು. ಈ ಸ್ಥಳದಲ್ಲಿಯೇ ಮಲಪ್ರಭಾ ನದಿಯು ಕೃಷ್ಣಾ ನದಿಯೊಂದಿಗೆ ಸಂಗಮವಾಗುತ್ತದೆ. ಆದುದರಿಂದ ಈ ಸ್ಥಳಕ್ಕೆ ಕೂಡಲಸಂಗಮ ಎಂದು ಹೆಸರು ಬಂತು. ಇಲ್ಲೊಂದು ದಿವ್ಯ ದೇವಲವಿದೆ. ದೇಗುಲವು ಸಂಗಮೇಶ್ವರ ಎಂಬ ಮನಮೋಹಕ ಮೂರ್ತಿಯನ್ನು ಒಳಗೊಂಡಿದೆ. ಈ ಸಂಗಮೇಶ್ವರ ದೇವರ ದರ್ಶನಕ್ಕಾಗಿ ದೂರ ದೂರದಿಂದ ಭಕ್ತಾದಿ ಜನರು ಯಾತ್ರಾರ್ಥಿಗಳ ರೂಪದಲ್ಲಿ ಬರುತ್ತಿದ್ದರು. ಸಂಗಮೇಶ್ವರನ ಸನ್ನಿಧಿಯಲ್ಲಿ ತಮ್ಮ ಭಕ್ತಿಯ ಕಾಣಿಕೆಯನ್ನು ಅರ್ಪಿಸಿ ದರ್ಶನವನ್ನು ಪಡೆದು ಕೃತಾರ್ಥ ಭಾವದಿಂದ ಹಿಂತಿರುಗುತ್ತಿದ್ದರು. ಅಲ್ಲಿನ ಧರ್ಮಾಧಿಕಾರಿ ಈಶಾನ್ಯ ಗುರುಗಳು ಬಸವಣ್ಣನಿಗೆ ಈ ದೇವಾಲಯದ ಬಗ್ಗೆ ತಿಳಿಸಿ ಹೇಳಿದರು. ಬಸವಣ್ಣನು ಈ ದೇವಾಲಯವನ್ನು ತುಂಬಾ ಇಷ್ಟಪಟ್ಟು ಸಂಗಮೇಶ್ವರನ ಅನನ್ಯ ಭಕ್ತ ಮತ್ತು ಶಿವಶರಣರಾದರು. ಸಂಗಮೇಶ್ವರನೇ ತನ್ನ ಸರ್ವಸ್ವ. ಆತನೇ ಇನ್ನು ಮುಂದೆ ತನಗೆ ದಾರಿದೀಪ ಎಂಬ ನಿಶ್ಚಲ, ನಿರ್ಮಲ ಮನೋಭಾವನೆ ಸಮೃದ್ಧಗೊಳ್ಳತೊಡಗಿತು. ದೇವಾಲಯದ ಪ್ರಾಂಗಣದಲ್ಲಿ ಈತನ ನಡೆ- ನುಡಿ, ಸಂಗಮೇಶ್ವರನನ್ನು ಕುರಿತು ಹಾಡುವ ಭಕ್ತಿ ಗೀತೆಗಳು, ಭಕ್ತಿಯಲ್ಲಿ ಮೈಮರೆಯುವಿಕೆ ಇವನ್ನು ಕಂಡು ಅಲ್ಲಿನ ಜನರು ಆನಂದಾಶ್ಚರ್ಯದಲ್ಲಿ ಮುಳುಗಿದರು. ಧರ್ಮಾಧಿಕಾರಿ ಈಶಾನ್ಯ ಗುರು ಇವೆಲ್ಲವನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುಂದೆ ಅವರ ಎಲ್ಲಾ ವಚನಗಳ ಅಂಕಿತ " ಕೂಡಲ ಸಂಗಮದೇವ " ಎಂಬುದಾಗಿದೆ. ಇಂದಿಗೂ ಕೂಡಲಸಂಗಮ ಯಾತ್ರಾ ಸ್ಥಳವಾಗಿ, ಪುಣ್ಯ ಕ್ಷೇತ್ರವಾಗಿದೆ. ಬಸವೇಶ್ವರರು ಸಾವಿರಾರು ವಚನಗಳನ್ನು ಬರೆದಿದ್ದು ಇವೆಲ್ಲವುಗಳಲ್ಲೂ ತಮ್ಮ ಆರಾಧ್ಯ ದೈವ ಕೂಡಲಸಂಗಮ ದೇವನನ್ನು ಅಂಕಿತ ನಾಮವನ್ನಾಗಿಸಿ ಕೊಂಡಿದ್ದಾರೆ. ಬಸವೇಶ್ವರರು ದಯೆಯ ಕುರಿತು ಹೇಳುತ್ತಾ ;ದಯವಿಲ್ಲದ ಧರ್ಮವದೇವುದಯ್ಯಾದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿದಯವೇ ಧರ್ಮದ ಮೂಲವಯ್ಯಾಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.ದಯವಿಲ್ಲದ ಧರ್ಮವು ಅರ್ಥಹೀನ. ಧರ್ಮಕ್ಕೆ ದಯವೇ ಮೂಲ ಎಂದು ಹೇಳುವ ಬಸವಣ್ಣನವರು ಸಕಲ ಪ್ರಾಣಿಗಳಲ್ಲಿಯೂ ದಯೆಯುಳ್ಳವರಾಗಿರಬೇಕೆಂದು ಹೇಳಿದರು. ಅವರ ಸಾಮಾಜಿಕ ಕಳಕಳಿ, ಮಾನವೀಯ ಅನುಕಂಪೆ, ನಯ-ವಿನಯಗಳಿಂದಾಗಿ ಅವರೊಬ್ಬ ಶ್ರೇಷ್ಠ ಮಾನವತಾವಾದಿಯಾಗಿ, ಸಮಾಜ ಸುಧಾರಕರಾಗಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ನೇತಾರರಾಗಿ ಜಗತ್ತಿನ ಚರಿತ್ರೆಯಲ್ಲಿ ಕಂಗೊಳಿಸಿದ್ದಾರೆ.ನಾವಾಡುವ ಮಾತು ಹೇಗಿರಬೇಕೆಂದು ವಚನಗಳಲ್ಲಿಯೇ ಹೇಳಿದ್ದಾರೆ.*ನುಡಿದರೆ ಮುತ್ತಿನ ಹಾರದಂತಿರಬೇಕು**ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು**ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು**ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು**ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ?*ಹೀಗೆ ಪ್ರತಿ ವಚನದಲ್ಲೂ ಅಣ್ಣ ಬಸವಣ್ಣನವರು ಜೀವನಾನುಭವವನ್ನಿಟ್ಟು ಹೇಳಿದ್ದಾರೆ.ಸಮಾನತೆಯ ಹರಿಕಾರಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.ಬಸವಣ್ಣನವರಿಗೆ ಸಮಾಜದಲ್ಲಿನ ಬಡಜನರ ಬಗೆ ಎಲ್ಲಿಲ್ಲದ ಅನುಕಂಪ, ಸಮಾಜವು ಬಡವರನ್ನು ತಿರಸ್ಕೃತ ಭಾವದಿಂದ ಕಾಣುತ್ತಿರುವುದನ್ನು ಕಂಡು ಕಣ್ಣುಗಳಲ್ಲಿ ಕೆಂಡಗಳನ್ನು ಹೊರ ಚೆಲ್ಲುತ್ತಿದ್ದರು. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಎಲ್ಲರೂ ದೇವರ ಮಕ್ಕಳೇ ಎಂಬ ಮನೋಭಾವವನ್ನು ತಾಳಿದ್ದು, ಅವರ ಸ್ಥಿತಿ - ಗತಿಗಳನ್ನು ಸುಧಾರಿಸಲು ತುಂಬಾ ಚಿಂತಿಸುತ್ತಿದ್ದರು. ಅಷ್ಟಲ್ಲದೇ ಬಡತನ ಹೋಗಲಾಡಿಸಲು ಕಾಯಕ ತತ್ವಕ್ಕೆ ಮಹತ್ವ ನೀಡಿ ಪ್ರಚಾರಪಡಿಸಿದರು. ಕಾಯಕದ ಮೂಲಕ ತಮ್ಮ ತಮ್ಮ ದಾರಿದ್ರ್ಯವನ್ನು ಹೋಗಲಾಡಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ಮಹಿಳಾ ಸ್ವಾತಂತ್ರ್ಯದ ಕುರಿತು ಆಲೋಚಿಸಿ ಕ್ರಮ ಕೈಗೊಂಡರು. ಮಹಿಳೆ ಯರಿಗೆ ಕೇವಲ ಸ್ವಾತಂತ್ರ್ಯ ಕೊಟ್ಟರೆ ಸಾಲದು, ಅವರನ್ನು ಸುಶಿಕ್ಷಿತರನ್ನಾಗಿಯೂ ಮಾಡಬೇಕು. ಹೆಣ್ಣೊಬ್ಬಳು ಕಲಿತ ವಿದ್ಯೆಯ ಮೂಲಕ ಇಡೇ ಮನೆಯನ್ನು ಬೆಳಗುತ್ತಾಳೆ. ಮನೆಯ ಗೌರವವನ್ನು ಉನ್ನತ ಮಟ್ಟಕ್ಕೆ ಏರಿಸುತ್ತಾಳೆ. ಮಹಿಳೆಯರು ಅನುಭವ ಮಂಟಪಕ್ಕೆ ಬಂದು ಜ್ಞಾನವನ್ನು ಪಡೆಯಲು, ಆಧ್ಯಾತ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಉತ್ಸಾಹ ನೀಡಿ ಪ್ರೋತ್ಸಾಹಿ ಸುತ್ತಿದ್ದರು. ಸ್ವತಃ ತಮ್ಮ ಪತ್ನಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆಯರಿಂದ ಅರ್ಥಪೂರ್ಣ ವಿಚಾರಗಳುಳ್ಳ ವಚನಗಳನ್ನು ರಚಿಸಲು ಪ್ರೇರೇಪಣೆ ನೀಡುತ್ತಿದ್ದರು.ವಚನಗಳ ಮೂಲಕ ಬಸವಣ್ಣನವರು ಅಂದಿನ ಜಾತಿ ವ್ಯವಸ್ಥೆ, ಮೇಲು, ಕೀಳು, ಬಡವ, ಶ್ರೀಮಂತ, ಅಕ್ಷರಸ್ಥ, ಅನಕ್ಷರಸ್ಥ, ಗಂಡು, ಹೆಣ್ಣು ಎನ್ನುವ ಭೇದ ಭಾವಗಳನ್ನು ತೊಡೆದು ಹಾಕಿ ಸಮಾನತೆ ಸಾರಿದರು. ಎಲ್ಲ ಸಮುದಾಯದ ವ್ಯಕ್ತಿಗಳನ್ನೊಳಗೊಂಡ ಅನುಭವ ಮಂಟಪ ಸ್ಥಾಪಿಸಿದರು. ಇದುವೇ ಜಗತ್ತಿನ ಮೊದಲ ಸಂಸತ್ ಆಗಿದೆ. ಆ ಮೂಲಕ ಇಡೀ ಸಾಮಾಜಿಕ, ರಾಜಕೀಯ, ಧಾರ್ಮಿಕ ವ್ಯವಸ್ಥೆಯನ್ನು ಬದಲಿಸುವ ಪ್ರಯತ್ನ ಮಾಡಿದರು. ಬಸವಣ್ಣನವರು ನೀಡಿದ ಪ್ರತಿಯೊಂದು ಆಚಾರ, ವಿಚಾರ, ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಸಿಕೊಂಡು ಹೋಗುವುದು ಪ್ರತಿಯೊಬ್ಬರಿಗೂ ಒಳ್ಳೆಯದು. ಬಸವೇಶ್ವರರು ಸ್ವತಃ ವಿಶ್ವ ವಿದ್ಯಾನಿಲಯವಿದ್ದಂತೆ. ಅವರ ತತ್ವಗಳೆಲ್ಲವೂ ಜಗತ್ತಿನ ಜನ ಸಮುದಾಯಕ್ಕೆ ಆದರ್ಶಪ್ರಾಯವಾಗಿವೆ. ಅವರ ವಚನಗಳು ದೇಶ, ಭಾಷೆ, ಪ್ರಾಂತ್ಯಗಳೆನ್ನದೆ ವಿವಿಧ ಭಾಷೆಗಳಿಗೂ ಭಾಷಾಂತರವಾಗಿವೆ. ಅನೇಕ ವಿಶ್ವ ವಿದ್ಯಾಲಯಗಳಲ್ಲಿ ವಚನ ಸಾಹಿತ್ಯದ ಮೇಲೆ ಸಂಶೋಧನೆಗಳು ನಡೆದಿವೆ. ಬಸವಣ್ಣನವರ ತತ್ವಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳೋಣ. ಆದರ್ಶ ಜೀವನ ನಡೆಸೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ